ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಪಿಪಿಪಿ ಮಾದರಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ (Super Speciality Hospital) ಇಲ್ಲವೇ ಮೆಡಿಕಲ್ ಕಾಲೇಜು ಸ್ಥಾಪನೆಗೆ ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ಸಾಧಕ-ಬಾಧಕಗಳ ಚರ್ಚೆ ನಡೆಯುತ್ತಿದ್ದು, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಕುಮಟಾಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಮಂಗಳವಾರ ಸರ್ಕಾರ ನಿರ್ಧಾರ ಪ್ರಕಟಿಸಿದ ಬೆನ್ನಲ್ಲೇ, ಸ್ಥಳ ಪರಿಶೀಲನೆ ಪ್ರಕ್ರಿಯೆಗೆ ಚಾಲನೆ ದೊರೆತಿದ್ದು, ಉ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಕುಮಟಾಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ, “ಪಿಪಿಪಿ ಮಾದರಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಇಲ್ಲವೇ ಮೆಡಿಕಲ್ ಕಾಲೇಜು ಸ್ಥಾಪನೆ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದೂ ತಿಳಿಸಿದ್ದಾರೆ.
ಕುಮಟಾದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡುವ ಸಂಬಂಧ ಸ್ಥಳ ಪರಿಶೀಲನೆ ನಡೆಸಲಾಗಿದೆ. ಈ ಭಾಗದಲ್ಲಿ ಎಲ್ಲಿ ಸ್ಥಾಪನೆ ಮಾಡಬೇಕು? ಅದರಿಂದಾಗುವ ಅನುಕೂಲ, ಅನನುಕೂಲಗಳೇನು? ಸಾಧ್ಯಾಸಾಧ್ಯತೆಗಳೇನು ಎಂಬ ಬಗ್ಗೆಯೂ ಸ್ಥಳ ಪರಿಶೀಲನೆ ವೇಳೆ ಚರ್ಚೆ ನಡೆಸಲಾಗಿದೆ ಎಂದು ಕುಮಟಾದಲ್ಲಿ ಉತ್ತರ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಪಿಪಿಪಿ ಮಾದರಿ ಸಾಧ್ಯಾಸಾಧ್ಯತೆ ಚರ್ಚೆ
ಕುಮಟಾದಲ್ಲಿ ಸ್ಥಳ ಪರಿಶೀಲನೆ ನಡೆಸಲಾಗಿದೆ. ಈಗಾಗಲೇ ಒಂದೆರಡು ಜಾಗಗಳನ್ನು ಗುರುತು ಮಾಡಲಾಗಿದೆ. ಅದರಲ್ಲಿ ಯಾವುದು ಸೂಕ್ತ ಎಂಬ ನಿರ್ಧಾರಕ್ಕೆ ನಂತರ ಬರಬೇಕಿದೆ. ಅಲ್ಲದೆ, ಇಲ್ಲಿ ಯಾವ ರೀತಿಯಾಗಿ ಆಸ್ಪತ್ರೆ ನಿರ್ಮಾಣ ಮಾಡಬೇಕು? ಏನೆಲ್ಲ ಸೌಲಭ್ಯಗಳು, ಸೌಕರ್ಯಗಳನ್ನು ನೀಡಬೇಕು? ಪಿಪಿಪಿ ಮಾದರಿಯಲ್ಲಿ ಖಾಸಗಿ ಸಹಭಾಗಿತ್ವವನ್ನು ಹೇಗೆ ಪಡೆದುಕೊಳ್ಳಬೇಕು? ಅದಕ್ಕೆ ಯಾವ ಮಾದರಿ, ಕ್ರಮವನ್ನು ಅನುಸರಿಸಬೇಕು? ಎಂಬಿತ್ಯಾದಿ ವಿಷಯಗಳ ಬಗ್ಗೆ ಮಂಗಳೂರಿನ ಕೆಎಸ್ ಹೆಗಡೆ ಆಸ್ಪತ್ರೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ. ಈ ಸಂಬಂಧ ಅವರನ್ನೂ ಇಲ್ಲಿಗೆ ಕರೆಸಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.
ಇದನ್ನೂ ಓದಿ | Super Speciality Hospital | ಉತ್ತರ ಕನ್ನಡದಲ್ಲಿ ಸುಸಜ್ಜಿತ ಆಸ್ಪತ್ರೆಗಾಗಿ ಕುಮಟಾದಲ್ಲಿ ಸ್ಥಳ ಪರಿಶೀಲಿಸಿದ ಡಿಸಿ