Site icon Vistara News

ಮನುಷ್ಯನ ಉನ್ನತಿಗೆ ಅಧ್ಯಾತ್ಮವೇ ತಳಹದಿ: ವಿಸ್ತಾರ ʻಓಂಕಾರʼ ಯುಟ್ಯೂಬ್‌ ಚಾನೆಲ್ ಉದ್ಘಾಟಿಸಿ ಸ್ವಾಮಿ ವೀರೇಶಾನಂದ ಸರಸ್ವತೀ ವ್ಯಾಖ್ಯಾನ

swami veereshananda

ಬೆಂಗಳೂರು: ನಿಜವಾದ ವೈಜ್ಞಾನಿಕ ಮನೋಭಾವದವರು ಧರ್ಮಕ್ಕೆ ಬೈಯುವುದಿಲ್ಲ. ಧರ್ಮ ಅಥವಾ ಆಧ್ಯಾತ್ಮಿಕತೆಯೇ ಮನುಷ್ಯನನ್ನು ಇತರ ಪ್ರಾಣಿಗಳಿಂದ ಎತ್ತರದಲ್ಲಿ ನಿಲ್ಲಿಸುತ್ತದೆ. ಮನುಷ್ಯನ ಉನ್ನತಿಯ ಆಶಯವನ್ನು ಹೊಂದಿರುವ ಆಧ್ಯಾತ್ಮದೊಳಗೆ ವಿಜ್ಞಾನವೂ ಸೇರಿಕೊಂಡಿದೆ ಎಂದು ತುಮಕೂರು ರಾಮಕೃಷ್ಣ- ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಸ್ವಾಮಿ ವೀರೇಶಾನಂದ ಸರಸ್ವತೀ ಪ್ರತಿಪಾದಿಸಿದರು.

ವಿಸ್ತಾರ ನ್ಯೂಸ್‌ ಮೀಡಿಯಾ ಬಳಗದ ಮೂರನೇ ಯೂಟ್ಯೂಬ್‌ ಚಾನೆಲ್‌ ʼವಿಸ್ತಾರ ಓಂಕಾರʼವನ್ನು ಅವರು ಸೋಮವಾರ ಲೋಕಾರ್ಪಣೆಗೊಳಿಸಿ ಮಾತನಾಡಿದರು. ಅವರ ಮಾತಿನ ಸಾರ ಇಲ್ಲಿದೆ…

ಅಧ್ಯಾತ್ಮ ಎಂಬುದು ಮನುಷ್ಯನಿಗೆ ವೀಕೆಂಡ್‌ ಪ್ರವೃತ್ತಿಯಾದಲ್ಲಿ ಅದಕ್ಕೆ ಅರ್ಥವಿಲ್ಲ. ಅದು ಜೀವನದಲ್ಲಿ ಹಾಸುಹೊಕ್ಕಾಗಿರಬೇಕು. ʼಓಂಕಾರʼ ನನ್ನ ಜೀವನದಲ್ಲಿ ತಳುಕು ಹಾಕಿಕೊಂಡಿದೆ. ಹೀಗಾಗಿ ಓಂಕಾರ ಚಾನೆಲ್‌ ಉದ್ಘಾಟನೆ ನನಗೆ ಆನಂದ ತಂದಿದೆ. ಓಂಕಾರವೇ ಸರ್ವ ದೇವ ದೇವಿಯರ ಸ್ವರೂಪ ಎಂದು ಪತಂಜಲಿ ಮಹರ್ಷಿಗಳು ಹೇಳಿದ್ದಾರೆ. ಓಂಕಾರವನ್ನು ಅಲ್ಪಸ್ವಲ್ಪ ಪರಿವರ್ತಿಸಿದರೆ ಬೇರೆ ಬೇರೆ ಧರ್ಮಗಳ ಲಾಂಛನವನ್ನೂ ಅದರಲ್ಲಿ ಕಾಣಬಹುದು. ಇದರಲ್ಲಿ ಕ್ರೈಸ್ತ, ಇಸ್ಲಾಂ ಧರ್ಮಗಳ ಧಾರ್ಮಿಕ ಚಿಹ್ನೆಯೂ ಇದೆ. ಹೀಗೆ ಭಾರತೀಯ ಸಂಸ್ಕೃತಿಯು ಎಲ್ಲವನ್ನೂ ಒಳಗೊಂಡಿದೆ.

