ತುಮಕೂರು: ಕಳೆದ ಕೆಲವು ದಿನಗಳಿಂದ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಭರ್ಜರಿ ಮಳೆಯಿಂದ ಶಿರಾ ತಾಲೂಕಿನ ಮದಲೂರು ಕೆರೆ ಕೋಡಿ ಬಿದ್ದ ಪರಿಣಾಮ ಖುಷಿಗೊಂಡಿದ್ದ ಗ್ರಾಮಸ್ಥರು, ಬಾಗಿನ ಅರ್ಪಿಸಲು ಬಂದಿದ್ದ ಶಾಸಕರ ಎದುರೇ ಕೋಣವನ್ನು ಬಲಿಕೊಟ್ಟು ಮೌಢ್ಯದ (Superstition) ಜತೆಗೆ ವಿಕೃತಿ ಮೆರೆದಿದ್ದಾರೆ.
ಮದಲೂರು ಕೆರೆ ತುಂಬಿ ಕೋಡಿಹರಿದಿದ್ದರಿಂದ ಗ್ರಾಮಸ್ಥರು ಸಂತಸಗೊಂಡಿದ್ದಾರೆ. ಅಲ್ಲದೆ, ಈ ಸಂಬಂಧ ಶಿರಾ ಶಾಸಕ ಡಾ.ರಾಜೇಶ್ ಗೌಡ ಕೆರೆಗೆ ಬಾಗಿನ ಅರ್ಪಿಸಲು ಬಂದಿದ್ದು, ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದಾರೆ. ಶಾಸಕರು ಬಾಗಿನ ಅರ್ಪಿಸುತ್ತಿದ್ದಂತೆ ಗ್ರಾಮಸ್ಥರು ಸ್ಥಳಕ್ಕೆ ಆಗಲೇ ತಂದಿಟ್ಟುಕೊಂಡಿದ್ದ ಕೋಣವನ್ನು ನಿಲ್ಲಿಸಿ ಬಲಿ ಕೊಡಲು ಸಿದ್ಧತೆ ನಡೆಸಿದ್ದಾರೆ.
ಕೋಣ ಬಲಿ ಕೊಟ್ಟರು
ಶಾಸಕರು ಬಾಗಿನ ಅರ್ಪಿಸಿದ ಬಳಿಕ ವ್ಯಕ್ತಿಯೊಬ್ಬ ಶಾಸಕ ಕಣ್ಣೆದುರೇ ಕೋಣವನ್ನು ಬಲಿ ಕೊಟ್ಟು ಅದರ ರುಂಡವನ್ನು ಸ್ವಲ್ಪ ದೂರ ನೀರಿನಲ್ಲಿ ಎಳೆದುಕೊಂಡು ಹೋಗಿದ್ದಾನೆ. ಬಳಿಕ ನೀರು ಸರಾಗವಾಗಿ ಹರಿದುಹೋಗುವಲ್ಲಿ ಆ ರುಂಡವನ್ನು ಎತ್ತಿ ಬಿಸಾಡಿದ್ದಾನೆ. ಇದನ್ನೆಲ್ಲ ಅಲ್ಲಿ ಮಹಿಳೆಯರೂ ಸೇರಿದಂತೆ ಗ್ರಾಮಸ್ಥರು ವೀಕ್ಷಣೆ ಮಾಡುತ್ತಿರುವ ವಿಡಿಯೋ ಈಗ ವೈರಲ್ ಆಗಿದೆ. ಈ ಮೂಲಕ ಗ್ರಾಮದವರು ಮೌಢ್ಯ ಮೆರೆದಿದ್ದು, ಶಾಸಕರ ಬೆಂಬಲಿಗರೂ ಇದರಲ್ಲಿ ಭಾಗಿಯಾಗಿದ್ದಾರೆಂಬ ಆರೋಪಗಳು ಕೇಳಿಬಂದಿವೆ.
ಈ ಪ್ರಕರಣವು ಸೆಪ್ಟೆಂಬರ್ ೧ನೇ ತಾರೀಖಿನಂದೇ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕೋಣವನ್ನು ಕತ್ತರಿಸಿ ಅದರ ರುಂಡವನ್ನು ಹಿಡಿದು ಕೆರೆಗೆ ಪ್ರದಕ್ಷಿಣೆಯನ್ನೂ ಹಾಕಿದ್ದಾರೆನ್ನಲಾಗಿದೆ.
ಇದನ್ನೂ ಓದಿ | Bengaluru Rain | ಬೋಟ್‌ನಲ್ಲಿ ತೆರಳಿ ಮಳೆ ಹಾನಿ ವೀಕ್ಷಿಸಿದ ಸಿದ್ದರಾಮಯ್ಯ: ಗೋಳು ತೋಡಿಕೊಂಡ ಜನರು