Site icon Vistara News

ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ; ಉ.ಕ ಜಿಲ್ಲಾ ಶಾಸಕರಲ್ಲೇ ಒಡಕು! ತಮ್ಮ ತಾಲೂಕಿಗೇ ಬೇಕೆಂದು ಸದನದಲ್ಲಿ ಕಿತ್ತಾಟ

super speciality hospital in Uttara Kannada District

ಬೆಳಗಾವಿ: ಉತ್ತರ ಕನ್ನಡ ಜಿಲ್ಲೆಯ (Uttara Kannada District) ದಶಕಗಳ ಬೇಡಿಕೆಯಾಗಿದ್ದ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ (Super Speciality Hospital) ಕನಸು ಸದ್ಯಕ್ಕೆ ಈಡೇರುವ ಯಾವ ಲಕ್ಷಣವೂ ಕಾಣುತ್ತಿಲ್ಲ. ಹಿಂದಿನ ಸಿಎಂ ಬಸವರಾಜ ಬೊಮ್ಮಾಯಿ ಅವರು ತಮ್ಮ ಕೊನೇ ಬಜೆಟ್‌ನಲ್ಲಿ ಕುಮಟಾದಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿದ್ದರು. ಇದಕ್ಕಾಗಿ ಕುಮಟಾದಲ್ಲಿ ಜಾಗವನ್ನೂ ಗುರುತಿಸಿ ಓಕೆ ಮಾಡಲಾಗಿತ್ತು. ಆದರೆ, ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಕಳೆದ ಬಜೆಟ್‌ನಲ್ಲಿ (Karnataka budget 2023) ಅನುದಾನ ನೀಡಿರಲಿಲ್ಲ. ಈಗ ಜಿಲ್ಲೆಯ ಶಾಸಕರಲ್ಲೇ ಒಡಕು ಮೂಡಿದೆ. ನನ್ನ ತಾಲೂಕಿಗೆ ಕೊಡಿ, ನನ್ನ ತಾಲೂಕಿಗೆ ಕೊಡಿ ಎಂದು ವಿಧಾನ ಮಂಡಲ ಅಧಿವೇಶನದಲ್ಲಿ (Belagavi Winter Session) ಬೇಡಿಕೆ ಇಟ್ಟಿದ್ದಾರೆ. ಕಾರವಾರ ಶಾಸಕ ಸತೀಶ್ ಸೈಲ್‌, ಕುಮಟಾ ಶಾಸಕ ದಿನಕರ್ ಶೆಟ್ಟಿ, ಶಿರಸಿ ಶಾಸಕ ಭೀಮಣ್ಣ ನಾಯ್ಕ್, ಯಲ್ಲಾಪುರ ಶಾಸಕ ಶಿವರಾಂ ಹೆಬ್ಬಾರ್ ತಮ್ಮ ತಮ್ಮ ತಾಲೂಕಿಗೆ ಬೇಕು ಎಂದು ಕೇಳಿದ್ದಾರೆ.

ವಿಧಾನ ಪರಿಷತ್‌ ಕಲಾಪ ವೇಳೆ ಕಾರವಾರ ಶಾಸಕ ಸತೀಶ್‌ ಸೈಲ್‌ ಮಾತನಾಡಿ, ಉತ್ತರ ಕನ್ನಡಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕೇ ಬೇಕು. ಹೀಗಾಗಿ ಸದ್ಯಕ್ಕೆ ಕಾರವಾರದಲ್ಲಿ ಮಾಡಿಕೊಡಿ. ನಂತರ ಉತ್ತರ ಕನ್ನಡದ ಬೇರೆ ಪ್ರದೇಶದಲ್ಲಿ ನಿರ್ಮಾಣ ಮಾಡಿ ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: Road Accident : ಆಯತಪ್ಪಿ ಬಿದ್ದ ಸವಾರನ ಮೇಲೆ ಹರಿದ ಲಾರಿ! ತುಂಡಾದ ದೇಹ

