ಬೆಂಗಳೂರು: ರಾಜಧಾನಿಯ ಗೋಕುಲ ನಗರದ ನಿವಾಸಿ ಸಿದ್ಧರಾಜು ಅವರಿಗೆ 57 ವರ್ಷ, ಅವರ ಪತ್ನಿಗೆ 46 ವರ್ಷ. ಕಳೆದ ವರ್ಷ 23ರ ಹರೆಯದ ಒಬ್ಬನೇ ಮಗ ಅಪಘಾತದಲ್ಲಿ ತೀರಿಕೊಂಡ. ತಮ್ಮ ಬದುಕಿಗೆ ಆಸರೆಯಾಗಿ ಯಾರೂ ಇಲ್ಲ ಎನ್ನುವ ಸಂಕಟ ಮತ್ತು ಖಿನ್ನತೆಯಿಂದ ಬಳಲುತ್ತಿದ್ದ ಅವರಿಗೆ ಮಕ್ಕಳನ್ನು ದತ್ತು ಪಡೆಯಲು ಕಾನೂನು ತೊಡಕು ಎದುರಾಗಿದೆ. ಹಾಗಿದ್ದರೆ ಬಾಡಿಗೆ ತಾಯಿ (surrogacay) ಮೂಲಕ ಒಂದು ಮಗು ಪಡೆಯಬಹುದಲ್ವಾ ಎಂದು ಯೋಚಿಸಿದರು. ಅದಕ್ಕೂ ಹಲವು ಕಾನೂನು ತೊಡಕುಗಳು. ಈ ತೊಡಕುಗಳನ್ನು ಪ್ರಶ್ನಿಸಿ ಅವರು ಹೈಕೋರ್ಟ್ ಮೆಟ್ಟಿಲು ಹತ್ತಿದ್ದಾರೆ. ಈಗ ಹೈಕೋರ್ಟ್ ಅವರಿಗೆ ಮೂರು ಷರತ್ತುಗಳನ್ನು ವಿಧಿಸಿದೆ.
ಸಿದ್ದರಾಜು ದಂಪತಿಯೇನೋ ಬಾಡಿಗೆ ತಾಯಿ ಮೂಲಕ ಮಗುವನ್ನು ಪಡೆಯಲು ಸಿದ್ಧರಾದರು. ಆದರೆ ಅದಕ್ಕೆ ಸಾಕಷ್ಟು ಕಾನೂನು ಮತ್ತು ದೈಹಿಕ ತೊಂದರೆಗಳು ಎದುರಾಗಿವೆ. ದಂಪತಿಯಲ್ಲಿ ಮಹಿಳೆಯ ಗರ್ಭಕೋಶವನ್ನು ತೆಗೆಯಲಾಗಿದ್ದು, ಆಕೆ ಅಂಡಾಣು ಉತ್ಪಾದಿಸುವ ಶಕ್ತಿ ಹೊಂದಿಲ್ಲ. ಸಿದ್ದರಾಜು ಅವರ ಅತ್ತಿಗೆಯೊಬ್ಬರು ಅಂಡಾಣು ನೀಡಲು ಒಪ್ಪಿದ್ದು, ಕುಟುಂಬದ ಸ್ನೇಹಿತೆಯೊಬ್ಬರು ಬಾಡಿಗೆ ತಾಯಿ ಆಗಲು ಸಮ್ಮತಿಸಿದ್ದರು. ಆದರೆ, ಸಿದ್ದರಾಜು ಅವರ ವಯಸ್ಸು, ಬಾಡಿಗೆ ತಾಯಿ ಆಗಲು ಒಪ್ಪಿದವರು ಆನುವಂಶಿಕ ಸಂಬಂಧಿಯಲ್ಲ ಎನ್ನುವ ಅಂಶಗಳು ಈಗ ಅವರ ಕನಸಿಗೆ ತಡೆಯಾಗಿವೆ.
