Site icon Vistara News

TA Sharavana : ರಿಕವರಿ ಹೆಸರಿನಲ್ಲಿ ಚಿನ್ನದ ಅಂಗಡಿ ಮಾಲೀಕರಿಗೆ ಪೊಲೀಸ್‌ ಕಿರುಕುಳ; ಶರವಣ ಆಕ್ರೋಶ

TA Saravana

ಬೆಂಗಳೂರು: ರಾಜಧಾನಿ ಸೇರಿದಂತೆ ರಾಜ್ಯಾದ್ಯಂತ ಪೊಲೀಸರು ಚಿನ್ನಾಭರಣಗಳ ರಿಕವರಿ (Recovery of gold) ನೆಪದಲ್ಲಿ ಗಿರವಿ ಅಂಗಡಿ ಹಾಗೂ ಚಿನ್ನದ ಅಂಗಡಿ ಮಾಲೀಕರಿಗೆ ಕಿರುಕುಳ (Harrassment to jewellers and pawn Shoppers) ನೀಡಿ ಅಮಾನವೀಯವಾಗಿ (Inhuman attitude) ವರ್ತಿಸುತ್ತಿದ್ದಾರೆ. ಇದು ಕೊನೆಯಾಗಬೇಕು ಎಂದು ರಾಜ್ಯ ವಿಧಾನ ಪರಿಷತ್‌ನಲ್ಲಿ ಸದಸ್ಯ ಡಾ. ಟಿ.ಎ ಶರವಣ (TA Sharavana) ಅವರು ಆಗ್ರಹಿಸಿದರು.

ವಿಧಾನ ಪರಿಷತ್‌ನಲ್ಲಿ ಗೃಹ ಇಲಾಖೆಯನ್ನು ಉದ್ದೇಶಿಸಿ ಪ್ರಶ್ನೆ ಕೇಳಿದ ಅವರು ರಿಕವರಿ ಹೆಸರಿನಲ್ಲಿ ಚಿತ್ರ ಹಿಂಸೆ ನೀಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು

ಟಿ.ಎ ಶರವಣ ಅವರ ಪ್ರಶ್ನೆಗೆ ಲಿಖಿತ ಉತ್ತರ ಕೊಟ್ಟು ಸದನದಲ್ಲಿ ಅದನ್ನು ಮಂಡಿಸಿದ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು, ನ್ಯಾಯಾಲಯದ ಸೂಚನೆಯಂತೆ ರಿಕವರಿ ಸಂದರ್ಭದಲ್ಲಿ ಪಾಲಿಸಬೇಕಾದ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಲಾಗಿದೆ. ಅದರಲ್ಲಿ 19 ನಿಯಮಗಳಿಗೆ ಅದರ ಆಧಾರದಲ್ಲೇ ಕಳ್ಳತನ ಮಾಡಲಾದ ಚಿನ್ನಾಭರಣಗಳ ರಿಕವರಿ ಪ್ರಕ್ರಿಯೆ ನಡೆಯುತ್ತದೆ ಎಂದು ಹೇಳಿದರು. ಆಗ ಶರವಣ ಅವರು, ಎಲ್ಲ ನಿಯಮಗಳಿವೆ. ಆದರೆ, ಯಾವುದೇ ನಿಯಮಗಳನ್ನು ಪಾಲಿಸಲಾಗುತ್ತಿಲ್ಲ ಎಂದು ವಿವರಿಸಿದರು. ಆಗ ಸಚಿವರು ನಿಯಮ ಉಲ್ಲಂಘಿಸಿದ ಪ್ರಕರಣಗಳಿದ್ದರೆ ಗಮನಕ್ಕೆ ತರುವಂತೆ ತಿಳಿಸಿದರು.

