ಬೆಂಗಳೂರು: ಮಂಡ್ಯ ಜಿಲ್ಲೆಯ ರೈತರ ಪ್ರಧಾನ ವಾಣಿಜ್ಯ ಬೆಳೆಯಾಗಿರುವ ಕಬ್ಬಿಗೆ (Sugar Cane) ಸರ್ಕಾರ ಪ್ರತಿ ಟನ್‌ಗೆ 500 ರೂಪಾಯಿ ಪ್ರೋತ್ಸಾಹಧನ ನೀಡಬೇಕು ಹಾಗೂ ವೈಜ್ಞಾನಿಕ ಬೆಲೆಯನ್ನು ನಿಗದಿಪಡಿಸಬೇಕು ಎಂದು ಒತ್ತಾಯಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ವಿಧಾನ ಪರಿಷತ್ ಸದಸ್ಯ ಶಾಸಕ ದಿನೇಶ್ ಗೂಳಿಗೌಡ ಶುಕ್ರವಾರ (ನವೆಂಬರ್ 11) ಮನವಿ ಮಾಡಿದರು.
ಕಬ್ಬು ಬೆಳೆಯುವುದು ಸರಳ ಕೆಲಸವಲ್ಲ. ಇದರ ಉತ್ಪಾದನಾ ವೆಚ್ಚ, ರಾಸಾಯನಿಕ ಗೊಬ್ಬರಗಳ ಬೆಲೆ ಏರಿಕೆ, ಕಟಾವು ಮತ್ತು ಸಾಗಾಣಿಕಾ ವೆಚ್ಚ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದ್ದು, ಕಬ್ಬಿಗೆ ವೈಜ್ಞಾನಿಕ ಬೆಲೆ ನಿಗದಿಯಾಗಿಲ್ಲ. ಇದರಿಂದ ರೈತಾಪಿ ವರ್ಗದ ಬದುಕು ಬಹಳ ದುಸ್ತರವಾಗಿದೆ. ಹಾಗಾಗಿ ರಾಜ್ಯ ಸರ್ಕಾರ ಪ್ರತಿ ಟನ್ ಕಬ್ಬಿಗೆ 500 ರೂಪಾಯಿ ಪ್ರೋತ್ಸಾಹಧನ ನೀಡಬೇಕು ಹಾಗೂ ವೈಜ್ಞಾನಿಕ ದರವನ್ನು ನಿಗದಿಪಡಿಸಬೇಕು ಎಂದು ಮಂಡ್ಯ ಜಿಲ್ಲೆಯ ರೈತರ ಪರವಾಗಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.
ಮನವಿ ಪತ್ರದಲ್ಲೇನಿದೆ?
ಮಂಡ್ಯ ಜಿಲ್ಲೆಯಲ್ಲಿ ಕಬ್ಬು ರೈತರ ಪ್ರಧಾನ ವಾಣಿಜ್ಯ ಬೆಳೆಯಾಗಿದ್ದು, ರೈತರು ತಮ್ಮ ಜೀವನೋಪಾಯಕ್ಕಾಗಿ ಕಬ್ಬು ಬೆಳೆಯನ್ನು ಅವಲಂಬಿಸಿದ್ದು, ಜಿಲ್ಲೆಯ ಶ್ರೀ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ, ಎನ್.ಎಸ್.ಎಲ್. ಸಕ್ಕರೆ ಕಾರ್ಖಾನೆ, ಪಾಂಡವಪುರ ಸಹಕಾರಿ ಸಕ್ಕರೆ ಕಾರ್ಖಾನೆ ಕಾರ್ಯನಿರ್ವಹಿಸುತ್ತಿದ್ದು, ಪ್ರತಿ ವರ್ಷ ಪ್ರತಿ ಕಾರ್ಖಾನೆಯು ಸರಾಸರಿ ಸುಮಾರು 5 ರಿಂದ 9 ಲಕ್ಷ ಟನ್ ಕಬ್ಬನ್ನು ಅರೆಯುತ್ತಿದ್ದು, ಮಂಡ್ಯ ಮೈಸೂರು ಸಕ್ಕರೆ ಕಾರ್ಖಾನೆಯು ಇತ್ತೀಚೆಗೆ ಪ್ರಾರಂಭವಾಗಿದೆ. ಅಂದರೆ ಕಳೆದ ಆಯವ್ಯಯದಲ್ಲಿ ರಾಜ್ಯ ಸರ್ಕಾರ ಸದರಿ ಕಾರ್ಖಾನೆಯ ಪುನಶ್ಚೇತನಕ್ಕಾಗಿ 50.00 ಕೋಟಿ ರೂಪಾಯಿ ಅನುದಾನವನ್ನು ನೀಡುವುದಾಗಿ ಘೋಷಣೆ ಮಾಡಿದ್ದು, ಅದರಲ್ಲಿ 30 ಕೋಟಿ ರೂಪಾಯಿ ಅನುದಾನವನ್ನು ಮಾತ್ರ ಬಿಡುಗಡೆ ಮಾಡಿದ್ದು, ಉಳಿಕೆ 20 ಕೋಟಿ ರೂಪಾಯಿ ಅನುದಾನವನ್ನು ಬಿಡುಗಡೆ ಮಾಡಲು ಆರ್ಥಿಕ ಇಲಾಖೆಯ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ.
