ಬೆಂಗಳೂರು: ಇಲ್ಲಿನ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ವಿಶ್ವೇಶ್ವರ ಲೇಔಟ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ (Suicide Case) ವ್ಯಕ್ತಿಯೊಬ್ಬನ ಶವ ಪತ್ತೆ ಆಗಿದೆ. ನಾಗೇಶ್ ಎಂಬಾತ ಪತ್ನಿಯನ್ನು ಬಿಟ್ಟು ಪ್ರಿಯತಮೆ ಜತೆ ಬಂದವನು ಈಗ ಶವವಾಗಿ ಪತ್ತೆ ಆಗಿದ್ದಾನೆ.
ಕೊಮ್ಮಘಟ್ಟದ ವೀರಭದ್ರ ನಗರದಲ್ಲಿ ವಾಸವಾಗಿದ್ದ ನಾಗೇಶ್ 6 ವರ್ಷದ ಹಿಂದೆ ಮಧುಶ್ರಿ ಎಂಬಾಕೆಯನ್ನು ವಿವಾಹವಾಗಿದ್ದ. ಈ ವೇಳೆ ಸಹನಾ ಎಂಬಾಕೆಯ ಪರಿಚಯವಾಗಿ ಅದು ಪ್ರೀತಿಗೆ ತಿರುಗಿತ್ತು. ಗಾಢ ಪ್ರೀತಿಗೆ ಸಿಲುಕಿದ ನಾಗೇಶ್, ಸಹನಾಳ ಸಹವಾಸ ಬೆಳೆಸಿದ್ದ.
ಈ ವಿಚಾರ ತಿಳಿದ ಪತ್ನಿ ಮಧುಶ್ರೀ ಪತಿ ನಾಗೇಶ್ ಜತೆಗೆ ಗಲಾಟೆಯನ್ನೂ ಮಾಡಿದ್ದಳು. ಗಲಾಟೆ ಬಳಿಕ ಸಹನಾ ಜತೆ ಕಳೆದ ಜ. 10ರಂದು ಮನೆ ಬಿಟ್ಟು ಪರಾರಿಯಾಗಿದ್ದ. ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡು ಬೆಂಗಳೂರಿಗೆ ಬಂದಿದ್ದ ಎನ್ನಲಾಗಿದೆ. ಹೀಗೆ ಬೆಂಗಳೂರಿಗೆ ಪ್ರಿಯತಮೆ ಜತೆ ಹೋದವನು ಜ್ಞಾನಭಾರತಿ ಠಾಣಾ ವ್ಯಾಪ್ತಿಯಲ್ಲಿ ಶವವಾಗಿ ಪತ್ತೆ ಆಗಿದ್ದಾನೆ.
ಇದನ್ನೂ ಓದಿ: Murder Case: ಹಾಸನದಲ್ಲಿ ಐಫೋನ್ ಆಸೆಗೆ ಡೆಲಿವರಿ ಬಾಯ್‌ಗೆ ಚಾಕು ಇರಿದು ಯುವಕ
ಮರವೊಂದಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ನಾಗೇಶ್ ತಂದೆ ಇದನ್ನು ಕೊಲೆ ಎಂದು ಶಂಕಿಸಿದ್ದಾರೆ. ಅಲ್ಲದೆ, ಪ್ರಿಯತಮೆ ಸಹನಾ ವಿರುದ್ಧ ದೂರು ದಾಖಲಿಸಿದ್ದಾರೆ. ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಿದ್ದು, ತನಿಖೆಯನ್ನು ಮುಂದುವರಿಸಲಾಗಿದೆ.
ಬೆಂಗಳೂರಿನ ಮತ್ತಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