ಮಡಿಕೇರಿ/ಮೈಸೂರು: ಹದಿನಾಲ್ಕು ಬಾರಿ ಮೈಸೂರು ದಸರಾದಲ್ಲಿ ಭಾಗಿಯಾಗಿದ್ದ, ಅಂಬಾರಿ ಆನೆ ಅಭಿಮನ್ಯುವಿನ ಉತ್ತರಾಧಿಕಾರಿ ಎಂದೇ ಬಿಂಬಿತವಾಗಿದ್ದ ಸಾಕಾನೆ ವೇಣುಗೋಪಾಲ ಸ್ವಾಮಿ ಮೃತಪಟ್ಟಿದೆ (Elephant death). ನೇರಳಕುಪ್ಪೆ ಬಿ. ಹಾಡಿ ಕ್ಯಾಂಪಿನಲ್ಲಿದ್ದ ವೇಣುಗೋಪಾಲಸ್ವಾಮಿಯ ಕಳೇಬರ ಹುಣಸೂರು ತಾಲೂಕಿನ ಹನಗೋಡು ಸಮೀಪದ ಕೊಳವಿಗೆ ಗ್ರಾಮದಲ್ಲಿ ಪತ್ತೆಯಾಗಿದೆ. ಆನೆಗೆ ೩೯ ವರ್ಷ ವಯಸ್ಸಾಗಿತ್ತು.
ಎಂದಿನಂತೆ ಗೋಪಾಲಸ್ವಾಮಿ ಆನೆಯನ್ನು ಕಾಡಿಗೆ ಮೇಯಲು ಬಿಡಲಾಗಿತ್ತು. ಈ ಸಂದರ್ಭ ಕಾಡಾನೆ ದಾಳಿಗೆ ಸಿಲುಕಿ ಸಾಕಾನೆ ಸಾವನ್ನಪ್ಪಿದೆ ಎನ್ನಲಾಗಿದೆ. ಮೇಯುವ ಸಂದರ್ಭದಲ್ಲಿ ಕಾಡಾನೆ ದಾಳಿ ನಡೆಸಿದ್ದು, ಈ ವೇಳೆ ನಡೆದ ಕಾಳಗದಲ್ಲಿ ವೇಣುಗೋಪಾಲ ಸ್ವಾಮಿ ಮೃತಪಟ್ಟಿದೆ ಎಂದು ನಂಬಲಾಗಿದೆ. ಆನೆಯ ಕಾಲಿಗೆ ಗಂಭೀರ ಗಾಯಗಳಾಗಿರುವುದು ಕೂಡಾ ಪತ್ತೆಯಾಗಿದೆ.
ಕಾಡಾನೆ ಅಯ್ಯಪ್ಪನ ದಾಳಿಯಿಂದ ಜರ್ಜರಿತ
ವೇಣುಗೋಪಾಲ ಸ್ವಾಮಿ ಮೇಲೆ ದಾಳಿ ಮಾಡಿದ ಕಾಡಾನೆಯನ್ನು ಅಯ್ಯಪ್ಪ ಎಂದು ಗುರುತಿಸಲಾಗಿದೆ. ಅಯ್ಯಪ್ಪನಿಗೆ ರೇಡಿಯೊ ಕಾಲರ್ ಅಳವಡಿಸಲಾಗಿತ್ತು. ಹುಣಸೂರು ತಾಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಆತ ಅಡ್ಡಾಡುತ್ತಿದ್ದ. ನಾಲ್ಕು ದಿನ ಹಿಂದೆ ಸಾಕಾನೆ ವೇಣುಗೋಪಾಲಸ್ವಾಮಿ ಮೇಯಲೆಂದು ಹೋಗಿದ್ದಾಗ ಹನಗೋಡು ಸಮೀಪ ಅಯ್ಯಪ್ಪ ಎದುರಾಗಿದ್ದ. ಅವರಿಬ್ಬರ ನಡುವೆ ನಡೆದ ಕಾಳಗದಲ್ಲಿ ಗೋಪಾಲಸ್ವಾಮಿಯ ಕಾಲು, ಹೊಟ್ಟೆ ಭಾಗಕ್ಕೆ ಗಂಭೀರ ಗಾಯವಾಗಿತ್ತು. ನಾಲ್ಕು ವೈದ್ಯರ ತಂಡದಿಂದ ಚಿಕಿತ್ಸೆ ಕೊಡಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಬುಧವಾರ ಮಧ್ಯಾಹ್ನ ಆನೆ ಪ್ರಾಣ ಬಿಟ್ಟಿದೆ. ಡಿಸಿಎಫ್ ಹರ್ಷಕುಮಾರ್ ನೇತೃತ್ವದಲ್ಲಿ ಅಂತ್ಯ ಸಂಸ್ಕಾರ ನಡೆಸಲಾಯಿತು.
ಅಂಬಾರಿ ಹೊರುವ ಅವಕಾಶವಿತ್ತು
ಗೋಪಾಲಸ್ವಾಮಿ ಆನೆ ಮೈಸೂರು ದಸರಾದಲ್ಲಿ ಹಲವು ವರ್ಷಗಳಿಂದ ಭಾಗವಹಿಸುತ್ತಿತ್ತು. ಮುಂದಿನ ವರ್ಷಗಳಲ್ಲಿ ಅಂಬಾರಿ ಹೊರುವ ಜವಾಬ್ದಾರಿಯೂ ದೊರೆಯುವ ಸಾಧ್ಯತೆ ಇತ್ತು. ಕಾಡಾನೆ ಕಾರ್ಯಾಚರಣೆಯಲ್ಲೂ ಪಾಲ್ಗೊಳ್ಳುತ್ತಿದ್ದ ಗೋಪಾಲಸ್ವಾಮಿ ಸಾವು ಶಿಬಿರದ ಮಾವುತರಿಗೆ ನೋವನ್ನುಂಟು ಮಾಡಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಶಾಂತ ಸ್ವಭಾವದ ಗೋಪಾಲಸ್ವಾಮಿ
ಗೋಪಾಲಸ್ವಾಮಿ ಆನೆ ಶಾಂತ ಸ್ವಭಾವದ ಆನೆಯಾಗಿದ್ದು, ಈ ಬಾರಿಯ ದಸರಾದಲ್ಲಿ ಮರದ ಅಂಬಾರಿ ಹೊತ್ತು ಗಮನ ಸೆಳೆದಿದ್ದ. ಕಳೆದ ವರ್ಷ ಶ್ರೀರಂಗಪಟ್ಟಣದ ದಸರಾ ಮಹೋತ್ಸವ ಉದ್ಘಾಟನೆ ವೇಳೆ ಜನದಟ್ಟಣೆ, ಪಟಾಕಿ ಶಬ್ದದಿಂದ ವಿಚಲಿತನಾಗಿದ್ದ.
ಇದನ್ನೂ ಓದಿ | Elephanth Death | ವಿದ್ಯುತ್ ತಂತಿ ಸ್ಪರ್ಶಿಸಿ ಕಾಡಾನೆಗಳ ಸಾವು