Site icon Vistara News

CM Siddaramaiah : ಸ್ವಾಭಿಮಾನಿ ಕನ್ನಡಿಗರ ಪ್ರಶ್ನೆ ಅಭಿಯಾನ; ಕೇಂದ್ರ‌ – ಮೋದಿ ವಿರುದ್ಧ ಸಿಎಂ ವಾರ್!

PM Narendra Modi and CM Siddaramaiah

Narendra Modi Jibe On Karnataka Chief Minister's Tenure; Heavy Discussion Over The Claim

ಬೆಂಗಳೂರು: ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಸಿದ್ದರಾಮಯ್ಯ ಸೋಷಿಯಲ್ ಮೀಡಿಯಾ ಮೂಲಕ ವಾರ್ ಶುರು ಮಾಡಿದ್ದಾರೆ. ಸ್ವಾಭಿಮಾನಿ ಕನ್ನಡಿಗರ ಪ್ರಶ್ನೆ ಹೆಸರಲ್ಲಿ ಅಭಿಯಾನವನ್ನು ಶುರು ಮಾಡಿದ್ದು, ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ ಎಂದು ಕಟುವಾಗಿ ಟೀಕಿಸಿದ್ದಾರೆ. ಅಲ್ಲದೆ, ತಮ್ಮ ಪ್ರಶ್ನೆಗಳಿಗೆ ಉತ್ತರಿಸಿ (AnswerMadiModi) ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರನ್ನು ಪ್ರಶ್ನೆ ಮಾಡಿದ್ದಾರೆ. ಬರ ಅನುದಾನ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡ ಬಳಕೆಗೆ ಅವಕಾಶ ನೀಡದಿರುವುದು, ಹಿಂದಿ ಹೇರಿಕೆ, ಜಲ ಯೋಜನೆಗಳಿಗೆ ಅಸಹಕಾರ ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ಸಿದ್ದರಾಮಯ್ಯ (CM Siddaramaiah) ಪ್ರಶ್ನೆ ಮಾಡಿದ್ದಾರೆ.

ರಾಜ್ಯಕ್ಕೆ ಕೇಂದ್ರದಿಂದ ಬರಬೇಕಾದ ಅನುದಾನದಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಕನ್ನಡಿಗರು ಕಟ್ಟಿದ ಬ್ಯಾಂಕುಗಳನ್ನು ನಷ್ಟದಲ್ಲಿದ್ದ ಬ್ಯಾಂಕುಗಳ ಜತೆ ವಿಲೀನ ಮಾಡಿದ್ದಾರೆ. ಸ್ವಾಭಿಮಾನಿ ಕನ್ನಡಿಗರನ್ನು ನಿರ್ಲಕ್ಷಿಸಿ ಅವಮಾನಿಸಲಾಗಿದೆ. ಸ್ವಾಭಿಮಾನಿ ಕನ್ನಡಿಗರ ಈ ಅಭಿಯಾನಕ್ಕೆ ರಾಜ್ಯದ ಜನರು ಕೈಜೋಡಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

ಇದನ್ನೂ ಓದಿ: Tiger Nail : ಹುಲಿ ಉಗುರು ಧರಿಸಿದ ಅರಣ್ಯಾಧಿಕಾರಿಗಳ ಸಸ್ಪೆಂಡ್; ಸಚಿವ ಈಶ್ವರ್‌ ಖಂಡ್ರೆ ಸೂಚನೆ

