ಹಾಸನ: ತಾಯಿಯೊಬ್ಬಳು ತನ್ನ ಇಬ್ಬರು ಮಕ್ಕಳಿಗೆ ಹಾಲಿನಲ್ಲಿ ಇಲಿ ಪಾಷಾಣ ಬೆರೆಸಿ ಕುಡಿಸಿ ತಾನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹಾಸನದ ಚಿಪ್ಪಿನಕಟ್ಟೆಯಲ್ಲಿ ಸಂಭವಿಸಿದೆ. ಈ ಘಟನೆಯಲ್ಲಿ ಒಂದು ಮಗು ಪ್ರಾಣ ಕಳೆದುಕೊಂಡಿದ್ದು, ಮತ್ತೊಂದು ಮಗು ಗಂಭೀರ ಸ್ಥಿತಿಯಲ್ಲಿದೆ. ಆತ್ಮಹತ್ಯೆಗೆ ಯತ್ನಿಸಿದ ತಾಯಿ ಅಸ್ವಸ್ಥಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ಜನವರಿ ಏಳರಂದು ಈ ಘಟನೆ ನಡೆದಿದ್ದು, ತಾಯಿಯ ಈ ಕೃತ್ಯದ ಬಗ್ಗೆ ತಡವಾಗಿ ಬೆಳಕಿಗೆ ಬಂದಿದೆ.
ಹಾಸನದ ಚಿಪ್ಪಿನಕಟ್ಟೆ ಬಡಾವಣೆಯಲ್ಲಿ ಘಟನೆ ನಡೆದಿದೆ. ಇಲ್ಲಿನ ನಿವಾಸಿ ದಿಲ್ ದಾರ್ ಎಂಬವರ ಪತ್ನಿ ಜೀನತ್ ಬಾನು ಎಂಬಾಕೆಯೇ ವಿಷ ಉಂಡು ಮಕ್ಕಳಿಗೂ ಕೊಟ್ಟವಳು. ಏಳು ವರ್ಷದ ಮಗು ಅರಾನ್ ಘಟನೆಯಲ್ಲಿ ಸಾವನ್ನಪ್ಪಿದ್ದರೆ, ಆರು ವರ್ಷದ ಸುನೈನಾ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಹೆತ್ತವರು ಬರುತ್ತಿರಲಿಲ್ಲ ಎಂಬ ನೋವೇ?
ದಿಲ್‌ದಾರ್-ಜೀನತ್‌ಬಾನು ದಂಪತಿಗೆ 12 ವರ್ಷಗಳ ಹಿಂದೆ ಮದುವೆಯಾಗಿದೆ. ಮಂಗಳೂರಿನ ಉಪ್ಪಿನಂಗಡಿ ಬಳಿ ಸತ್ತಿಗಲ್‌ನಲ್ಲಿ ಜೀನತ್ ಬಾನು ತಂದೆ ಮನೆ ಇದೆ. ಜೀನತ್ ಬಾನು ಹೆತ್ತವರು ಈ ಕುಟುಂಬವನ್ನು ನೋಡಲು ಬರುತ್ತಿರಲಿಲ್ಲ. ಇದರಿಂದ ಆಕೆ ನೊಂದಿದ್ದರು ಎನ್ನಲಾಗಿದೆ.
ಜ.7ರಂದು ಜೀನತ್ ಬಾನು ಹಾಲಿನಲ್ಲಿ ಇಲಿ ಪಾಷಾಣ ಬೆರಸಿ ಎರಡು ಮಕ್ಕಳಿಗೂ ಕುಡಿಸಿ ತಾನು ಕುಡಿದಿದ್ದಳು ಎನ್ನಲಾಗಿದೆ. ಜ. 8ರಂದು ಬೆಳಿಗ್ಗೆ ಆರಾನ್‌ಗೆ ವಾಂತಿ ಭೇದಿಯಾಗಿದ್ದು ಕೂಡಲೇ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಡಿ. 8ರ ಮಧ್ಯಾಹ್ನ ಚಿಕಿತ್ಸೆ ಫಲಕಾರಿಯಾಗದೆ ಆರಾನ್ ಸಾವು ಕಂಡಿದ್ದಾನೆ.
ಇಷ್ಟಾದರೂ ಜೀನತ್ ಬಾನು ತಾನು ವಿಷ ಕೊಟ್ಟಿದ್ದೇನೆ. ಇದೇ ಕಾರಣಕ್ಕಾಗಿ ಮಗು ಅಸ್ವಸ್ಥವಾಗಿರಬಹುದು ಎಂದು ಹೇಳಿಲ್ಲ. ಈ ನಡುವೆ, ಆಸ್ಪತ್ರೆ ಸಿಬ್ಬಂದಿ ವಿಷಕಾರಿ ವಸ್ತು ಸೇವನೆಯಿಂದ ಮಗು ಸತ್ತಿದೆ ಎಂದು ತಿಳಿಸಿದಾಗಲೇ ಜೀನತ್ ಬಾನುವಿನ ಕೃತ್ಯ ಬೆಳಕಿಗೆ ಬಂದಿದ್ದು.
ಮೃತಪಟ್ಟ ಮಗುವಿನ ಅಂತ್ಯಕ್ರಿಯೆಯನ್ನು ಹಾಸನದ ವಲ್ಲಭಭಾಯಿ ರಸ್ತೆಯಲ್ಲಿರುವ ಖಬರಸ್ತಾನದಲ್ಲಿ ನಡೆಸಲಾಗಿತ್ತು. ಇದಾಗಿ ಸ್ವಲ್ಪ ಹೊತ್ತಿನಲ್ಲೇ ಸುನೈನಾ ಹಾಗೂ ಜೀನತ್ ಬಾನುಗೆ ವಾಂತಿ ಭೇದಿ ಕಾಣಿಸಿಕೊಂಡಿದೆ. ಆಗ ತಾನು ಮಕ್ಕಳಿಗೆ ವಿಷ ನೀಡಿ, ತಾನೂ ಸೇವಿಸಿದ್ದಾಗಿ ಬಾಯಿ ಬಿಟ್ಟಿದ್ದಾಳೆ. ಈಗ ಸುನೈನಾ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಾಸನ ತಹಸೀಲ್ದಾರ್ ಸಂತೋಷ್ ಸಮ್ಮುಖದಲ್ಲಿ ಹೂತಿದ್ದ ಆರಾನ್ ಶವ ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಪೆನ್‌ಷನ್‌ಮೊಹಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜೀನತ್‌ಬಾನು ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ | Mass suicide | ಮೂರು ಹೆಣ್ಣು ಮಕ್ಕಳಿಗೆ ವಿಷ ಉಣಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡ ತಾಯಿ