ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಜಾಮೀನಿನ ನಿರ್ಬಂಧಗಳನ್ನು ಸಡಿಲಿಸುವಂತೆ ಕೋರಿ ಮಾಜಿ ಸಚಿವ ಜನಾರ್ದನ ರೆಡ್ಡಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಬುಧವಾರ ತಳ್ಳಿಹಾಕಿದೆ. ಜಸ್ಟೀಸ್ ಎಂ ಆರ್ ಶಾ ಹಾಗೂ ಜಸ್ಟೀಸ್ ಸಿ ಟಿ ರವಿಕುಮಾರ್ ಅವರಿದ್ದ ಪೀಠವು, ಗಾಲಿ ಜನಾರ್ದನ ರೆಡ್ಡಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಲು ಸಾಧ್ಯವಿಲ್ಲ ಎಂದು ಹೇಳಿತು(Supreme Court).
ಕರ್ನಾಟಕದಲ್ಲಿ ವಿಧಾನ ಸಭೆ ಚುನಾವಣೆ ನಡೆಯುತ್ತಿರುವ ಕಾರಣ, ಜಾಮೀನು ಸಡಲಿಕೆಯನ್ನು ಇನ್ನಷ್ಟು ದಿನಗಳ ಕಾಲ ಮುಂದುವರಿಸಬೇಕೆಂದು ರೆಡ್ಡಿ ಪರ ಹಿರಿಯ ನ್ಯಾಯವಾದಿ ಮೀನಾಕ್ಷಿ ಅರೋರಾ ಅವರು ಹೇಳಿದರು. ಈ ಮೊದಲು, ಗಾಲಿ ಜನಾರ್ದನ ರೆಡ್ಡಿ ಅವರಿಗೆ, ಅವರ ಮಗಳು ಹಾಗೂ ಜನಿಸಿದ ಮಗುವನ್ನು ಮೀಟ್ ಮಾಡುವುದಕ್ಕಾಗಿ ಜಾಮೀನಿನಲ್ಲಿ ಸುಪ್ರೀಂ ಕೋರ್ಟ್ ಸಡಿಲಿಕೆ ನೀಡಿತ್ತು.
ಇದಕ್ಕೂ ಮೊದಲು ಬಹುಕೋಟಿ ಗಣಿ ಹಗರಣದ ವಿಚಾರಣೆಯನ್ನು ನಿರಂತರವಾಗಿ ಸ್ಥಳೀಯ ನ್ಯಾಯಾಲಯದಲ್ಲಿ ನಡೆಸಲು ಸುಪ್ರೀಂ ಕೋರ್ಟ್ ಸೂಚಿಸಿತ್ತು. ಅಲ್ಲದೇ, 2022 ನವೆಂಬರ್ 6ವರೆಗೆ ಗಾಲಿ ಜನಾರ್ದನ ರೆಡ್ಡಿ ಅವರಿಗೆ ಬಳ್ಳಾರಿಯಲ್ಲಿ ಇರಲು ಅವಕಾಶ ನೀಡಿತ್ತು. ಆದರೆ, ನವೆಂಬರ್ 7, 2022ರಿಂದ ಬಳ್ಳಾರಿಯಲ್ಲಿ ಇರುವಂತಿಲ್ಲ ಎಂದು ಎಚ್ಚರಿಕೆ ನೀಡಿತ್ತು. 2022 ನವೆಂಬರ್ 9ರಿಂದ ವಿಚಾರಣಾ ನ್ಯಾಯಾಲಯವು ನಿತ್ಯ ವಿಚಾರಣೆ ನಡೆಸಿ ಮುಂದಿನ ಆರು ತಿಂಗಳಲ್ಲಿ ಬಹುಕೋಟಿ ಹಗರಣದ ಗಣಿ ವಿಚಾರಣೆಯನ್ನು ಪೂರ್ತಿಗೊಳಿಸುವಂತೆ ಸುಪ್ರೀಂ ಕೋರ್ಟ್ ತಿಳಿಸಿತ್ತು.
ಗಂಗಾವತಿಯಲ್ಲಿ ನಾಮಪತ್ರ ಸಲ್ಲಿಸಿದ ಜನಾರ್ದನ ರೆಡ್ಡಿ
ಈ ಬಾರಿಯ ಚುನಾವಣೆಯಲ್ಲಿ ಅತ್ಯಧಿಕ ಮತಗಳಿಂದ ನನ್ನ ಆರಿಸಿ ಕಳುಹಿಸಬೇಕು. ಗಂಗಾವತಿಯ ಮಹಾತ್ಮಗಾಂಧಿ ವೃತ್ತದಲ್ಲಿ ನೀಡಿದ ವಾಗ್ದಾನ ಈಡೇರಿಸುತ್ತೇನೆ. ಬರುವ ದಿನಗಳಲ್ಲಿ ಗಂಗಾವತಿಯಿಂದಲೇ ರಾಜ್ಯ ಆಡಳಿತ ನಡೆಸುವಂತಾಗುತ್ತದೆ ಎಂದು ಗಾಲಿ ಜನಾರ್ದನ ರೆಡ್ಡಿ ಹೇಳಿದರು. ಅವರು ತಮ್ಮ ಅಪಾರ ಬೆಂಬಲಿಗರೊಂದಿಗೆ ಗಂಗಾವತಿ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದಾರೆ.
ಗಂಗಾವತಿ ಬೆಂಬಲಿಗರು ದೊಡ್ಡ ಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ಭಾಗವಹಿಸಿದ್ದಾರೆ. ಬಳ್ಳಾರಿಯ ಜನರಷ್ಟೇ ಪ್ರೀತಿಯಿಂದ ಗಂಗಾವತಿ ಜನ ಸ್ವಾಗತಿಸಿದ್ದಾರೆ. ನಾನು ಬಳ್ಳಾರಿ ಜನರನ್ನು ಮರೆಯುವಷ್ಟು ಪ್ರೀತಿಯನ್ನು ಇಲ್ಲಿನ ಜನರು ನೀಡಿದ್ದಾರೆ. ಬಿಜೆಪಿಯಲ್ಲಿ ತತ್ವ, ಸಿದ್ಧಾಂತ ಕೇವಲ ಮಾತಿನಲ್ಲಿ ಇದೆ. ಹಿಂದಿನ ನಾಯಕರ ತತ್ವ ಸಿದ್ಧಾಂತ ಈಗ ಬಿಜೆಪಿಯಲ್ಲಿ ಇಲ್ಲ. ಬಿಜೆಪಿ ಈಗ ಕೇವಲ ಬ್ಯುಸಿನೆಸ್ ಸೆಂಟರ್ ಆಗಿದೆ ಎಂದು ಟೀಕಿಸಿದರು.