ಇದರಿಂದ ಅಸಮಾಧಾನಗೊಂಡ ಕುಮಟಾ ಶಾಸಕ ದಿನಕರ್ ಶೆಟ್ಟಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಕುಮಟಾದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಾಡಬೇಕು. ಈಗಾಗಲೇ ಈ ಬಗ್ಗೆ ಒಮ್ಮೆ ನಿರ್ಣಯ ಕೂಡಾ ಆಗಿದೆ. ಅಲ್ಲದೆ, ಸ್ಥಳವನ್ನೂ ಗುರುತಿಸಲಾಗಿದ್ದು, ಎಲ್ಲರೂ ಆಗ ಒಪ್ಪಿಗೆ ನೀಡಿದ್ದರು. ಹೀಗಾಗಿ ಕುಮಟಾದಲ್ಲಿಯೇ ಆಗಬೇಕು. ಇದು ಜಿಲ್ಲೆಯ ಹೃದಯ ಸ್ಥಳ ಆಗಿರುವುದರಿಂದ ಜಿಲ್ಲೆಯ ಎಲ್ಲರಿಗೂ ಇಲ್ಲಿಗೆ ಬರಲು ಅನುಕೂಲ ಆಗಲಿದೆ ಎಂದು ಆಗ್ರಹಿಸಿದರು.

ಆಗ ಶಿರಸಿ ಶಾಸಕ ಭೀಮಣ್ಣ ನಾಯ್ಕ್ ಮಾತನಾಡಿ, ಶಿರಸಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಾಡಿ ಎಂದು ಆಗ್ರಹಿಸಿದ್ದಾರೆ. ಅದಕ್ಕೆ ಯಲ್ಲಾಪುರ ಶಾಸಕ ಶಿವರಾಂ ಹೆಬ್ಬಾರ್ ಅವರು, ಘಟ್ಟದ ಮೇಲೊಂದು, ಘಟ್ಟದ ಕೆಳಗೊಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಎಂದು ಒತ್ತಾಯ ಮಾಡಿದರು. ಹೀಗಾಗಿ ತಮ್ಮ ತಮ್ಮ ಕ್ಷೇತ್ರಗಳಲ್ಲೇ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಎಂಬ ಡಿಮ್ಯಾಂಡ್‌ ಉತ್ತರ ಕನ್ನಡ ಜಿಲ್ಲೆಯ ಎಲ್ಲ ಶಾಸಕರಿಂದಲೂ ಕೇಳಿಬಂತು.

ಇದಕ್ಕೆ ಸಚಿವ ಶರಣ ಪ್ರಕಾಶ್ ಪಾಟೀಲ್ ಉತ್ತರ ನೀಡಿ, ಬಹಳ ದಿನಗಳಿಂದ ಉತ್ತರ ಕನ್ನಡಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಬೇಡಿಕೆ ಇದೆ. ಕಾರವಾರದ ಮೆಡಿಕಲ್ ಕಾಲೇಜಿನಲ್ಲಿ ಮಾಡಬೇಕು ಎಂಬ ಪ್ರಯತ್ನ ನಡೆದಿದೆ. ಆದರೆ, ಕಾರವಾರದಲ್ಲಿ ಅಗತ್ಯ ವೈದ್ಯ ಹುದ್ದೆಗಳಿಗೆ ಎರಡು ಸಲ ಕಾಲ್ ಫಾರ್ ಮಾಡಿದರೂ ಯಾರೂ ಅರ್ಜಿ ಹಾಕಿಲ್ಲ. ಮತ್ತೊಮ್ಮೆ ವೈದ್ಯ ಹುದ್ದೆಗಳಿಗೆ ಆಹ್ವಾನ ನೀಡಲಾಗುತ್ತದೆ. ಈ ಕೆಲಸವಾದರೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸುಲಭವಾಗಲಿದೆ ಎಂದು ಹೇಳಿದರು.

