ಮಂಡ್ಯ: ರಾಜ್ಯ ರಾಜಕಾರಣಕ್ಕೆ ಧುಮುಕಲು ʼರೆಬೆಲ್ ಲೇಡಿʼ ಸುಮಲತಾ ಅಂಬರೀಷ್ ತಯಾರಿ ಮಾಡಿಕೊಳ್ಳುತ್ತಿದ್ದಾರೆಯೇ ಎಂಬ ಅನುಮಾನ ಮೂಡಿದೆ. ಡಿ.ಕೆ ಶಿವಕುಮಾರ್ ಹಾಗೂ ಎಚ್.ಡಿ ಕುಮಾರಸ್ವಾಮಿ ಅವರಿಗೆ ಸಡ್ಡು ಹೊಡೆಯಲು ಸುಮಲತಾ ಸದ್ದಿಲ್ಲದೆ ಪ್ಲಾನ್ ಮಾಡಿಕೊಳ್ಳುತ್ತಿದ್ದಾರೆ ಎಂದು ಭಾವಿಸುವಂತೆ ಅವರ ನಡೆ ಕಾಣಿಸಿದೆ.
ಇಂದು ಮಂಡ್ಯದಲ್ಲಿ ಸುಮಲತಾ ಬೆಂಬಲಿಗರ ಸಭೆ ನಡೆಯಲಿದೆ. ಸಂಸದೆಯ ಬೆಂಬಲಿಗರಾದ ಹನಕೆರೆ ಶಶಿ, ಬೇಲೂರು ಸೋಮಶೇಖರ್ ನೇತೃತ್ವದಲ್ಲಿ ಬೆಳಗ್ಗೆ 11 ಗಂಟೆಗೆ ನಡೆಯಲಿರುವ ಸಭೆಯಲ್ಲಿ ಈ ಕುರಿತು ನಿರ್ಧಾರವಾಗಲಿದೆ. ಸುಮಲತಾ ಶಾಸಕ ಸ್ಥಾನಕ್ಕೆ ಸ್ಪರ್ಧಿಸುವ ಸುಳಿವು ನೀಡಿದ ಬೆನ್ನಲ್ಲೇ ಮದ್ದೂರಿನಿಂದ ಡಿಕೆ ಶಿವಕುಮಾರ್ ಮತ್ತು ಮಂಡ್ಯದಿಂದ ಎಚ್‌ಡಿಕೆ ಸ್ಪರ್ಧಿಸುವ ಚಿಂತನೆ ನಡೆಸಿದ್ದಾರೆ.
ಸುಮಲತಾ ರಾಜ್ಯ ರಾಜಕೀಯಕ್ಕೆ ಎಂಟ್ರಿ ಕೊಡದಂತೆ ರಣತಂತ್ರ ಹೆಣೆಯಲು ಉಭಯ ನಾಯಕರು ನಿರ್ಧರಿಸಿದ್ದಾರೆ. ತಾವೇ ಸ್ಪರ್ಧೆ ಮಾಡುತ್ತೇವೆ ಎಂದರೆ ಸುಮಲತಾ ಸ್ಪರ್ಧೆ ನಿರ್ಧಾರದಿಂದ ಹಿಂದೆ ಸರಿಯುತ್ತಾರೆ ಎಂಬ ಲೆಕ್ಕಾಚಾರ ಇದರ ಹಿಂದಿದೆ. ಆದರೆ ಬಂಡೆ ಮತ್ತು ದಳಪತಿ ಮಾಸ್ಟರ್ ಪ್ಲಾನ್‌ಗೆ ರೆಬೆಲ್ ಲೇಡಿ ಆತಂಕ ತೋರಿಸಿಕೊಂಡಿಲ್ಲ. ʼಯಾವುದೇ ಸವಾಲನ್ನು ಬೇಡ ಅನ್ನುವುದಿಲ್ಲʼ ಎಂದು ಇತ್ತೀಚೆಗೆ ಮದ್ದೂರಿಗೆ ಬಂದ ವೇಳೆ ಸುಮಲತಾ ಹೇಳಿದ್ದಾರೆ.
