Site icon Vistara News

ಚಾಮರಾಜಪೇಟೆ ಮೈದಾನ ವಿವಾದ| ಸುಪ್ರೀಂಕೋರ್ಟ್‌ನ ತ್ರಿಸದಸ್ಯ ಪೀಠಕ್ಕೆ ವರ್ಗಾವಣೆ, ಇಂದೇ ವಿಚಾರಣೆ

chamarajpet

ನವದೆಹಲಿ: ಬೆಂಗಳೂರಿನ ಚಾಮರಾಜಪೇಟೆ ಮೈದಾನ ವಿವಾದಕ್ಕೆ ಸಂಬಂಧಿಸಿದ ವಿಚಾರಣೆಯನ್ನು ತ್ರಿಸದಸ್ಯ ಪೀಠಕ್ಕೆ ವರ್ಗಾವಣೆ ಮಾಡಲಾಗಿದೆ ಮತ್ತು ಇಂದೇ ವಿಚಾರಣೆ ನಡೆಯಲಿದೆ.

ಚಾಮರಾಜಪೇಟೆ ಮೈದಾನದಲ್ಲಿ ಧಾರ್ಮಿಕ ಕಾರ್ಯಕ್ರಮ(ಗಣೇಶೋತ್ಸವ)ಕ್ಕೆ ಅವಕಾಶ ನೀಡಿರುವ ರಾಜ್ಯ ಹೈಕೋರ್ಟ್‌ನ ದ್ವಿಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ವಕ್ಫ್‌ ಮಂಡಳಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಮಂಗಳವಾರ ಸುಪ್ರೀಂಕೋರ್ಟ್‌ನಲ್ಲಿ ನಡೆದಿದ್ದು, ಈ ವೇಳೆ ದ್ವಿಸದಸ್ಯ ಪೀಠದಲ್ಲಿ ನ್ಯಾಯಮೂರ್ತಿಗಳ ನಡುವೆ ವೈರುಧ್ಯದ ಅಭಿಪ್ರಾಯ ರೂಪುಗೊಂಡ ಹಿನ್ನೆಲೆಯಲ್ಲಿ ಮೂರು ಸದಸ್ಯರಿರುವ ಪೀಠಕ್ಕೆ ವರ್ಗಾಯಿಸಲು ನಿರ್ಣಯಿಸಲಾಗಿದೆ. ಅರ್ಜಿಯ ವಿಚಾರಣೆ ಇಂದೇ ನಡೆದು ಸಂಜೆಯ ಒಳಗೆ ತೀರ್ಪು ಹೊರಬೀಳಲಿದೆ. ಮತ್ತು ಈ ಮೂಲಕ ಚಾಮರಾಜಪೇಟೆ ಮೈದಾನದಲ್ಲಿ ನಾಳೆ ಗಣೇಶೋತ್ಸವ ನಡೆಯುತ್ತದೋ ಇಲ್ಲವೋ ಎನ್ನುವುದು ತೀರ್ಮಾನವಾಗಲಿದೆ.

ಏನಿದು ವಿವಾದ?
ಚಾಮರಾಜಪೇಟೆಯ ಈದ್ಗಾ ಮೈದಾನವೆಂದು ಹೇಳಲಾದ ಜಾಗದ ಬಗ್ಗೆ ಹಲವು ವರ್ಷಗಳಿಂದ ವಿವಾದ ನಡೆಯುತ್ತಿದ್ದು, ಈ ಬಾರಿ ಹೊಸ ತಿರುವನ್ನು ಪಡೆದಿದೆ. ಇದು ವಕ್ಫ್‌ ಬೋರ್ಡ್‌ಗೆ ಸೇರಿದ ಜಾಗ ಎಂಬ ಬಗ್ಗೆ ದಾಖಲೆಗಳಿಲ್ಲ. ಹೀಗಾಗಿ ಇದು ಸರಕಾರಿ ಜಾಗ ಎಂದು ಬಿಬಿಎಂಪಿ ಜಂಟಿ ಆಯುಕ್ತರು ಆದೇಶ ಹೊರಡಿಸಿದ್ದರು. ಇದೇ ಆಧಾರದಲ್ಲಿ ಚಾಮರಾಜ ಪೇಟೆ ಆಟದ ಮೈದಾನದಲ್ಲಿ ಕಂದಾಯ ಇಲಾಖೆ ನೇತೃತ್ವದಲ್ಲಿ ಸ್ವಾತಂತ್ರ್ಯೋತ್ಸವವನ್ನು ಈ ಬಾರಿ ಆಚರಿಸಲಾಗಿತ್ತು.

