ಮಂಡ್ಯ: ದೇಗುಲ ಉದ್ಘಾಟನೆ ಕಾರ್ಯಕ್ರಮವೊಂದಕ್ಕೆ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಆಗಮಿಸಿದ್ದಕ್ಕೆ ಬೆಂಬಲಿಗರು ಹಾಗೂ ವಿರೋಧಿ ಬಣದ ನಡುವೆ ಕಿತ್ತಾಟ ನಡೆದಿರುವುದು ಜಿಲ್ಲೆಯ ಬಿ.ಗೌಡಗೆರೆ ಗ್ರಾಮದಲ್ಲಿ ಸೋಮವಾರ ನಡೆದಿದೆ. ಸಂಸದೆ ಸುಮಲತಾ ವೇದಿಕೆ ಏರುವ ವಿಚಾರವಾಗಿ ಎರಡು ಗುಂಪುಗಳ ನಡುವೆ ವಾಗ್ವಾದ ನಡೆದು ಗ್ರಾಮಸ್ಥರು, ಕೈ ಕೈ ಮಿಲಾಯಿಸಿದ್ದಾರೆ.
ಮಂಡ್ಯ ತಾಲೂಕಿನ ಬಿ.ಗೌಡಗೆರೆ ಗ್ರಾಮದ ಮಹದೇಶ್ವರ ದೇವಾಲಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಘಟನೆ ನಡೆದಿದೆ. ದೇವಾಲಯ ಲೋಕಾರ್ಪಣೆ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವೇದಿಕೆ ನಿರ್ಮಿಸಲಾಗಿತ್ತು. ರಾಜಕೀಯ ಮುಖಂಡರನ್ನು ವೇದಿಕೆ ಹತ್ತಿಸಬಾರದು ಎಂದು ಮೊದಲು ಗ್ರಾಮಸ್ಥರು ತೀರ್ಮಾನ ಮಾಡಿದ್ದರು ಎನ್ನಲಾಗಿದೆ. ಇದರ ನಡುವೆ ವೇದಿಕೆಗೆ ಸುಮಲತಾರನ್ನು ಕರೆತಂದಿದ್ದಕ್ಕೆ ಕೆಲ ಗ್ರಾಮಸ್ಥರು ಅಸಮಾಧಾನ ಹೊರಹಾಕಿದ್ದಾರೆ.
ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬ್ಯಾನರ್‌ನಲ್ಲಿ ಕಾಂಗ್ರೆಸ್ ನಾಯಕರು ಹಾಗೂ ಸುಮಲತಾ ಅವರ ಫೋಟೊ ಹಾಕಿದ್ದರಿಂದ ಜೆಡಿಎಸ್ ಬೆಂಬಲಿಗರು ಆಕ್ರೋಶ ಹೊರಹಾಕಿದ್ದು, ಯಾಕೆ ಸುಮಲತಾ ಅವರನ್ನು ವೇದಿಕೆ ಹತ್ತಿಸುತ್ತೀರಾ ಎಂದು ಪ್ರಶ್ನಿಸಿದ್ದಾರೆ. ಹೀಗಾಗಿ ಎರಡು ಗುಂಪುಗಳ ಗಾಮಸ್ಥರು ವಾಗ್ವಾದ ನಡೆಸಿ ಕೈ ಕೈ ಮಿಲಾಯಿಸಿಕೊಂಡರು. ಬಳಿಕ ಒಂದು ಗುಂಪಿನ ವಿರೋಧದ ನಡುವೆಯೂ ಸುಮಲತಾ ಅವರನ್ನು ವೇದಿಕೆಗೆ ಕರೆತರಲಾಗಿದೆ.
