ಬೆಂಗಳೂರು/ಮಂಡ್ಯ: ಮಂಡ್ಯದ ಪಕ್ಷೇತರ ಸಂಸದೆ ಸುಮಲತಾ ಅಂಬರೀಷ್ (Sumalatha Ambareesh) ಅವರು ಬಿಜೆಪಿ ಸೇರ್ಪಡೆ ಖಚಿತವಾಗಿದ್ದು, ಶುಕ್ರವಾರ ಮಧ್ಯಾಹ್ನ ಮಂಡ್ಯದ ತಮ್ಮ ನಿವಾಸ ಚಾಮುಂಡೇಶ್ವರಿಯಲ್ಲಿ ಇದನ್ನು ಅಧಿಕೃತವಾಗಿ ಘೋಷಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‌ನ ಜಂಟಿ ಅಭ್ಯರ್ಥಿ ವಿರುದ್ಧ ಏಕಾಂಗಿಯಾಗಿ ಹೋರಾಡಿದ್ದ ಸುಮಲತಾಗೆ ಆಗಲೇ ಬಿಜೆಪಿ ಬೆಂಬಲ ನೀಡಿತ್ತು. ಅಂದಿನಿಂದಲೇ ಅವರು ಬಿಜೆಪಿ ಸೇರುವ ಬಗ್ಗೆ ಚರ್ಚೆಗಳು ನಡೆದಿದ್ದು, ಇದೀಗ ವಿಧಾನಸಭಾ ಚುನಾವಣೆಯ ಹೊಸ್ತಿನಲ್ಲಿ ನಿರ್ಣಾಯಕ ಹೆಜ್ಜೆ ಇಡಲಿದ್ದಾರೆ ಎನ್ನಲಾಗಿದೆ. ಒಂದು ಹಂತದಲ್ಲಿ ಕಾಂಗ್ರೆಸ್ ಸೇರಬೇಕಾ? ಬಿಜೆಪಿ ಸೇರಬೇಕಾ ಎನ್ನುವ ಗೊಂದಲದಲ್ಲಿದ್ದ ಸುಮಲತಾ ಅವರು ಅಭಿಮಾನಿಗಳು ಮತ್ತು ಮುಖಂಡರ ಜತೆ ಹಲವು ಸುತ್ತಿನ ಚರ್ಚೆ ನಡೆಸಿದ್ದರು. ಇದೀಗ ಬಿಜೆಪಿಯನ್ನೇ ಆಯ್ಕೆ ಮಾಡಿಕೊಂಡಿದ್ದು, ಅದನ್ನು ಶುಕ್ರವಾರ ಮಧ್ಯಾಹ್ನ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸುವ ಸಾಧ್ಯತೆ ಇದೆ.
ಗುರುವಾರ ರಾತ್ರಿ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಅಲ್ಲಿಂದ ತೆರಳಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಆಯೋಜಿಸಿದ್ದಾರೆ.
ಮೂರು ಕ್ಷೇತ್ರಗಳಿಗೆ ಬೇಡಿಕೆ
ಸುಮಲತಾ ಅವರು ಮಂಡ್ಯ ಜಿಲ್ಲೆಯ ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ ತಮ್ಮ ಅನುಯಾಯಿಗಳಿಗೆ ಟಿಕೆಟ್ ಕೊಡಬೇಕು ಎಂಬ ಮುಖ್ಯ ಷರತ್ತಿನೊಂದಿಗೆ ಬಿಜೆಪಿ ಸೇರುತ್ತಿದ್ದಾರೆ. ಅವರ ಹಲವು ಅಭಿಮಾನಿಗಳು ಆಗಲೇ ಬಿಜೆಪಿಯನ್ನು ಸೇರಿಕೊಂಡಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ, ಶ್ರೀರಂಗಪಟ್ಟಣ ಮತ್ತು ಮದ್ದೂರು ಟಿಕೆಟ್ ಹಾಗು ಲೋಕಸಭೆಯಲ್ಲಿ ಬೆಂಗಳೂರು ಉತ್ತರ ಟಿಕೆಟ್ ಕೊಡುವಂತೆ ಸುಮಲತಾ ಅವರು ಮನವಿ ಮಾಡಿದ್ದು, ಅದಕ್ಕೆ ಬಿಜೆಪಿ ಸಮ್ಮತಿಸಿರುವ ಸಾಧ್ಯತೆ ಇದೆ. ಪಕ್ಷ ಸೇರ್ಪಡೆ ಆಗಿ ಹಳೆ ಮೈಸೂರು ಭಾಗದಲ್ಲಿ ಪಕ್ಷ ಗಟ್ಟಿ ಮಾಡಿದರೆ ನಿಮ್ಮ ಬೇಡಿಕೆ ಈಡೇರಿಸುವುದು ಕಷ್ಟವಲ್ಲ ಎಂದು ಜೆ.ಪಿ. ನಡ್ಡಾ ಕೂಡಾ ಹೇಳಿದ್ದಾರೆ ಎನ್ನಲಾಗಿದೆ.
ಮೋದಿ ಸಮ್ಮುಖದಲ್ಲಿ ಸೇರ್ಪಡೆ?
ಮಹತ್ವದ ಮಾಹಿತಿ ಹಂಚಿಕೊಳ್ಳಲೆಂದು ಸುಮಲತಾ ಅವರು ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಪತ್ರಿಕಾಗೋಷ್ಠಿ ಆಯೋಜಿಸಿದ್ದಾರೆ. ಚಾಮುಂಡೇಶ್ವರಿ ನಗರದ ಮನೆಯ ಮುಂಭಾಗದಲ್ಲಿ ಶಾಮಿಯಾನ ಹಾಕಿ ಸಿದ್ಧತೆ ನಡೆಸಲಾಗಿದೆ. ಇಲ್ಲಿ ಅವರು ಬಿಜೆಪಿ ಸೇರ್ಪಡೆ ಘೋಷಿಸುವ ಸಾಧ್ಯತೆ ಇದೆ. ಮಾರ್ಚ್ 12ರಂದು ಮಂಡ್ಯದಲ್ಲಿ ನಡೆಯಲಿರುವ, ಪ್ರಧಾನಿ ಮೋದಿ ಅವರು ಭಾಗವಹಿಸುವ ಕಾರ್ಯಕ್ರಮದಲ್ಲಿ ಬಿಜೆಪಿ ಸೇರುವ ಸಾಧ್ಯತೆ ದಟ್ಟವಾಗಿದೆ.
ಇದನ್ನೂ ಓದಿ : Mandya Politics: ಸುಮಲತಾ ಅಂಬರೀಶ್ ಎಲ್ಲರ ವಿಶ್ವಾಸ ಕಳೆದುಕೊಂಡಿದ್ದಾರೆ: ರವೀಂದ್ರ ಶ್ರೀಕಂಠಯ್ಯ ವಾಗ್ದಾಳಿ