ಬಾಡಿಗೆ ತಾಯ್ತನ (ನಿಯಂತ್ರಣ) ಕಾಯಿದೆಯ ಪ್ರಕಾರ 55 ವರ್ಷವರೆಗಿನ ಪುರುಷರು ವೀರ್ಯ ನೀಡಬಹುದು ಅಥವಾ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು. ಅಂತೆಯೇ ಆನುವಂಶಿಕ ಸಂಬಂಧ ಹೊಂದಿರುವ ಮಹಿಳೆ ಬಾಡಿಗೆ ತಾಯಿಯಾಗಬಹುದು ಎಂದು ಹೇಳಲಾಗಿದೆ.
ಈ ಎರಡೂ ನಿಬಂಧನೆಗಳನ್ನು ಪ್ರಶ್ನಿಸಿ ಸಿದ್ದರಾಜು ಹೈಕೋರ್ಟ್ ಮೊರೆ ಹೊಕ್ಕಿದ್ದರು. ಈಗ ಅವರಿಗೆ ಹೈಕೋರ್ಟ್ ಮೂರು ಷರತ್ತುಗಳನ್ನು ಹಾಕಿದೆ. ಬಾಡಿಗೆ ತಾಯ್ತನ (ನಿಯಂತ್ರಣ) ಕಾಯಿದೆ 2021ರ ಅಡಿ ನಿರ್ಬಂಧಕ್ಕೊಳಗಾಗಿರುವ ಮಕ್ಕಳಿಲ್ಲದ ದಂಪತಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಆನುವಂಶಿಕ (ಜೆನೆಟಿಕ್), ದೈಹಿಕ ಮತ್ತು ಆರ್ಥಿಕ ಪರೀಕ್ಷೆ ಎಂಬ ಮೂರು ಹಂತದ ಪರೀಕ್ಷೆಗೆ ಕರ್ನಾಟಕ ಹೈಕೋರ್ಟ್ ಸೂಚಿಸಿದೆ. ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಈ ಮೂಲಕ ಸಿದ್ದರಾಜು ಅವರ ಅರ್ಜಿಯನ್ನು ಭಾಗಶಃ ಮಾನ್ಯ ಮಾಡಿದಂತಾಗಿದೆ.
ಹಾಗಿದ್ದರೆ ಆ ಮೂರು ಷರತ್ತುಗಳು ಯಾವುವು?
ಆನುವಂಶಿಕ ಪರೀಕ್ಷೆ, ವೀರ್ಯದಲ್ಲಿ ಶಕ್ತಿ ಇದೆಯಾ?
ಭ್ರೂಣಕ್ಕೆ ಆರೋಗ್ಯಕರವಾದ ವೀರ್ಯ ಮತ್ತು ಅಂಡಾಣು ಬೇಕು. ವೀರ್ಯದ ಬಲ ಪರೀಕ್ಷೆ ಮಾಡುವುದು ಅತ್ಯಗತ್ಯ. ಏಕೆಂದರೆ, ಹೊಸ ಸೃಷ್ಟಿಗೆ ಅಗತ್ಯವಾದ ಆನುವಂಶಿಕ ಮಾಹಿತಿಯನ್ನು ಅದು ಒಳಗೊಂಡಿರುತ್ತದೆ. 35ರಿಂದ 40 ವರ್ಷವಾದ ಪುರುಷರಲ್ಲಿ ವೀರ್ಯದ ಆರೋಗ್ಯ ಕುಗ್ಗುತ್ತದೆ ಎಂದು ವೈದ್ಯಕೀಯವಾಗಿ ಕಂಡುಕೊಳ್ಳಲಾಗಿದೆ. ಅರ್ಜಿದಾರರಿಗೆ ಈಗ 57 ವರ್ಷ ವಯಸ್ಸಾಗಿದ್ದು, ವೀರ್ಯದ ಆರೋಗ್ಯ ತಿಳಿದುಕೊಳ್ಳಲು ಅವರು ಆನುವಂಶಿಕ ಪರೀಕ್ಷೆಗೆ ಒಳಗಾಗುವುದು ಅಗತ್ಯ.
ದಂಪತಿಗೆ ಮಗು ಬೆಳೆಸುವ ಸಾಮರ್ಥ್ಯ ಇದೆಯಾ?