ಪಬ್ಲಿಸಿಟಿ ಸಿಗಬೇಕು ಎಂಬ ದುರಾಸೆ ಕೆಲವರಿಗೆ ಇರುತ್ತದೆ: ಸುಮಲತಾ
ನಾನು ಯಾವುದಾದರೂ ಕಾರ್ಯಕ್ರಮಕ್ಕೆ ಬಂದರೆ ಎಲ್ಲರಿಗೂ ಬರಬೇಕು ಎಂಬ ಆಸೆ ಇರುತ್ತದೆ. ಹೀಗಾಗಿ ಒಂದಷ್ಟು ಪಬ್ಲಿಸಿಟಿ ಸಿಗಬೇಕು ಎಂಬ ದುರಾಸೆ ಕೆಲವರಿಗೆ ಇರುತ್ತದೆ. ಒಳ್ಳೆಯ ಉದ್ದೇಶ ಇಟ್ಟುಕೊಂಡು ಒಳ್ಳೆ ಕೆಲಸ ನಡೆಯುವಾಗ ಈ ರೀತಿ ಮಾಡಿದರೆ ಬೇಜಾರಾಗುತ್ತದೆ. ಪಕ್ಷೇತರ ಸಂಸದೆಯಾಗಿ ಕೆಲಸ ಮಾಡಿಸುವುದು ಎಷ್ಟು ಕಷ್ಟ ಎಂಬುವುದನ್ನು ನಿಮ್ಮ ಮುಂದೆ ಯಾವತ್ತಾದರೂ ಹೇಳಿಕೊಂಡಿದ್ದೀನಾ ಎಂದು ಜನರಿಗೆ ಕೇಳಿದ್ದಾರೆ.
ಸರ್ಕಾರ ಇರಬಹುದು, ಮಿನಿಸ್ಟರ್ ಇರಬಹುದು. ಸ್ಥಳೀಯ ಅಧಿಕಾರಿಗಳು ಸಹಕಾರ ನೀಡದಿದ್ದರೆ ಯಾವ ರೀತಿ ತೊಂದರೆಯಾಗುತ್ತದೆ ಎಂಬುವುದು ಈ ಮೂರು ವರ್ಷದಲ್ಲಿ ನನಗೆ ಅನುಭವವಾಗಿದೆ. ನನ್ನ ಜನಕ್ಕೆ ದ್ರೋಹ ಮಾಡಬಾರದು ಎಂಬ ಉದ್ದೇಶದಿಂದ ನಾನು ಕೆಲಸ ಮಾಡುತ್ತಿದ್ದೇನೆ, ಇದನ್ನು ಅರ್ಥ ಮಾಡಿಕೊಳ್ಳಬೇಕು. ಸಣ್ಣ ಪುಟ್ಟ ಗೊಂದಲಗಳಿಗೆ ನೀವು ಈ ರೀತಿ ಗೊಂದಲ ಮಾಡಿಕೊಂಡರೆ ನಿಮ್ಮನ್ನು ನೀವೆ ಅವಮಾನ ಮಾಡಿಕೊಂಡಂತೆ ಅಲ್ಲವೇ? ಇನ್ನೊಮ್ಮೆ ನಿಮ್ಮೂರಿಗೆ ಯಾರನ್ನಾದರೂ ಕರೆದರೆ ಅವರು ಬರಲು ಹಿಂದೆ ಮುಂದೆ ನೋಡುತ್ತಾರೆ ಎಂದರು.
ಇದನ್ನೂ ಓದಿ | JDS Pancharatna: ಸಮ್ಮಿಶ್ರ ಸರ್ಕಾರ ಉರುಳಿಸಿದ ಸಿದ್ದರಾಮಯ್ಯ ಎಲ್ಲೇ ನಿಂತರೂ ಸೋಲು ಖಚಿತ: ಎಚ್.ಡಿ. ಕುಮಾರಸ್ವಾಮಿ
ಈ ವೇಳೆ ಅದನ್ನು ಬೋರ್ಡ್ ಕಟ್ಟುವರರು ಯೋಚನೆ ಮಾಡಬೇಕಿತ್ತಲ್ಲವೇ ಮೇಡಂ ಎಂದು ಪ್ರಶ್ನಿಸಿದ ಕೆಲವರು, ಗೌಡಗೆರೆ ಗ್ರಾಮಕ್ಕೆ ನಿಮ್ಮ ಅನುದಾನದಲ್ಲಿ ಏನಾದರೂ ಕೆಲಸ ಮಾಡಿಕೊಡಿ ಎಂದರು. ಇದಕ್ಕೆ ಸುಮಲತಾ ಪ್ರತಿಕ್ರಿಯಿಸಿ, ಅಭಿವೃದ್ಧಿ ಕೆಲಸ ಕೇಳಿದರೆ ಸಂತೋಷದಿಂದ ಮಾಡುತ್ತೇನೆ. ನಿಮ್ಮೂರಿನ ರಾಜಕಾರಣ ಬೇರೆ, ಏನಾದರೂ ಗೊಂದಲಗಳನ್ನು ಸರಿ ಮಾಡಿ ಎಂದರೆ ನಾನು ಒಪ್ಪಲ್ಲ ಎಂದು ಸುಮಲತಾ ಹೇಳಿದರು.