Site icon Vistara News

Sumalatha Ambareesh : ಬಿಜೆಪಿ ಫ್ಲೆಕ್ಸ್‌ನಲ್ಲಿ ಸುಮಲತಾ!; ಕಮಲ ಪಕ್ಷ ಸೇರ್ಪಡೆ ಫಿಕ್ಸಾ? ಎರಡು ಕಂಡಿಷನ್‌ಗಳೇನು?

BJP sumalatha

#image_title

ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಸಂಸದೆ ಸುಮಲತಾ ಅಂಬರೀಷ್‌ (Sumalatha Ambareesh) ಅವರು ಬಿಜೆಪಿ ಸೇರ್ಪಡೆ ಫಿಕ್ಸಾಗಿ ಹೋಗಿದೆಯಾ? ರಾಜ್ಯದ ಇತರ ಕಡೆಗಳಲ್ಲಿ ಏನಾಗಿದೆಯೋ ಗೊತ್ತಿಲ್ಲ. ಮಂಡ್ಯದ ಕೆಲವು ಕಡೆಯಂತೂ ಅವರು ಬಿಜೆಪಿ ಸೇರಿ ಆಗಿದೆ ಎಂಬ ಭಾವನೆ ಇರುವಂತಿದೆ. ಮದ್ದೂರಿನಲ್ಲಿ ಹಾಕಿರುವ ಒಂದು ಫ್ಲೆಕ್ಸ್‌ ಇದನ್ನು ಸ್ಪಷ್ಟವಾಗಿ ಹೇಳುತ್ತಿದೆ.

ಸುಮಲತಾ ಇರುವ ಫ್ಲೆಕ್ಸ್‌

ಮಂಡ್ಯ ಜಿಲ್ಲೆಯ ಮದ್ದೂರು ಪರಿಸರದಲ್ಲಿ ಸೋಮವಾರ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ನಡೆಯಿತು. ಇದರ ಸಂಬಂಧ ಮದ್ದೂರಿನಲ್ಲಿ ಕೆ.ಎಂ ದೊಡ್ಡಿಯಿಂದ ಯಾತ್ರೆ ಆಗಮಿಸುವ ಬಗ್ಗೆ ಮಾಹಿತಿ ಇರುವ ಪೋಸ್ಟರ್ ಹಾಕಲಾಗಿದೆ. ಅದರಲ್ಲಿ ಮದ್ದೂರಿನ ಬಿಜೆಪಿ‌ ನಾಯಕರ ಜತೆ ಫ್ಲೆಕ್ಸ್ ನಲ್ಲಿ ಸುಮಲತಾ‌ ಭಾವಚಿತ್ರ ರಾರಾಜಿಸುತ್ತಿದೆ. ಮದ್ದೂರಿನ ಬಿಜೆಪಿ ಮುಖಂಡ ಎಸ್ಪಿ ಸ್ವಾಮಿ ಅವರು ಹಾಕಿರುವ ಪೋಸ್ಟರ್ ಇದಾಗಿದೆ.

ಸುಮಲತಾ ಭಾವಚಿತ್ರ ಇರುವ ಫ್ಲೆಕ್ಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಬಿಜೆಪಿ ಸೇರುವ ವದಂತಿ ಹರಡಿರೋ ಸಮಯದಲ್ಲಿ ಅಧಿಕೃತ ಸೇರ್ಪಡೆಗೂ ಮುನ್ನವೇ ರಾರಾಜಿಸುತ್ತಿರುವ ಪೋಸ್ಟರ್‌ ಸದ್ದು ಮಾಡುತ್ತಿದೆ.

ಸುಮಲತಾ ಎರಡು ಕಂಡಿಷನ್‌ ಹಾಕಿದ್ದಾರಂತೆ

ಈ ನಡುವೆ, ಸುಮಲತಾ ಅವರು ಬಿಜೆಪಿ ಸೇರ್ಪಡೆ ಆಗಲು ಎರಡು ಷರತ್ತುಗಳನ್ನು ಮುಂದಿಟ್ಟಿದ್ದಾರೆ ಎಂಬ ಸುದ್ದಿಯೂ ಜೋರಾಗಿ ಹರಡುತ್ತಿದೆ. ಮಂಡ್ಯ ಜಿಲ್ಲೆಯ ಮೂರು ವಿಧಾನ ಸಭಾ ಕ್ಷೇತ್ರಗಳಿಗೆ ತಮ್ಮ ಬೆಂಬಲಿಗರಿಗೆ ಟಿಕೆಟ್ ಕೊಡಬೇಕು ಎನ್ನುವುದು ಸುಮಲತಾ ಅವರ ಮೊದಲ ಬೇಡಿಕೆ ಎನ್ನಲಾಗಿದೆ. ಮದ್ದೂರು, ಮಂಡ್ಯ, ಶ್ರೀರಂಗಪಟ್ಟಣದಲ್ಲಿ ತಮ್ಮ ಬೆಂಬಲಿಗರಿಗೆ ಟಿಕೆಟ್ ಕೊಡಬೇಕು ಎಂದು ಕೇಳಿದ್ದಾರೆ ಎನ್ನಲಾಗಿದೆ.

ಇದರ ಜತೆಗೆ 2024ರ ಚುನಾವಣೆಯಲ್ಲಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಟಿಕೆಟ್‌ ನೀಡಬೇಕು ಎನ್ನುವುದು ಎರಡನೇ ಬೇಡಿಕೆ. ಅಂದರೆ, ಈಗ ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಅವರು ಗೆದ್ದಿರು ಕ್ಷೇತ್ರದ ಮೇಲೆ ಸುಮಲತಾ ಕಣ್ಣಿಟ್ಟಿದ್ದಾರೆ. ಈ ಬೇಡಿಕೆಗಳಿಗೆ ಒಪ್ಪಿದರೆ ಸುಮಲತಾ ಅವರು ಬಿಜೆಪಿ ಸೇರುವುದು ಬಹುತೇಕ ಪಕ್ಕಾ ಎಂಬ ಅಭಿಪ್ರಾಯವಿದೆ.

ಇದನ್ನೂ ಓದಿ : Karnataka Election: ಬಿಜೆಪಿ, ಕಾಂಗ್ರೆಸ್‌ನಿಂದ ಆಹ್ವಾನ ಇದೆ, ಯಾವ ಪಕ್ಷ ಸೇರಬೇಕು ಎಂದು ನಿರ್ಧಾರ ಮಾಡಿಲ್ಲ: ಸಂಸದೆ ಸುಮಲತಾ

Exit mobile version