ಬಳಿಕ ವಿಷಯದ ಬಗ್ಗೆ ವಿವರವಾಗಿ ಮಾತನಾಡಿದ ಟಿ. ಶರವಣ ಅವರು ಗಿರವಿ ಮತ್ತು ಚಿನ್ನದ ಅಂಗಡಿಗಳ ಮಾಲೀಕರು ರಿಕವರಿ ಸಂದರ್ಭದಲ್ಲಿ ಎದುರಿಸುತ್ತಿರುವ ನೋವು, ಅಪಮಾನಗಳನ್ನು ತೆರೆದಿಟ್ಟರು.

ಅವರು ಮಂಡಿಸಿದ ಪ್ರಮುಖ ಅಂಶಗಳು ಇವು

  1. ಚಿನ್ನಾಭರಣಗಳ ರಿಕವರಿಗೆ ಹೋಗುವಾಗ ನೀವು ರೂಪಿಸಿದ 19 ನಿಯಮಗಳಲ್ಲಿ ಒಂದನ್ನೂ ಪಾಲಿಸಲಾಗುತ್ತಿಲ್ಲ.
  2. ಪೊಲೀಸರು ಅಂಗಡಿಗೆ ಹೋಗುವಾಗ ಪೊಲೀಸ್‌ ದಿರಸು ಧರಿಸಿಯೇ ಹೋಗಬೇಕು ಎಂಬ ಸೂಚನೆ ಇದೆ. ಆದರೆ, ಸಿವಿಲ್‌ ಡ್ರೆಸ್‌ನಲ್ಲಿಯೇ ಹೋಗುತ್ತಾರೆ. ಬಂದವರು ಪೊಲೀಸರೋ ಕಳ್ಳರೋ ಎಂದು ಹೇಗೆ ಗೊತ್ತಾಗಬೇಕು.
  3. ಪೊಲೀಸರು ಅಂಗಡಿ ಮಾಲೀಕರ ಜತೆ ಸೌಜನ್ಯದಿಂದ ವರ್ತಿಸಬೇಕು ಎಂದಿದೆ, ಅಮಾನವೀಯವಾಗಿ ವರ್ತಿಸುತ್ತಾರೆ.
  4. ಅಂಗಡಿಗೆ ಭೇಟಿ ನೀಡುವ ಸಂದರ್ಭದ ಪ್ರತಿ ದೃಶ್ಯ ಮತ್ತು ಸಂಭಾಷಣೆಯನ್ನು ದಾಖಲು ಮಾಡಬೇಕು ಎಂಬ ಸೂಚನೆ ಇದೆ. ಆದರೆ, ಚಿತ್ರೀಕರಿಸುವುದು ಬಿಡಿ, ಚಿತ್ರೀಕರಣವಾಗುತ್ತಿರುವ ಸಿಸಿ ಟಿವಿ ಫೂಟೇಜ್‌ಗಳನ್ನೇ ಬಂದ್‌ ಮಾಡಿಸುತ್ತಾರೆ.
  5. ಪೊಲೀಸರು ಚಿನ್ನಾಭರಣ ಅಂಗಡಿಯಲ್ಲಿ ವಿಚಾರಣೆ ನಡೆಸಬೇಕು ಎಂದರೆ ಯಾವ ಪ್ರಕರಣ, ಏನು ಕೇಸು ಎನ್ನುವ ಸಂಪೂರ್ಣ ಮಾಹಿತಿಯನ್ನು ನೀಡಬೇಕು. ಆದರೆ, ಯಾವುದನ್ನೂ ನೀಡಲಾಗುತ್ತಿಲ್ಲ.
  6. ಅಂಗಡಿಗೆ ಬಂದು ಬೆದರಿಕೆ ವಿಚಾರಣೆ ನಡೆಸುತ್ತಾರೆ, ಠಾಣೆಗೆ ಕರೆದೊಯ್ಯುತ್ತಾರೆ. ಆದರೆ, ಯಾವುದೇ ಮಾಹಿತಿಯನ್ನು ಕೊಡುವುದಿಲ್ಲ.