ಇದನ್ನೂ ಓದಿ | Mysugar Factory | ಸಂಕಷ್ಟದಲ್ಲಿ ಮೈಶುಗರ್ ಫ್ಯಾಕ್ಟರಿ; ತಕ್ಷಣ ₹20 ಕೋಟಿ ಬಿಡುಗಡೆಗೆ ದಿನೇಶ್ ಗೂಳಿಗೌಡ ಆಗ್ರಹ
ಸರ್ಕಾರ ಪ್ರಸ್ತುತ ನೀಡುತ್ತಿರುವ ಪ್ರತಿ ಟನ್ ಕಬ್ಬಿನ ಬೆಲೆಯಿಂದ ಕಬ್ಬು ಬೆಳೆಗಾರರಿಗೆ ಯಾವುದೇ ಲಾಭಾಂಶವಿಲ್ಲದೆ ತುಂಬಾ ನಷ್ಟ ಅನುಭವಿಸುತ್ತಿದ್ದಾರೆ. ಉತ್ಪಾದನೆ, ರಾಸಾಯನಿಕ ಗೊಬ್ಬರಗಳ ಬೆಲೆ ಏರಿಕೆ, ಕಟಾವು ಮತ್ತು ಸಾಗಾಣಿಕಾ ವೆಚ್ಚಗಳು ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. ಹೀಗಾಗಿ ಕಬ್ಬಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕಿದ್ದು, ಪ್ರತಿ ಟನ್ ಕಬ್ಬಿಗೆ 500 ರೂಪಾಯಿ ಪ್ರೋತ್ಸಾಹ ಧನವನ್ನು ರಾಜ್ಯ ಸರ್ಕಾರ ನಿಗದಿಪಡಿಸಬೇಕು ಎಂದು ಜಿಲ್ಲೆಯ ರೈತರ ಪರವಾಗಿ ಒತ್ತಾಯಿಸುತ್ತೇವೆ.
ರೈತರ-ಜನಪ್ರತಿನಿಧಿಗಳ ಸಭೆ ಕರೆಯಿರಿ
ಮೈಸೂರು ದಸರಾ ಉತ್ಸವದ ಸಮಯದಲ್ಲಿ ತಾವು ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಪರಿಹರಿಸಲು ಜನಪ್ರತಿನಿಧಿಗಳು ಮತ್ತು ರೈತ ಮುಖಂಡರ ಸಭೆಯನ್ನು ಕರೆಯುವುದಾಗಿ ಭರವಸೆ ನೀಡಿದ್ದಿರಿ. ಸದಾ ರೈತರ ಬಗ್ಗೆ ಸಹಾನುಭೂತಿ ಹೊಂದಿರುವ ತಾವು ತಮ್ಮ ಕಾರ್ಯದೊತ್ತಡದಿಂದ ಇದುವರೆಗೂ ಸದರಿ ಸಭೆಯನ್ನು ಕರೆಯಲು ಸಾಧ್ಯವಾಗಿರುವುದಿಲ್ಲವೆಂದು ಭಾವಿಸುತ್ತೇನೆ. ಇದರಿಂದ ಹತಾಶರಾಗಿರುವ ರೈತರು ಸತ್ಯಾಗ್ರಹದಲ್ಲಿ ಪಾಲ್ಗೊಳ್ಳುತ್ತಿದ್ದು, ಪ್ರತಿಭಟನೆಯ ಹಾದಿ ಹಿಡಿಯುತ್ತಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗುವ ಪರಿಸ್ಥಿತಿ ನಿರ್ಮಾಣವಾಗಬಹುದಾಗಿದೆ.
ಆದುದರಿಂದ, ಕಬ್ಬು ಬೆಳೆಗಾರರ ಸಮಸ್ಯೆಯನ್ನು ಪರಿಹರಿಸಲು ತುರ್ತಾಗಿ ಜನಪ್ರತಿನಿಧಿಗಳು ಮತ್ತು ರೈತ ಮುಖಂಡರ ಸಭೆಯನ್ನು ಕರೆಯಬೇಕೆಂದು ಈ ಮೂಲಕ ತಮ್ಮಲ್ಲಿ ಕೋರುತ್ತಾ ತಡಮಾಡದೆ ರೈತರ ಹಿತಕಾಪಾಡುವ ದೃಷ್ಟಿಯಿಂದ ಕಬ್ಬು ಬೆಳೆಗಾರರಿಗೆ ಪ್ರತಿ ಟನ್ ಕಬ್ಬಿಗೆ 500 ರೂ. ಪ್ರೋತ್ಸಾಹಧನ ನೀಡುವುದರ ಜತೆಗೆ ವೈಜ್ಞಾನಿಕ ಬೆಲೆ ನಿಗದಿಪಡಿಸುವಂತೆ ತಮ್ಮಲ್ಲಿ ಕೋರುತ್ತೇವೆ ಎಂದು ವಿಧಾನ ಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ ಹಾಗೂ ಮಧು ಜಿ. ಮಾದೇಗೌಡ ಅವರು ಸಿಎಂಗೆ ಮನವಿ ಮಾಡಿದರು.
ಸಕ್ಕರೆ ಸಚಿವರಾದ ಶಂಕರ ಪಾಟೀಲ್ ಮುನೇನಕೊಪ್ಪ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಗೋಪಾಲಯ್ಯ ಅವರಿಗೂ ಮನವಿ ಮಾಡಿ ಸೂಕ್ತವಾಗಿ ಸ್ಪಂದಿಸುವಂತೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ | ಮೈಷುಗರ್ ಕಾರ್ಖಾನೆಯಲ್ಲಿ ಎಥೆನಾಲ್ ಘಟಕ ಪ್ರಾರಂಭಿಸಿ; ಸಿಎಂಗೆ ಪತ್ರ ಬರೆದ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