ಬೆಂಗಳೂರು: ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನವಾಗಿರುವ ಸೂರಜ್ ರೇವಣ್ಣಗೆ ಜುಲೈ 18ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇಂದು ಸಿಐಡಿ ಕಸ್ಟಡಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಪ್ರಕರಣ ವಿಚಾರಣೆ ನಡೆಸಿದ 42ನೇ ಎಸಿಎಂಎಂ ಕೋರ್ಟ್ ನ್ಯಾಯಾಧೀಶ ಕೆ.ಎನ್. ಶಿವಕುಮಾರ್ ಅವರು ಸೂರಜ್‌ಗೆ (Suraj Revanna Case) ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಸೂಚಿಸಿದ್ದಾರೆ. ಇದರಿಂದ ಸೂರಜ್ ಪರಪ್ಪನ ಅಗ್ರಹಾರ ಜೈಲು ಪಾಲಾಗಿದ್ದಾರೆ
ಇನ್ನು ಸೂರಜ್ ರೇವಣ್ಣ ಪರ ವಕೀಲ ನಿಖಿಲ್ ಡಿ ಕಾಮತ್ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು, ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸಿಐಡಿಗೆ ನ್ಯಾಯಾಧಿಶರು ಸೂಚಿಸಿದ್ದಾರೆ. ಹೀಗಾಗಿ ನಾಳೆಗೆ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆಯಾಗಿದೆ.
ಮಗನ ಬಗ್ಗೆ ಬೇಸರ ವ್ಯಕ್ತಪಡಿಸಿದ ರೇವಣ್ಣ
ನ್ಯಾಯಾಂಗ ಬಂಧನದಲ್ಲಿರುವ ಪ್ರಜ್ವಲ್‌ನ ಮಾಜಿ ಸಚಿವ ಎಚ್.ಡಿ. ರೇವಣ್ಣ ಬುಧವಾರ ಭೇಟಿ ಮಾಡಿದ್ದಾರೆ. ಪರಪ್ಪನ ಅಗ್ರಹಾರದಲ್ಲಿರುವ ಮಗನ ಬಗ್ಗೆ ಬೇಸರ ವ್ಯಕ್ತಪಡಿಸಿರುವ ರೇವಣ್ಣ, ಭವಿಷ್ಯವನ್ನು ಹಾಳು ಮಾಡಿಕೊಂಡೆ. ನಮ್ಮ ಕುಟುಂಬಕ್ಕೂ ಕೆಟ್ಟ ಹೆಸರು ತಂದೆ. ಎಂತಹ ಮಕ್ಕಳು ಹುಟ್ಟಿದ್ದೀರಪ್ಪಾ ನನಗೆ ಎಂದು ಬೇಸರ ಹೊರಹಾಕಿದ್ದಾರೆ ಎನ್ನಲಾಗಿದೆ.
ನಮ್ಮ ಹಣೆಬರಹ ಏನೂ ಮಾಡೋದಿಕ್ಕೆ ಆಗೋದಿಲ್ಲ ಎಂದು ರೇವಣ್ಣ ಬೇಸರ ವ್ಯಕ್ತಪಡಿಸಿದಾಗ, ತಂದೆ ಮಾತಿಗೆ ಮರು ಉತ್ತರ ನೀಡಲಾಗದೆ ಪ್ರಜ್ವಲ್ ಸುಮ್ಮನಾಗಿದ್ದಾರೆ. ನಂತರ ಬಟ್ಟೆ ಮತ್ತು ಹಣ್ಣುಗಳನ್ನು ನೀಡಿ ರೇವಣ್ಣ ವಾಪಸ್ ತೆರಳಿದ್ದಾರೆ ಎಂದು ಜೈಲ್ ಮೂಲಗಳಿಂದ ತಿಳಿದುಬಂದಿದೆ.
ಬೆಂಗಳೂರಲ್ಲಿ 6 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಲೆ
ಬೆಂಗಳೂರು: ನಗರದಲ್ಲಿ ಮತ್ತೊಂದು ರೇಪ್ ಆ್ಯಂಡ್ ಮರ್ಡರ್ ಕೇಸ್ ನಡೆದಿದೆ. ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಲೆ ಮಾಡಿರುವ ಘಟನೆ (Physical Abuse) ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
ಕೂಲಿ ಕೆಲಸ ಮಾಡುವ ದಂಪತಿಯ 6 ವರ್ಷದ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪಿಗಳು, ನಂತರ ಕೊಲೆ ಮಾಡಿ ಪಾರ್ಕಿಂಗ್ ಪ್ರದೇಶದ ಮರವೊಂದರ ಬಳಿ ಶವ ಎಸೆದಿದ್ದಾರೆ. ರಾತ್ರಿ ವೇಳೆ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಪಾರ್ಕಿಂಗ್ ಲಾಟ್‌ನಲ್ಲಿದ್ದರೂ ಬಾಲಕಿ ಕೊಲೆ ವಿಚಾರ ಬೆಳಕಿಗೆ ಬಂದಿರಲಿಲ್ಲ. ಜನರು ಓಡಾಡುತ್ತಿದ್ದರೂ ಯಾರೂ ಗಮನ ಹರಿಸಿರಲಿಲ್ಲ. ಮೈ ಮೇಲೆ ಪರಚಿದ ಗಾಯಗಳು ಹಾಗು ರಕ್ತಸಿಕ್ತ ಬಟ್ಟೆಗಳಿಂದ ಬಾಲಕಿ ಶವ ಕಂಡುಬಂದಿದೆ. ಸದ್ಯ ಬಾಲಕಿ ಶವವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಇದನ್ನೂ ಓದಿ | Actor Darshan: ದರ್ಶನ್ ಕೆಟ್ಟ ವ್ಯಕ್ತಿಯಲ್ಲ, ತಪ್ಪು ಮಾಡಿಲ್ಲ ಎಂದ ಕೆ. ಮಂಜು
ಈ ಬಗ್ಗೆ ರೈಲ್ವೆ ಎಸ್ ಪಿ ಡಾ. ಸೌಮ್ಯ ಲತಾ ಅವರು ಪ್ರತಿಕ್ರಿಯಿಸಿ, ಸಂಗೊಳ್ಳಿ ರಾಯಣ್ಣ ರೈಲ್ವೆ ಸ್ಟೇಷನ್‌ನಲ್ಲಿ ಒಂದು ಹೆಣ್ಣು ಮಗವಿನ ಮೃತ ದೇಹ ಸಿಕ್ಕಿದೆ. ನಮ್ಮ ಸಿಬ್ಬಂದಿ ಬಂದು ತಿಳಿಸಿದ್ದು, ಪರಿಶೀಲನೆ ನಡೆಸಲಾಗಿದೆ. ದೇಹದ ಮೇಲೆ ಸಾಕಾಷ್ಟು ಗಾಯಗಳಾಗಿವೆ, ಸಿಸಿಟಿವಿ ದೃಶ್ಯ ಪರಿಶೀಲನೆ ನಡೆಸಲಾಗುತ್ತಿದೆ. ಕೊಲೆ ಮಾಡಿ ಎಲ್ಲಿಂದಲ್ಲೋ ತಂದು ಇಲ್ಲಿ ಎಸೆಯಲಾಗಿದೆ. ಭಿಕ್ಷಾಟನೆ ಮಾಡುತ್ತಿದ್ದ ಕುಟುಂಬದ ಮಗು ಎಂದು ತಿಳಿದು ಬಂದಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.