ಬರ ಬಂದರೂ ಅನುದಾನ ಇಲ್ಲ

ರಾಜ್ಯದ 216 ತಾಲೂಕುಗಳು ಭೀಕರ ಬರದಿಂದ ಕಂಗೆಟ್ಟಿವೆ. ಈ ವರೆಗೆ ಕೇಂದ್ರದಿಂದ ನಯಾಪೈಸೆ ಪರಿಹಾರದ ಹಣ ಬಿಡುಗಡೆಯಾಗಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರೇ, ಜಗತ್ತಿನ ಕಷ್ಟ – ದುಃಖಕ್ಕೆಲ್ಲ ಮಿಡಿಯುವ ನಿಮ್ಮ ‘ವಿಶಾಲ ಹೃದಯ’ ಕನ್ನಡಿಗರ ಬಗ್ಗೆ ಇಷ್ಟೊಂದು ಕಟುವಾಗಿರುವುದು ಯಾಕೆ? ನಿಮ್ಮ ನೇತೃತ್ವದ ಬಿಜೆಪಿ ಸರ್ಕಾರ ಕರ್ನಾಟಕದ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆಯೇ? ಇದು ನನ್ನ ಪ್ರಶ್ನೆ ಮಾತ್ರವಲ್ಲ, ನಾಡಿನ ಆರೂವರೆ ಕೋಟಿ #ಸ್ವಾಭಿಮಾನಿ_ಕನ್ನಡಿಗರ ಪ್ರಶ್ನೆ ಎಂದು ಸಿಎಂ ಸಿದ್ದರಾಮಯ್ಯ ಸೋಷಿಯಲ್‌ ಮೀಡಿಯಾ ಪೋಸ್ಟ್‌ ಮೂಲಕ ಕೇಳಿದ್ದಾರೆ. ಅಲ್ಲದೆ, ಆನ್ಸರ್‌ ಮಾಡಿ ಮೋದಿ (AnswerMadiModi) ಎಂದೂ ಹಾಕಿದ್ದಾರೆ.

2017ರ ಬರ ಪರಿಹಾರ ಪ್ರಸ್ತಾಪ

“2017ರಲ್ಲಿ ಬರದಿಂದ ತತ್ತರಿಸಿಹೋಗಿದ್ದ ಕರ್ನಾಟಕದ ಜನತೆ ಕೇಂದ್ರದ ನೆರವಿಗಾಗಿ ನಿಮ್ಮತ್ತ ನೋಡುತ್ತಿದ್ದರು. ಆದರೆ ನಿಮ್ಮಿಂದ ನಮಗೆ ಸಿಕ್ಕಿದ್ದು ಬಿಡಿಗಾಸು ಪರಿಹಾರ. ಪ್ರಧಾನಿ ನರೇಂದ್ರ ಮೋದಿ ಅವರೇ, ಕನ್ನಡಿಗರ ಮೇಲೇಕೆ ಈ ಮಲತಾಯಿ ಧೋರಣೆ?” ಎಂದು ಮತ್ತೊಂದು ಪೋಸ್ಟ್‌ ಅನ್ನು ಹಾಕಿದ್ದಾರೆ.

ಸಿಎಂ ಸಿದ್ದರಾಮಯ್ಯ ಆರೋಪ ಪಟ್ಟಿ ಹೀಗಿದೆ

“ಇಂದಿನಿಂದ ಸಾಮಾಜಿಕ ಜಾಲತಾಣದಲ್ಲಿ ನಡೆಸಲಾಗುವ #ಸ್ವಾಭಿಮಾನಿ_ಕನ್ನಡಿಗರಪ್ರಶ್ನೆ ಎಂಬ ಅಭಿಯಾನಕ್ಕೆ ರಾಜ್ಯದ ಜನ ಸಹಕರಿಸಬೇಕು.

ನಮ್ಮ ನಾಡು ಕರ್ನಾಟಕ ಎಂದು ಮರುನಾಮಕರಣಗೊಂಡು 50 ವಸಂತಗಳು ತುಂಬುತ್ತಿರುವ ಹೊತ್ತಿನಲ್ಲಿ ಕರ್ನಾಟಕವು ಸಾಗಿಬಂದ ಹಾದಿಯನ್ನು ಸ್ಮರಿಸಿಕೊಳ್ಳಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ.

ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ನ್ಯಾಯಬದ್ಧವಾಗಿ ಸಿಗಬೇಕಾಗಿರುವ ಅನುದಾನ, ತೆರಿಗೆಯಲ್ಲಿ ಪಾಲು, ಬರ ಮತ್ತು ಜಿಎಸ್‌ಟಿ ಪರಿಹಾರ ಪೂರ್ಣಪ್ರಮಾಣದಲ್ಲಿ ಬಂದಿಲ್ಲ.

ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ಹುದ್ದೆಗಳು ಮತ್ತು ಐಬಿಪಿಎಸ್‌ ನೇಮಕಾತಿಗಳಲ್ಲಿ ಕನ್ನಡದಲ್ಲಿ ಪರೀಕ್ಷೆ ಎದುರಿಸಲು ಅವಕಾಶ ನೀಡದೆ ಲಕ್ಷಾಂತರ ಯುವ ಕನ್ನಡಿಗರಿಗೆ ಅನ್ಯಾಯ ಮಾಡಲಾಗುತ್ತಿದೆ.

