ತುಮಕೂರು: ವಿಧಾನಸಭಾ ಚುನಾವಣೆಯ (Sira Election Results) ಮತ ಎಣಿಕೆ ಕಾರ್ಯ ಶನಿವಾರ ನಡೆದಿದ್ದು, ಶಿರಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಟಿ.ಬಿ.ಜಯಚಂದ್ರ ಗೆಲುವು ಕಂಡಿದ್ದಾರೆ. ಇವರು 29,250 ಮತಗಳ ಅಂತರದಿಂದ ಜೆಡಿಎಸ್ ಅಭ್ಯರ್ಥಿ ಆರ್.ಉಗ್ರೇಶ್ ವಿರುದ್ಧ ವಿಜಯಿಯಾಗಿದ್ದಾರೆ.
ಈ ಬಾರಿ ಶಿರಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ 86,084 ಮತ ಪಡೆದಿದ್ದು, ಜೆಡಿಎಸ್ ಅಭ್ಯರ್ಥಿ ಆರ್.ಉಗ್ರೇಶ್ 56,834 ಮತ ಹಾಗಾ ಬಿಜೆಪಿ ಅಭ್ಯರ್ಥಿ ಸಿ.ಎಂ. ರಾಜೇಶ್ ಗೌಡ 42,329 ಮತಗಳನ್ನು ಪಡೆದಿದ್ದಾರೆ.
2018ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಬಿ.ಸತ್ಯನಾರಾಯಣ 74,338 ಮತಗಳಿಂದ ಗೆದ್ದಿದ್ದರು. ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ 63,973 ಮತಗಳನ್ನು ಪಡೆದಿದ್ದರು. ಆದರೆ, ಜೆಡಿಎಸ್ ಅಭ್ಯರ್ಥಿ ಬಿ.ಸತ್ಯನಾರಾಯಣ ಅವರು ನಿಧನರಾದ ಹಿನ್ನೆಲೆಯಲ್ಲಿ ತೆರವಾಗಿದ್ದ ಶಿರಾ ವಿಧಾನಸಭೆಗೆ 2020ರಲ್ಲಿ ಉಪಚುನಾವಣೆ ನಡೆದಿತ್ತು. ಮೊದಲ ಬಾರಿಗೆ ಚುನಾವಣೆ ಎದುರಿಸಿದ ಡಾ.ರಾಜೇಶ್ ಗೌಡ ಗೆಲುವು ಸಾಧಿಸಿದ್ದರು.
ಇದನ್ನೂ ಓದಿ | Chiknayakanhalli Election Results: ಚಿಕ್ಕನಾಯಕನಹಳ್ಳಿಯಲ್ಲಿ ಮಾಧುಸ್ವಾಮಿಗೆ ಮುಖಭಂಗ, ಜೆಡಿಎಸ್‌ನ ಸುರೇಶ್ ಬಾಬುಗೆ ಜಯ
ಕ್ಷೇತ್ರದ ಇತಿಹಾಸದಲ್ಲೇ ಮೊದಲ ಬಾರಿಗೆ ಬಿಜೆಪಿ ಖಾತೆ ತೆರೆದಿತ್ತು. ಉಪ ಚುನಾವಣೆಯಲ್ಲಿ ಮದಲೂರು ಕೆರೆ ನೀರು ಹರಿಸುವುದು, ಕಾಡುಗೊಲ್ಲರ ಮೀಸಲಾತಿ ವಿಚಾರ ಹಾಗೂ ಕಾಡುಗೊಲ್ಲರ ಅಭಿವೃದ್ಧಿ ನಿಗಮ ಬಿಜೆಪಿ ಗೆಲುವಿಗೆ ಸಹಕಾರಿಯಾಗಿತ್ತು. ಕೊಟ್ಟ ಮಾತಿನಂತೆ ಮದಲೂರು ಕೆರೆಗೆ ನೀರು ಹರಿಸಿದ್ದೇವೆ. ಅಭಿವೃದ್ಧಿ ಕೆಲಸ ಮಾಡಿದ್ದೇವೆ ಅಂತ ಹಾಲಿ ಶಾಸಕ ಡಾ.ರಾಜೇಶ್ ಗೌಡ ಪ್ರಚಾರ ಮಾಡಿದ್ದರು. ಆದರೆ, ಇದು ಫಲ ನೀಡಿಲ್ಲ.