Site icon Vistara News

ನೇಗಿನಹಾಳ ಸ್ವಾಮೀಜಿ ಆತ್ಮಹತ್ಯೆಗೆ ವೈರಲ್‌ ಸಂಭಾಷಣೆಯೇ ಕಾರಣ, ಮಹಿಳೆಯರ ಮೇಲೆ ಕ್ರಮಕ್ಕೆ ಆಗ್ರಹ

Basavalinga swameeji

ಬೆಳಗಾವಿ: ಜಿಲ್ಲೆಯ ಬೈಲಹೊಂಗಲ ತಾಲೂಕಿನ ನೇಗಿನಹಾಳ ಗ್ರಾಮದ ಮಡಿವಾಳೇಶ್ವರ ಮಠದ ಬಸವ ಸಿದ್ದಲಿಂಗ ಸ್ವಾಮೀಜಿ (೫೦) ಅವರು ಸೋಮವಾರ ಮಠದ ಮೇಲ್ಮಹಡಿಯ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಈ ಆತ್ಮಹತ್ಯೆಗೆ ಇತ್ತೀಚೆಗೆ ವೈರಲ್‌ ಆಗಿರುವ ಇಬ್ಬರು ಮಹಿಳೆಯರ ನಡುವಿನ ಸಂಭಾಷಣೆಯೇ ಕಾರಣ ಎಂದು ಭಕ್ತರು ಆರೋಪಿಸಿದ್ದು, ಮಹಿಳೆಯರ ಮೇಲೆ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಸ್ವಾಮೀಜಿ ಅವರು ತಮ್ಮ ಡೆತ್‌ ನೋಟ್‌ನಲ್ಲಿ ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಬರೆದುಕೊಂಡಿದ್ದಾರೆ. ಇದು ಭಕ್ತರಿಗೆ ಇನ್ನಷ್ಟು ಕೆರಳಿಸಿದ್ದು, ಸ್ವಾಮೀಜಿಯ ಸಾವಿಗೆ ಕಾರಣವಾದವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಬೇಜವಾಬ್ದಾರಿಯಿಂದ ಮಾತನಾಡಿ, ಇನ್ನೊಬ್ಬರ ಪ್ರಾಣ ತೆಗೆಯುವ ಇಂಥವರ ಬಗ್ಗೆ ಕಠಿಣ ಕ್ರಮವಾಗಬೇಕು ಎಂದಿದ್ದಾರೆ. ಒಂದು ಹಂತದಲ್ಲಿ ಮಹಿಳೆಯರನ್ನು ಬಂಧಿಸುವವರೆಗೆ ಶ್ರೀಗಳ ಮೃತದೇಹ ತೆಗೆಯಲು ಬಿಡುವುದಿಲ್ಲ ಎಂದು ಕೂಡಾ ಭಕ್ತರು ಹಠ ಹಿಡಿದರು.

ಡೆತ್‌ ನೋಟ್‌ನಲ್ಲಿ ಏನಿದೆ?
ʻʻನಾನು ಯಾವುದೇ ತಪ್ಪು‌ ಮಾಡಿಲ್ಲ, ನನ್ನ ಸಾವಿಗೆ ನಾನೇ ಕಾರಣ. ಯಾರನ್ನೂ ವಿಚಾರಣೆಗೆ ಒಳಪಡಿಸಬೇಡಿʼʼ ಎಂದು ಸ್ವಾಮೀಜಿ ಪತ್ರದಲ್ಲಿ ಬರೆದಿದ್ದಾರೆ. ʻʻಲೋಕದ ಗೊಡವೆ ಸಾಕು, ಹಡೆದ ತಾಯಿಯೇ ನನ್ನ ಕ್ಷಮಿಸು, ಮಠದ ಭಕ್ತರು ನನ್ನ‌ನ್ನು ಕ್ಷಮಿಸಿʼʼ ಎಂದಿರುವ ಸ್ವಾಮೀಜಿ, ʻʻನನ್ನ ನಡೆ ಮಡಿವಾಳೇಶ್ವರ ಕಡೆಗೆʼ ಎಂದಿದ್ದಾರೆ. ʻʻಮಠದ ಕಮಿಟಿ, ಭಕ್ತರು ಮಠವನ್ನು ಮುನ್ನಡೆಸಿಕೊಂಡು ಹೋಗಿʼʼ ಎಂದು ಮನವಿ ಮಾಡಿಕೊಂಡಿದ್ದಾರೆ.

