Site icon Vistara News

Power Point with HPK : ಲೋಕಸಭೆಯಲ್ಲಿ ನನಗೆ ಫಂಡ್‌ ಮಾಡಿ ಗೆಲ್ಲಿಸಲು ಸಿಂಡಿಕೇಟ್‌ ಸಿದ್ಧವಾಗಿದೆ: ಕೃಷ್ಣ ಬೈರೇಗೌಡ

Power Point with HPK and Revenue Minister Krishnabyregowda

ಬೆಂಗಳೂರು: ಕೆಲವರು ನನ್ನ ವಿರುದ್ಧ ಸಿಂಡಿಕೇಟ್‌ ಮಾಡಿಕೊಂಡು ಇಲ್ಲಸಲ್ಲದ ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ. ಮುಂದಿನ ಬಾರಿ ನನ್ನನ್ನು ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಯನ್ನಾಗಿ ಮಾಡಿ, ಎಲೆಕ್ಷನ್‌ಗೂ ನಾವೇ ಖರ್ಚು ಮಾಡುವುದಲ್ಲದೆ, ಗೆಲ್ಲಿಸಿ ಮೇಲಕ್ಕೆ ಕಳುಹಿಸಿಬಿಡುತ್ತೇವೆ ಎಂದು ಮಾತನಾಡುತ್ತಿದ್ದಾರೆ. ಆದರೆ, ಪಕ್ಷದೊಳಗೆ ಅಂತಹ ಯಾವುದೇ ಚರ್ಚೆಗಳು, ಮಾತುಗಳು ಇಲ್ಲ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ (Revenue Minister Krishna Byre Gowda) ಅವರು ಪವರ್‌ ಪಾಯಿಂಟ್‌ ವಿತ್ ಎಚ್‌ಪಿಕೆ (Power Point with HPK) ಸಂದರ್ಶನದಲ್ಲಿ ಹೇಳಿದರು.

ವಿಸ್ತಾರ ನ್ಯೂಸ್‌ ಪ್ರಧಾನ ಸಂಪಾದಕ ಹರಿಪ್ರಕಾಶ್‌ ಕೋಣೆಮನೆ (Hariprakash Konemane) ಅವರು ನಡೆಸಿಕೊಡುವ “ಪವರ್‌ ಪಾಯಿಂಟ್‌ ವಿತ್‌ ಎಚ್‌ಪಿಕೆ” ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಪಕ್ಷದೊಳಗೆ ಈ ಬಾರಿ ಗೆಲ್ಲುವ ಅಭ್ಯರ್ಥಿಯನ್ನು ಲೋಕಸಭೆಗೆ ಸ್ಪರ್ಧೆ ಮಾಡಿಸುವ ಚರ್ಚೆ ನಡೆದಿದೆ ಎಂದು ಹೇಳಿದರು.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ 20 ಸ್ಥಾನವನ್ನು ಗೆಲ್ಲಬೇಕೆಂದು ಕೇಂದ್ರದ ವರಿಷ್ಠರು ನಮಗೆ ಜವಾಬ್ದಾರಿ ನೀಡಿದ್ದಾರೆ. ಪಕ್ಷದ ಸಂಘಟನೆ, ಅಭ್ಯರ್ಥಿಗಳ ಗುರುತಿಸುವಿಕೆಗೆ ನಾವು ಈಗಿನಿಂದಲೇ ತಯಾರಿಯನ್ನು ಮಾಡುತ್ತೇವೆ ಎಂದು ಹೇಳಿದ್ದೇವೆ. ನಾನು ಅಭ್ಯರ್ಥಿಯಾಗುವ ಬಗ್ಗೆ ಹೇಳಬೇಕೆಂದರೆ, ಈ ಹಿಂದೆ ಪಕ್ಷದ ವರಿಷ್ಠರ ಸೂಚನೆ ಮೇರೆಗೆ ಒಲ್ಲದ ಮನಸ್ಸಿನಿಂದ ಒಮ್ಮೆ ಬೆಂಗಳೂರು ದಕ್ಷಿಣ ಹಾಗೂ ಮತ್ತೊಮ್ಮೆ ಬೆಂಗಳೂರು ಉತ್ತರದಲ್ಲಿ ನಾನು ಅಭ್ಯರ್ಥಿಯಾಗಿದ್ದೆ. ನಾನು ಎಂಟು ಚುನಾವಣೆಯನ್ನು ಎದುರಿಸಿದ್ದೇನೆ. ಮತ್ತೊಂದು ಚುನಾವಣೆಯನ್ನು ಎದುರಿಸುವಷ್ಟು ಆಸಕ್ತಿ ಇಲ್ಲ ಎಂದು ವರಿಷ್ಠರಿಗೆ ಹೇಳಿದ್ದೇನೆ. ಹೀಗಾಗಿ ಅಲ್ಲಿ ಬೇರೆ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಸ್ಪರ್ಧೆ ಮಾಡಿಸುತ್ತೇವೆ ಎಂದು ಹೇಳಿದ್ದೇನೆ. ಆದರೆ, ಪಕ್ಷ ಹೇಳಿದಾಗ ಇಲ್ಲ ಎಂದು ಹೇಳಲು ಸಾಧ್ಯವಿಲ್ಲ ಎಂದು ಕೃಷ್ಣ ಬೈರೇಗೌಡ ಸ್ಪಷ್ಟಪಡಿಸಿದರು.

