ತುಮಕೂರು: ಬಿಜೆಪಿ ರಾಜ್ಯಾಧ್ಯಕ್ಷ (BJP State President) ಸ್ಥಾನಕ್ಕೆ ಆಯ್ಕೆಯಾಗುತ್ತಿದ್ದಂತೆ ಬಿ.ವೈ. ವಿಜಯೇಂದ್ರ (BY Vijayendra) ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಇದೇ ವೇಳೆ ನವೆಂಬರ್ 15ರ ಬುಧವಾರ ಪದಗ್ರಹಣ ಮಾಡಲು ನಿರ್ಧಾರ ಮಾಡಿರುವ ಅವರು, ಅದಕ್ಕಿಂತ ಮೊದಲು ತುಮಕೂರು ಸಿದ್ಧಗಂಗಾ ಮಠಕ್ಕೆ (Tumkur Siddaganga Mutt) ಭೇಟಿ ನೀಡಿ ಶ್ರೀ ಶಿವಕುಮಾರ ಸ್ವಾಮೀಜಿ ಗದ್ದುಗೆಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಶ್ರೀಗಳಾದ ಸಿದ್ದಲಿಂಗ ಸ್ವಾಮೀಜಿಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಇದೇ ವೇಳೆ ಮಾತನಾಡಿದ ವಿಜಯೇಂದ್ರ, ವಿಪಕ್ಷ ನಾಯಕನ ಆಯ್ಕೆ ಆಗದೆ ದೆಹಲಿಗೆ ವರಿಷ್ಠರ ಭೇಟಿಯಾಗಲು ಹೋಗುವುದಿಲ್ಲ ಎಂದು ಹೇಳಿದ್ದಾರೆ.
ಸಿದ್ದಗಂಗಾ ಮಠದ ಶಿವಕುಮಾರ್ ಸ್ವಾಮೀಜಿ ಗದ್ದುಗೆಗೆ ತೆರಳಿ ಪೂಜೆ ನೆರವೇರಿಸಿದ ಬಿ.ವೈ. ವಿಜಯೇಂದ್ರ ಸುದ್ದಿಗಾರರೊಂದಿಗೆ ಮಾತನಾಡಿ, ಮುಂದಿನ ಬುಧವಾರ (ನ. 15) ಬೆಂಗಳೂರಿನ ಬಿಜೆಪಿ ಕಚೇರಿಯಾದ ಜಗನ್ನಾಥ ಭವನದಲ್ಲಿ ಬೆಳಗ್ಗೆ 10 ಗಂಟೆಗೆ ಪಕ್ಷದ ಜವಾಬ್ದಾರಿ ಸ್ವೀಕಾರ ಮಾಡುತ್ತೇನೆ. ನಳಿನ್ ಕುಮಾರ್ ಕಟೀಲ್ ಅವರು ಅತ್ಯಂತ ಯಶಸ್ವಿಯಾಗಿ ಪಕ್ಷ ಸಂಘಟನೆಯನ್ನು ಮಾಡಿದ್ದಾರೆ ಎಂದು ಹೇಳಿದರು.
ಗುರುವಾರ ಅರಮನೆ ಮೈದಾನದಲ್ಲಿ ಬೆಳಗ್ಗೆ 11 ಗಂಟೆಗೆ ಕಾರ್ಯಕರ್ತರ ಸಭೆಯನ್ನು ನಿಗದಿಪಡಿಸಲಾಗಿದೆ. ಈ ವೇಳೆ ಸಮಾವೇಶ ಕೂಡ ಇರಲಿದೆ. ಪಕ್ಷದ ಹಿರಿಯ ಮುಖಂಡರು ಮಾಜಿ ಸಿಎಂಗಳಾದ ಬಿ.ಎಸ್. ಯಡಿಯೂರಪ್ಪ, ಡಿ.ವಿ. ಸದಾನಂದಗೌಡ, ಬಸವರಾಜ ಬೊಮ್ಮಾಯಿ, ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ, ಮಾಜಿ ಸಚಿವರಾದ ಬಸನಗೌಡ ಪಾಟೀಲ್ ಯತ್ನಾಳ್, ವಿ. ಸೋಮಣ್ಣ ಸೇರಿದಂತೆ ಹಲವು ಪ್ರಮುಖರ ಸಮ್ಮುಖದಲ್ಲಿ ಜವಾಬ್ದಾರಿಯನ್ನು ಸ್ವೀಕರಿಸಲಿದ್ದೇನೆ. ಚುನಾವಣೆ ಇರುವುದರಿಂದ ರಾಷ್ಟ್ರೀಯ ನಾಯಕರು ಬರುತ್ತಿಲ್ಲ. ವೀಕ್ಷಕರು ಬರುವ ಸಾಧ್ಯತೆಯಿದೆ ಎಂದು ಹೇಳಿದರು.
