ಬಾಗಲಕೋಟೆ: ರಾಜ್ಯ ವಿಧಾನಸಭೆ ಚುನಾವಣೆ (Karnataka Election 2023) ಕಾವು ಏರತೊಡಗಿದೆ. ಈಗಾಗಲೇ ಹಲವು ಪಕ್ಷಗಳ ಹಾಗೂ ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರೆ, ಮತ್ತಷ್ಟು ಮಂದಿ ನಾಮಪತ್ರ ಸಲ್ಲಿಕೆಗೆ ತಯಾರಿ ನಡೆಸುತ್ತಿದ್ದಾರೆ. ಇನ್ನು ಆಯಾ ಪಕ್ಷಗಳಲ್ಲಿ ಟಿಕೆಟ್ ವಂಚಿತರ ಅಸಮಾಧಾನಗಳು ಮುಂದುವರಿದಿವೆ. ಈ ಮೂಲಕ ಕೆಲವರು ಬಂಡಾಯದ ಬಾವುಟ ಹಾರಿಸಿದ್ದಾರೆ. ಇವರಲ್ಲಿ ಕೆಲವರು ಪಕ್ಷೇತರ ಸ್ಪರ್ಧೆ ಇಲ್ಲವೇ ಪಕ್ಷಾಂತರ ಮಾಡಿ ಸ್ಪರ್ಧೆ ಮಾಡಿದರೆ ಮತ್ತೆ ಕೆಲವರು ಬೇರೊಬ್ಬರಿಗೆ ಬೆಂಬಲ ನೀಡುತ್ತಿದ್ದಾರೆ. ಇದೀಗ ಬಾಗಲಕೋಟೆ ಜಿಲ್ಲೆಯ ತೇರದಾಳ ವಿಧಾನಸಭಾ ಕ್ಷೇತ್ರದ ಕಣವೂ ರಂಗೇರುತ್ತಿದೆ. ಇದೀಗ ಕ್ಷಿಪ್ರ ಬೆಳವಣಿಗೆಯೊಂದರಲ್ಲಿ ಸ್ವಾಮೀಜಿಯೊಬ್ಬರು ಕಣಕ್ಕಿಳಿಯುತ್ತಿದ್ದಾರೆ.
ಕುರುಹಿನಶೆಟ್ಟಿ ಪೀಠದ ಜಗದ್ಗುರು ಶಿವಶಂಕರ ಶಿವಾಚಾರ್ಯ ಸ್ವಾಮೀಜಿ ಅವರು ಈಗ ಚುನಾವಣೆಗೆ ಸ್ಪರ್ಧೆ ನಡೆಸಲು ತೀರ್ಮಾನಿಸಿದ್ದು, ನೇಕಾರ ಸಮುದಾಯದ ಮುಖಂಡರು ಸೇರಿ ಸ್ವಾಮೀಜಿ ಅವರನ್ನು ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬುಧವಾರ ನಾಮಪತ್ರ ಸಲ್ಲಿಕೆ ಸಾಧ್ಯತೆ
ಸ್ವಾಮೀಜಿಗೆ ಬಿಜೆಪಿ ಟಿಕೆಟ್ ವಂಚಿತ ವಿವಿಧ ಸಮುದಾಯಗಳ ಒಂಭತ್ತು ಜನರ ಬೆಂಬಲ ಸೂಚಿಸಿದ್ದರೆ, ಕಾಂಗ್ರೆಸ್‌ನ ಟಿಕೆಟ್ ವಂಚಿತರಲ್ಲಿ ಕೆಲವರು ಸಹ ಬೆಂಬಲಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಸ್ವಾಮೀಜಿ ಜತೆ ಹಲವು ಸುತ್ತಿನ ಮಾತುಕತೆ ನಡೆಸಲಾಗಿದ್ದು, ಕೊನೆಗೂ ಅವರನ್ನು ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ತೇರದಾಳ ಕ್ಷೇತ್ರದಲ್ಲಿ ನೇಕಾರ ಸಮುದಾಯದವರು ನಿರ್ಣಾಯಕರಾಗಿದ್ದು, ತಮ್ಮ ಶಕ್ತಿ ಪ್ರದರ್ಶನ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ವಾಮೀಜಿಯವರು ಬುಧವಾರ (ಏ. 19) ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಬಿಜೆಪಿಯಿಂದ ನೇಕಾರರಿಗೆ ಟಿಕೆಟ್ ಕೊಡುವಂತೆ ಇತ್ತು ಬೇಡಿಕೆ
ಈ ಬಾರಿಯ ಚುನಾವಣೆಯಲ್ಲಿ ನೇಕಾರರಿಗೆ ಬಿಜೆಪಿ ಟಿಕೆಟ್ ಕೊಡುವಂತೆ ನೇಕಾರರು ಬಿಗಿಪಟ್ಟು ಹಿಡಿದಿದ್ದರು. ಆದರೆ, ಪಕ್ಷವು ಹಾಲಿ ಶಾಸಕ ಸಿದ್ದು ಸವದಿಗೆ ಟಿಕೆಟ್ ಘೋಷಣೆ ಮಾಡಿದೆ. ಇತ್ತ ಕಾಂಗ್ರೆಸ್ ಸಹ ನೇಕಾರ ಮಹಿಳೆ ಉಮಾಶ್ರೀ ಬಿಟ್ಟು ಸಿದ್ದು ಕೊಣ್ಣೂರಗೆ ಟಿಕೆಟ್ ನೀಡಿದೆ. ಈ ಹಿನ್ನೆಲೆಯಲ್ಲಿ ಎರಡೂ ಪಕ್ಷಗಳ ವಿರುದ್ಧ ನೇಕಾರರು ಆಕ್ರೋಶಗೊಂಡಿದ್ದಾರೆ.
ನೇಕಾರರ ಮತಗಳೇ ನಿರ್ಣಾಯಕ
ತೇರದಾಳ ವಿಧಾನಸಭಾ ಕ್ಷೇತ್ರದಲ್ಲಿ ನೇಕಾರ ಸಮುದಾಯದವರು ಪ್ರಾಬಲ್ಯವನ್ನು ಹೊಂದಿದ್ದಾರೆ. ಹೀಗಾಗಿ ಇವರ ಮತಗಳು ಯಾರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬೀಳುತ್ತದೋ ಅವರ ಗೆಲುವು ನಿಶ್ಚಿತ ಎಂಬ ಮಾತಿದೆ. ಇದರಿಂದ ಇವರ ಮತಗಳೇ ನಿರ್ಣಾಯಕವಾಗಿದೆ.
ಕ್ಷೇತ್ರ ವಿಭಜನೆಯ ನಂತರ 2008ರಲ್ಲಿ ತೇರದಾಳ ವಿಧಾನಸಭಾ ಕ್ಷೇತ್ರವು ರೂಪುಗೊಂಡಿತು. ಎರಡು ಸಲ ಸಿದ್ದು ಸವದಿ ಹಾಗೂ ಒಂದು ಸಲ ಉಮಾಶ್ರೀ ಅವರು ಈ ಕ್ಷೇತ್ರದಲ್ಲಿ ಜಯ ಸಾಧಿಸಿದ್ದಾರೆ. ಈ ಬಾರಿಯ ಫಲಿತಾಂಶ ಕುತೂಹಲ ಮೂಡಿಸಿದೆ.