ಈ ನಡುವೆ, ಈ ಜಾಗ ವಕ್ಫ್‌ ಮಂಡಳಿಗೆ ಸೇರಿದ್ದಲ್ಲ. ಕಂದಾಯ ಇಲಾಖೆಗೆ ಸೇರಿದ್ದು ಎಂಬ ಜಂಟಿ ಆಯುಕ್ತರ ಆದೇಶ ಪ್ರಶ್ನಿಸಿ ಪ್ರಶ್ನಿಸಿ ವಕ್ಫ್‌ ಮಂಡಳಿ ಹೈಕೋರ್ಟ್‌ ಮೊರೆ ಹೊಕ್ಕಿತ್ತು. ಕಳೆದ ಗುರುವಾರ ನ್ಯಾ.ಹೇಮಂತ್ ಚಂದನ್‌ಗೌಡರ್ ಅವರ ಪೀಠ ಈ ಅರ್ಜಿಯ ವಿಚಾರಣೆ ನಡೆಸಿತ್ತು. ಮೈದಾನದಲ್ಲಿ ಯಥಾಸ್ಥಿತಿ ಕಾಪಾಡಿಕೊಳ್ಳಬೇಕು, ವರ್ಷದಲ್ಲಿ ಎರಡು ಬಾರಿ ಮಾತ್ರ ಪ್ರಾರ್ಥನೆಗೆ ಅವಕಾಶ ನೀಡಬಹುದು. ಉಳಿದಂತೆ ಆಟದ ಮೈದಾನವಾಗಿ ಬಳಸಬಹುದು ಎಂದು ಸ್ಪಷ್ಟಪಡಿಸಿತ್ತು. ಈ ಮಧ್ಯಂತರ ಆದೇಶದ ಪ್ರಕಾರ ಗಣೇಶೋತ್ಸವಕ್ಕೆ ಅವಕಾಶ ಇಲ್ಲ ಎನ್ನುವುದು ಸ್ಪಷ್ಟವಾಗಿತ್ತು. ಇದನ್ನು ಪ್ರಶ್ನಿಸಿ ಶುಕ್ರವಾರ ರಾಜ್ಯ ಸರಕಾರ ಮೇಲ್ಮನವಿ ಸಲ್ಲಿಸಿತ್ತು.

ಹಂಗಾಮಿ ಸಿಜೆ ಅಲೋಕ್‌ ಅರಾಧೆ ನೇತೃತ್ವದ ಪೀಠವು ಮೇಲ್ಮನವಿಯ ವಿಚಾರಣೆಯನ್ನು ನಡೆಸಿ ಏಕ ಸದಸ್ಯ ಪೀಠದ ಆದೇಶವನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಂಡೇ ಒಂದು ಅಂಶವವನ್ನ ಬದಲಾಯಿಸಿತ್ತು. ಈ ಮೈದಾನದಲ್ಲಿ ಧಾರ್ಮಿಕ ಕಾರ್ಯಕ್ರಮಗಳಿಗೆ ಅವಕಾಶ ನೀಡುವುದು ಸರಕಾರದ ವಿವೇಚನೆಗೆ ಬಿಟ್ಟದ್ದು ಎಂದು ಹೇಳಿತ್ತು. ಇದರಿಂದ ಮೈದಾನದಲ್ಲಿ ಗಣೇಶೋತ್ಸವ ನಡೆಸಲು ಅವಕಾಶ ನೀಡಿದಂತಾಗಿದೆ. ಇದನ್ನು ಪ್ರಶ್ನಿಸಿ ವಕ್ಫ್‌ ಬೋರ್ಡ್‌ ಸುಪ್ರೀಂಕೋರ್ಟ್‌ ಮೆಟ್ಟಿಲು ಹತ್ತಿತ್ತು.

Exit mobile version