ನಮ್ಮ ತಾಯಂದಿರು ಆಕಾಶದ ಮೋಡಗಳನ್ನೇ ತೋರಿಸಿ ಇಡೀ ಅಕ್ಷರಮಾಲೆಯನ್ನು ಮಕ್ಕಳಿಗೆ ಪರಿಚಯಿಸುತ್ತಾರೆ. ಪ್ರಕೃತಿಯಲ್ಲಿ ಜ್ಞಾನವನ್ನು ಕಾಣುವುದು ಭಾರತೀಯತೆಯ ವೈಶಿಷ್ಟ್ಯ. ಸ್ವಾಮಿ ವಿವೇಕಾನಂದರು ತಮ್ಮ ತಮ್ಮ ದೇಶಗಳ ಇತಿಹಾಸವನ್ನು ವಿವರಿಸುವಂತೆ ಹೇಳಿದಾಗ, ಆಕ್ರಮಣ, ರಾಜ್ಯ ಕಬಳಿಕೆ, ಯುದ್ಧ, ಸಂಪತ್ತು ಗಳಿಕೆಗಳನ್ನು ಹೆಚ್ಚಿನವರು ಉಲ್ಲೇಖಿಸಿದರು. ಆದರೆ ಅನ್ನದಾನದ, ದೇವಾಲಯ- ಕೆರೆ ಕಟ್ಟೆಗಳನ್ನು ಕಟ್ಟಿಸುವ ಭಾರತೀಯ ಇತಿಹಾಸದ ಮಹತ್ವವನ್ನು ವಿವೇಕಾನಂದರು ಎತ್ತಿ ಆಡಿದರು. ಹೀಗೆ ಕಟ್ಟುವ ಮತ್ತು ಕೆಡಹುವ ಸಂಸ್ಕೃತಿಗಳಲ್ಲಿ ನಾವು ಯಾವುದನ್ನು ಆಯ್ದಕೊಳ್ಳುತ್ತೇವೆ ಎಂಬುದುನ್ನು ಯೋಚಿಸಬೇಕು.

ಅರಿಷಡ್ವರ್ಗಗಳು ನಮಗೆ ಅಡ್ಡಿ ಎನ್ನುತ್ತೇವೆ, ಆದರೆ ಅವುಗಳನ್ನು ಶಕ್ತಿಗಳಾಗಿ ಕಂಡಾಗ ಅವುಗಳಿಂದ ಪ್ರಯೋಜನವಿದೆ. ಹೀಗೆ ಭಾರತೀಯ ಚಿಂತನೆಯಲ್ಲಿ ಯಾವುದೂ ನಿಷ್ಪ್ರಯೋಜಕವಲ್ಲ. ಜಗತ್ತು ಒಳಿತು ಕೆಡುಕುಗಳ ಮಿಶ್ರಣ. ಆದರೆ ಯಾವುದನ್ನು ಸ್ವೀಕರಿಸುತ್ತೇವೆ ಎಂಬುದು ನಮಗೆ ಬಿಟ್ಟದ್ದು. ಮರಳು- ಸಕ್ಕರೆ ಮಿಶ್ರಣದಲ್ಲಿ ಇರುವೆ ಮರಳನ್ನು ತ್ಯಜಿಸಿ ಸಕ್ಕರೆ ಸ್ವೀಕರಿಸುವಂತೆ ನಾವು ಒಳಿತನ್ನು ಸ್ವೀಕರಿಸಬೇಕು. ಬದುಕಿನ ಮೂಲ ಉದ್ದೇಶವೇ ಆಧ್ಯಾತ್ಮ. ಧರ್ಮದಿಂದ ಆಚೆಗೆ, ಆಧ್ಯಾತ್ಮದಿಂದ ಆಚೆಗೆ ಯಾವುದೂ ಇಲ್ಲ. ಇದೊಂದು ಅದ್ಭುತ ಸಂಗತಿ. ಮನುಷ್ಯನಿಗೆ ಭೌತವಿಜ್ಞಾನ, ಶರೀರವಿಜ್ಞಾನ, ಮನೋವಿಜ್ಞಾನಗಳೆಲ್ಲಾ ಗೊತ್ತಿವೆ. ಆದರೆ ಇದೆಲ್ಲದರ ಮಹಾತಾಯಿ ಆಧ್ಯಾತ್ಮಿಕ ವಿಜ್ಞಾನ. ಇದೇ ನಮಗೆ ಚತುರ್ವಿಧ ಪುರುಷಾರ್ಥಗಳನ್ನು ಕೊಟ್ಟಿದೆ.