  7. ಠಾಣೆಗೆ ಕರೆದೊಯ್ಯವ ಸಂದರ್ಭದಲ್ಲಿ ಕನಿಷ್ಠ ಮನೆಯವರಿಗೂ ಮಾಹಿತಿ ನೀಡಲು ಅವಕಾಶ ನೀಡುವುದಿಲ್ಲ. ಅಪರಾಧಿಗಳಂತೆ ನಡೆಸಿಕೊಳ್ಳುತ್ತಾರೆ.
  8. ಪೊಲೀಸರಿಂದ ವಸೂಲಿಗಳು ಹೆಚ್ಚುತ್ತಿವೆ. ಠಾಣೆಗೆ ಕರೆದುಕೊಂಡು ಹೋಗಿ ಕಾಲು ಕೆಜಿ ಚಿನ್ನ ಕೊಡು, ಅರ್ಧ ಕೆಜಿ ಚಿನ್ನ ಕೊಡು ಬಿಡುತ್ತೇವೆ, ಇಲ್ಲವಾದರೆ ಫಿಕ್ಸ್‌ ಮಾಡುತ್ತೇವೆ ಎಂದು ಬೆದರಿಸುತ್ತಾರೆ.
  9. ಜಿಎಸ್‌ಟಿ ಸೇರಿ ಎಲ್ಲ ರೀತಿಯ ತೆರಿಗೆಗಳನ್ನು ಕಟ್ಟುವ ಅಂಗಡಿಕಾರರನ್ನು ಅಪರಾಧಿಗಳಂತೆ ನಡೆಸಿಕೊಳ್ಳಲಾಗುತ್ತದೆ.
  10. ಅದರಲ್ಲೂ ಹಲಸೂರು ಗೇಟ್, ಸಿಟಿ ಮಾರ್ಕೆಟ್,ಚಿಕ್ಪೇಟೆ ಅವಿನ್ಯೂ ರಸ್ತೆಗಳಲ್ಲಿ ಈ ರೀತಿಯ ವಸೂಲಿಗಳು ಹೆಚ್ಚುತ್ತಿದೆ.
  11. ಬಹುತೇಕ ಉತ್ತರ ಭಾರತದ ಜನರು ಇಲ್ಲಿ ಅಂಗಡಿಯನ್ನು ತೆರೆದು ಜೀವನ ನಡೆಸುತ್ತಿರುತ್ತಾರೆ, ಅವರನ್ನು ಬೆದರಿಸುವ ಕೆಲಸ ನಡೆಯುತ್ತದೆ, ಇದರಿಂದಾಗಿ ನಮ್ಮ ರಾಜ್ಯದ ಮೇಲೆ ಅವರಿಗೆ ಬೇಸರ ಮೂಡುವಂತಾಗುತ್ತದೆ.
  12. ಅಪರಾಧಿಗಳಿಗೆ ಶಿಕ್ಷೆ ಆಗಬಹುದು ಆದರೆ ಯಾವ ನಿರಪರಾಧಿಗೂ ಅವಮಾನ ಎದುರಿಸುವ ಸಂದರ್ಭ ಬರಬಾರದು ಹಾಗೂ ಶಿಕ್ಷೆ ಆಗಬಾರದು.

ಟಿ.ಎ ಶರವಣ ಅವರ ಈ ಮಾತುಗಳಿಗೆ ಸಭಾಪತಿಗಳು ಕೂಡಾ ದನಿಗೂಡಿಸಿದರು. ಈ ಬಗ್ಗೆ ಆದಷ್ಟು ಬೇಗ ಕ್ರಮ ಕೈಗೊಳ್ಳುವಂತೆ ಸಚಿವರಿಗೆ ಮನವಿ ಮಾಡಿದರು.

ಇದನ್ನು ಓದಿ: Legislative Council : 5495 ಕೋಟಿ ರೂ. ವಿಶೇಷ ಅನುದಾನ ನೀಡಲು ಕೇಂದ್ರ ಹಿಂದೇಟು; ಶರವಣ ಪ್ರಶ್ನೆಗೆ ಸಿಎಂ ಉತ್ತರ

Exit mobile version