ಕನ್ನಡಿಗರ ಮೇಲೆ ಹಿಂದಿ ಹೇರಿಕೆ ಮಾಡಲು ಪ್ರಯತ್ನಿಸಿ ಕನ್ನಡಿಗರ ಸ್ವಾಭಿಮಾನವನ್ನು ಕೆಣಕಲಾಗುತ್ತಿದೆ.

ನಾಡಿನ ರೈತರ ಜೀವನಾಧಾರವಾಗಿರುವ ಕಾವೇರಿ, ಮಹದಾಯಿ, ಕೃಷ್ಣಾ, ಭದ್ರಾಮೇಲ್ದಂಡೆ ಮೊದಲಾದ ನದಿಗಳ ನೀರಾವರಿ ಯೋಜನೆಗಳಿಗೆ ಬೆಂಬಲ ನೀಡದೆ, ಅನ್ನದಾತನನ್ನು ಸಂಕಷ್ಟಕ್ಕೆ ನೂಕಲಾಗಿದೆ.

ಕನ್ನಡಿಗರೇ ಬೆವರು-ರಕ್ತ ಸುರಿಸಿ ಕಟ್ಟಿ ಬೆಳೆಸಿದ ಕರ್ನಾಟಕದ ಹೆಮ್ಮೆಯ ವಿಜಯಾ ಬ್ಯಾಂಕ್‌, ಸಿಂಡಿಕೇಟ್‌ ಬ್ಯಾಂಕ್‌, ಕಾರ್ಪೊರೇಷನ್‌ ಬ್ಯಾಂಕ್‌ ಮತ್ತು ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರು ಮೊದಲಾದ ಲಾಭದಲ್ಲಿದ್ದ ಬ್ಯಾಂಕುಗಳನ್ನು ನಷ್ಟದಲ್ಲಿದ್ದ ಬ್ಯಾಂಕುಗಳ ಜೊತೆ ವಿಲೀನ ಮಾಡಿ ಕನ್ನಡಿಗರಿಗೆ ದ್ರೋಹ ಎಸಗಲಾಗಿದೆ.

-ಹೀಗೆ ಕರ್ನಾಟಕದ ವಿರುದ್ಧ ಕೇಂದ್ರದ ಬಿಜೆಪಿ ಸರ್ಕಾರ‌ ನಡೆಸುತ್ತಿರುವ ಅನ್ಯಾಯದ ಸರಮಾಲೆ ಮುಂದುವರಿದಿದೆ, ನಿರಂತರವಾಗಿ ಸ್ವಾಭಿಮಾನಿ ಕನ್ನಡಿಗರನ್ನು ನಿರ್ಲಕ್ಷಿಸಿ ಅವಮಾನಿಸಲಾಗುತ್ತಿದೆ.

ಇದನ್ನೂ ಓದಿ: Karnataka Politics : ಡಿಕೆಶಿ ಮಾಸ್ಟರ್‌ ಪ್ಲ್ಯಾನ್! ಬಿಬಿಎಂಪಿ ವಿಭಜನೆ; ಬೆಂಗಳೂರು ದಕ್ಷಿಣದತ್ತ ರಾಮನಗರ

ಕೇಂದ್ರ ಬಿಜೆಪಿ ಸರ್ಕಾರದ ಈ ನಡವಳಿಕೆಗಳು ಒಕ್ಕೂಟ ವ್ಯವಸ್ಥೆಯ ಮೂಲ ಆಶಯಕ್ಕೆ ವಿರುದ್ಧವಾಗಿರುವುದರಿಂದ ಅದರ ವಿರುದ್ಧ ಧ್ವನಿಯೆತ್ತುವುದು ಅನಿವಾರ್ಯವೆಂದು ಭಾವಿಸಿ, ಇಂದಿನಿಂದ #ಸ್ವಾಭಿಮಾನಿ_ಕನ್ನಡಿಗರಪ್ರಶ್ನೆ ಎಂಬ ಹ್ಯಾಷ್‌ಟ್ಯಾಗ್ ಅಡಿ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನವನ್ನು ಕೈಗೊಳ್ಳಲಾಗುತ್ತಿದೆ. ಇದಕ್ಕೆ ಎಲ್ಲರೂ ಸಹಕರಿಸಿ: ಎಂದು ಸಿಎಂ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

Exit mobile version