ಕಾರವಾರ: ಮೊಬೈಲ್ ಅಂಗಡಿಗಳಿಗೆ ಗ್ರಾಹಕರ ಸೋಗಿನಲ್ಲಿ ಪ್ರತಿ ಭಾನುವಾರ ಭೇಟಿ ನೀಡಿ, ಮೊಬೈಲ್‌ಗಳನ್ನು ಕಳವು ಮಾಡುತ್ತಿದ್ದ ಇಬ್ಬರು ಬಾಲಾರೋಪಿಗಳನ್ನು ಪೊಲೀಸರು ಬಂಧಿಸಿದ ಘಟನೆ ಉತ್ತರಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ನಡೆದಿದೆ.
ಹೊನ್ನಾವರ ಬಸ್ ಸ್ಟ್ಯಾಂಡ್ ಹತ್ತಿರ ಕಿಂತಾಲಕೇರಿ ರಸ್ತೆಯಲ್ಲಿರುವ ಮುಖ್ಯಪ್ರಾಣ ಮೊಬೈಲ್ ಅಂಗಡಿಗೆ ಕಳೆದ ಭಾನುವಾರ ಇಬ್ಬರು ಯುವಕರು ಮೊಬೈಲ್ ಕವರ್ ತೆಗೆದುಕೊಳ್ಳುವ ನೆಪದಲ್ಲಿ ಭೇಟಿ ನೀಡಿದ್ದರು. ಈ ವೇಳೆ ಅಂಗಡಿಯ ಮಾಲೀಕರಿಗೆ ಗೊತ್ತಾಗದ ರೀತಿಯಲ್ಲಿ ರಿಯಲ್‌ಮಿ ಸಿ-35 ಮೊಬೈಲ್ ಹಾಗೂ ಜಿಯೋ ವೈಫೈ ಡೊಂಗಲ್ ಕಳವು ಮಾಡಿಕೊಂಡು ಹೋಗಿದ್ದರು. ಈ ಬಗ್ಗೆ ಸಿಸಿ ಕ್ಯಾಮೆರಾ ಪರಿಶೀಲನೆ ವೇಳೆ ಕಳ್ಳತನ ಬೆಳಕಿಗೆ ಬಂದಿದ್ದು, ಅಂಗಡಿ ಮಾಲೀಕ ಹಾಡಗೇರಿಯ ಯೋಗೇಶ ನಾಯ್ಕ ಹೊನ್ನಾವರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಈ ದೂರಿನನ್ವಯ ತನಿಖೆ ಕೈಗೊಂಡ ಪೊಲೀಸರು, ಕುಮಟಾ ಮೂಲದ ಇಬ್ಬರು ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ. ವಿಚಾರಣೆಯ ವೇಳೆ ಅಂಕೋಲಾದಲ್ಲಿಯೂ ಮೊಬೈಲ್ ಕಳ್ಳತನ ಮಾಡಿದ್ದರೆಂಬ ವಿಚಾರ ಗೊತ್ತಾಗಿದೆ. ಪ್ರತಿ ಭಾನುವಾರ ಚಿಕ್ಕಪ್ಪನ ಬೈಕ್ ತೆಗೆದುಕೊಂಡು ಹೋಗಿ ಮೊಬೈಲ್ ಕದ್ದು ಪರಾರಿಯಾಗುತ್ತಿದ್ದರು.
ತಮ್ಮ ತಾಲೂಕು ಬಿಟ್ಟು ಅಕ್ಕಪಕ್ಕದ ತಾಲೂಕನ್ನೇ ಈ ಬಾಲಾರೋಪಿಗಳು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಖರೀದಿಯ ನೆಪದಲ್ಲಿ ಭೇಟಿ ನೀಡಿ ಅಂಗಡಿಯವರ ಕಣ್ಣು ತಪ್ಪಿಸಿ ಮೊಬೈಲ್ ಗಳನ್ನ ಕದ್ದು ಪರಾರಿಯಾಗುತ್ತಿದ್ದರು. ಸದ್ಯ ಬಂಧನಕ್ಕೊಳಗಾಗಿರುವ ಇಬ್ಬರನ್ನು ರಿಮಾಂಡ್ ಹೋಮ್ ಗೆ ಕಳುಹಿಸಲಾಗಿದೆ.
ಇದನ್ನೂ ಓದಿ | ಮನೆಯಲ್ಲಿ ಕಳವು ಮಾಡಿದವನ ಬಂಧನ, 8 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಜಪ್ತಿ