Site icon Vistara News

Sugar Cane | ಟನ್‌ ಕಬ್ಬಿಗೆ ₹5,500 ನಿಗದಿಗೆ ಪಟ್ಟು; ಸುವರ್ಣಸೌಧ ಮುತ್ತಿಗೆಗೆ ಯತ್ನಿಸಿದ ರೈತರು ಪೊಲೀಸ್‌ ವಶಕ್ಕೆ

belagavi farmer protest

ಬೆಳಗಾವಿ: ಪ್ರತಿ ಟನ್ ಕಬ್ಬಿಗೆ (Sugar Cane) 5500 ರೂಪಾಯಿ ದರ ನಿಗದಿ ಮಾಡುವಂತೆ ಒತ್ತಾಯಿಸಿ ಕಬ್ಬು ಬೆಳಗಾರರು ಹಮ್ಮಿಕೊಂಡಿರುವ ಪ್ರತಿಭಟನೆ ತೀವ್ರತೆ ಪಡೆದುಕೊಂಡಿದ್ದು, ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಹೊರಟಿದ್ದ ರೈತರನ್ನು ಹುಕ್ಕೇರಿ ತಾಲೂಕಿನ ಹತ್ತರಗಿ ಟೋಲ್‌ಗೇಟ್ ಬಳಿಯೇ ತಡೆದ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಪೊಲೀಸರು ಹತ್ತರಗಿ ಟೋಲ್‌ಗೇಟ್ ಬಳಿ ತಡೆದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ರೈತರು ಅರೆಬೆತ್ತಲೆಯಾಗಿ ಪ್ರತಿಭಟನೆ ನಡೆಸಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶವನ್ನು ಹೊರಹಾಕಿದರು.

ರೈತ ಮುಖಂಡರಾದ ಚೂನಪ್ಪ ಪೂಜಾರಿ, ರಾಜು ಪವಾರ್ ನೇತೃತ್ವದಲ್ಲಿ ಬೆಳಗಾವಿಗೆ ಹೊರಟಿದ್ದ ರೈತರನ್ನು ಪೊಲೀಸರು ತಡೆದಿದ್ದಾರೆ. ಈ ವೇಳೆ ಪೊಲೀಸರೊಂದಿಗೆ ರೈತರು ವಾಗ್ವಾದ ನಡೆಸಿದ್ದಾರೆ. ಒಂದು ಸಮಯದಲ್ಲಿ ತಾಳ್ಮೆ ಕಳೆದುಕೊಂಡ ರೈತ ಮುಖಂಡ ಚೂನಪ್ಪ ಪೂಜಾರಿ ಸಿಎಂ ಬೊಮ್ಮಾಯಿ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ | PM KISAN SAMMAN| ರಾಜ್ಯದ 50.36 ಲಕ್ಷ ರೈತರಿಗೆ 1007.26 ಕೋಟಿ ರೂಪಾಯಿ ವರ್ಗಾವಣೆ

ಸಕ್ಕರೆ ಸಚಿವರ ವಿರುದ್ಧ ಕಿಡಿ
ಸಕ್ಕರೆ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಅವರು ಎರಡು ದಿನಗಳಲ್ಲಿ ಮುಖ್ಯಮಂತ್ರಿ ಜತೆ ಚರ್ಚಿಸಿ ಸಿಹಿ ಸುದ್ದಿ ಕೊಡುವುದಾಗಿ ಹೇಳಿಕೆ ನೀಡಿದ್ದರು. ಒಂದು ಟನ್ ಕಬ್ಬಿಗೆ ಸರ್ಕಾರಕ್ಕೆ ಕಾರ್ಖಾನೆಗಳಿಂದ 4500 ರೂ. ತೆರಿಗೆ ಹೋಗುತ್ತದೆ. ಹೀಗಾಗಿ ಅದರಲ್ಲಿ ರಾಜ್ಯ ಸರ್ಕಾರ 2000 ರೂಪಾಯಿ ಸಹಾಯಧನ ನೀಡಬೇಕು. ಕಾರ್ಖಾನೆಗಳು ರೈತರಿಗೆ ಪ್ರತಿ ಟನ್‌ಗೆ 3500 ರೂಪಾಯಿ ನೀಡಬೇಕು. ಒಟ್ಟಾರೆಯಾಗಿ ಪ್ರತಿ ಟನ್‌ ಕಬ್ಬಿಗೆ 5500 ರೂಪಾಯಿ ದರ ಘೋಷಣೆ ಮಾಡಬೇಕು ಎಂಬ ರೈತರ ಆಗ್ರಹಕ್ಕೆ ಸಚಿವರು ಒಪ್ಪಿಗೆ ಸೂಚಿಸಿದ್ದರು. ಆದರೆ, ಅವರು ಮಾತನ್ನು ಉಳಿಸಿಕೊಂಡಿಲ್ಲ ಎಂದು ಆರೋಪಿಸಿದ ರೈತರು ಆಕ್ರೋಶ ಹೊರಹಾಕಿದರು.

