ಬೆಂಗಳೂರು/ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಸುಸಜ್ಜಿತ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ (Super specialty hospital) ಸ್ಥಾಪಿಸಬೇಕು ಎಂದು ಆಗ್ರಹಿಸಿ ನಡೆದ ದೊಡ್ಡ ಮಟ್ಟದ ಹೋರಾಟಕ್ಕೂ ಫಲ ಸಿಕ್ಕಿಲ್ಲ. ರಾಜ್ಯ ಸರಕಾರ ಈ ಭಾಗದ ಜನರು ಮತ್ತು ಬೆಂಗಳೂರಿನಲ್ಲಿರುವ ಉತ್ತರ ಕನ್ನಡವಾಸಿಗಳು ಮಾಡಿದ ಸಾಕಷ್ಟು ಪ್ರಯತ್ನಗಳು, ಕೊಟ್ಟ ಮನವಿಗಳು, ರಕ್ತದಲ್ಲಿ ಬರೆದ ಪತ್ರಗಳು ಯಾವುದೂ ಸದ್ಯಕ್ಕೆ ವರ್ಕ್ ಆದಂತೆ ಕಾಣುತ್ತಿಲ್ಲ. ರಾಜ್ಯ ಸರಕಾರ ಉತ್ತರ ಕನ್ನಡದ ಜನರ ಬೇಡಿಕೆಗೆ ತಣ್ಣೀರು ಹಾಕಿದೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರು ಮಾಡಲು ಆರ್ಥಿಕ ಇಲಾಖೆ ಒಪ್ಪಿಗೆ ಕೊಟ್ಟಿಲ್ಲ.
ಉತ್ತರ ಕನ್ನಡ ಜಿಲ್ಲೆಗೊಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಎಂಬ ಬಗ್ಗೆ ಆರ್ಥಿಕ ಇಲಾಖೆ ಪ್ರಸ್ತಾವನೆಯನ್ನು ಸಲ್ಲಿಸಿತ್ತು. ಅದಕ್ಕೆ ಬೇಕಾದ ಜಾಗ, ಸಿಬ್ಬಂದಿ, ಉಪಕರಣ ಹಾಗೂ ಹಣಕಾಸು ವೆಚ್ಚದ ಬಗ್ಗೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ, ಆರ್ಥಿಕ ಇಲಾಖೆಗೆ ಈ ಪ್ರಸ್ತಾವನೆಯನ್ನು ತಿರಸ್ಕರಿಸಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವರಾದ ಡಾ. ಕೆ.ಸುಧಾಕರ್ ಅವರು ವಿಧಾನಸಭೆಯಲ್ಲಿ ಪ್ರಶ್ನೆಯೊಂದಕ್ಕೆ ನೀಡಿದ ಉತ್ತರದಲ್ಲಿ ಈ ವಿಷಯವನ್ನು ಸ್ಪಷ್ಟಪಡಿಸಲಾಗಿದೆ. ಉತ್ತರದಲ್ಲಿ ಆರ್ಥಿಕ ಹೊರೆಯನ್ನು ಪ್ರಧಾನವಾಗಿ ಉಲ್ಲೇಖಿಸಲಾಗಿದೆ.
ಉತ್ತರದಲ್ಲಿ ಹೇಳಿದ್ದೇನು?
ಕಾರವಾರದಲ್ಲಿ ಹೊಸದಾಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಮಂಜೂರು ಮಾಡುವ ಬಗ್ಗೆ ಈ ಹಿಂದೆ ಪ್ರಸ್ತಾವನೆಯನ್ನು ಸ್ವೀಕರಿಸಲಾಗಿತ್ತು. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಸೌಲಭ್ಯಕ್ಕಾಗಿ ಅಗತ್ಯವಿರುವ ಜಾಗ, ಸಿಬ್ಬಂದಿ, ಉಪಕರಣ ಹಾಗೂ ಇತರ ಮೂಲ ಸೌಲಭ್ಯಗಳು ಹಾಗೂ ಅದಕ್ಕೆ ತಗಲುವ ಆರ್ಥಿಕ ಹೊರೆ ವಿವರಗಳನ್ನು ಕಾರವಾರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕರು ಸಲ್ಲಿಸಿದ್ದರು. ಇದನ್ನು ಮಂಜೂರಾತಿಗಾಗಿ ಆರ್ಥಿಕ ಇಲಾಖೆಯ ಆರ್ಥಿಕ ಇಲಾಖೆಯ ಅನುಮತಿಯನ್ನು ಕೋರಲಾಗಿತ್ತು. ಆದರೆ, ಆರ್ಥಿಕ ಇಲಾಖೆಯು ಈ ಪ್ರಸ್ತಾವನೆಗೆ ಒಪ್ಪಿಗೆ ನೀಡಿಲ್ಲ.
ಈಗಲೂ ಭರವಸೆ ನಿಂತಿಲ್ಲ!