ಮಾತನಾಡಿದ ಮಹಿಳೆಯರು ಯಾರು?
ಆಡಿಯೊದಲ್ಲಿ ಮಾತನಾಡಿದವರು ಧಾರವಾಡ ತಾಲೂಕಿನ ಮನಗುಂಡಿ ಗ್ರಾಮದ ಸತ್ಯಕ್ಕ ಹಾಗೂ ಕೊಪ್ಪಳ ಜಿಲ್ಲೆಯ ಗಂಗಾವತಿ ಮೂಲದ ರುದ್ರಮ್ಮ ಎಂದು ರಾಷ್ಟ್ರೀಯ ಬಸವಸೇನೆ ಬೆಳಗಾವಿ ಜಿಲ್ಲಾಧ್ಯಕ್ಷ ಶಂಕರ ಗುಡಸ ತಿಳಿಸಿದ್ದಾರೆ. ಸತ್ಯಕ್ಕ ತಮಿಳುನಾಡಿನಲ್ಲಿ ಆಶ್ರಮದಲ್ಲಿ ವಾಸವಿದ್ದಳು, ಬಳಿಕ ಯುವಕನೊಬ್ಬನನ್ನು ಪ್ರೀತಿ ಮಾಡಿ ಆತನ ಜೊತೆ ಮದುವೆಯಾಗಿ ಕಾಕತಿಯಲ್ಲಿ ವಾಸವಿದ್ದಾಳೆ. ನಾನು ಇಂದು ಬೆಳಗ್ಗೆ ಗಂಗಾವತಿಯ ರುದ್ರಮ್ಮ ಜೊತೆ ಮಾತನಾಡಿದೆ. ನನ್ನದು ತಪ್ಪು ಆಯ್ತು‌ ಎಂದಿದ್ದಾಳೆ ಎಂದು ಅವರು ಹೇಳಿದದ್ದಾರೆ. ಆ ಇಬ್ಬರು ಮಹಿಳೆಯರ ವಿರುದ್ಧ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ಶಂಕರ ಗುಡಸ ಆಗ್ರಹಿಸಿದ್ದಾರೆ.

ಆಡಿಯೊದಲ್ಲಿ ಸತ್ಯಕ್ಕ ಎಂಬ ಮಹಿಳೆ ಸ್ವಾಮೀಜಿಯ ಹೆಸರನ್ನು ಮಾತ್ರ ಹೇಳಿದ್ದಾರೆ. ಆದರೂ ನೋವಿನಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದರೆ ಅವರು ಎಷ್ಟು ಬೇಸರ ಮಾಡಿಕೊಂಡಿರಬಹುದು ಎಂದು ಭಕ್ತರು ಪ್ರಶ್ನಿಸಿದ್ದಾರೆ.

ನಾಳೆ ಅಂತ್ಯಕ್ರಿಯೆ
ಮಡಿವಾಳೇಶ್ವರ ಸ್ವಾಮೀಜಿ ಆತ್ಮಹತ್ಯೆ ವಿಷಯ ತಿಳಿಯುತ್ತಿದ್ದಂತೆಯೇ ಗದಗ ತೋಂಟದಾರ್ಯ ಮಠದ ಡಾ. ತೋಂಟದ ಸಿದ್ದರಾಮ ಸ್ವಾಮೀಜಿ ಸೇರಿ ಹಲವರು ಭೇಟಿ ನೀಡಿದ್ದಾರೆ. ಬಸವಸಿದ್ದಲಿಂಗ ಸ್ವಾಮೀಜಿ ಮೃತದೇಹ ಮರಣೋತ್ತರ ಪರೀಕ್ಷೆಗೆ ಬೈಲಹೊಂಗಲ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ. ನಾಳೆ ಬೆಳಗ್ಗೆ ಊರಿನಲ್ಲಿ ಮೆರವಣಿಗೆ ಮಾಡಿ ಬಳಿಕ ಮಠದ ಆವರಣದಲ್ಲಿ ಅಂತ್ಯಕ್ರಿಯೆ ನೆರವೇರಿಸುವುದಾಗಿ ಭಕ್ತರು ತಿಳಿಸಿದ್ದಾರೆ.

ಇದನ್ನೂ ಓದಿ | ಮಡಿವಾಳೇಶ್ವರ ಮಠದ ಬಸವಸಿದ್ಧಲಿಂಗ ಸ್ವಾಮೀಜಿ ಆತ್ಮಹತ್ಯೆ: ಸಾವಿಗೆ ಕಾರಣವಾಯಿತಾ ಹೆಣ್ಮಕ್ಕಳ ಆ ಸಂಭಾಷಣೆ?

Exit mobile version