ಅಸಮಾಧಾನಗಳನ್ನು ಸರಿಪಡಿಸುವೆ
ಪಕ್ಷದಲ್ಲಿ ಕೆಲವು ಅಸಮಾಧಾನಗಳಿವೆ. ಮುಂದಿನ ದಿನಗಳಲ್ಲಿ ಅದನ್ನೆಲ್ಲ ಸರಿ ಮಾಡುತ್ತೇವೆ. ಯಾರು ಯಾರನ್ನು ಕೂಡ ಸೈಡ್ ಲೈನ್ ಮಾಡಿಲ್ಲ. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಮೇಲೆ ಮತ್ತಷ್ಟು ಸಕ್ರಿಯವಾಗಿ ಕೆಲಸ ಮಾಡಿದ್ದಾರೆ ಎಂದು ಬಿ.ವೈ. ವಿಜಯೇಂದ್ರ ತಿಳಿಸಿದರು.
ಶೀಘ್ರದಲ್ಲಿ ವಿಪಕ್ಷ ನಾಯಕನ ಆಯ್ಕೆ
ನಮ್ಮ ರಾಷ್ಟ್ರೀಯ ನಾಯಕರು ಐದು ರಾಜ್ಯಗಳ ಚುನಾವಣೆ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ವಿಪಕ್ಷ ನಾಯಕನ ಸ್ಥಾನ ಇಲ್ಲಿಯವರೆಗೆ ಆಯ್ಕೆ ಆಗಿಲ್ಲ. ಆದಷ್ಟು ಶೀಘ್ರದಲ್ಲಿ ಆಯ್ಕೆ ಆಗುತ್ತದೆ. ವಿಪಕ್ಷ ನಾಯಕನ ಸ್ಥಾನದ ಆಯ್ಕೆ ಬಳಿಕವೇ ನಾನು ನವ ದೆಹಲಿಗೆ ಹೋಗಿ ವರಿಷ್ಠರನ್ನು ಭೇಟಿ ಮಾಡುತ್ತೇನೆ ಎಂದು ಬಿ.ವೈ. ವಿಜಯೇಂದ್ರ ಸ್ಪಷ್ಟಪಡಿಸಿದರು.
ರೈತರ ಸಮಸ್ಯೆ ಮೊದಲ ಆದ್ಯತೆ
ವಿಪಕ್ಷ ನಾಯಕನ ಸ್ಥಾನಕ್ಕೆ ತಾವೂ ಸಹ ಆಕಾಂಕ್ಷಿ ಎಂಬ ಮಾಜಿ ಡಿಸಿಎಂ ಅಶ್ವತ್ಥ್ ನಾರಾಯಣ ಹೇಳಿಕೆ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಬಿ.ವೈ. ವಿಜಯೇಂದ್ರ, ನಮ್ಮ ಮೊದಲ ಆದ್ಯತೆ ನಾಡಿನ ರೈತರ ಸಮಸ್ಯೆಯಾಗಿದೆ. ಎಲ್ಲ ನಾಯಕರ ಜತೆ ಚರ್ಚಿಸಿ ಇದರ ಬಗ್ಗೆ ತೀರ್ಮಾನ ಮಾಡಲಾಗುವುದು. ಇಲ್ಲಿ ಯಾರು ಯಾರನ್ನೂ ಸೈಡ್‌ಲೈನ್ ಮಾಡುತ್ತಿಲ್ಲ. ವಿಧಾನಸಭಾ ಚುನಾವಣೆಯಲ್ಲಿ ನಮಗೆ ಹಿನ್ನಡೆ ಆಗಿರಬಹುದು. ಲೋಕಸಭಾ ಚುನಾವಣೆಯಲ್ಲಿ ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ: Road Accident : ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿದ್ದ ವಾಹನ ಪಲ್ಟಿ; ಯುವಕ ಸಾವು,10 ಮಂದಿಗೆ ಗಾಯ
ತಂದೆಯಂತೆ ಬಂದು ಆಶೀರ್ವಾದ ಪಡೆದಿದ್ದೇನೆ
ಕೇಂದ್ರದ ವರಿಷ್ಠರು ಚರ್ಚೆ ಮಾಡಿ ಬಿಜೆಪಿಯ ರಾಜ್ಯದ ಅಧ್ಯಕ್ಷನಾಗಿ ಆಯ್ಕೆ ಮಾಡಿದ್ದಾರೆ. ಜವಾಬ್ದಾರಿ ಪಡೆಯುವ ಮುನ್ನ ಸಿದ್ದಗಂಗೆಗೆ ಬಂದು ಪೂಜ್ಯರ ಆಶೀರ್ವಾದ ಪಡೆದಿದ್ದೇನೆ. ತಂದೆಯವರು ಕೂಡ ಏನೇ ಜವಾಬ್ದಾರಿ ತಗೆದುಕೊಳ್ಳುವಾಗ ಸಿದ್ದಗಂಗೆಗೆ ಭೇಟಿ ನೀಡಿ, ನಡೆದಾಡುವ ದೇವರ ಆಶೀರ್ವಾದ ಪಡೆದು ಮುಂದೆ ಸಾಗುತ್ತಾರೆ. ಅದೇ ರೀತಿ ನಾನು ಕೂಡ ಇಲ್ಲಿ ಬಂದು ಪೂಜ್ಯರ ಆಶೀರ್ವಾದ ಪಡೆದಿದ್ದೇನೆ ಎಂದು ಹೇಳಿದರು.