ಉ.ಕ. ಜನರಿಂದ ನಡೆದಿದ್ದ ಆಂದೋಲನ

ಉತ್ತರ ಕನ್ನಡ ಜಿಲ್ಲೆಯು ಭೌಗೋಳಿಕವಾಗಿ ಬಹಳ ದೊಡ್ಡದಿರುವ ಕಾರಣ, ಅಪಘಾತವಾದರೆ ಇಲ್ಲವೇ ತುರ್ತು ಚಿಕಿತ್ಸೆ ಬೇಕಿದ್ದರೆ ಪಕ್ಕದ ಮಂಗಳೂರು, ಗೋವಾ ಇಲ್ಲವೇ ಹುಬ್ಬಳ್ಳಿಯಂತಹ ಕಡೆಗಳಿಗೆ ಹೋಗಬೇಕು. ಇದರಿಂದ ಸಾಕಷ್ಟು ಜೀವ ಹಾನಿಯಾಗುತ್ತಲಿದೆ. ರಾಜ್ಯಕ್ಕೆ ವಿದ್ಯುತ್‌ ಕೊಟ್ಟ ಜಿಲ್ಲೆಯ ಜನರಿಗೆ ಕನಿಷ್ಠ ಮೂಲ ಸೌಕರ್ಯವೂ ಇಲ್ಲದಂತೆ ಆಗಿದ್ದು, ಕೊನೇ ಪಕ್ಷ ಒಂದು ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯನ್ನಾದರೂ ನೀಡಬೇಕು ಎಂದು ಈಚೆಗೆ ಭಾರಿ ಹೋರಾಟ ನಡೆದಿತ್ತು.

ಈ ಹಿಂದಿನ ಬಸವರಾಜ ಬೊಮ್ಮಾಯಿ ಸರ್ಕಾರ ಮೇಲೆ ಸಾಕಷ್ಟು ಒತ್ತಡವನ್ನು ಹೇರಲಾಗಿತ್ತು. ಹೀಗಾಗಿ ಆಗಿನ ಆರೋಗ್ಯ ಸಚಿವ ಡಾ. ಕೆ. ಸುಧಾಕರ್‌ ಅವರು ಉತ್ತರ ಕನ್ನಡ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳ ಸಭೆ ನಡೆಸಿದ್ದಲ್ಲದೆ, ಜಿಲ್ಲೆಗೆ ಭೇಟಿ ನೀಡಿ ಸ್ಥಳಪರಿಶೀಲನೆಯನ್ನೂ ನಡೆಸಿದ್ದರು. ಕೊನೆಗೆ ಸರ್ಕಾರ ಸಹ ಬಜೆಟ್‌ನಲ್ಲಿ ಘೋಷಣೆ ಮಾಡಿತ್ತು. ಆದರೆ, ಸಿಎಂ ಸಿದ್ದರಾಮಯ್ಯ ಅವರು ಬಜೆಟ್‌ ಮಂಡಿಸುವಾಗ ಇದರ ಪ್ರಸ್ತಾಪವೇ ಇರಲಿಲ್ಲ. ಇದು ಉತ್ತರ ಕನ್ನಡ ಜಿಲ್ಲೆಯ ಜನರ ಕೆಂಗಣ್ಣಿಗೆ ಗುರಿಯಾಗಿತ್ತು.