ಸಿಎಂ ಹೋದಲ್ಲೆಲ್ಲ ಪ್ರತಿಭಟನೆ ಎಚ್ಚರಿಕೆ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರತಿ ಟನ್‌ ಕಬ್ಬಿಗೆ ೫೫೦೦ ರೂಪಾಯಿ ನೀಡುವ ಬಗ್ಗೆ ಶೀಘ್ರವೇ ನಿರ್ಧಾರವನ್ನು ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಸಿಎಂ ಭೇಟಿ ನೀಡುವ ಸ್ಥಳದಲ್ಲೆಲ್ಲ ಹೋರಾಟ ನಡೆಸುತ್ತೇವೆ. ಇದರ ಜತೆಗೆ ಯಾವುದೇ ಶಾಸಕ, ಸಚಿವರು ಕಿತ್ತೂರು ಉತ್ಸವದಲ್ಲಿ ಭಾಗವಹಿಸಬಾರದು. ಕಿತ್ತೂರು ಉತ್ಸವದೊಳಗೆ ಕಬ್ಬು ಬೆಳೆಗಾರರಿಗೆ ಸಿಹಿ ಸುದ್ದಿ ನೀಡಬೇಕು. ಇಲ್ಲವಾದರೆ ಕಿತ್ತೂರು ಉತ್ಸವಕ್ಕೆ ಆಗಮಿಸುವ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಪ್ರತಿಭಟನೆ ನಡೆಸುತ್ತೇವೆ. ರಸ್ತೆಯಲ್ಲಿಯೇ ಸಿಎಂ ಬೊಮ್ಮಾಯಿ ಅವರನ್ನು ರಿಪೇರಿ ಮಾಡುವ ಕೆಲಸವನ್ನು ಮಾಡುತ್ತೇವೆ ಎಂದು ರೈತರು ಆಕ್ರೋಶ ಹೊರಹಾಕಿದರು.

೧೦೦ಕ್ಕೂ ಹೆಚ್ಚು ರೈತರು ವಶಕ್ಕೆ
ಬೆಳಗಾವಿ ಸುವರ್ಣಸೌಧ ಮುತ್ತಿಗೆಗೆ ಯತ್ನ ಮಾಡಿದ ಹಿನ್ನೆಲೆಯಲ್ಲಿ ಹತ್ತರಗಿ ಟೋಲ್‌ಗೇಟ್‌ ಬಳಿ 10ಕ್ಕೂ ಅಧಿಕ ರೈತರನ್ನು ಪೊಲೀಸರ ವಶಕ್ಕೆ ಪಡೆದುಕೊಂಡಿದ್ದಾರೆ. ಬಳಿಕ ಅವರನ್ನು ಮಾಳಮಾರುತಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ರೈತ ಮುಖಂಡರಾದ ರಾಘವೇಂದ್ರ ನಾಯಕ್, ಪ್ರಕಾಶ ನಾಯಕ್, ವಿರೇಶ ಮಂಡೇದ್ ಸೇರಿ ಹಲವರನ್ನು ವಶಕ್ಕೆ ಪಡೆಯಲಾಗಿದೆ. ಪೊಲೀಸರನ್ನು ಬಳಸಿ ಪ್ರತಿಭಟನೆ ಹತ್ತಿಕ್ಕುವ ಕೆಲಸಕ್ಕೆ ಸರ್ಕಾರ ಮುಂದಾಗಿದೆ ಎಂದು ಈ ವೇಳೆ ರೈತರು ಆಕ್ರೋಶವನ್ನು ಹೊರಹಾಕಿದರು.

ಇನ್ನು ವಿವಿಧ ಕಡೆಗಳಿಂದ ಸುವರ್ಣಸೌಧ ಮುತ್ತಿಗೆ ಹಾಕಲು ಬರುತ್ತಿದ್ದ ರೈತರನ್ನು ಪೊಲೀಸರು ಮಾರ್ಗ ಮಧ್ಯೆಯೇ ವಶಕ್ಕೆ ಪಡೆದುಕೊಂಡಿದ್ದು, ನೇಸರಗಿ, ಹತ್ತರಗಿ, ಹಿರೇಬಾಗೇವಾಡಿ ಸೇರಿ ಸುಮಾರು ನೂರಕ್ಕೂ ಅಧಿಕ ರೈತರನ್ನು ಪೊಲೀಸರು ಬಂಧಿಸಿದ್ದಾರೆ.

ಸುವರ್ಣಸೌಧದಲ್ಲಿ ಬಿಗಿ ಬಂದೋಬಸ್ತ್‌
ಬೆಳಗಾವಿಯ ಸುವರ್ಣಸೌಧ ಮತ್ತಿಗೆ ಹಾಕಲು ರೈತರು ನಿರ್ಧಾರ ಮಾಡಿರುವುದರಿಂದ ಸುವರ್ಣ ಸೌಧದ ಎದುರು ಬ್ಯಾರಿಕೇಡ್ ಅಳವಡಿಸಲಾಗಿದ್ದು, ಬೆಳಗಾವಿ ಮಾರ್ಕೆಟ್, ಗ್ರಾಮೀಣ, ಕ್ರೈಂ ಎಸಿಪಿ ಸೇರಿ 100ಕ್ಕೂ ನೂರಕ್ಕೂ ಅಧಿಕ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಡಿಸಿಪಿ ರವೀಂದ್ರ ಗಡಾಡಿ ನೇತೃತ್ವದಲ್ಲಿ ಭದ್ರತೆ ವ್ಯವಸ್ಥೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಸುವರ್ಣ ಸೌಧಕ್ಕೆ ಬರುವ ರೈತರನ್ನು ಮಾರ್ಗಮಧ್ಯೆಯೇ ಪೊಲೀಸರು ತಡೆಯುತ್ತಿದ್ದಾರೆ.

ಇದನ್ನೂ ಓದಿ | ರಾಜ್ಯ ಸರ್ಕಾರ ಕಬ್ಬು ಬೆಳೆಗಾರರ ಹಿತರಕ್ಷಣೆಗೆ ಮುಂದಾಗಲಿ; ಮಾಜಿ ಸಚಿವ ಆರ್‌.ವಿ ದೇಶಪಾಂಡೆ

Exit mobile version