ಆರ್ಥಿಕ ಇಲಾಖೆ ಪ್ರಸ್ತಾವನೆಯನ್ನು ತಿರಸ್ಕರಿಸಿದ ಬಳಿಕವೂ ಸರಕಾರ ಇನ್ನೂ ಆಶಾವಾದದ ಮಾತನಾಡಿದೆ. ಆಸ್ಪತ್ರೆಗೆ ಸಂಬಂಧಿಸಿದ ಪ್ರಸ್ತಾವನೆಯನ್ನು ಮತ್ತೊಮ್ಮೆ ಆರ್ಥಿಕ ಇಲಾಖೆಯ ಸಹಮತಿಗಾಗಿ ಕಳುಹಿಸಲು ಕ್ರಮ ವಹಿಸಲಾಗುತ್ತದೆ. ಈ ಪ್ರಸ್ತಾವನೆಗೆ ಸಹಮತಿ ಬಂದ ನಂತರದಲ್ಲಿ ಅನುದಾನ ಲಭ್ಯತೆಗೆ ಅನುಗುಣವಾಗಿ ಕಾರವಾರಕ್ಕೆ ಹೊಸದಾಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಮಂಜೂರು ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಉತ್ತರದಲ್ಲಿ ತಿಳಿಸಿದ್ದಾರೆ.
ಸರಕಾರದ ನಡೆಗೆ ಜನರ ಬೇಸರ
ಉತ್ತರ ಕನ್ನಡಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಬೇಕು ಎನ್ನುವುದು ಬಹುಕಾಲದ ಬೇಡಿಕೆ. ಆದರೆ, ಈ ಬಾರಿಯಾದರೂ ಅನುಮತಿ ಕೊಡಬಹುದು ಎನ್ನುವುದು ಎಲ್ಲರ ಬೇಡಿಕೆಯಾಗಿತ್ತು. ಯಾಕೆಂದರೆ ಆಸ್ಪತ್ರೆಗಾಗಿ ಒಂದು ದೊಡ್ಡ ಅಭಿಯಾನವೇ ನಡೆದಿತ್ತು. ಉತ್ತರ ಕನ್ನಡದಲ್ಲಿ ಮಾತ್ರವಲ್ಲ ಬೆಂಗಳೂರಿನಲ್ಲೂ ಪ್ರತಿಭಟನೆ, ಆಗ್ರಹದ ಕೂಗು ಕೇಳಿಬಂದಿತ್ತು. ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಉತ್ತರ ಕನ್ನಡಕ್ಕೆ ಭೇಟಿ ನೀಡಿದಾಗ ಸಿಹಿ ಸುದ್ದಿ ನೀಡುವುದಾಗಿ ಹೇಳಿದ್ದರು. ಅವರು ಘೋಷಿಸಲೂ ಇಲ್ಲ. ಸರಕಾರ ಅದನ್ನು ಗಂಭೀರವಾಗಿ ಪರಿಗಣಿಸಲೂ ಇಲ್ಲ ಎನ್ನುವುದು ಈಗ ಸ್ಪಷ್ಟವಾಗಿದೆ. ಇದು ಈ ಭಾಗದ ಜನರನ್ನು ಕೆರಳಿಸಿದೆ. ಜತೆಗೆ ಶಾಸಕರನ್ನೂ ಬೇಸರ ಮೂಡಿಸಿದೆ.
ಹೋರಾಟಕ್ಕೆ ಮರು ಚಾಲನೆ ನೀಡಿದ ದೊಡ್ಡ ಅಪಘಾತ
ಎರಡು ತಿಂಗಳ ಹಿಂದೆ ಶಿರೂರಿನ ಟೋಲ್‌ಗೇಟ್‌ನಲ್ಲಿ ಸಂಭವಿಸಿದ ದುರಂತ ದೊಡ್ಡ ಹೋರಾಟಕ್ಕೆ ಮತ್ತೆ ಚಾಲನೆ ಕೊಟ್ಟಿತ್ತು. ಆವತ್ತು ಹೊನ್ನಾವರದ ಒಬ್ಬ ಮಹಿಳೆಯರನ್ನು ಮಣಿಪಾಲದ ಆಸ್ಪತ್ರೆಗೆ ಆಂಬ್ಯುಲೆನ್ಸ್‌ನಲ್ಲಿ ಕರೆದೊಯ್ಯುತ್ತಿದ್ದಾಗ, ಅತಿ ವೇಗದಲ್ಲಿದ್ದ ಆಂಬ್ಯುಲೆನ್ಸ್ ಟೋಲ್‌ಗೇಟ್‌ಗೇ ಬಡಿದು ನಾಲ್ವರು ಪ್ರಾಣ ಕಳೆದುಕೊಂಡಿದ್ದರು. ಉತ್ತರ ಕನ್ನಡದಲ್ಲಿ ಸರಿಯಾದ ಆಸ್ಪತ್ರೆ ಇಲ್ಲದೆ ಇರುವುದರಿಂದ ತಾನೇ ಈ ರೀತಿಯಾಗಿ ಎಲ್ಲೆಲ್ಲಿಗೋ ರೋಗಿಗಳು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಹೀಗಾಗಿ ಇಲ್ಲೇ ಹೊಸ ಆಸ್ಪತ್ರೆ ನಿರ್ಮಾಣ ಆಗಬೇಕು ಎಂಬ ಬೇಡಿಕೆಗೆ ಮತ್ತೆ ಚಾಲನೆ ಸಿಕ್ಕಿತ್ತು.
ಹೋರಾಟಕ್ಕೆ ಜನಸಾಮಾನ್ಯರು, ಗಣ್ಯರು, ರಾಜಕಾರಣಿಗಳು, ಶಿರಸಿ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿಯವರು, ಹೊಸನಗರದ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರು ಸೇರಿದಂತೆ ಹಲವರು ಬೆಂಬಲ ನೀಡಿದ್ದರು.