ಮಂಗಳೂರು : ಬಿಜೆಪಿ ಯುವಮೋರ್ಚಾ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಬಳಿಕ ಜಿಲ್ಲೆಯಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿರುವಾಗಲೇ ಸುರತ್ಕಲ್‌ನಲ್ಲಿ (Surathkal Murder) ನಡೆದ ಫಾಜಿಲ್ (೨೩) ಎಂಬ ಯುವಕನ ಹತ್ಯೆ ಜಿಲ್ಲೆಯಲ್ಲಿ ಆತಂಕ ಸೃಷ್ಟಿಸಿದೆ.
ಹಂತಕರ ಬಗ್ಗೆ ಸಾಕಷ್ಟು ಮಾಹಿತಿ ಸಂಗ್ರಹಿಸಿರುವ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಈ ನಡುವೆ ಇದು ಕೋಮು ದ್ವೇಷದಿಂದ ನಡೆದ ಹತ್ಯೆಯಲ್ಲ. ಬದಲಾಗಿ ಫಾಜಿಲ್‌ನ ದೂರದ ಸಂಬಂಧಿಗಳೇ ನಡೆಸಿದ ಕೃತ್ಯವಾಗಿದೆ ಎಂಬ ಮಾಹಿತಿ ಹರಿದಾಡುತ್ತಿದೆ. ಹಳೆಯ ದ್ವೇಷ ಹಾಗೂ ಯುವತಿಯೋರ್ವಳ ಜತೆಗಿನ ಪ್ರೀತಿ ಈ ಹತ್ಯೆಗೆ ಕಾರಣ. ಇತ್ತೀಚೆಗೆ ಫಾಜಿಲ್ ಸಂಬಂಧಿಗಳೊಂದಿಗೆ ಜಗಳ ಕೂಡ ಆಡಿದ್ದ ಎನ್ನಲಾಗಿದೆ. ಆದರೆ ಪೊಲೀಸರು ಈ ಮಾಹಿತಿಯನ್ನು ಖಚಿತ ಪಡಿಸಿಲ್ಲ.
ಈ ನಡುವೆ, “ಇಬ್ಬರಿಗೆ ಹೊಡೆದೆವು ಬಿಡಲಿಲ್ಲ ಕೆಲವರು ಓಡಿದರು” ಎಂದು ತುಳು ಭಾಷೆಯಲ್ಲಿರೋ ಆಡಿಯೋ ವೈರಲ್ ಆಗಿದ್ದು, ಇದು ಪ್ರತಿಕಾರಕ್ಕಾಗಿ ನಡೆದ ಹತ್ಯೆ ಎಂಬ ವದಂತಿ ಹರಡಲು ಕಾರಣವಾಗಿದೆ. ಯುವಕನೋರ್ವ “ಇಂದು ರಾತ್ರಿಯ ಒಳಗೆ ಒಂದು ಅಥವಾ ಎರಡು ತೆಗೆಯಿರಿ, ಎಲ್ಲಾದರೂ ಆಗಬಹುದುʼʼ ಎಂದು ಸ್ಟೇಟಸ್ ಹಾಕಿಕೊಂಡಿರುವುದನ್ನು ಕೂಡ ಪೊಲೀಸರು ತನಿಖೆ ನಡೆಸುವ ಸಂದರ್ಭದಲ್ಲಿ ಗಮನಕ್ಕೆ ತೆಗೆದುಕೊಂಡಿದ್ದಾರೆ.
ಘಟನೆ ನಡೆದ ಸ್ಥಳಕ್ಕೆ ಪೊಲೀಸ್ ಆಯುಕ್ತ ಶಶಿಕುಮಾರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೊಲೆ ಸಂಬಂಧ ಯಾವ ವದಂತಿಗಳಿಗೂ ಕಿವಿಯಾಗಬೇಡಿ, ಇನ್ನೂ ಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಆದರೆ ಫಾಜಿಲ್ ಹತ್ಯೆ ಮಾಡಿದ ಆರೋಪಿಗಳನ್ನು ಆದಷ್ಟು ಬೇಗ ಬಂಧಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಸಕಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಕಾವೂರು, ಪಣಂಬೂರು, ಸುರತ್ಕಲ್ ಈ ಮೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೆಕ್ಷನ್ 144 ಜಾರಿ ಮಾಡಿದ್ದಾರೆ.
ಮಂಗಳೂರಿನ ಹೊರವಲಯದ ಸುರತ್ಕಲ್‌ನ ಮಂಗಳಪಾದೆ ನಿವಾಸಿಯಾದ ಫಾಜಿಲ್‌ನನ್ನು ಮಾರಕಾಸ್ತ್ರಗಳಿಂದ ಗುರುವಾರ ರಾತ್ರಿ ೮ ಗಂಟೆಯ ವೇಳೆಗೆ ಕೊಚ್ಚಿ ಕೊಲೆ ಮಾಡಲಾಗಿತ್ತು. ಬಟ್ಟೆ ಅಂಗಡಿಯನ್ನು ಬಂದ್ ಮಾಡುವ ವೇಳೆ ಆಗಮಿಸಿದ ದುಷ್ಕರ್ಮಿಗಳು ಹಲ್ಲೆ ಮಾಡಿ ಪರಾರಿಯಾಗಿದ್ದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಫಾಜಿಲ್‌ನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು.