ಮಂಡ್ಯ: ಮಂಡ್ಯದ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್ (Sumalatha Ambarish) ಅವರು ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿಯುವುದು ಬಹುತೇಕ ಫಿಕ್ಸ್ ಆದಂತಿದೆ. ಮಂಡ್ಯದ ಕರ್ನಾಟಕ ಭವನದಲ್ಲಿ ಮಂಗಳವಾರ ಅಭಿಮಾನಿಗಳ ಮಹತ್ವದ ಸಭೆಯೊಂದು ನಡೆಯುತ್ತಿದ್ದು ಅದರಲ್ಲಿ ಅವರು ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಬೇಕು ಎಂಬ ಬಗ್ಗೆ ತೀವ್ರ ಒತ್ತಡ ಕೇಳಿಬಂದಿದೆ. ಸ್ವತಃ ಸುಮಲತಾ ಅವರ ಅತ್ಯಾಪ್ತರಾಗಿರುವ ಹನಕೆರೆ ಶಶಿ ಅವರೇ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಬೇಕು ಎಂಬ ಬೇಡಿಕೆ ಮುಂದಿಡುವುದರಲ್ಲಿ ಮುಂಚೂಣಿಯಲ್ಲಿದ್ದರು.
ಸುಮಲತಾ ಅವರು ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದರು. ಬಿಜೆಪಿ ಅವರನ್ನು ಬೆಂಬಲಿಸಿತ್ತು. ಇದೀಗ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ತಮ್ಮ ಪಕ್ಷೇತರ ಐಡೆಂಟಿಟಿಯನ್ನೇ ಉಳಿಸಿಕೊಳ್ಳಬೇಕೇ ಅಥವಾ ಯಾವುದಾದರೂ ಪಕ್ಷದ ಜತೆಗೆ ಹೊಂದಾಣಿಕೆ ಮಾಡಿಕೊಳ್ಳಬೇಕೇ ಎಂಬ ಗೊಂದಲ್ಲಿದ್ದಾರೆ. ಅದರಲ್ಲೂ ಬಿಜೆಪಿಯೋ ಕಾಂಗ್ರೆಸೋ ಎನ್ನುವುದು ಕೂಡಾ ಅವರ ಗೊಂದಲದ ಪ್ರಧಾನ ವಿಷಯ.
ಈ ನಡುವೆ, ಸುಮಲತಾ ಅವರು ಬಿಜೆಪಿ ಕಡೆಗೇ ಹೆಚ್ಚು ಒಲವು ಹೊಂದಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಈಗಾಗಲೇ ತಮ್ಮ ಅತ್ಯಾಪ್ತರಲ್ಲಿ ಕೆಲವರನ್ನು ಬಿಜೆಪಿ ಸೇರಲು ಅವಕಾಶ ಮಾಡಿಕೊಟ್ಟಿರುವುದು ಇದಕ್ಕೆ ಉದಾಹರಣೆ.
ಈ ನಡುವೆ ಸ್ವತಃ ಸುಮಲತಾ ಅವರೇ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂಬ ಒತ್ತಾಯ ಬಲವಾಗಿದೆ. ಅಭಿಮಾನಿಗಳೂ ಮತ್ತು ಆಪ್ತರಲ್ಲಿ ಕೇಳಿ ಮುಂದಿನ ತೀರ್ಮಾನ ತೆಗೆದುಕೊಳ್ಳುವುದಾಗಿ ಸುಮಲತಾ ಆಗಾಗ ಹೇಳುತ್ತಿದ್ದರು. ಈ ನಡುವೆ, ಸುಮಲತಾ ಅವರನ್ನು ರಾಜ್ಯ ರಾಜಕಾರಣಕ್ಕೆ ಕರೆ ತರಲೇಬೇಕು ಎಂದು ಬಯಸಿರುವ ಬೆಂಬಲಿಗರಾದ ಹನಕೆರೆ ಶಶಿ, ಬೇಲೂರು ಸೋಮಶೇಖರ್ ನೇತೃತ್ವದಲ್ಲಿ ಮಂಗಳವಾರ ಮಂಡ್ಯದಲ್ಲಿ ಸಭೆ ನಡೆದಿದೆ.
ಹನಕೆರೆ ಶಶಿ ಹೇಳಿದ್ದೇನು?
ಸಂಸದೆ ಸುಮಲತಾ ಅವರು ರಾಜ್ಯ ರಾಜಕಾರಣಕ್ಕೆ ಬರುವುದು ಫಿಕ್ಸ್ ಎಂಬರ್ಥದಲ್ಲಿ ಅವರ ಅತ್ಯಾಪ್ತ ಬೆಂಬಲಿಗ ಹನಕೆರೆ ಶಶಿ ಹೇಳಿದ್ದಾರೆ. ʻʻಅವರು ರಾಜ್ಯ ರಾಜಲಾರಕ್ಕೆ ಬರಬೇಕು ಅನ್ನೋದು ನನ್ನ ವೈಯಕ್ತಿಕ ಅಭಿಪ್ರಾಯ. ಆದ್ರೆ ಸಭೆಯಲ್ಲಿ ಏನ್ ನಿರ್ಧಾರ ಆಗುತ್ತೊ ಗೊತ್ತಿಲ್ಲʼʼ ಎಂದು ಸಭೆಯ ಮಧ್ಯೆ ಮಾತನಾಡಿದ ಶಶಿ ಹೇಳಿದರು.
ʻʻನಮ್ಮ ಅಂಬರೀಶ್ ಅಣ್ಣ ಅವರು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಉಳಿವಿಗಾಗಿ ಶ್ರಮಿಸಿದ್ದಾರೆ. ಆದ್ರೆ ಕೆಲವು ಪಕ್ಷದವರು ಸಂಸದರನ್ನು ಕೇವಲವಾಗಿ ಕಾಣ್ತಾರೆ. ಶಾಸಕ ಸಿ ಎಸ್ ಪುಟ್ಟರಾಜು ಸಂಸದೆಯನ್ನು ಏಕವಚನ ಪದ ಬಳಕೆ ಮಾಡಿ ನಿಂದಿಸುತ್ತಾರೆ. ಅದು ಒಂದು ಹೆಣ್ಣಿನ ಬಗೆಗೆ ಅವರ ಭಾವನೆ ತೋರಿಸುತ್ತದೆ. ಅವರ ಹೇಳಿಕೆ ಇಡೀ ಹೆಣ್ಣು ಸಮುದಾಯಕ್ಕೆ ಮಾಡಿದ ಅವಮಾನʼʼ ಎಮದು ಹೇಳಿದರು.
ಸುಮಲತಾ ಅವರ ರಾಜಕೀಯ ನಡೆ ನಿರ್ಧಾರಕ್ಕೆ ಆಯೋಜನೆಯಾಗಿರುವ ಮೊದಲ ಅಧಿಕೃತ ಸಭೆ ಇದಾಗಿದೆ. ಅವರನ್ನು ರಾಜ್ಯ ರಾಜಕಾರಣಕ್ಕೆ ಕರೆ ತರುವುದೇ ಸಭೆಯ ಮುಖ್ಯ ಉದ್ದೇಶ ಎನ್ನಲಾಗಿದೆ. ಸುಮಲತಾ ಅವರೂ ಭಾಗಿಯಾಗಿರುವ ಸಭೆಯಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದರೆ ಉಳಿದ ಕಾರ್ಯಕರ್ತರಿಗೂ ಅನುಕೂಲ ಆಗಲಿದೆ ಎಂಬ ಅಭಿಪ್ರಾಯ ಜೋರಾಗಿದೆ.