ಹಾಸನ: ಮದುವೆಯಾಗಿದ್ದ ಯುವತಿಯೊಬ್ಬಳಿಗೆ ಮೆಸೇಜ್ ಮಾಡಿದ ವಿಚಾರಕ್ಕೆ ಶುರುವಾದ ಜಗಳವೊಂದು ಕೊಲೆಯಲ್ಲಿ ಅಂತ್ಯವಾಗಿದೆ. ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಶ್ರೀನಿವಾಸಪುರ ಬಳಿಯ ಊಪಿನಹಳ್ಳಿ ಗ್ರಾಮದ ಗಂಗಾಧರ ಕೊಲೆಯಾದವನು.
ವೃತ್ತಿಯಲ್ಲಿ ಟೈಲರ್ ಆಗಿರುವ ಗಂಗಾಧರನನ್ನು ಗುರುವಾರ ಮಧ್ಯಾಹ್ನ ಯುವಕರ ತಂಡವೊಂದು ಕಾರಿನಲ್ಲಿ ಬಂದು ಅಪಹರಿಸಿಕೊಂಡು ಹೋಗಿತ್ತು. ಬಳಿಕ ಮಧ್ಯ ಭಾಗದಲ್ಲೆಲ್ಲೋ ಆತನನ್ನು ಇಳಿಸಿ ಚೆನ್ನಾಗಿ ದೊಣ್ಣೆಯಿಂದ ಥಳಿಸಿ ಯುವಕರ ತಂಡ ಪರಾರಿಯಾಗಿತ್ತು.
ತೀವ್ರವಾಗಿ ಗಾಯಗೊಂಡಿದ್ದ ಗಂಗಾಧರ್ ಅದರ ನಡುವೆಯೂ ತನ್ನ ಅಣ್ಣ ಮೋಹನ್‌ಗೆ ಕರೆ ಮಾಡಿ ವಿಷಯ ತಿಳಿಸಿದ್ದ. ಮೋಹನ್ ಕೂಡಲೇ ಧಾವಿಸಿ ಗಂಗಾಧರನನ್ನು ಕರೆದುಕೊಂಡು ಬಂದು ಚನ್ನರಾಯಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಗಂಗಾಧರ ಚಿಕಿತ್ಸೆ ಫಲಕಾರಿಯಾಗದೆ ಪ್ರಾಣ ಕಳೆದುಕೊಂಡಿದ್ದಾನೆ.
ಚನ್ನರಾಯಪಟ್ಟಣ ನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಗಂಗಾಧರ ಇತ್ತೀಚೆಗೆ ವಿವಾಹಿತ ಮಹಿಳೆಯೊಬ್ಬರಿಗೆ ಮೆಸೇಜ್ ಮಾಡುತ್ತಿದ್ದ ಎನ್ನಲಾಗಿದ್ದು, ಇದನ್ನು ಆಕೆಯ ಮನೆಯವರು ಪ್ರಶ್ನಿಸಿದ್ದರು ಎನ್ನಲಾಗಿದೆ. ಇದೀಗ ಆತನಿಗೆ ಪಾಠ ಕಲಿಸಬೇಕು ಎಂದು ಮಾಡಿದ ಯತ್ನ ಸಾವಿನಲ್ಲಿ ಕೊನೆಯಾಗಿದೆ.
ಇದನ್ನೂ ಓದಿ | Murder Case | ಪತ್ನಿಯ ಅನುಮಾನಿಸಿ ಕೊಚ್ಚಿ ಕೊಂದ; ತಾನೂ ಕತ್ತು ಕೊಯ್ದು ಆತ್ಮಹತ್ಯೆಗೆ ಯತ್ನಿಸಿದ