ನವದೆಹಲಿ: ಕರ್ನಾಟಕದಲ್ಲಿ ಭುಗಿಲೆದ್ದ ಹಿಜಾಬ್ ವಿವಾದದ (Hijab Row) ಹಿಂದೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಕೈವಾಡ ಇದೆ ಎಂದು ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದ ಬೆನ್ನಲ್ಲೇ, “ಪಿಎಫ್‌ಐ ಕುಮ್ಮಕ್ಕಿನ ಕುರಿತು ಹೆಚ್ಚಿನ ಮಾಹಿತಿ ನೀಡಿ” ಎಂದು ಕರ್ನಾಟಕ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.
ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧಿಸಿದ್ದ ಕರ್ನಾಟಕ ಸರ್ಕಾರದ ಆದೇಶವನ್ನು ಎತ್ತಿಹಿಡಿದ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ಕುರಿತು ಬುಧವಾರವೂ ಸುಪ್ರೀಂ ಕೋರ್ಟ್ ವಿಚಾರಣೆ ಮುಂದುವರಿಸಿತು. “ಅದು ಉಡುಪಿ ಇರಬಹುದು, ಕುಂದಾಪುರ ಇರಬಹುದು. ಅಲ್ಲೆಲ್ಲ, ಹಿಜಾಬ್ ವಿವಾದವು ಅತಿರೇಕಕ್ಕೇರಲು, ವಿದ್ಯಾರ್ಥಿಗಳು ಕಾಲೇಜು ಪ್ರವೇಶಿಸದೆ ಗೇಟ್‌ಗಳ ಮುಂದೆಯೇ ನಿಲ್ಲುವುದರ ಹಿಂದೆ ಸಂಘಟನೆಗಳ ಕೈವಾಡವಿದೆ” ಎಂದು ರಾಜ್ಯ ಸರ್ಕಾರದ ಪರ ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ. ನಾವದಗಿ ವಾದ ಮಂಡಿಸಿದರು.
ವಾದ ಆಲಿಸಿದ ನ್ಯಾಯಪೀಠವು, “ಹಿಜಾಬ್ ವಿವಾದದ ಹಿಂದೆ ಪಿಎಫ್‌ಐ ಕೈವಾಡವೇ ಇದೆ ಎಂದರೆ, ಸಲ್ಲಿಸಲಾದ ಜಾರ್ಜ್‌ಶೀಟ್‌ಗಳ ಪ್ರತಿಗಳನ್ನು ನ್ಯಾಯಾಲಯಕ್ಕೆ ಒದಗಿಸಿ” ಎಂದಿತು. ಆಗ ನಾವದಗಿ ಅವರು, “ಸಂಜೆ ವೇಳೆಗೆ ಎರಡೂ ಆರೋಪ ಪಟ್ಟಿಗಳನ್ನು ಸಲ್ಲಿಸಲಾಗುವುದು” ಎಂದು ತಿಳಿಸಿದರು. ಹಿಜಾಬ್ ವಿವಾದದ ಹಿಂದೆ ಪಿಎಫ್‌ಐನಂತಹ ಮೂಲಭೂತವಾದಿ ಸಂಘಟನೆಯ ಕೈವಾಡವಿದೆ ಎಂದು ಮಂಗಳವಾರವೇ ರಾಜ್ಯ ಸರ್ಕಾರ ಸುಪ್ರೀಂ ಕೋಟ್‌ಗೆ ತಿಳಿಸಿತ್ತು.
ಇದನ್ನೂ ಓದಿ | Hijab Row | ಪಿಎಫ್‌ಐ ಕುಮ್ಮಕ್ಕಿನಿಂದಾಗಿ ಹಿಜಾಬ್‌ಗೆ ಒತ್ತಾಯ, ಸುಪ್ರೀಂಗೆ ಕರ್ನಾಟಕ ಸರ್ಕಾರ ಮಾಹಿತಿ