Site icon Vistara News

ಆನೆಗೊಂದಿ ಪದ್ಮನಾಭ ತೀರ್ಥರ ವೃಂದಾವನ: ಉಭಯ ಮಠಗಳಿಗೂ ಆರಾಧನೆ ಅವಕಾಶ ನೀಡಿದ ಸುಪ್ರೀಂ ಕೋರ್ಟ್‌

anegondi vrundavana

ಕೊಪ್ಪಳ: ಮಾಧ್ವ ಸಂಪ್ರದಾಯದ ಪ್ರಮುಖ ಧಾರ್ಮಿಕ ತಾಣವಾದ ಗಂಗಾವತಿ (Gangavathi News) ತಾಲೂಕಿನ ಆನೆಗೊಂದಿಯ ನವ ವೃಂದಾವನ ಗಡ್ಡೆಯಲ್ಲಿನ ಶ್ರೀ ಪದ್ಮನಾಭ ತೀರ್ಥರ ವೃಂದಾವನದಲ್ಲಿ ಆರಾಧನೆಗೆ ಸಂಬಂಧಿಸಿ ಇದ್ದ ಎರಡು ಮಠಗಳ ನಡುವಿನ ವಿವಾದಕ್ಕೆ ಸರ್ವೋಚ್ಛ ನ್ಯಾಯಾಲಯ (Supreme court) ಮಧ್ಯಂತರ ಆದೇಶ ನೀಡಿದ್ದು, ಇಬ್ಬರಿಗೂ ಆರಾಧನೆಗೆ ಅವಕಾಶ ಮಾಡಿಕೊಟ್ಟಿದೆ.

ಪದ್ಮನಾಭ ತೀರ್ಥರ ಆರಾಧನೆಗೆ ಇದ್ದ ಗೊಂದಲಕ್ಕೆ ಸರ್ವೋಚ್ಛ ನ್ಯಾಯಲಯದ ಮಧ್ಯಂತರ ತೀರ್ಪು ಹಿನ್ನೆಲೆಯಲ್ಲಿ ತೆರೆ ಬಿದ್ದಂತಾಗಿದೆ. ಡಿ.10 ಹಾಗೂ 11ರಂದು ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ ಮಠದವರಿಂದ ಪದ್ಮನಾಭ ತೀರ್ಥರ ಆರಾಧನೆ ಹಾಗೂ ಡಿ.11ರ ಮಧ್ಯಾಹ್ನದಿಂದ ಡಿ.12ರವರೆಗೆ ಉತ್ತರಾದಿ ಮಠದವರಿಂದ ಆರಾಧನೆ ನಡೆಯಲಿದೆ.

ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಆನೆಗೊಂದಿ ಬಳಿಯ ನವವೃಂದಾವನದಲ್ಲಿ ಶ್ರೀ ಮದ್ವಾಚಾರ್ಯರ ಶಿಷ್ಯರಾದ ಶ್ರೀ ಪದ್ಮನಾಭ ತೀರ್ಥರ ವೃಂದಾವನವಿದ್ದು, ಅದರ ಹಕ್ಕಿನ ಬಗ್ಗೆ ವಿವಾದವಿದೆ. ಪದ್ಮನಾಭ ತೀರ್ಥರ ವೃಂದಾವನ ಪೂಜೆಗಾಗಿಯೂ ರಾಯರ ಮಠ ಹಾಗೂ ಉತ್ತರಾದಿ ಮಠದವರ ಮಧ್ಯೆ ಇರುವ ವಿವಾದದ ಕುರಿತು ಈಗ ಸರ್ವೋಚ್ಛ ನ್ಯಾಯಲಯದಲ್ಲಿ ವಿಚಾರಣೆ ನಡೆಯುತ್ತಿದೆ.

