Site icon Vistara News

Karnataka Election: ನಾನು ಟಿವಿನೇ ಹಾಕಲ್ಲ, ಹಾಸನ ಟಿಕೆಟ್‌ ವಿವಾದದ ಬಗ್ಗೆ ಗೊತ್ತಿಲ್ಲ ಎಂದ ಸೂರಜ್‌ ರೇವಣ್ಣ

Suraj Revanna says I don't understand the meaning of ordinary worker

ಹಾಸನ: ಹಾಸನ ವಿಧಾನಸಭೆ ಟಿಕೆಟ್ ಅನ್ನು ದೊಡ್ಡವರು ತೀರ್ಮಾನ ಮಾಡುತ್ತಾರೆ, ಅದರ ಬಗ್ಗೆ ಏನೂ ಹೇಳಲು ಆಗುವುದಿಲ್ಲ. ನಾನು ಟಿವಿನೇ ಹಾಕುತ್ತಿಲ್ಲ, ಹೀಗಾಗಿ ಅದರ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ಸಾಮಾನ್ಯ ಕಾರ್ಯಕರ್ತ ಎಂದರೆ ನನಗೆ ಅದರ ಅರ್ಥವೇ ಗೊತ್ತಾಗುತ್ತಿಲ್ಲ ಎಂದು ಹಾಸನದಲ್ಲಿ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್‌ (Karnataka Election) ಎಂಬ ಎಚ್‌.ಡಿ.ಕುಮಾರಸ್ವಾಮಿ ಹೇಳಿಕೆ ಬಗ್ಗೆ ಪರೋಕ್ಷವಾಗಿ ಎಂಎಲ್‌ಸಿ ಸೂರಜ್‌ ರೇವಣ್ಣ ಅಸಮಾಧಾನ ಹೊರಹಾಕಿದ್ದಾರೆ.

ಸಾಮಾನ್ಯ ಕಾರ್ಯಕರ್ತನಿಗೆ ಹಾಸನ ಟಿಕೆಟ್‌ ಎಂಬ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಹೇಳಿಕೆಗೆ ಚನ್ನರಾಯಪಟ್ಟಣ ತಾಲೂಕಿನ ಆನೆಕೆರೆ ಗ್ರಾಮದಲ್ಲಿ ಪ್ರತಿಕ್ರಿಯಿಸಿರುವ ಅವರು, ನನಗೆ ಹಾಸನ ಟಿಕೆಟ್‌ ವಿಚಾರದ ಬಗ್ಗೆ ಮಾಹಿತಿ ಇಲ್ಲ, ನಾನು ಜಾತ್ರಾ ಮಹೋತ್ಸವದಲ್ಲಿ ಬ್ಯುಸಿಯಾಗಿದ್ದೆ. ನಮ್ಮ ಜಿಲ್ಲೆಯಲ್ಲಿ ಹೆಚ್ಚಿನ ಸೀಟುಗಳನ್ನು ಗೆಲ್ಲಿಸಿಕೊಳ್ಳುವುದೇ ನನ್ನ ಉದ್ದೇಶ ಎಂದು ಹೇಳಿದರು.

ಎಚ್‌.ಡಿ. ದೇವೇಗೌಡರನ್ನು ಮಾಜಿ ಸಚಿವ ಎಚ್.ಡಿ.ರೇವಣ್ಣ ಭೇಟಿಯಾದ ವಿಚಾರಕ್ಕೆ ಪ್ರತಿಕ್ರಿಯಿಸಿ, ಅಭಿವೃದ್ಧಿ ಮಂತ್ರವನ್ನು ಇಟ್ಟುಕೊಂಡು ಜನರ ಬಳಿ ಹೋಗಿ ಎಂದು ರೇವಣ್ಣನವರು ಹೇಳಿದ್ದಾರೆ. ಅವರು ನೀಡಿರುವ ಸೂಚನೆಯಂತೆ ನಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತೇವೆ. ದೇವೇಗೌಡರ ಭೇಟಿ ವಿಚಾರದ ಬಗ್ಗೆ ರೇವಣ್ಣನವರ ಬಳಿಯೇ ಕೇಳಬೇಕು ಎಂದು ಹೇಳಿದರು.

ಇದನ್ನೂ ಓದಿ | BJP Karnataka: ರಾಜಕೀಯದಿಂದ ಕೆ.ಎಸ್‌. ಈಶ್ವರಪ್ಪ ನಿವೃತ್ತಿ: ಜೆ.ಪಿ. ನಡ್ಡಾಗೆ ಪತ್ರ ಬರೆದ ಹಿರಿಯ ನಾಯಕ

ಹಾಸನ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿಸಿ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದೇನೆ. ನಮ್ಮ ಜವಾಬ್ದಾರಿಯನ್ನು ನಾವು ಮಾಡಿದ್ದೇವೆ, ಇನ್ನು ಜನರು ತೀರ್ಮಾನ ಮಾಡಬೇಕು ಅಷ್ಟೇ. ಅಭ್ಯರ್ಥಿಯನ್ನ ದೊಡ್ಡವರು ತೀರ್ಮಾನ ಮಾಡುತ್ತಾರೆ ಎಂದು ತಿಳಿಸಿದರು.

