ಮಂಡ್ಯ: ರಾಜ್ಯ ರಾಜಕಾರಣಕ್ಕೆ ಸಂಸದೆ ಸುಮಲತಾ ಅಂಬರೀಶ್ ಬರುತ್ತಾರೆ ಎಂಬ ಮಾತುಗಳು ಜಿಲ್ಲೆಯ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದ್ದು, ಅವರು ಯಾವ ಪಕ್ಷ ಸೇರುತ್ತಾರೆ ಎಂಬ ಕುರಿತು ಚರ್ಚೆಗಳು ನಡೆಯುತ್ತಿವೆ. ಇದರ ಬೆನ್ನಲ್ಲೇ, ಎರಡು ರಾಷ್ಟ್ರೀಯ ಪಕ್ಷಗಳಿಂದ ಆಹ್ವಾನ ಬಂದಿದ್ದು, ಆದರೆ ಯಾವ ಪಕ್ಷ ಸೇರಬೇಕು (Karnataka Election) ಎಂಬುವುದನ್ನು ನಿರ್ಧಾರ ಮಾಡಿಲ್ಲ ಎಂದು ಸುಮಲತಾ ಹೇಳಿರುವುದು ಕುತೂಹಲ ಮೂಡಿಸಿದೆ.
ಸಮಯ ಬಂದಾಗ ನನ್ನ ನಿರ್ಧಾರ ತಿಳಿಸುವೆ
ನಾನು ಕೆಲವು ವಿಚಾರದಲ್ಲಿ ಬಿಜೆಪಿಗೆ ಸಪೋರ್ಟ್ ಮಾಡಿದ್ದೇನೆ. ಅದರಲ್ಲಿ ಯಾವುದೇ ಮುಚ್ಚುಮರೆ ಇಲ್ಲ. ಪಕ್ಷ ಸೇರ್ಪಡೆ, ಚುನಾವಣೆ ಸ್ಪರ್ಧೆ ಬಗ್ಗೆ ನಾನು ಮತ್ತೊಮ್ಮೆ ಜನಾಭಿಪ್ರಾಯ ಕೇಳುತ್ತೇನೆ. ಒಂದು ನಿರ್ಧಾರ ತೆಗೆದುಕೊಂಡಾಗ ಅದಕ್ಕೆ ವಿರೋಧ ಇರುತ್ತದೆ. ಹಾಗಾಗಿ ಎಲ್ಲರ ಅಭಿಪ್ರಾಯವನ್ನೂ ಪಡೆಯಲು ಆಗಲ್ಲ. ಟೈಂ ಬಂದಾಗ ನಾನ್ನ ನಿರ್ಧಾರ ತಿಳಿಸುತ್ತೇನೆ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ.
ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ನಿಧಿಯಲ್ಲಿ ಮದ್ದೂರು ತಾಲೂಕಿನಲ್ಲಿ ಸುಮಾರು 40 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಿದ ಬಳಿಕ ಮಾತನಾಡಿ, ಚುನಾವಣೆಗೆ ಸ್ಪರ್ಧೆ, ಯಾವುದಾದರೂ ರಾಜಕೀಯ ಪಕ್ಷ ಸೇರಬೇಕೇ ಅಥವಾ ಸ್ವತಂತ್ರವಾಗಿ ಉಳಿಯಬೇಕೆ ಎಂಬ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ. ಬಿಜೆಪಿ, ಕಾಂಗ್ರೆಸ್ ಪಕ್ಷದಿಂದ ನನಗೆ ಆಹ್ವಾನ ಇದೆ. ಆ ಪಕ್ಷಗಳ ನಾಯಕರು ನನ್ನ ಜತೆ ಮಾತನಾಡಿದ್ದಾರೆ. ಜನರ ಅಭಿಪ್ರಾಯ ಪಡೆದು ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ | ಆಮ್ ಆದ್ಮಿ ಪಾರ್ಟಿ ರಾಜ್ಯ ಉಪಾಧ್ಯಕ್ಷ ಭಾಸ್ಕರ್ ರಾವ್ ಬಿಜೆಪಿ ಸೇರ್ಪಡೆ; ಅರವಿಂದ್ ಕೇಜ್ರಿವಾಲ್ ಭೇಟಿಗೆ ಮುನ್ನ ಬಿಗ್ ಶಾಕ್
ಚುನಾವಣೆಗೆ ನಿಲ್ಲಬೇಕು ಎಂಬುದು ಅಷ್ಟು ಸುಲಭವಾದ ವಿಚಾರ ಅಲ್ಲ.. ಅದೊಂದು ದೊಡ್ಡ ನಿರ್ಧಾರ ಆಗುತ್ತದೆ. ಚುನಾವಣೆಗೆ ಎಷ್ಟು ದಿನ ಇದೆ ಎಂಬುವುದು ಮುಖ್ಯವಲ್ಲ. ಆದರೆ ಅನುಕೂಲಕರ ವಾತಾವರಣ ಎಷ್ಟಿದೆ ಎಂಬುದು ಮುಖ್ಯ. ಹಾಗಾಗಿ ರಾಜ್ಯ ರಾಜಕಾರಣಕ್ಕೆ ಬರುತ್ತೇನೆ ಎಂಬುದನ್ನು ಹೇಳಲು ಇದು ಸಮಯವಲ್ಲ. ಆ ಟೈಂ ಬಂದಾಗ ನಾನು ಎಲ್ಲರ ಸಮ್ಮುಖದಲ್ಲಿ ನಿರ್ಧಾರ ಮಾಡುತ್ತೇನೆ. ನಾನು ರಾಜಕೀಯಕ್ಕೆ ಬಂದಿರುವುದೇ ಆಕಸ್ಮಿಕ. ನಾನು ಪೂರ್ಣ ಪ್ರಮಾಣದಲ್ಲಿ ಇಲ್ಲೇ ಇರಲೂ ಬಂದಿಲ್ಲ ಎಂದರು.