ಮಂಡ್ಯದಲ್ಲಿ ಹೆಚ್‌ಡಿಕೆ, ಮದ್ದೂರಲ್ಲಿ ಡಿಕೆ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯೆ ಸಂಸದೆ ನೀಡಿದ್ದಾರೆ. ಯಾರು ಎಲ್ಲಿ ಬೇಕಿದ್ದರೂ ಸ್ಪರ್ಧಿಸಬಹುದು. ಸ್ಪರ್ಧಿಸುವ ಹಕ್ಕು, ಅವಕಾಶ ಎಲ್ಲರಿಗೂ ಇದೆ, ಎಲ್ಲರಿಗೂ ಸ್ವಾಗತ. ಆದರೆ ಯಾಕೆ ಈ ಚರ್ಚೆ ಹುಟ್ಟಿಕೊಂಡಿದೆ ಅಂತ ಬಿಡಿಸಿ ಹೇಳಬೇಕಿಲ್ಲ. ಪರೋಕ್ಷವಾಗಿ ತಾನೂ ಸ್ಪರ್ಧಿಸುತ್ತೇನೆ ಎಂದೇ ಈ ಎಲ್ಲ ಬೆಳವಣಿಗೆ ಆಗುತ್ತಿದೆ. ನಾನು ರಾಜ್ಯ ರಾಜಕಾರಣಕ್ಕೆ ಬರುವ ವಿಚಾರಕ್ಕೆ ಉತ್ತರ ಕೊಡಲು ಆಗುವುದಿಲ್ಲ. ಏನೇ ನಿರ್ಧಾರ ತೆಗೆದುಕೊಂಡರೂ ಮುಂದೆ ತಿಳಿಸುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ: Sumalatha Ambarish | ವರಿಷ್ಠರು ಮಾತಾಡಿದ್ದು ನಿಜ, ಬಿಜೆಪಿ ಸೇರ್ಪಡೆ ಬಗ್ಗೆ ನಿರ್ಧರಿಸಿಲ್ಲ ಎಂದ ಸುಮಲತಾ ಅಂಬರೀಶ್
ʼಸ್ಪರ್ಧೆ ನಿರ್ಧಾರ ಆದರೆ ಡಿಕೆ, ಹೆಚ್‌ಡಿಕೆಯವರನ್ನು ಎದುರಿಸುತ್ತೀರಾʼ ಎಂಬ ಮಾಧ್ಯಮಗಳ ಪ್ರಶ್ನೆಗೆ, ʼಕಳೆದ ಲೋಕಸಭಾ ಚುನಾವಣೆಯಲ್ಲೇ ಕಠಿಣವಾದ ಚಾಲೆಂಜ್ ಸ್ವೀಕರಿಸಿ ಗೆದ್ದು ಬಂದವಳು ನಾನು. ಇನ್ನು ಮುಂದೆ ಯಾವುದೇ ಸವಾಲನ್ನು ಬೇಡ ಅನ್ನುವುದಿಲ್ಲ. ಪರೋಕ್ಷವಾಗಿ ಯಾರೇ ಎದುರಾಳಿಯಾದರೂ ಎಲೆಕ್ಷನ್ ಫೈಟ್‌ಗೆ ನಾನು ರೆಡಿʼ ಎಂದಿದ್ದಾರೆ.
ಇದರೊಂದಿಗೆ, ಮತ್ತೆ ಬಿಗ್ ಫೈಟ್‌ಗೆ ಸಕ್ಕರೆ ನಾಡು ಸಾಕ್ಷಿಯಾಗುತ್ತದೆಯೇ ಎಂಬ ಅನುಮಾನ ಮೂಡಿದೆ. ಕಳೆದ ಬಾರಿ ಮಂಡ್ಯದಿಂದ ಸಂಸದ ಸ್ಥಾನಕ್ಕೆ ಸುಮಲತಾ ಸ್ವತಂತ್ರವಾಗಿ ಸ್ಪರ್ಧಿಸಿದಾಗ ಕಾಂಗ್ರೆಸ್ ಹಾಗೂ ಜೆಡಿಎಸ್‌ಗಳು ಅವರನ್ನು ಮಣಿಸಲು ಶತಾಯಗತಾಯ ಯತ್ನಿಸಿದ್ದವು. ಈ ಬಾರಿ ಶಾಸಕ ಸ್ಥಾನಕ್ಕೆ ಅವರು ಸ್ಪರ್ಧಿಸುವ ಉತ್ಸಾಹ ತೋರಿಸಿದ್ದಾರೆ. ಹೀಗಾಗಿ ಎಚ್‌ಡಿಕೆ ಅಥವಾ ಡಿಕೆ ಇಬ್ಬರನ್ನು ಯಾರನ್ನು ಎದುರಿಸುತ್ತಾರೆ, ಹೇಗೆ ಎದುರಿಸುತ್ತಾರೆ ಎಂಬುದು ಕುತೂಹಲಕಕರ ಪ್ರಶ್ನೆಯಾಗಿ ಮಾರ್ಪಟ್ಟಿದೆ.
ಇದನ್ನೂ ಓದಿ: Sumalatha Ambareesh: ಸಂಸದೆ ಸುಮಲತಾ ಆಗಮನಕ್ಕೆ ವಿರೋಧ; ಬೆಂಬಲಿಗರು, ವಿರೋಧಿ ಬಣದ ನಡುವೆ ವಾಗ್ವಾದ, ಘರ್ಷಣೆ