Site icon Vistara News

Surathkal toll | ಸುರತ್ಕಲ್‌ ಟೋಲ್‌ ಪ್ಲಾಜಾ ರದ್ದು: ನಳಿನ್‌ ಟ್ವೀಟ್‌, ಬಹುದಿನಗಳ ಹೋರಾಟಕ್ಕೆ ಕೊನೆಗೂ ಜಯ

Surathkal Toll

ಮಂಗಳೂರು: ಭಾರಿ ವಿವಾದ, ಪ್ರತಿಭಟನೆಗಳಿಗೆ ಕಾರಣವಾಗಿದ್ದು ಮಂಗಳೂರಿನ ಸುರತ್ಕಲ್‌ ಎನ್‌ಐಟಿಕೆ ಟೋಲ್‌ ಪ್ಲಾಜಾವನ್ನು ಕೊನೆಗೂ ರದ್ದುಪಡಿಸಲಾಗಿದೆ. ಮಂಗಳೂರು ಸಂಸದ ನಳಿನ್‌ ಕುಮಾರ್‌ ಕಟೀಲ್‌ ಅವರು ಈ ಸಂಬಂಧ ಟ್ವೀಟ್‌ ಮಾಡಿದ್ದಾರೆ. ಇದರೊಂದಿಗೆ ಕಳೆದ ಒಂದು ತಿಂಗಳಿನಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದ ಪ್ರತಿಭಟನಾಕಾರರಿಗೂ ಜಯ ಸಿಕ್ಕಂತಾಗಿದೆ.

ಮಂಗಳೂರಿನ ಸುರತ್ಕಲ್ ಸಮೀಪದ ಟೋಲ್ ಸಂಗ್ರಹ ಕೇಂದ್ರ ರದ್ದಾಗಿದ್ದು, ನಮ್ಮ ಮನವಿಗೆ ಸೂಕ್ತವಾಗಿ ಸ್ಪಂದಿಸಿದ ಕೇಂದ್ರ ಸಚಿವರಾದ ನಿತಿನ್‌ ಗಡ್ಕರಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾಗರಿಕರ ಪರವಾಗಿ ಧನ್ಯವಾದಗಳು. ಟೋಲ್ ರದ್ದು ಮಾಡುವ ಭರವಸೆಯನ್ನು ಈ ಮೊದಲೇ ಕೇಂದ್ರ ಸಚಿವರು ನೀಡಿದ್ದು, ಈಗ ತಾಂತ್ರಿಕ ಅಂಶ ಪೂರೈಸಲಾಗಿದೆ ಎಂದು ನಳಿನ್‌ ಅವರು ಟ್ವೀಟ್‌ ಮಾಡಿದ್ದಾರೆ.

ನಿಯಮ ಮೀರಿದ ಟೋಲ್‌
2015ರಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಆರಂಭಗೊಂಡಿದ್ದ ಟೋಲ್ ಗೇಟ್ ಇದಾಗಿದ್ದು, ನಿಯಮಬಾಹಿರವಾಗಿದೆ ಎನ್ನುವ ಆಕ್ಷೇಪ ಆರಂಭದಲ್ಲೂ ಇತ್ತು. ಹೆದ್ದಾರಿಯಲ್ಲಿ ಎರಡು ಟೋಲ್‌ಗಳ ಅಂತರ ಕನಿಷ್ಠ ೬೦ ಕಿ.ಮೀ. ಇರಬೇಕು ಎನ್ನುವುದು ಹೆದ್ದಾರಿ ಪ್ರಾಧಿಕಾರದ ನಿಯಮ. ಆದರೆ, ಸುರತ್ಕಲ್‌ ಟೋಲ್‌ನಿಂದ ಹೆಜಮಾಡಿ ಟೋಲ್‌ ಪ್ಲಾಜಾಕ್ಕೆ ಇರುವ ಅಂತರ ಕೇವಲ ೧೭ ಕಿ.ಮೀ. ಮಾತ್ರ. ಹಲವು ವರ್ಷಗಳಿಂದ ಈ ರೀತಿಯ ಅಕ್ರಮ ಟೋಲ್‌ ಸಂಗ್ರಹ ನಡೆಯುತ್ತಲೇ ಇತ್ತು. ಕೆಲವು ವರ್ಷಗಳ ಹಿಂದೆ ತೀವ್ರ ಪ್ರತಿಭಟನೆ ಎದುರಾದ ಸಂದರ್ಭದಲ್ಲಿ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರು ಅದನ್ನು ರದ್ದು ಮಾಡುವ ಭರವಸೆ ನೀಡಿದ್ದರು. ಆದರೆ, ವರ್ಷ ಕಳೆದರೂ ಭರವಸೆ ಈಡೇರಿರಲಿಲ್ಲ.

ಇದರಿಂದ ಸಿಟ್ಟಿಗೆದ್ದ ನಾಗರಿಕರು ತಿಂಗಳ ಹಿಂದೆ ಮತ್ತೊಂದು ದೊಡ್ಡ ಮಟ್ಟದ ಹೋರಾಟ ಶುರು ಮಾಡಿದ್ದರು. ಕಾಂಗ್ರೆಸ್, ಡಿವೈಎಫ್ಐ, ಸಿಪಿಐಎಂ ಸೇರಿ ಹತ್ತಾರು ಸಮಾನ ಮನಸ್ಕ ಸಂಘಟನೆಗಳ ಸಮಿತಿ ಕಳೆದ ಹಲವು ವಾರಗಳಿಂದ ತೀವ್ರ ಹೋರಾಟ ನಡೆಸುತ್ತಿದೆ. ಕಳೆದ ಅಕ್ಟೋಬರ್‌ ೨೮ರಿಂದ ಹಗಲೂ ರಾತ್ರಿ ಪ್ರತಿಭಟನೆ ನಡೆಯುತ್ತಿದೆ. ಟೋಲ್‌ ರದ್ದಾಗದೆ ಕದಲುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದರು. ಈಗ ಪ್ರತಿಭಟನಾಕಾರರಿಗೆ ಈ ಆದೇಶ ನಿರಾಳತೆ ತಂದಿದೆ. ಜತೆಗೆ ಜನರೂ ನಿರಾಳರಾಗಬಹುದಾಗಿದೆ.

Exit mobile version