ಇದನ್ನೂ ಓದಿ | Navratri 2022 | ನವರಾತ್ರಿ ನವವರ್ಣ: ವಿಸ್ತಾರ ಡಿಜಿಟಲ್ ಸಂಭ್ರಮ

ಸಿಗ್ಮಂಡ್‌ ಫ್ರಾಯ್ಡ್‌, ಚಾರ್ಲ್ಸ್‌ ಡಾರ್ವಿನ್‌‌, ಐಸಾಕ್‌ ನ್ಯೂಟನ್‌ ಕ್ರಮವಾಗಿ ಮನಸ್ಸಿನ ಸ್ವತಂತ್ರತೆ, ವಿಕಾಸವಾದ, ಗುರುತ್ವಾಕರ್ಷಣೆಗಳನ್ನು ಪ್ರತಿಪಾದಿಸಿದರು. ಇದೆಲ್ಲದರಿಂದಾಗಿ ದೇವರು ಅಪ್ರಸ್ತುತನಾದ ಎಂದು ಕೆಲ ವಿಜ್ಞಾನಿಗಳು ವ್ಯಾಖ್ಯಾನಿಸಿದರು. ಆದರೆ, ಪ್ರಜ್ಞಾವಂತಿಕೆಯಿಲ್ಲದ, ಕೇವಲ ಬುದ್ಧಿವಂತಿಕೆಯಿರುವ ಮನುಷ್ಯ ತರಬೇತಾದ ನಾಯಿಗಿಂತ ಹೆಚ್ಚಲ್ಲ. ವಿಜ್ಞಾನವು ಅಣುಗಳನ್ನು ವಿದಳಿಸಿ ಸ್ಫೋಟಿಸಬಹುದು, ಆದರೆ ಮನುಷ್ಯನಲ್ಲಿರುವ ದುಷ್ಟತನಕ್ಕೆ ಪರಿಹಾರ ಕೊಡಲಾರದು ಎಂದು ವಿಜ್ಞಾನಿಯಾದ ಐನ್‌ಸ್ಟಿನ್‌ ಅವರೇ ಪ್ರತಿಪಾದಿಸಿದರು. ಏಕಕೋಶ ಜೀವಿ ಅಮೀಬಾದಿಂದ ಹೋಮೋ ಸೇಪಿಯನ್‌ ಬೆಳವಣಿಗೆಯವರೆಗೂ ವಿಕಾಸವಾದವನ್ನು ಡಾರ್ವಿನ್‌ ಬಿಚ್ಚಿಟ್ಟ. ಆದರೆ ಅಮೀಬಾಗೆ ಜೀವ ಬಂದುದು ಹೇಗೆ ಎಂದು ಪಂಡಿತ ಮ್ಯಾಕ್ಸ್‌ ಮುಲ್ಲರ್‌ ಪ್ರಶ್ನಿಸಿದರು. ಭಾರತೀಯ ಚಿಂತನೆಯ ಶಾಶ್ವತತೆ ಇದರಿಂದಲೇ ಅರ್ಥವಾಗುತ್ತದೆ.

