Site icon Vistara News

ʼಉದಯವಾಣಿʼ ಸಂಸ್ಥಾಪಕ ಟಿ. ಮೋಹನ್‌ದಾಸ್‌ ಎಂ. ಪೈ ನಿಧನ

pai

ಉಡುಪಿ: ಆಧುನಿಕ ಮಣಿಪಾಲದ ಶಿಲ್ಪಿಗಳಲ್ಲಿ ಒಬ್ಬರಾದ ಟಿ. ಮೋಹನ್‌ದಾಸ್ ಎಂ. ಪೈ (89) ನಿಧನರಾಗಿದ್ದಾರೆ.

ಮಣಿಪಾಲದ ಶಿಲ್ಪಿ ಡಾ.ಟಿ.ಎಂ.ಎ. ಪೈ ಅವರ ಹಿರಿಯ ಪುತ್ರರಾದ ಮೋಹನ್‌ದಾಸ್ ಪೈ ಅವರು ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಭಾನುವಾರ ಮೃತಪಟ್ಟರು. ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ನಾಳೆ (ಸೋಮವಾರ) ಮೃತರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ನಿಧನ ಹಿನ್ನೆಲೆಯಲ್ಲಿ ಸೋಮವಾರ ಡಾ. ಟಿಎಂಎ ಪೈ ಫೌಂಡೇಶನ್‌ನ ವಿದ್ಯಾಸಂಸ್ಥೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಮೋಹನ್‌ದಾಸ್‌ ಪೈ ಅವರು ಡಾ. ಟಿಎಂಎ ಪೈ ಫೌಂಡೇಶನ್ ಹಾಗೂ ಎಂಜಿಎಂ ಕಾಲೇಜ್ ಟ್ರಸ್ಟ್‌ನ ಅಧ್ಯಕ್ಷರಾಗಿದ್ದರು. ಮೃತರು ಶಿಕ್ಷಣರಂಗ, ಮಾಧ್ಯಮರಂಗ ಹಾಗೂ ವೈದ್ಯಕೀಯ ರಂಗಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ್ದಾರೆ.

೧೯೩೩ ಜೂನ್‌ ೨೦ರಂದು ಜನಿಸಿದ ಪೈ ಅವರು, ಉಡುಪಿ, ಮಣಿಪಾಲಗಳಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ ಪಡೆದರು. ೧೯೪೯ರಲ್ಲಿ ತಂದೆ ಆರಂಭಿಸಿದ ಉಡುಪಿಯ ಎಂಜಿಎಂ ಕಾಲೇಜಿನ ಮೊದಲ ವಿದ್ಯಾರ್ಥಿ ತಂಡದಲ್ಲಿ ಒಬ್ಬರಾಗಿದ್ದರು. ಕೊಲ್ಲಾಪುರದಲ್ಲಿ ಕಾನೂನು ಶಿಕ್ಷಣ ಪಡೆದರು.

೧೯೭೦ರಲ್ಲಿ ಉದಯವಾಣಿ ದಿನಪತ್ರಿಕೆ ಸ್ಥಾಪಿಸಿ ಕನ್ನಡ ಪತ್ರಿಕೋದ್ಯಮದಲ್ಲಿ ಹೊಸ ಅಲೆಯನ್ನು ಮೂಡಿಸಿದರು. ಮಣಿಪಾಲ ಪ್ರೆಸ್‌ಗೆ ಗುಣಮಟ್ಟದ ಮುದ್ರಣ ಯಂತ್ರಗಳನ್ನು ವಿದೇಶದಿಂದ ಆಮದು ಮಾಡಿಕೊಂಡು ಪತ್ರಿಕೆಯನ್ನು ಅಚ್ಚುಕಟ್ಟಾಗಿ ಮುದ್ರಿಸಿ, ಚಂದದ ಮುದ್ರಣಕ್ಕಾಗಿ ಹಲವಾರು ವರ್ಷಗಳಲ್ಲಿ ಪ್ರಶಸ್ತಿಗಳನ್ನೂ ಪಡೆದಿದ್ದಾರೆ. ಕನ್ನಡಕ್ಕೆ ಅತ್ಯಾಧುನಿಕ ಆಫ್‌ಸೆಟ್‌ ಮಶೀನ್‌ ತಂತ್ರಜ್ಞಾನವನ್ನು ತಂದರು. ೧೯೮೩ರಲ್ಲಿ ತರಂಗ ವಾರಪತ್ರಿಕೆಯನ್ನು ಕಲರ್‌ ಪ್ರಿಂಟ್‌ನಲ್ಲಿ ತಂದರು. ನಂತರ ತುಷಾರ, ರೂಪತಾರಾ ಪತ್ರಿಕೆಗಳನ್ನೂ ಆರಂಭಿಸಿ ಜನಪ್ರಿಯಗೊಳಿಸಿದರು.

ಮಾಧ್ಯಮ ರಂಗಕ್ಕೆ ನೀಡಿರುವ ಕೊಡುಗೆಗಾಗಿ ಪತ್ರಿಕಾ ಅಕಾಡೆಮಿಯಿಂದ ಪುರಸ್ಕಾರ ಪಡೆದಿದ್ದಾರೆ. ಇಂಡಿಯನ್‌ ನ್ಯೂಸ್‌ಪೇಪರ್‌ ಸೊಸೈಟಿಯ (ಐಎನ್‌ಎಸ್‌) ಕಾರ್ಯನಿರ್ವಾಹಕ ಸಮಿತಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕಲೆಯ ಬಗ್ಗೆ ತುಂಬಾ ಆಸಕ್ತಿ ಹೊಂದಿದ್ದ ಅವರು. ಸಾಂಪ್ರದಾಯಿಕ ಮನೆಗಳ ಸಾಂಸ್ಕೃತಿಕ ಕೇಂದ್ರವಾದ ಹೆರಿಟೇಜ್‌ ವಿಲೇಜ್‌ ರೂವಾರಿಗಳಲ್ಲಿ ಒಬ್ಬರಾಗಿದ್ದರು.

Exit mobile version