ಸಂಸದೆಯಾಗಿ ಹೆದ್ದಾರಿ ಉದ್ಘಾಟನೆ ಕಾರ್ಯಕ್ರಮಕ್ಕೆ ಹೋಗುವೆ
ಜಿಲ್ಲೆಯ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯ ಸರ್ವಿಸ್ ರಸ್ತೆ ಸರಿಯಾಗಿಲ್ಲ ಎಂಬ ಬಗ್ಗೆ ನಾನು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಗಮನಕ್ಕೆ ತಂದಿದ್ದೇನೆ, ಅವರು ಸಮಸ್ಯೆ ಸರಿಪಡಿಸುವುದಾಗಿ ಭರವಸೆ ನೀಡಿದ್ದಾರೆ. ಮಾರ್ಚ್ 11ರಂದು ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಉದ್ಘಾಟನೆಗೆ ಸಂಬಂಧಿಸಿದಂತೆ ನಾನು ಸಂಸದೆಯಾಗಿ ಪ್ರಧಾನಮಂತ್ರಿ ಅವರ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ. ಮಂಡ್ಯ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಗಂಗಾಧರ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಬಾರದು ಎಂದು ಯಾವ ಉದ್ದೇಶದಲ್ಲಿ ಹೇಳಿದ್ದಾರೋ ಗೊತ್ತಿಲ್ಲ ಎಂದು ಹೇಳಿದರು.
ಇದನ್ನೂ ಓದಿ | BJP Rathayatre: ಮಿಷನ್ 150 ಗುರಿಯ ವಿಜಯ ಸಂಕಲ್ಪ ರಥಯಾತ್ರೆಗೆ ಜೆ.ಪಿ. ನಡ್ಡಾ ಚಾಲನೆ; ವಿ. ಸೋಮಣ್ಣ ಗೈರು
ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆ
ಮಂಡ್ಯ: ಸಂಸದೆ ಸುಮಲತಾ ಅಂಬರೀಶ್ ಅವರು ಬುಧವಾರ ಮದ್ದೂರು ತಾಲೂಕಿನಲ್ಲಿ ಸುಮಾರು 40 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ವಿವಿಧ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆ ಮಾಡಿ, ವೀಕ್ಷಿಸಿದರು. ಮದ್ದೂರು ತಾಲೂಕಿನ ಚಾಪರದೊಡ್ಡಿ ಗ್ರಾಮದಲ್ಲಿ ನಿರ್ಮಾಣವಾಗಿರುವ ಬಸ್ ತಂಗುದಾಣ ಉದ್ಘಾಟಿಸಿ, ಅರೆಕಲ್ಲುದೊಡ್ಡಿ ಗ್ರಾಮದಲ್ಲಿ ನಿರ್ಮಾಣಗೊಳ್ಳುತ್ತಿರುವ ಮುಳಟ್ಟಮ್ಮದೇವಿ ಸಮುದಾಯ ಭವನದ ಕಾಮಗಾರಿಯನನ್ನು ವೀಕ್ಷಿಸಿದರು.
ನಂತರ ಕೆ.ಮಲ್ಲಿಗೆರೆ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ, ಕೌಡ್ಲೆ ಗ್ರಾಮದಲ್ಲಿ ಬಸ್ ತಂಗುದಾಣ, ತರೀಕೆರೆ ಕಾಲೋನಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ, ಆವ್ವೇರಹಳ್ಳಿಯಲ್ಲಿ ಶುದ್ದ ಕುಡಿಯುವ ನೀರಿನ ಘಟಕ, ಸರ್ವೋದಯ ಪದವಿ ಪೂರ್ವ ಕಾಲೇಜಿನ ಗ್ರಂಥಾಲಯ ಉದ್ಘಾಟನೆ ಕಾರ್ಯಕ್ರಮಗಳಲ್ಲಿ ಸಂಸದೆ ಸುಮಲತಾ ಭಾಗಿಯಾಗಿದ್ದರು.