ವಿಜ್ಞಾನದಿಂದ ದತ್ತವಾಗಿರುವ ಆವರ್ತ ಕೋಷ್ಠಕದಲ್ಲಿರುವ ವಿಶ್ವದ ಎಲ್ಲ ಮೂಲಧಾತುಗಳನ್ನೂ ಪ್ರೋಟಾನ್-‌ ನ್ಯೂಟ್ರಾನ್‌ಗಳ ಸಣ್ಣಪುಟ್ಟ ಬದಲಾವಣೆಗಳ ಮೂಲಕ ಒಂದನ್ನು ಇನ್ನೊಂದಾಗಿ ಬದಲಾಯಿಸಬಹುದು. ಅಣುಗಳ ಬದಲಾವಣೆ ಮೂಲಕ ಇಂಗಾಲವನ್ನು ವಜ್ರವಾಗಿಸಬಹುದು. ಹೀಗಿರುವಾಗ ಅತಿ ಸಾಮಾನ್ಯ ವ್ಯಕ್ತಿಯನ್ನು ಅಸಾಮಾನ್ಯನಾಗಿ ಮಾಡಲು ಸಾಧ್ಯವಿಲ್ಲವೇ? ದ್ರವ್ಯರಾಶಿ, ತಾಪಮಾನಕ್ಕೆ ಸಂಬಂಧಿಸಿದ ʻಚಾರ್ಲ್ಸ್‌ ಲಾ ಫಾರ್ಮ್ಯುಲಾʼವನ್ನು ʻಆಕಾಶಾತ್‌ ವಾಯುಃʼ ಎಂಬ ತೈತ್ತಿರೀಯ ಉಪನಿಷತ್ತಿನ ಶ್ಲೋಕ ಅಂದೇ ಪ್ರತಿಪಾದಿಸಿತ್ತು. ಭಗವದ್ಗೀತೆಯಿಂದಾಗಿ ಬದುಕಿನ ಕಡೆಗಿನ ತನ್ನ ದೃಷ್ಟಿಕೋನ ಬದಲಾಯಿತೆಂದು ಐನ್‌ಸ್ಟೈನ್‌ ಹೇಳುತ್ತಾರೆ. ಹದಿನೈದಕ್ಕೂ ಹೆಚ್ಚು ನೊಬೆಲ್‌ ಪ್ರಶಸ್ತಿ ಪುರಸ್ಕೃತರು ಭಾರತೀಯ ಚಿಂತನೆಗಳಿಗೆ ತಲೆಬಾಗಿದ್ದಾರೆ. ಕುರಾನ್‌, ಬೈಬಲ್‌ಗಳಲ್ಲಿರುವ ಎಲ್ಲವೂ ಭಾರತೀಯ ವೇದಗಳಲ್ಲಿ ಇದೆ. ಹಿಂದೂ ಧರ್ಮದಲ್ಲಿ ಇಲ್ಲದ ಒಂದೇ ಒಂದು ತತ್ವವೂ ಅದರಾಚೆಗೆ ಇಲ್ಲ. ನಮ್ಮ ಧರ್ಮ ನಮ್ಮ ಅಸ್ತಿತ್ವ ಹಾಗೂ ವಿಕಾಸಗಳೆರಡನ್ನೂ ಪ್ರತಿಪಾದಿಸಿದೆ. ಆದರೆ ಈ ವಿಚಾರಗಳನ್ನು ಸರಿಯಾಗಿ ಜನರಿಗೆ ತಲುಪಿಸಬೇಕು.

