ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನ ಅಶೋಕ್ ಪುರಂನಲ್ಲಿ ಯುವಕನೊಬ್ಬ ಆತ್ಮಹತ್ಯೆ (Suicide case) ಮಾಡಿಕೊಂಡಿದ್ದು, ಪೊಲೀಸರ ಕಿರುಕುಳವೇ ಸಾವಿಗೆ ಕಾರಣ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೀರ್ತಿ (೨೫) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿ. ಈತ ಖಾಸಗಿ ಕಂಪನಿಯಲ್ಲಿ ಕಾರು ಪಾರ್ಕರ್ ಆಗಿ ಕೆಲಸ ಮಾಡುತ್ತಿದ್ದ. ಕಾರುಗಳು ಬಂದಾಗ ಪಾರ್ಕಿಂಗ್ ಮಾಡುವುದು, ಬಳಿಕ ಕಾರನ್ನು ವಾಪಸ್ ತಂದು ಕೊಡುವ ಕೆಲಸವನ್ನು ಈತ ಮಾಡುತ್ತಿದ್ದ. ಆದರೆ, ನಾಲ್ಕೈದು ದಿನದ ಹಿಂದೆ ಕಾರೊಂದರಲ್ಲಿದ್ದ ಚಿನ್ನ ಕಳುವಾಗಿದೆ ಎಂಬ ದೂರು ಕೇಳಿಬಂದಿತ್ತು. ಈ ವಿಚಾರವಾಗಿ ಕಾರು ಮಾಲೀಕ ಪೊಲೀಸರಿಗೆ ದೂರು ನೀಡಿದ್ದ.
ವಿಚಾರಣೆಗೆ ಕರೆಸಿದ್ದ ಪೊಲೀಸರು
ಕಾರಿನಲ್ಲಿದ್ದ ಚಿನ್ನ ಕಳವು ಪ್ರಕರಣದ ದೂರಿನ ಸಂಬಂಧ ವಿಚಾರಣೆ ನಡೆಸಿದ ಸುಬ್ರಹ್ಮಣ್ಯನಗರ ಪೊಲೀಸರು ಕೀರ್ತಿಯನ್ನು ಠಾಣೆಗೆ ಕರೆಸಿಕೊಂಡಿದ್ದಾರೆ. ಕೀರ್ತಿ ಹಾಗೂ ಮತ್ತೊಬ್ಬನನ್ನು ವಿಚಾರಣೆಗೆ ಕರೆಸಿದ್ದರು. ಈ ವೇಳೆ ಕೀರ್ತಿ ಮೇಲೆ ಪೊಲೀಸರು ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಜೈಲಿಗೆ ಹಾಕುವುದಾಗಿ ಹೆದರಿಸಿದ್ದಲ್ಲದೆ, ಮತ್ತೆ ಠಾಣೆಗೆ ಬರಲು ಸೂಚಿಸಿದ್ದಾರೆನ್ನಲಾಗಿದೆ.
ಈ ಸಂಬಂಧ ಡೆತ್‌ನೋಟ್ ಬರೆದಿದ್ದ ಕೀರ್ತಿ ತಪ್ಪು ಮಾಡದೇ ಇದ್ದರೂ ಪೊಲೀಸರು ವಿನಾಕಾರಣ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾನೆ. ಕಾರಿನ ಮಾಲೀಕ ಸುನಿಲ್ ವಿರುದ್ಧ ಕೀರ್ತಿ ತಾಯಿ ಪ್ರಕರಣ ದಾಖಲು ಮಾಡಿದ್ದಾರೆ. ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | Suicide prevention | ಈ ಸೂಚನೆಗಳನ್ನು ಗಮನಿಸಿದರೆ ಆತ್ಮಹತ್ಯೆ ತಡೆಯಬಹುದು