ಮಗು ಪಡೆಯಲು ಬಯಸಿರುವ ದಂಪತಿಯು ಮಗುವಿನ ಕಾಳಜಿ ಮಾಡುವ ಮಟ್ಟಕ್ಕೆ ಇರಬೇಕೆ ವಿನಾ ಅವರನ್ನು ತ್ಯಜಿಸುವ ರೀತಿಯಲ್ಲಿರಬಾರದು. “ಮಗುವನ್ನು ಬೆಳೆಸುವ ದೈಹಿಕ ಶಕ್ತಿಯನ್ನು ದಂಪತಿ ಹೊಂದಿರಬೇಕು. ಎಂದರೆ ಮಗುವನ್ನು ಎಲ್ಲಾ ಕಡೆ ಒಯ್ಯಬೇಕು ಎಂದಲ್ಲ. ಅವರ ಕಾಳಜಿ ಮಾಡುವುದಕ್ಕೆ ಸಂಬಂಧಿಸಿದ್ದು.
ದಂಪತಿ ಆರ್ಥಿಕವಾಗಿ ಸಬಲರಾಗಿದ್ದಾರಾ?
ಬಾಡಿಗೆ ತಾಯ್ತನದ ಮೂಲಕ ಮಗು ಪಡೆಯಲಿಚ್ಛಿಸುವ ದಂಪತಿಯು ಆರ್ಥಿಕವಾಗಿ ಸಬಲರಾಗಿರಬೇಕು. ಮಗು ಬಡತನ ಎದುರಿಸುವಂತಾಗಬಾರದು. ಬಾಡಿಗೆ ತಾಯ್ತನದ ಮೂಲಕ ಮಗು ಪಡೆಯಲು ಇಚ್ಛಿಸುವ ದಂಪತಿಯು ಸಕ್ಷಮ ಪ್ರಾಧಿಕಾರದ ಮುಂದೆ ತಾವು ಏನೆಲ್ಲಾ ಆಸ್ತಿ ಹೊಂದಿದ್ದೇವೆ ಎಂಬುದರ ಅಫಿಡವಿಟ್ ಸಲ್ಲಿಸಬೇಕು. ಇದು ದಂಪತಿಯ ಆರ್ಥಿಕ ಸಾಮರ್ಥ್ಯ ನಿರ್ಧರಿಸಲು ಪ್ರಾಧಿಕಾರಕ್ಕೆ ಅನುಕೂಲವಾಗಲಿದೆ. ಮಗು ಪಡೆಯಲು ಇಚ್ಛಿಸುವ ದಂಪತಿಯು ಮಗುವಿನ ಭವಿಷ್ಯದಲ್ಲಿ ಹೂಡಿಕೆ ಮಾಡುವ ಮೂಲಕ ಅದನ್ನು ರಕ್ಷಿಸುವ ಅಗತ್ಯವಿದ್ದು, ಈ ಪ್ರಕ್ರಿಯೆ ಮತ್ತು ಆರ್ಥಿಕ ಪರೀಕ್ಷೆ ಕೇಳುವ ಸೂಕ್ಷ್ಮಾತಿಸೂಕ್ಷ್ಮ ವಿಚಾರವನ್ನು ಸಕ್ಷಮ ಪ್ರಾಧಿಕಾರ ನಿರ್ಧರಿಸಲು ಬಿಡುವುದು ಸೂಕ್ತವಾಗಿದೆ. ಆದರೆ, ಅಂಥ ಆರ್ಥಿಕ ಪರೀಕ್ಷೆ ಅತ್ಯಗತ್ಯ.
ಮೂರು ಷರತ್ತು ಪಾಲಿಸಿದರೆ ಅನುಮತಿ ಸಿಗುತ್ತದಾ?
ಹಾಗಿದ್ದರೂ, ದಂಪತಿ ಈ ಮೂರೂ ಷರತ್ತುಗಳನ್ನು ಪಾಲಿಸಿದರೂ ಬಾಡಿಗೆ ತಾಯ್ತನದ ಮೂಲಕ ಮಗು ಪಡೆಯಲು ಅರ್ಹತೆ ಸಿಕ್ಕಿಯೇ ಬಿಡುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಕಾನೂನಿನಲ್ಲೇ ಬದಲಾವಣೆ ಆಗಬೇಕಾಗುತ್ತದೆ.