ಮನುಷ್ಯ ಮೂರು ವಿಜ್ಞಾನಗಳನ್ನು ಒಪ್ಪಿಕೊಳ್ಳಬೇಕು. ಮೊದಲನೆಯದು ಭೌತವಿಜ್ಞಾನ. ಪ್ರಕೃತಿಯನ್ನು ಗಮನಿಸಬೇಕು. ಎರಡನೆಯದು ಮೌಲ್ಯವಿಜ್ಞಾನ- ಅನ್ಯೋನ್ಯವಾಗಿ ಬದುಕಲು ಪ್ರೀತಿ ವಿಶ್ವಾಸ ಬೇಕು. ಮೂರನೆಯದು ಆಧ್ಯಾತ್ಮ ವಿಜ್ಞಾನ- ಎಲ್ಲರಲ್ಲೂ ಭಗವಂತನಿರುವುದರಿಂದ ಪರಸ್ಪರ ಗೌರವಿಸಿ ಸಹಾಯ ಮಾಡಬೇಕು, ಮಾನವೀಯತೆಯಿಂದ ಸ್ಪಂದಿಸಬೇಕು. ಇದನ್ನೇ ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಭೂತಯಜ್ಞ ಎನ್ನುತ್ತಾನೆ. ಈ ಮೂರನ್ನೂ ಭಾರತೀಯ ತತ್ವಶಾಸ್ತ್ರ ಸಾವಿರಾರು ವರ್ಷಗಳ ಹಿಂದೆಯೇ ಪ್ರತಿಪಾದಿಸಿದೆ.

ಇದನ್ನೂ ಓದಿ | ವಿಸ್ತಾರ ನ್ಯೂಸ್‌ ಕಚೇರಿಗೆ ಸಿಎಂ ಬೊಮ್ಮಾಯಿ ಭೇಟಿ, ಟಿವಿ ಚಾನೆಲ್‌ ಸಿದ್ಧತೆಗೆ ಮೆಚ್ಚುಗೆ

ಮನುಷ್ಯ social, political, economical animal ಎಂದು ಪಾಶ್ಚಾತ್ಯ ಚಿಂತನೆ ಹೇಳುತ್ತದೆ. ಆದರೆ ಮನುಷ್ಯ ಇದೆಲ್ಲದನ್ನೂ ಮೀರಿd spritual species ಎಂಬುದು ಭಾರತೀಯ ಚಿಂತನೆ. ಆಧ್ಯಾತ್ಮಿಕ ಆಯಾಮವೇ ಮನುಷ್ಯನನ್ನು ಪ್ರಾಣಿಗಳಿಂದ ಭಿನ್ನವಾಗಿಸುತ್ತದೆ. ಮನುಷ್ಯನಲ್ಲಿರುವ ಆಧ್ಯಾತ್ಮಿಕ ವ್ಯಕ್ತಿತ್ವವವನ್ನು ವಿಸ್ತರಿಸುವ ಪರಿಕಲ್ಪನೆ ಹೊಂದಿರುವ ಓಂಕಾರ ಎಲ್ಲರ ಬದುಕಿನ ಯಶಸ್ಸಿನ ಏಣಿಯಾಗಲಿ, ಇತಿಹಾಸ ಸೃಷ್ಟಿಸಲಿ ಎಂದು ಸ್ವಾಮೀಜಿ ಹಾರೈಸಿದರು.

ಓಂಕಾರ ಚಾನೆಲ್‌ನ ಧ್ಯೇಯೋದ್ದೇಶಗಳನ್ನು ವಿಸ್ತಾರ ನ್ಯೂಸ್‌ ಸಿಇಒ ಹಾಗೂ ಪ್ರಧಾನ ಸಂಪಾದಕ ಹರಿಪ್ರಕಾಶ್‌ ಕೋಣೆಮನೆ ವಿವರಿಸಿದರು. ವಿಸ್ತಾರ ಮೀಡಿಯಾದ ಚೇರ್ಮನ್‌ ಹಾಗೂ ವ್ಯವಸ್ಥಾಪಕ ನಿರ್ದೇಶಕ ಎಚ್‌.ವಿ ಧರ್ಮೇಶ್‌, ವಿಸ್ತಾರ ನ್ಯೂಸ್‌ನ ಎಕ್ಸಿಕ್ಯೂಟಿವ್‌ ಎಡಿಟರ್‌ ಶರತ್‌ ಎಂ.ಎಸ್ ಜತೆಗಿದ್ದರು.

Exit mobile version