ಇದೀಗ ಪದ್ಮನಾಭ ತೀರ್ಥರ ಆರಾಧನೆಯ ಹಿನ್ನಲೆಯಲ್ಲಿ ಸರ್ವೋಚ್ಚ ನ್ಯಾಯಾಲಯ ಮಧ್ಯಂತರ ಆದೇಶ ನೀಡಿದೆ. ಪ್ರತಿ ವರ್ಷ ನವವೃಂದಾವನ‌ಗಡ್ಡೆಯಲ್ಲಿ ಈ ಆರಾಧನೆ ವಿವಾದ ಹುಟ್ಟಿಕೊಳ್ಳುತ್ತಿದೆ. ಸದ್ಯ ನ್ಯಾಯಾಲಯದ ತೀರ್ಪಿನಂತೆ ಉಭಯ ಮಠದವರು ಒಂದೂವರೆ ದಿನದ ಪೂಜೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಇನ್ನೊಂದು ವಿವಾದ

ಮೂರು ತಿಂಗಳ ಹಿಂದೆ ಇಲ್ಲೇ ಇರುವ ವಿವಾದಿತ ಜಯತೀರ್ಥ-ರಘುವರ್ಯರ ವೃಂದಾವನದ ಪೂಜೆಯ ಸಂಬಂಧ ಹೈಕೋರ್ಟ್‌ ದ್ವಿಸದಸ್ಯ ಪೀಠ ತೀರ್ಪು ನೀಡಿತ್ತು. ಹಿಂದೆ ಧಾರವಾಡದ ಏಕಸದಸ್ಯ ಪೀಠ ನೀಡಿದ್ದ ಪೂಜೆಯ ನಿರ್ಬಂಧದ ತೀರ್ಪನ್ನು ದ್ವಿ ಸದಸ್ಯ ಪೀಠ ತಳ್ಳಿ ಹಾಕಿತ್ತು. ಇದರಿಂದ ಮಂತ್ರಾಲಯದ ರಾಘವೇಂದ್ರ ಸ್ವಾಮೀಜಿಗಳ ಮಠದ ಅನುಯಾಯಿಗಳಿಗೆ ಈ ಮೊದಲಿನಂತೆ ಜಯತೀರ್ಥರ ವೃಂದಾವನಕ್ಕೆ ಪೂಜೆ ಸಲ್ಲಿಸುವ ಅವಕಾಶ ದೊರೆತಂತಾಗಿತ್ತು.

ನವವೃಂದಾವನ ಗಡ್ಡೆಯಲ್ಲಿ ಮಾಧ್ವ ಮತ ಪ್ರಚಾರಕರ ಒಂಬತ್ತು ಯತಿಗಳ ಭೌತಿಕ ಸಮಾಧಿಗಳಿವೆ. ಈ ಪೈಕಿ ಒಂದು ಸಮಾಧಿ (ವೃಂದಾವನ) ವಿವಾದದ ಕೇಂದ್ರ ಬಿಂದುವಾಗಿದೆ. ರಾಯರ ಮಠದ ಅನುಯಾಯಿಗಳು ಅದನ್ನು ಜಯತೀರ್ಥರದ್ದು ಎಂದು, ಉತ್ತರಾದಿ ಮಠದ ಅನುಯಾಯಿಗಳು ಅದೇ ವೃಂದಾವನವನ್ನು ರಘುವರ್ಯ ತೀರ್ಥರದ್ದು ಎಂದು ವಾದಿಸುತ್ತಿರುವುದು ವಿವಾದಕ್ಕೆ ಕಾರಣವಾಗಿದ್ದು, ಕಾನೂನು ತೊಡಕಾಗಿ ಪರಿಣಾಮಿಸಿದೆ.

ರಘುವರ್ಯ ತೀರ್ಥರ ವೃಂದಾವನವನ್ನು ರಾಯರ ಮಠದವರು ಜಯತೀರ್ಥರದ್ದು ಎಂದು ವಾದಿಸುತ್ತಿದ್ದು ಮತ್ತು ಅದಕ್ಕೆ ಧಾರ್ಮಿಕ ಕಾರ್ಯಗಳನ್ನು ಹಮ್ಮಿಕೊಳ್ಳುವ ಮೂಲಕ ಯತಿ ಪರಂಪರೆಗೆ ಅಪಚಾರ ಮಾಡುತ್ತಿದ್ದಾರೆ. ಇದಕ್ಕೆ ತಡೆ ನೀಡುವಂತೆ ಕೋರಿ ಉತ್ತರಾಧಿ ಮಠದ ಅನುಯಾಯಿಗಳು ಧಾರವಾಡದ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದರು.

ಇದನ್ನೂ ಓದಿ: Gangavathi News: ಆನೆಗೊಂದಿ ಜಯತೀರ್ಥ-ರಘುವರ್ಯರ ವೃಂದಾವನ ವಿವಾದ; ರಾಯರ ಮಠದ ಪರ ಹೈಕೋರ್ಟ್ ತೀರ್ಪು

Exit mobile version