Site icon Vistara News

Bhavani Revanna: ಸಂತ್ರಸ್ತೆಯ ಅಪಹರಣ‌ ಕೇಸ್; ಭವಾನಿ ರೇವಣ್ಣಗೆ ಸುಪ್ರೀಂ ಕೋರ್ಟ್‌ ನೋಟಿಸ್

Bhavani Revanna

Supreme Court Issues Notice To Bhavani Revanna In Kidnaping Case

ನವದೆಹಲಿ/ಬೆಂಗಳೂರು: ಹಾಸನ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ (Prajwal Revanna Case) ಅವರಿಂದ ಲೈಂಗಿಕ ದೌರ್ಜನ್ಯಕ್ಕೀಡಾದ ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ಭವಾನಿ ರೇವಣ್ಣ (Bhavani Revanna) ಅವರಿಗೆ ಸುಪ್ರೀಂ ಕೋರ್ಟ್‌ ನೋಟಿಸ್‌ ನೀಡಿದೆ. ಭವಾನಿ ರೇವಣ್ಣ ಅವರಿಗೆ ಕರ್ನಾಟಕ ಹೈಕೋರ್ಟ್‌‌ (Karnataka High Court) ನೀಡಿದ ನಿರೀಕ್ಷಣಾ ಜಾಮೀನು ಆದೇಶ ಪ್ರಶ್ನಿಸಿ ಎಸ್‌ಐಟಿ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ (Supreme Court) ನ್ಯಾ.ಸೂರ್ಯಕಾಂತ್‌ ಅವರಿದ್ದ ದ್ವಿಸದಸ್ಯ ಪೀಠವು, ಭವಾನಿ ರೇವಣ್ಣ ಅವರಿಗೆ ನೋಟಿಸ್‌ ನೀಡಿದೆ.

ಎಸ್‌ಐಟಿ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್‌ ಸಿಬಲ್‌, “ಲೈಂಗಿಕ ದೌರ್ಜನ್ಯಕ್ಕೀಡಾದ ಸಂತ್ರಸ್ತೆಯ ಅಪಹರಣ ಪ್ರಕರಣದ ಆರೋಪಿ ಭವಾನಿ ರೇವಣ್ಣ ಅವರಿಗೆ ಜಾಮೀನು ನೀಡಿರುವುದು ದುರದೃಷ್ಟಕರ” ಎಂದರು. ಆಗ ನ್ಯಾ.ಸೂರ್ಯಕಾಂತ್‌, “ನೀವು ರಾಜಕೀಯ ಅಂಶಗಳನ್ನು ಬಿಟ್ಟುಬಿಡಿ. ಹೈಕೋರ್ಟ್‌ ಏಕೆ ಜಾಮೀನು ಮಂಜೂರು ಮಾಡಿದೆ ಎಂಬುದನ್ನು ನೋಡಿ. ಭವಾನಿ ರೇವಣ್ಣ ಅವರು ಒಬ್ಬ ತಾಯಿಯಾಗಿದ್ದು, ಅವರಿಗೆ 55 ವರ್ಷ ವಯಸ್ಸಾಗಿದೆ. ಅಷ್ಟಕ್ಕೂ, ಅವರ ವಿರುದ್ಧ ಸಾಕ್ಷ್ಯಗಳು ಏನಿವೆ? ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿರುವ ಕುರಿತು ಕೂಡ ಸಾಕ್ಷ್ಯಗಳು ಇಲ್ಲ” ಎಂದು ತಿಳಿಸಿ, ಪ್ರತಿಕ್ರಿಯಿಸುವಂತೆ ನೋಟಿಸ್‌ ಜಾರಿಮಾಡಿತು.