ಸ್ವರೂಪ್‌ ಸಾಮಾನ್ಯ ಕಾರ್ಯಕರ್ತ ಹೇಗಾಗ್ತಾನೆ? ; ಕುಮಾರಸ್ವಾಮಿಗೆ ಎಚ್‌.ಡಿ. ರೇವಣ್ಣ ತಿರುಗೇಟು

ಹಾಸನ: ಸಾಮಾನ್ಯ ಕಾರ್ಯಕರ್ತ ಎಂದರೆ ಯಾರು? ಪಕ್ಷದಿಂದ ಯಾವುದೇ ಅನುಕೂಲ ಪಡೆಯವದನು. ಸಾಮಾನ್ಯ ಕಾರ್ಯಕರ್ತ ಯಾರು ಅಂತ ದೇವೇಗೌಡರು ತೀರ್ಮಾನ ಮಾಡುತ್ತಾರೆ. ಜನವರಿಯಲ್ಲೇ ಈ ಬಗ್ಗೆ ಅವರು ತೀರ್ಮಾನ ಮಾಡಿದ್ದಾರೆ ಎಂದು ಹೇಳುವ ಮೂಲಕ ಕಾರ್ಯಕರ್ತನಿಗೆ (ಸ್ವರೂಪ್‌) ಹಾಸನ ಟಿಕೆಟ್‌ ನೀಡುವುದಾಗಿ ಹೇಳುತ್ತಿರುವ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿಗೆ ಪರೋಕ್ಷವಾಗಿ ಎಚ್‌.ಡಿ.ರೇವಣ್ಣ ತಿರುಗೇಟು ನೀಡಿದ್ದಾರೆ.

ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಆನೆಕೆರೆಯ ಆನೆಕೆರೆಯಮ್ಮ ದೇವಾಲಯದಲ್ಲಿ ಪತ್ನಿ ಭವಾನಿ, ಪುತ್ರ ಡಾ.ಸೂರಜ್ ರೇವಣ್ಣ ಜತೆಗೆ ಪೂಜೆ ಸಲ್ಲಿಸಿ ಮಾತನಾಡಿದ್ದಾರೆ. ಸಾಮಾನ್ಯ ಕಾರ್ಯಕರ್ತ ಎಂದರೆ ಪಕ್ಷದ ಫಲಾನುಭವಿ ಆಗಿರಬಾರದು. ಆದರೆ, ಮಾಜಿ ಶಾಸಕ ಎಚ್‌.ಎಸ್‌. ಪ್ರಕಾಶ್‌ ಅವರ ಪುತ್ರ ಎಚ್‌.ಪಿ. ಸ್ವರೂಪ್‌ ಅದು ಹೇಗೆ ಸಾಮಾನ್ಯ ಕಾರ್ಯಕರ್ತನಾಗುತ್ತಾನೆ ಎಂಬರ್ಥದಲ್ಲಿ ರೇವಣ್ಣ ಹೇಳಿದ್ದಾರೆ.

ಇದನ್ನೂ ಓದಿ | Karnataka Election 2023: ‌ಅವಕಾಶ ಕೊಟ್ಟರೆ ವರುಣದಲ್ಲಿ ಸಿದ್ದರಾಮಯ್ಯ ವಿರುದ್ಧ ಸ್ಪರ್ಧೆ ಮಾಡ್ತೀನಿ ಎಂದ ರಘು ಆಚಾರ್

ಎರಡು ಕಡೆ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ʻʻನಾನ್ಯಾಕೆ ಎರಡು ಕಡೆ ನಿಲ್ಲುವುದಕ್ಕೆ ಹೋಗಲಿ. ನನ್ನ ಕ್ಷೇತ್ರ ಹೊಳೆನರಸೀಪುರ, ಕಳೆದ 30 ವರ್ಷಗಳಿಂದ ಈ ಕ್ಷೇತ್ರದ ಜನ ನನ್ನು ಸಾಕಿದ್ದಾರೆ. ಈ ಜನರನ್ನು ನನ್ನ ಜೀವನದಲ್ಲಿ ಎಂದೂ ಮರೆಯುವುದಿಲ್ಲ. ನಾನಾಗಲಿ, ನನ್ನ ಕುಟುಂಬ ಆಗಲಿ ಬಿಡುವ ಪ್ರಶ್ನೆಯೇ ಇಲ್ಲ. ಹೊಳೆನರಸೀಪುರ ವಿಧಾನಸಭಾ ಕ್ಷೇತ್ರವೇ ನನ್ನ ಮೊದಲ ಪ್ರಾಮುಖ್ಯತೆʼʼ ಎಂದು ತಿಳಿಸಿದ್ದಾರೆ.

ನಾನು ಹಿಂದಿನಿಂದಲೂ ಯಾವುದೇ ಕ್ಷೇತ್ರದ ಟಿಕೆಟ್ ಕೇಳಿಲ್ಲ. ದೇವೇಗೌಡರೇ ಎಲ್ಲಾ ಕ್ಷೇತ್ರಗಳ‌ ಟಿಕೆಟ್ ನಿರ್ಧಾರ ಮಾಡುತ್ತಿದ್ದಾರೆ. ಹಿಂದೆಯೂ ಅವರ ಮಾತು ಕೇಳಿದ್ದೇನೆ, ಈಗಲೂ ಕೇಳುತ್ತೇನೆ, ಮುಂದೆಯೂ ಕೇಳುತ್ತೇನೆ. ದೇವೇಗೌಡರೇ ನಮ್ಮ ಸ್ವರ್ವೋಚ್ಚ ನಾಯಕರು ಎಂದು ಮಾಜಿ ಸಚಿವ ಎಚ್‌.ಡಿ.ರೇವಣ್ಣ ಹೇಳಿದರು.

Exit mobile version