ಬೆಂಗಳೂರು: ರಾಜ್ಯದಲ್ಲಿ ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿ ದರ ಹೆಚ್ಚಳ ಮಾಡಿರುವ ಹಿನ್ನೆಲೆಯಲ್ಲಿ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಆಸ್ತಿ ನೋಂದಣಿಗಾಗಿ ನೂಕು ನುಗ್ಗಲು ಉಂಟಾಗಿದೆ. ಹೀಗಾಗಿ ಸಾರ್ವಜನಿಕರಿಗೆ ಅನುಕೂಲವಾಗಲು ಕಚೇರಿಗಳ ಅವಧಿಯನ್ನು ಕಂದಾಯ ಇಲಾಖೆ ವಿಸ್ತರಿಸಿದ್ದು, ಬೆಳಗ್ಗೆ 8ರಿಂದ ರಾತ್ರಿ 8ಗಂಟೆವರೆಗೆ ಕಚೇರಿಗಳು ತೆರೆದಿರುತ್ತವೆ, ಇದು ಸೆ.30ವರೆಗೆ ಮಾತ್ರ ಅನ್ವಯವಾಗಲಿದೆ. ಇನ್ನು ಸೆ.23ರಂದು ನಾಲ್ಕನೇ ಶನಿವಾರ ಹಿನ್ನೆಲೆ ರಜೆ ಇದ್ದರೂ ಕಚೇರಿಗಳು (Sub Registrar Office) ಕಾರ್ಯ ನಿರ್ವಹಿಸಲಿವೆ.
ಈ ಬಗ್ಗೆ ಶುಕ್ರವಾರ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಮಾಹಿತಿ ನೀಡಿದ್ದಾರೆ. ಅಕ್ಟೋಬರ್ 1ರಿಂದ ಪರಿಷ್ಕೃತ ಆಸ್ತಿ ಮಾರ್ಗಸೂಚಿ ದರ ಜಾರಿಯಾಗಲಿದೆ. ರಾಜ್ಯ ಸರ್ಕಾರ ಶೇ.30 ಮಾರ್ಗಸೂಚಿ ದರ ಏರಿಕೆ ಮಾಡಿರುವುದರಿಂದ ಮುದ್ರಾಂಕ ಶುಲ್ಕ ಮತ್ತು ನೋಂದಣಿ ಶುಲ್ಕ ಉಳಿಸಲು ಉಪ ನೋಂದನಾಧಿಕಾರಿಗಳ ಕಚೇರಿಗಳಿಗೆ ಜನ ಧಾವಿಸುತ್ತಿದ್ದಾರೆ. ಹೀಗಾಗಿ ಸಾರ್ವಜನಿಕರ ಹಿತದೃಷ್ಟಿಯಿಂದ ಕಚೇರಿ ಅವಧಿಯನ್ನು ಇಲಾಖೆ ಹೆಚ್ಚಿಸಿದೆ.
ಇದನ್ನೂ ಓದಿ | Krishna ByreGowda : ಅಕ್ಟೋಬರ್ 1ರಿಂದ ಶೇ. 30ರಷ್ಟು ಆಸ್ತಿ ಮಾರ್ಗಸೂಚಿ ದರ ಹೆಚ್ಚಳ!
ಕಾನೂನಿನ ಪ್ರಕಾರ ಪ್ರತಿ ವರ್ಷ ಕಡ್ಡಾಯವಾಗಿ ಮಾರ್ಗಸೂಚಿ ದರ ಪರಿಷ್ಕರಣೆ ಮಾಡಬೇಕು ಎಂಬ ನಿಯಮವಿದ್ದರೂ ಕಳೆದ 5 ವರ್ಷಗಳಿಂದ ಆಸ್ತಿ ಮಾರ್ಗಸೂಚಿ ದರ ಏರಿಕೆ ಮಾಡಿರಲಿಲ್ಲ. ಐಟಿ-ಬಿಟಿ ಕಾರಿಡಾರ್, ಹೆದ್ದಾರಿಗಳು, ಎಲೆಕ್ಟ್ರಾನಿಕ್ ಸಿಟಿಯಂತಹ ತಂತ್ರಜ್ಞಾನ ಕಾರಿಡಾರ್ ಬಳಿ ಮಾರುಕಟ್ಟೆ ಮೌಲ್ಯಕ್ಕೆ ಆಸ್ತಿ ಮಾರ್ಗದರ್ಶನ ದರವನ್ನು ಹೊಂದಿಸಲು ಸರ್ಕಾರ ಯತ್ನಿಸುತ್ತಿದೆ. ಇಂತಹ ಪ್ರದೇಶಗಳಲ್ಲಿ ಶೇ.50 ವರೆಗೆ ಆಸ್ತಿ ಮಾರ್ಗದರ್ಶನ ದರ ಹೆಚ್ಚಾಗಬಹುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಗುರುವಾರ ತಿಳಿಸಿದ್ದರು.