ಬಗೆಹರಿದಿದ್ದ ಜಾಗದ ಗೊಂದಲ

ಉತ್ತರ ಕನ್ನಡ ಜಿಲ್ಲೆಯ ಹೃದಯಭಾಗ ಕುಮಟಾದಲ್ಲಿ ಆಸ್ಪತ್ರೆ ನಿರ್ಮಾಣಕ್ಕಾಗಿ ಸರ್ವೆ ನಂಬರ್ 440ರಲ್ಲಿ 15.35 ಎಕರೆ ಜಾಗವನ್ನು ಮೀಸಲಿಡಲಾಗಿದೆ. ಹಿಂದೆ ಈ ಜಾಗವನ್ನು ಏಕಲವ್ಯ ಮಾದರಿ ವಸತಿ ಶಾಲೆ ನಿರ್ಮಾಣಕ್ಕಾಗಿ ಮೀಸಲಿಡಲಾಗಿತ್ತು. ಆಸ್ಪತ್ರೆ ನಿರ್ಮಾಣಕ್ಕೆ ಸೂಕ್ತ ಜಾಗವಾಗಿರುವ ಹಿನ್ನೆಲೆಯಲ್ಲಿ ಸದ್ಯ ಈ ಜಾಗವನ್ನು ಆಸ್ಪತ್ರೆಗಾಗಿ ನೀಡುವಂತೆ ಸೂಚನೆ ನೀಡಲಾಗಿತ್ತು. ವಸತಿ ಶಾಲೆ ನಿರ್ಮಾಣಕ್ಕೆ ಮುಂದಿನ ದಿನಗಳಲ್ಲಿ ಪರ್ಯಾಯ ಜಾಗವನ್ನು ಒದಗಿಸುವ ಭರವಸೆಯನ್ನು ನೀಡಲಾಗಿತ್ತು.

ಇದನ್ನೂ ಓದಿ: NPS Cancellation: ರಾಜ್ಯದಲ್ಲಿ ಹಳೇ ಪಿಂಚಣಿ ಶೀಘ್ರ ಜಾರಿ? 10 ದಿನದಲ್ಲಿ ಸಮಿತಿ ಪುನಾರಚನೆ: ಕೃಷ್ಣ ಬೈರೇಗೌಡ

ವಸತಿ ಶಾಲೆಯ ಜಾಗ ಆಸ್ಪತ್ರೆಗೆ

ಉತ್ತರ ಕನ್ನಡ ಜಿಲ್ಲಾಡಳಿತವು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಏಕಲವ್ಯ ವಸತಿ ಶಾಲೆಗೆ ಮೀಸಲಿರಿಸಲಾಗಿದ್ದ ಜಾಗವನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕಾಗಿ ನೀಡುವಂತೆ ಇಲಾಖೆಗೆ ಕಳೆದ ವರ್ಷ ಪತ್ರ ಬರೆಯಲಾಗಿತ್ತು. ಆಗಿನ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಅವರು ಉತ್ತರ ಕನ್ನಡದ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದರು. ಅವರು ಆ ಜಾಗವನ್ನು ಸರ್ಕಾರಕ್ಕೆ ಹಿಂದಿರುಗಿಸಲು ಅನುಮತಿ ನೀಡಿದ್ದರು. ಅದರಂತೆ ಏಕಲವ್ಯ ವಸತಿ ಶಾಲೆಗಾಗಿ ನಿಗದಿಪಡಿಸಿ ಇರಿಸಲಾಗಿದ್ದ 17 ಎಕರೆ 14 ಗುಂಟೆ ಜಮೀನಿನಲ್ಲಿ, 15 ಎಕರೆ 35 ಗುಂಟೆಯಷ್ಟು ಪ್ರದೇಶವನ್ನು ಸರ್ಕಾರಕ್ಕೆ ಹಿಂದಿರುಗಿಸಿತ್ತು. ಜತೆಗೆ ಏಕಲವ್ಯ ವಸತಿ ಶಾಲೆಗೆ ಪರ್ಯಾಯ ಜಾಗ ಒದಗಿಸುವಂತೆ ಜಿಲ್ಲಾಡಳಿತಕ್ಕೆ ಷರತ್ತು ವಿಧಿಸಿ, ಆ ಪ್ರದೇಶವನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕಾಗಿ ಕಾಯ್ದಿರಿಸಲು ಸರ್ಕಾರದ ಆಪ್ತ ಕಾರ್ಯದರ್ಶಿಗಳು ಆದೇಶದಲ್ಲಿ ತಿಳಿಸಿದ್ದರು.

Exit mobile version