ಉಡುಪಿ: ಕಾಂಗ್ರೆಸ್ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿಕೆಯಿಂದ ದೇಶ ಮತ್ತು ಜನರ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸತೀಶ್ ಅವರು ಇಂಥ ʻಕೀಳುʼ ಹೇಳಿಕೆ ನೀಡಿದ್ದರೂ ಇನ್ನೂ ರಾಹುಲ್ ಗಾಂಧಿ ಅವರು ಮತ್ತು ಸಿದ್ದರಾಮಯ್ಯ ಯಾಕೆ ಮೌನವಾಗಿದ್ದಾರೆ, ಸತೀಶ್ ಜಾರಕಿಹೊಳಿ ಅವರ ಮಾತಿಗೆ ಇವರದ್ದು ಮೌನ ಸಮ್ಮತಿಯೇ? ಎಂದು ಪ್ರಶ್ನಿಸಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಬೊಮ್ಮಾಯಿ ಅವರು, ಸತೀಶ್ ಜಾರಕಿಹೊಳಿ ಅವರು ಅರೆಬರೆ ಓದಿದ ವ್ಯಕ್ತಿ. ಯಾವುದೇ ಆಳವಾದ ಜ್ಞಾನವಿಲ್ಲದೆ ಮಾತನಾಡಿದ್ದಾರೆ. ಇಂಥ ಹೇಳಿಕೆಗಳಿಂದ ಅಲ್ಪಸಂಖ್ಯಾತರ ಮತ ಬರುತ್ತದೆ ಎಂಬ ಭ್ರಮೆಯಲ್ಲಿದ್ದಾರೆ ಎಂದು ಹೇಳಿದರು.
ʻʻಸತೀಶ್ ಜಾರಕಿಹೊಳಿ ಹೇಳಿಕೆಯಿಂದ ಭಾರತದ ಭಾವನೆಗೆ ಧಕ್ಕೆಯಾಗಿದೆ. ಕ್ಷೋಭೆಗೆ ಕಾರಣವಾಗುವ ಹೇಳಿಕೆ ಎಂಬೂದು ದೇಶದ್ರೋಹದ ಕೆಲಸ. ಈ ಬಗ್ಗೆ ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ಮೌನ ಯಾಕೆ? ನಿಮ್ಮ ಮೌನ ಸತೀಶ್ ಮಾತಿಗೆ ಸಮ್ಮತಿನಾ?ʼʼ ಎಂದು ಬೊಮ್ಮಾಯಿ ಹೇಳಿದರು.
ʻʻಸತೀಶ್ ಜಾರಕಿಹೊಳಿ ಅವರು ತಮ್ಮ ಹೇಳಿಕೆಯನ್ನು ಇನ್ನೂ ಸಮರ್ಥನೆ ಮಾಡುತ್ತಾರೆ. ಹುಳಿ ಹಿಂಡುವ ಕೆಲಸ ಮಾಡುತ್ತಾರೆ. ಹಿಂದೂ ಭಾವನೆಗಳಿಗೆ ಘಾಸಿಯಾಗುವ ಹೇಳಿಕೆಯನ್ನು ರಾಜ್ಯದ ಜನರು ಒಕ್ಕೊರಲಿನಿಂದ ವಿರೋಧಿಸಬೇಕುʼʼ ಎಂದು ಬೊಮ್ಮಾಯಿ ತಿಳಿಸಿದರು.
ʻʻಇದೊಂದು ಪೂರ್ವಗ್ರಹಪೀಡಿತ ಹೇಳಿಕೆ ಮತ್ತು ಯೋಜನಾಬದ್ಧವಾದ ಹೇಳಿಕೆ. ಇಂಥ ಹೇಳಿಕೆಗಳಿಂದ ದೇಶದಲ್ಲಿ ಕಾಂಗ್ರೆಸ್‌ಗೆ ಉಳಿದಿರುವ ಅಲ್ಪ ಸ್ಪಲ್ಪ ಮಾನವೂ ಹೋಗಲಿದೆ. ರಾಜ್ಯದಲ್ಲೂ ಜನರು ಮೂಲೆಯ ಸ್ಥಾನ ತೋರಿಸುತ್ತಾರೆʼʼ ಎಂದು ಬೊಮ್ಮಾಯಿ ವಿವರಿಸಿದರು.
ಏನಿದು ವಿವಾದ?
ಪರ್ಶಿಯನ್ ಭಾಷೆಯಲ್ಲಿ ಹಿಂದು ಪದದ ಅರ್ಥ ತುಂಬ ಕೀಳಾಗಿದೆ ಎಂದು ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿ ಅವರು ಕಾರ್ಯಕ್ರಮವೊಂದರಲ್ಲಿ ಹೇಳಿದ್ದು ಭಾರಿ ವಿವಾದಕ್ಕೆ ಕಾರಣವಾಗಿದೆ. ಸ್ವತಃ ಕಾಂಗ್ರೆಸ್ ಪಕ್ಷದ ನಾಯಕರೇ ಈ ಹೇಳಿಕೆಯನ್ನು ಆಕ್ಷೇಪಿಸಿದ್ದಾರೆ. ಇದರ ವಿರುದ್ಧ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಅವರು ʻನಾನು ಸ್ವಾಭಿಮಾನಿ ಹಿಂದುʼ ಅಭಿಯಾನ ಆರಂಭಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೂ ಗರಂ ಆಗಿದ್ದಾರೆ.
ಇದನ್ನೂ ಓದಿ |swabhimani hindu | ಸತೀಶ್ ಜಾರಕಿಹೊಳಿ ʻಕೀಳುʼ ಹೇಳಿಕೆ ವಿರುದ್ಧ ಬಿಜೆಪಿಯಿಂದ ನಾನು ಸ್ವಾಭಿಮಾನಿ ಹಿಂದು ಅಭಿಯಾನ