ವಿಜಯನಗರ: ಸಚಿವ ಆನಂದ್ ಸಿಂಗ್ ಜೀವ ಬೆದರಿಕೆ ಹಾಕಿದರು ಎಂದು ಆರೋಪಿಸಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಪ್ರಕರಣಕ್ಕೆ ತಿರುವು ದೊರೆತಿದ್ದು, ಪತ್ರಕರ್ತರೊಬ್ಬರ ಮೇಲೆ ದೂರು ದಾಖಲಾಗಿದೆ.
ಪತ್ರಕರ್ತ ಮಹಮ್ಮದ್ ಗೌಸ್ ಎಂಬವರು ಪೆಟ್ರೋಲ್ ಸುರಿದುಕೊಳ್ಳಲು ಕೈಸನ್ನೆ ಮಾಡಿ ಸೂಚಿಸಿದರು ಎಂದು ಎಫ್‌ಐಆರ್ ದಾಖಲಾಗಿದೆ. ಆತ್ಮಹತ್ಯೆ ಪ್ರಚೋದನೆ ದೂರನ್ನು ಎಸ್.ಪಿ ಡಾ. ಅರುಣ್ ದಾಖಲಿಸಿಕೊಂಡಿದ್ದಾರೆ.
ಮನೆ ಜಾಗ ಬಿಟ್ಟುಕೊಡುವಂತೆ, ಇಲ್ಲವಾದರೆ ಮನೆ ಸುಟ್ಟುಹಾಕುತ್ತೇನೆ ಎಂದು ಸಚಿವ ಆನಂದ್ ಸಿಂಗ್ ಜೀವ ಬೆದರಿಕೆ ಹಾಕಿದರು ಎಂದು ಡಿ.ಪೋಲಪ್ಪ ಆರೋಪಿಸಿದ್ದರು. ಜತೆಗೆ, ಎಸ್‌ಪಿ ಕಚೇರಿ ಎದುರು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಈ ವೇಳೆ ಜಾಗೃತಿ ಬೆಳಕು ಪತ್ರಿಕೆ ವರದಿಗಾರ ಮಹಮ್ಮದ್ ಗೌಸ್ ಪೆಟ್ರೋಲ್ ಸುರಿದುಕೊಳ್ಳುವಂತೆ ಪೋಲಪ್ಪ ಹಾಗೂ ಕುಟುಂಬಸ್ಥರಿಗೆ ಕೈಸನ್ನೆ ಮೂಲಕ ಪ್ರಚೋದಿಸಿದ್ದರು. ಕೈಸನ್ನೆ ಮಾಡಿದ್ದು ವಿಡಿಯೋದಲ್ಲೂ ಸಹ ರೆಕಾರ್ಡ್ ಆಗಿದ್ದು, ವಿಡಿಯೋ ಆಧರಿಸಿ ಎಸ್‌ಪಿ ಡಾ. ಅರುಣ್ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.
ಸಚಿವ ಆನಂದ್ ಸಿಂಗ್ ಪೆಟ್ರೋಲ್ ಹಾಕಿ ಸುಟ್ಟು ಹಾಕುತ್ತೇನೆ ಎಂದಿದ್ದಾರೆ. ಜೀವ ಬೆದರಿಕೆ ಹಾಕಿ ಜಾತಿ ನಿಂದನೆ ಮಾಡಿದ್ದಾರೆ. ಅಂದು ಎಸ್‌ಪಿ ಕಚೇರಿ ಬಳಿ ನಾನು ಹೋದಾಗ ಎಸ್‌ಪಿ ಇರಲಿಲ್ಲ. ಬೇಸತ್ತು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದೆ. ಈ ವೇಳೆ ಪೊಲೀಸರು ನನ್ನನ್ನು ತಡೆದರು ಎಂದು ಎಸ್‌ಪಿ ಕಚೇರಿಯಲ್ಲಿ ಪೋಲಪ್ಪ ಲಿಖಿತ ದೂರು ನೀಡಿದ್ದರು. ಅದಾದ ಬಳಿಕ ಆನಂದ್ ಸಿಂಗ್ ಸೇರಿ ಮೂವರ ವಿರುದ್ಧ ದೂರು ದಾಖಲಾಗಿತ್ತು.
ಇದನ್ನೂ ಓದಿ | ನಾನು ಯಾರಿಗೂ ಜೀವ ಬೆದರಿಕೆ ಹಾಕಿಲ್ಲ ಎಂದು ಸಚಿವ ಆನಂದ್ ಸಿಂಗ್ ಸ್ಪಷ್ಟನೆ