ಬಾಡಿಗೆ ತಾಯ್ತನಕ್ಕೆ ಸಂಬಂಧಿಸಿ ಇನ್ನೂ ಹಲವು ವಿಚಾರಗಳು ಸುಪ್ರೀಂಕೋರ್ಟ್ ಪರಿಗಣನೆಯಲ್ಲಿವೆ. ಅವುಗಳನ್ನು ಪರಿಹರಿಸಬೇಕು ಎಂದರೆ ಶಾಸನದಲ್ಲಿರುವ ಕೆಲವು ಸಿಕ್ಕುಗಳನ್ನು ಸರಿಪಡಿಸಬೇಕಾಗಿದೆ ಎನ್ನುವುದು ಕೋರ್ಟ್ ಅಭಿಮತ.
ಯಾವುದೇ ವಿಶೇಷ ಪರಿಸ್ಥಿತಿಯನ್ನು ಪರಿಹರಿಸಿ, ಬಾಡಿಗೆ ತಾಯ್ತನದ ಮೂಲಕ ಮಗು ಪಡೆಯುವ ದಂಪತಿಗೆ ಅರ್ಹತಾ ಸರ್ಟಿಫಿಕೇಟ್ ಅನ್ನು ರಾಷ್ಟ್ರೀಯ ಅಥವಾ ರಾಜ್ಯ ಮಂಡಳಿ ಅಥವಾ ಸಕ್ಷಮ ಪ್ರಾಧಿಕಾರ ನೀಡಲಾಗದು. ಕಾನೂನನ್ನು ಸರಿಪಡಿಸಬೇಕೆ ಎಂಬುದನ್ನು ಶಾಸನಸಭೆ ವಿಚಾರ ಮಾಡಬೇಕು ಎಂದು ನ್ಯಾಯಾಲಯ ಹೇಳಿದೆ.
ಬಾಡಿಗೆ ತಾಯಿಯು ಮಗು ಪಡೆಯುವ ದಂಪತಿಗೆ ಆನುವಂಶಿಕ ಸಂಬಂಧಿಯಾಗಿರಬೇಕು ಎಂಬುದು ತರ್ಕ ಮತ್ತು ಪರಹಿತಚಿಂತಕ ಬಾಡಿಗೆ ತಾಯ್ತನದ ಉದ್ದೇಶವನ್ನೇ ಸೋಲಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ. ಪರಹಿತಚಿಂತಕ ಬಾಡಿಗೆ ತಾಯ್ತನ ಪ್ರಕ್ರಿಯೆಯಲ್ಲಿ ಬಾಡಿಗೆ ತಾಯಿಗೆ ಗರ್ಭಿಣಿಯಾದ ಸಂದರ್ಭದಲ್ಲಿ ವೈದ್ಯಕೀಯ ವೆಚ್ಚ ಮತ್ತು ಆರೋಗ್ಯ ವಿಮೆ ಮಾತ್ರ ನೀಡಲಾಗುತ್ತದೆಯೇ ವಿನಾ ಹಣ ಅಥವಾ ಮತ್ತಾವುದೇ ನೆರವು ನೀಡಲಾಗುವುದಿಲ್ಲ.
ಹಾಲಿ ಪ್ರಕರಣದಲ್ಲಿ ಉಲ್ಲೇಖಿಸಿರುವ ಮೂರು ಪರೀಕ್ಷೆಗಳಲ್ಲಿ ದಂಪತಿ ಉತ್ತೀರ್ಣರಾದರೆ ಅವರ ಅರ್ಜಿಯನ್ನು ಮತ್ತೊಮ್ಮೆ ಸಕ್ಷಮ ಪ್ರಾಧಿಕಾರ ಪರಿಗಣಿಸಬೇಕು ಎಂದು ನ್ಯಾಯಾಲಯ ಹೇಳಿದೆ. ಮುಂದೇನಾಗುತ್ತದೆ ಕಾದು ನೋಡಬೇಕು.
ಇದನ್ನೂ ಓದಿ : Cow Surrogacy: ಗೋವುಗಳಿಗೂ ಬಂತು ಬಾಡಿಗೆ ತಾಯ್ತನ, ಇದರಿಂದ ಹಾಲಿನ ಉತ್ಪಾದನೆಯೂ ದ್ವಿಗುಣ