ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಸಂಬಂಧ ಜಿಲ್ಲೆಯ ಶಾಸಕರು, ಉಸ್ತುವಾರಿ ಸಚಿವರ ಜತೆ ಸಭೆ ನಡೆಸಿದ್ದ ಆರೋಗ್ಯ ಸಚಿವರು, ನಿರ್ಧಾರ ಪ್ರಕಟಿಸಿದ ಬೆನ್ನಲ್ಲೇ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಕುಮಟಾಕ್ಕೆ ಭೇಟಿ ನೀಡಿ ಆಸ್ಪತ್ರೆ ನಿರ್ಮಾಣ ನಿಟ್ಟಿನಲ್ಲಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಮಂಗಳವಾರ ಬೆಳಗ್ಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರ ಬೆಂಗಳೂರಿನ ಸರ್ಕಾರಿ ನಿವಾಸದಲ್ಲಿ ಸಭೆ ನಡೆದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡುವ ಸಂಬಂಧ ನಿರ್ಧಾರಕ್ಕೆ ಬರಲಾಯಿತು. ಈ ಬೆಳವಣಿಗೆ ನಡೆಯುತ್ತಿದ್ದಂತೆ ಉತ್ತರ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹಲವು ಅಧಿಕಾರಿಗಳ ಜತೆ ಕುಮಟಾಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಎಲ್ಲೆಲ್ಲಿ ಸ್ಥಳ ಪರಿಶೀಲನೆ?
ಕುಮಟಾದ ಮಿರ್ಜಾನ, ರೈಲು ನಿಲ್ದಾಣ, ಕೊಂಕಣ ಎಜ್ಯುಕೇಷನ್ ಸಮೀಪದ ಜಾಗಗಳಿಗೆ ಜಿಲ್ಲಾಧಿಕಾರಿ ಭೇಟಿ ನೀಡಿ ಸಾಧ್ಯಾಸಾಧ್ಯತೆಯನ್ನು ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆ ಜಿಲ್ಲಾಧಿಕಾರಿಯೊಂದಿಗೆ ಮಂಗಳೂರಿನ ಕೆ.ಎಸ್.ಹೆಗಡೆ ಆಸ್ಪತ್ರೆ ಅಧಿಕಾರಿಗಳೂ ಭಾಗಿಯಾಗಿದ್ದರು.
ಇದನ್ನೂ ಓದಿ | Super Speciality Hospital | ಕುಮಟಾ ಅಕ್ಕಪಕ್ಕದಲ್ಲೇ ಉತ್ತರ ಕನ್ನಡದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ
ಸಭೆ ನಡೆಸಿದ ಜಿಲ್ಲಾಧಿಕಾರಿ
ಸ್ಥಳ ಪರಿಶೀಲನೆ ಬಳಿಕ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಸಭೆ ನಡೆಸಿದ್ದು, ಆಸ್ಪತ್ರೆಗೆ ಬೇಕಾದ ಜಾಗದ ಕುರಿತು ಚರ್ಚೆ ನಡೆಸಿದ್ದಾರೆ. ಆರೋಗ್ಯ, ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ಯಾವ ಜಾಗ ಸೂಕ್ತ? ಕಾನೂನು ತೊಡಕುಗಳು ಏನು? ಯಾವ ಪ್ರದೇಶದಲ್ಲಿ ಸುಲಭವಾಗಿ ನಿರ್ಮಾಣ ಮಾಡಬಹುದು? ಎಂಬಿತ್ಯಾದಿ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆನ್ನಲಾಗಿದೆ.
ಸರ್ಕಾರಕ್ಕೆ ವರದಿ
ಒಟ್ಟಾರೆಯಾಗಿ ಕುಮಟಾದಲ್ಲಿ ಸ್ಥಳ ಪರಿಶೀಲನೆ, ಸಾಧಕ-ಬಾಧಕಗಳ ಪಟ್ಟಿ ಸಹಿತ ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ತಾತ್ಕಾಲಿಕ ವರದಿ ನೀಡಲಿದ್ದಾರೆಂದು ಹೇಳಲಾಗಿದೆ. ಈ ಮೂಲಕ ಸರ್ಕಾರಕ್ಕೆ ಸ್ಥಳಗಳ ಬಗ್ಗೆ ಸ್ಥೂಲ ಮಾಹಿತಿಯನ್ನು ಒದಗಿಸಿದ್ದಾರೆ ಎಂದು ಹೇಳಲಾಗಿದೆ.
ಕುಮಟಾದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಒಪ್ಪಿದ್ದ ಸರ್ಕಾರ
ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳ ಜತೆಗೆ ನಡೆದ ಸಭೆಯಲ್ಲಿ ಜಿಲ್ಲೆಯ ಹೃದಯಭಾಗವಾದ ಕುಮಟಾದ ಆಸುಪಾಸಿನಲ್ಲಿ ಆಸ್ಪತ್ರೆ ಮಾಡುವ ಸಂಬಂಧ ಚರ್ಚೆಗೆ ಬಂದಿದ್ದು, ಇದಕ್ಕೆ ಸರ್ಕಾರದ ಪರವಾಗಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಒಪ್ಪಿಗೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಕುಮಟಾಕ್ಕೆ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಅಧಿವೇಶನ ಬಳಿಕ ಸಿಎಂ, ಆರೋಗ್ಯ ಸಚಿವರು ಉ.ಕ.ಕ್ಕೆ ಭೇಟಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ಅಧಿವೇಶನ ಬಳಿಕ ಶೀಘ್ರವೇ ಉತ್ತರ ಕನ್ನಡಕ್ಕೆ ಭೇಟಿ ನೀಡಲಿದ್ದು, ಈ ವೇಳೆಗಾಗಲೇ ಸ್ಥಳ ಅಂತಿಮಗೊಂಡಿದ್ದರೆ ಮುಖ್ಯಮಂತ್ರಿಯವರು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಘೋಷಣೆ ಮಾಡಲಿದ್ದಾರೆ ಎಂಬ ಮಾಹಿತಿ ಬಂದಿದೆ.