ಪಕ್ಷದೊಳಗೆ ಆಂತರಿಕ ಭಿನ್ನಾಭಿಪ್ರಾಯ ಇರುವುದು ಹೌದು. ಕೆಲವು ಶಾಸಕರಿಗೆ ಸಚಿವರ ಮೇಲೆ ಅಸಮಾಧಾನ ಇರಬಹುದು. ನಾವದನ್ನು ಸರಿಪಡಿಸಿಕೊಳ್ಳುವ ಕೆಲಸವನ್ನು ಮಾಡುತ್ತೇವೆ. ಎಲ್ಲರೂ ಇಲ್ಲಿ ಒಟ್ಟಾಗಿ ಸಾಗಬೇಕಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಜನರು ನಮ್ಮ ಮೇಲೆ ವಿಶ್ವಾಸವನ್ನು ಇಟ್ಟಿದ್ದಾರೆ. ಹೀಗಾಗಿ ನಾನು ಶಾಸಕ, ಸಚಿವ ಎಂದು ಯಾರೂ ಹೋಗದೆ, ಜನರ ವಿಶ್ವಾಸಕ್ಕೆ ತಕ್ಕಂತೆ ಕೆಲಸವನ್ನು ಮಾಡಬೇಕಿದೆ. ಜನರ ಕೆಲಸಗಳನ್ನು ಈಡೇರಿಸುವುದು ನಮ್ಮದು ಪ್ರಮುಖ ಆದ್ಯತೆಯಾಗಿರಬೇಕು. ಇನ್ನು ನಮ್ಮ ಕಡೆ ತಿದ್ದುಪಡಿಯಾಗಬೇಕಿದ್ದರೆ ಸರಿಪಡಿಸಿಕೊಳ್ಳೋಣ. ಆ ನಿಟ್ಟಿನಲ್ಲಿ ನಾನು ಕೆಲಸ ಮಾಡುತ್ತೇನೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ಇದನ್ನೂ ಓದಿ: Power point with HPK : ಸರ್ಕಾರಿ ಜಮೀನು ಒತ್ತುವರಿ ತೆರವಿಗೆ ವಿಶೇಷ ಟಾಸ್ಕ್‌ಫೋರ್ಸ್‌ ; ಕಂದಾಯ ಸಚಿವ ಕೃಷ್ಣಬೈರೇಗೌಡ

ಇನ್ನು ದೆಹಲಿಯಲ್ಲಿ ನಡೆದ ಸಭೆಯಲ್ಲಿ ನಮಗೆ ವರಿಷ್ಠರು ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ. ಶಾಸಕರನ್ನು ಹಾಗೂ ಪಕ್ಷದ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು ಎಂದು ಸೂಚನೆಯನ್ನು ಕೊಟ್ಟಿದ್ದಾರೆ. ಆದರೆ, ಬರೀ ಇವರಿಬ್ಬರೇ ಅಲ್ಲ. ಮತ ಹಾಕಿದ ಜನರೂ ಇದ್ದು, ಅವರನ್ನೂ ಸಹ ವಿಶ್ವಾಸಕ್ಕೆ ತೆಗೆದುಕೊಂಡು ಜನ ಮೆಚ್ಚುವಂತೆ ಕೆಲಸ ಮಾಡಿ ಎಂದು ಸೂಚನೆ ನೀಡಿದ್ದಾರೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.

Exit mobile version