NEET UG 2024

ಮೂರು ವಾರಗಳ ಹಿಂದೆ ಹೈಕೋರ್ಟ್‌ ಪೀಠ ಭವಾನಿ ಅವರಿಗೆ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರ ಪೀಠ ನಿರೀಕ್ಷಣಾ ಜಾಮೀನು ನೀಡಿತ್ತು. “ಪೊಲೀಸರು ಮುಂದಿಟ್ಟ 85 ಪ್ರಶ್ನೆಗಳಿಗೆ ಭವಾನಿ ರೇವಣ್ಣ ಉತ್ತರಿಸಿದ್ದಾರೆ. ಹೀಗಾಗಿ ತನಿಖೆಗೆ ಸಹಕರಿಸಿಲ್ಲ ಎಂಬ ವಾದ ಒಪ್ಪಲಾಗುವುದಿಲ್ಲ. ಪೊಲೀಸರಿಗೆ ಬೇಕಾದಂತಹ ಉತ್ತರವನ್ನೇ ಕೊಡಬೇಕೆಂದಿಲ್ಲ” ಎಂದು ಕೋರ್ಟ್‌ ಪೀಠ ಹೇಳಿತ್ತು. “ಸಂತ್ರಸ್ತೆಗೆ ಭವಾನಿ ಊಟ, ಬಟ್ಟೆ ಕೊಟ್ಟಿಲ್ಲವೆಂಬ ವಾದವನ್ನೂ ಒಪ್ಪಲಾಗುವುದಿಲ್ಲ. ಅಕ್ಕ ಬಟ್ಟೆ ಊಟ ಕಳುಹಿಸಿದ್ದರೆಂದು ಸಂತ್ರಸ್ತೆ ಹೇಳಿಕೆಯಿದೆ” ಎಂದೂ ಕೋರ್ಟ್‌ ಗಮನಿಸಿತ್ತು.

ಆದರೆ, ಭವಾನಿ ರೇವಣ್ಣ ಅವರು ಮೈಸೂರು ಮತ್ತು ಹಾಸನ ಜಿಲ್ಲೆ ಪ್ರವೇಶಿಸುವಂತಿಲ್ಲ ಎಂಬ ಷರತ್ತನ್ನು ಹೈಕೋರ್ಟ್ ವಿಧಿಸಿತ್ತು. ತನಿಖೆಗೆ ಎಸ್‌ಐಟಿಗೆ ಸಹಕರಿಸಬೇಕು ಎಂದು ಆದೇಶಿಸಿತ್ತು. ಮಾಜಿ ಸಚಿವ ರೇವಣ್ಣ ಅವರಿಗೂ ದೇಶ ಬಿಟ್ಟು ಹೊರಹೋಗಬಾರದು ಎಂಬ ಆದೇಶ ವಿಧಿಸಲಾಗಿತ್ತು.

ಇದಕ್ಕೂ ಮುನ್ನ ಹೈಕೋರ್ಟ್‌ ಒಂದು ವಾರದ ಕಾಲ ಷರತ್ತುಬದ್ಧ ಮಧ್ಯಂತರ ಜಾಮೀನು ನೀಡಿದ ಬೆನ್ನಲ್ಲೇ ಎಸ್‌ಐಟಿ ವಿಚಾರಣೆಗೆ ಭವಾನಿ ಹಾಜರಾಗಿದ್ದರು. ಅಲ್ಲಿಯವರೆಗೂ ಭವಾನಿ ತಲೆಮರೆಸಿಕೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿ ನಿಯಮದ 41a ಅಡಿ ಭವಾನಿ ರೇವಣ್ಣಗೆ ಎಸ್ಐಟಿ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ನೀಡಲಾಗಿತ್ತು. ತಾವು ಹೊಳೆನರಸೀಪುರದ ಮನೆಯಲ್ಲಿ ಸಿಗುವುದಾಗಿ ಭವಾನಿ ತಿಳಿಸಿದ್ದರು. ಇದಕ್ಕಾಗಿ ಎಸ್‌ಐಟಿ ಟೀಮ್‌ ಅಲ್ಲಿಗೆ ತೆರಳಿದಾಗ, ಭವಾನಿ ಅಲ್ಲಿರದೆ ಕಣ್ಮರೆಯಾಗಿದ್ದರು. ಹೀಗಾಗಿ ಭವಾನಿ ಬಂಧನಕ್ಕಾಗಿ ಆರೆಸ್ಟ್ ವಾರೆಂಟ್ ಜಾರಿ ಮಾಡಲಾಗಿತ್ತು.

ಇದನ್ನೂ ಓದಿ: Actor Darshan: ದರ್ಶನ್‌ಗೆ ಬಟ್ಟೆ, ಹಣ್ಣು ಕೊಟ್ಟ ಅಕ್ಕ-ಬಾವ, ಸ್ನ್ಯಾಕ್ಸ್‌ ವಾಪಸ್‌; ತಾಯಿ ಕಂಡು ಪವಿತ್ರಾ ಗೌಡ ಕಣ್ಣೀರು

Exit mobile version