ಬೆಂಗಳೂರಿನ ಸಭೆಯಲ್ಲಿ ಆಗಿದ್ದ ನಿರ್ಧಾರ
ಯಾವುದೇ ಇಲಾಖೆ ಇದ್ದರೂ ಸಹ ಅಂತಿಮವಾಗಿ ಮುಖ್ಯಮಂತ್ರಿಗಳೇ ತೀರ್ಮಾನವನ್ನು ತೆಗೆದುಕೊಳ್ಳುತ್ತಾರೆ. ಈ ಹಿನ್ನೆಲೆಯಲ್ಲಿ ಎಲ್ಲ ಅಂಶಗಳನ್ನೂ ಪರಿಶೀಲನೆ ನಡೆಸಿದ ಬಳಿಕ ಮುಂದಿನ ನಿರ್ಧಾರವನ್ನು ಸಿಎಂ ಪ್ರಕಟಿಸುತ್ತಾರೆ. ಹೀಗಾಗಿ ಈ ಬಗ್ಗೆ ಸೂಕ್ತ ಜಾಗಕ್ಕಾಗಿ ಹುಡುಕಾಟ ನಡೆಸಬೇಕಿದೆ. ಜಿಲ್ಲೆಯ ಶಾಸಕರು ಒಮ್ಮತದಿಂದ ಆಸ್ಪತ್ರೆಗೆ ಜಾಗವನ್ನು ಗುರುತಿಸುವತ್ತ ಗಮನಹರಿಸಬೇಕು ಎಂಬ ಚರ್ಚೆಗಳು ನಡೆದಿವೆ ಆರೋಗ್ಯ ಸಚಿವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿತ್ತು.
ಕ್ರಿಮ್ಸ್‌ನಲ್ಲಿ ಏಕೆ ಅಸಾಧ್ಯ?
ಕಾರವಾರದಲ್ಲಿ ಈಗಾಗಲೇ ಇರುವ ವೈದ್ಯಕೀಯ ಕಾಲೇಜನ್ನು (ಕ್ರಿಮ್ಸ್) ಮೇಲ್ದರ್ಜೆಗೇರಿಸಿ ಅಲ್ಲಿಯೇ ಸುಸಜ್ಜಿತ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡುವ ಸಂಬಂಧ ಚರ್ಚೆ ನಡೆದಿದೆ. ಆದರೆ, ವೈದ್ಯಕೀಯ ಕಾಲೇಜಿನ ಆವರಣದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಜಾಗ ಸಾಲದು ಎಂಬ ವಿಷಯ ಗಮನಕ್ಕೆ ಬಂದಿದೆ. ನಿರ್ಮಾಣಕ್ಕೆ ಬೇಕಿರುವ ಜಮೀನು ಬೇರೆ ಬೇರೆ ಇಲಾಖೆಗೆ ಸೇರಿದ್ದಾಗಿದೆ ಎಂಬ ಬಗ್ಗೆಯೂ ಚರ್ಚೆ ನಡೆಸಲಾಗಿದೆ. ಆದರೆ, ಈ ಮೆಡಿಕಲ್ ಕಾಲೇಜಿಗೆ ಸಕಲ ಸೌಕರ್ಯವನ್ನು ಕೊಡುವ ಸಂಬಂಧ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಮಾತುಕತೆಗಳಾಗಿವೆ ಎನ್ನಲಾಗಿದೆ.
ನಮ್ಮ ಪ್ರಸ್ತಾಪಕ್ಕೆ ಸರ್ಕಾರ ಒಪ್ಪಿದೆ- ಕೋಟ
ಕುಮಟಾವು ಉತ್ತರ ಕನ್ನಡ ಜಿಲ್ಲೆಯ ಹೃದಯಭಾಗದಲ್ಲಿದೆ. ಈ ಹಿನ್ನೆಲೆಯಲ್ಲಿ ಕುಮಟಾ ಅಥವಾ ಕುಮಟಾ ತಾಲೂಕಿನ ಅಕ್ಕಪಕ್ಕದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ನಿರ್ಮಾಣ ಮಾಡಬೇಕು ಎಂಬ ನಮ್ಮ ಪ್ರಸ್ತಾಪಕ್ಕೆ ಸರ್ಕಾರ ಸಮ್ಮತಿಸಿದೆ. ಅಧಿವೇಶನ ಬಳಿಕ ಜಿಲ್ಲೆಗೆ ಭೇಟಿ ನೀಡುವುದಾಗಿ ಆರೋಗ್ಯ ಸಚಿವರು ತಿಳಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಬೆಂಗಳೂರಿನಲ್ಲಿ ಹೇಳಿಕೆ ನೀಡಿದ್ದರು.
ಇದನ್ನೂ ಓದಿ | Super Speciality Hospital | ಕೊನೆಗೂ ಉತ್ತರ ಕನ್ನಡಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ: ಸಿಎಂ, ಆರೋಗ್ಯ ಸಚಿವರ ಭೇಟಿ ಶೀಘ್ರ