ಅ.1ರಿಂದ ಆಸ್ತಿ ನೋಂದಣಿ ಮಾರ್ಗಸೂಚಿ ದರ ಹೆಚ್ಚಳ
ಪ್ರತಿ ವರ್ಷ ಆಸ್ತಿ ಮಾರ್ಗಸೂಚಿ ದರ (Property Guideline Rate) ಪರಿಷ್ಕರಣೆ ಮಾಡಬೇಕು ಎಂಬ ನಿಯಮ ಇದೆ. ಅದಕ್ಕಾಗಿ ನಾವು ಅಕ್ಟೋಬರ್ 1ರಿಂದ ಆಸ್ತಿ ನೋಂದಣಿ ಮಾರ್ಗಸೂಚಿ ದರವನ್ನು ಹೆಚ್ಚಳ ಮಾಡುತ್ತಿದ್ದೇವೆ. ಶೇಕಡಾ 30ರಷ್ಟು ಹೆಚ್ಚಳ ಆಗಲಿದೆ. ಎಲ್ಲ ಕಡೆ ಮಾರ್ಗಸೂಚಿ ದರ ಏರಿಕೆ ಆಗಲ್ಲ. ಕೆಲವು ಕಡೆ ಮಾರುಕಟ್ಟೆ ದರಕ್ಕಿಂತ ಮಾರ್ಗಸೂಚಿ ದರ ಹೆಚ್ಚಳ ಇದ್ದರೆ ಅಲ್ಲಿ ಹೆಚ್ಚು ಆಗುವುದಿಲ್ಲ. ಆದರೆ, ಮಾರುಕಟ್ಟೆ ದರಕ್ಕಿಂತ ಬಹಳ ಕಡಿಮೆ ಮಾರ್ಗಸೂಚಿ ದರ ಇದ್ದರೆ ಖಂಡಿತ ಹೆಚ್ಚಳ ಆಗಲಿದೆ ಎಂದು ಇತ್ತೀಚೆಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದರು.
ಇದನ್ನೂ ಓದಿ | Power Generation: ರಾಜ್ಯದ ವಿದ್ಯುತ್ ಉತ್ಪಾದನೆ ಸಾಮರ್ಥ್ಯ ಕುಸಿದಿರುವುದು ಏಕೆ: ಅಧಿಕಾರಿಗಳಿಗೆ ಸಿಎಂ ಪ್ರಶ್ನೆ
ಹೆದ್ದಾರಿಗಳು, ವಿಮಾನ ನಿಲ್ದಾಣ, ಐಟಿ ಬಿಟಿ ಬಂದಿರುವ ಕಡೆ ಮಾರ್ಗಸೂಚಿ ದರ ಕಡಿಮೆ ಇದೆ. ಇಂತಹ ಕಡೆ ಮಾರ್ಗಸೂಚಿ ದರ ಹೆಚ್ಚಳ ಆಗಲಿದೆ. ಸರಾಸರಿ ಶೇಕಡಾ 30ರಷ್ಟು ಮಾರ್ಗಸೂಚಿ ದರ ಏರಿಕೆ ಆಗಲಿದೆ. ಈ ಬಗ್ಗೆ ಆಕ್ಷೇಪ ಇದ್ದರೆ ಸಲ್ಲಿಸಲು ಅವಕಾಶ ಇದೆ. ಆಕ್ಷೇಪ ಗಮನಿಸಿ ಅಧಿಸೂಚನೆಯನ್ನು ನಂತರ ಪ್ರಕಟ ಮಾಡಲಾಗುವುದು. ಮಾರ್ಗಸೂಚಿ ದರ ಏರಿಕೆಯಾದರೆ ವರ್ಷಕ್ಕೆ 2 ಸಾವಿರ ಕೋಟಿ ರೂಪಾಯಿ ಆದಾಯ ಬರಲಿದೆ ಎಂದು ಹೇಳಿದ್ದರು.