Site icon Vistara News

KDP Meeting: ಸುಳ್ಳು ಸುದ್ದಿ ಹರಡುವ, ಶಾಂತಿ ಕದಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಿ: ಸಿಎಂ ಸಿದ್ದರಾಮಯ್ಯ

CM Siddaramaiah

ಮೈಸೂರು: ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡುವವರು, ಶಾಂತಿ ಕದಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕು. ಸುಳ್ಳು ಸುದ್ದಿ ಹರಡುವವರ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿ ಜೈಲಿಗೆ ತಳ್ಳಿ. ಡ್ರಗ್ಸ್ ವಿಚಾರದಲ್ಲಿ ಮೈಸೂರು ವಲಯದಲ್ಲಿ ಜೀರೋ ಟಾಲರೆನ್ಸ್ ಇರಬೇಕು. ಮೈಸೂರು ಸಾಂಸ್ಕೃತಿಕ ನಗರಿ. ಇಲ್ಲಿ ಡ್ರಗ್ಸ್ ಮೇನಿಯಾ, ಮಾಫಿಯಾಗೆ ಅವಕಾಶ ಇರಬಾರದು ಎಂದು ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದರು.

ನಗರದ ಜಿಲ್ಲಾ ಪಂಚಾಯತ್‌ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿದರು. ಆದಿವಾಸಿಗಳಿಗೆ 4 ತಿಂಗಳಿಂದ ಆಹಾರ ನೀಡುತ್ತಿಲ್ಲ ಎನ್ನುವ ವರದಿಗೆ ಸಂಬಂಧಪಟ್ಟಂತೆ ಗರಂ ಆದ ಸಿಎಂ, ನಿಮಗೆ ಆರು ತಿಂಗಳು ಸಂಬಳ ನಿಲ್ಲಿಸಿದರೆ ಏನಾಗುತ್ತದೆ ಎನ್ನುವ ಪ್ರಜ್ಞೆ ಇದೆಯೇ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಆ.30ರಂದು ಗೃಹ ಲಕ್ಷ್ಮಿ ಯೋಜನೆ ಉದ್ಘಾಟನೆ ಕಾರ್ಯಕ್ರಮದ ವೇಳೆ ಸಾರ್ವಜನಿಕರಿಗೆ ಟ್ರಾಫಿಕ್ ಕಿರಿಕಿರಿಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎನ್ನುವ ಸೂಚನೆ ನೀಡಿದರು. ನಂತರ ಇಲಾಖಾವಾರು ಪ್ರಗತಿ ಪರಿಶೀಲನೆ ನಡೆಸಿದರು.

ಇದನ್ನೂ ಓದಿ | Gruha Lakshmi Scheme: ಆ.30ಕ್ಕೆ ಗೃಹಲಕ್ಷ್ಮಿ ಯೋಜನೆಗೆ ಚಾಲನೆ; ಮೈಸೂರಿನಲ್ಲಿ ಕಾರ್ಯಕ್ರಮದ ಸಿದ್ಧತೆ ವೀಕ್ಷಿಸಿದ ಡಿಕೆಶಿ‌, ಹೆಬ್ಬಾಳ್ಕರ್

ಇಲಾಖೆಗಳ ನಡುವೆ ಹೊಂದಾಣಿಕೆ ಇರಬೇಕು. ಬಹಳಷ್ಟು ಇಲಾಖೆಗಳ ನಡುವೆ ಅಂತರ್ ಸಂಬಂಧ ಇರುತ್ತದೆ. ಹೀಗಾಗಿ ಪರಸ್ಪರ ಹೊಂದಾಣಿಕೆಯಿಂದ ಸಮಸ್ಯೆಗಳನ್ನು ಗುರುತಿಸಿ, ಪರಿಹಾರ ಕಂಡುಕೊಳ್ಳಬೇಕು. ಜಿಲ್ಲಾಧಿಕಾರಿಗಳು ಎಲ್ಲಾ ಇಲಾಖೆಗಳ ನಡುವೆ ಹೊಂದಾಣಿಕೆಯಿಂದ ತೀರ್ಮಾನ ತೆಗೆದುಕೊಳ್ಳುವಂತೆ ನೋಡಿಕೊಳ್ಳಬೇಕು. ನಾನು ಕೆಡಿಪಿ ಸಭೆ ಕರೆದಾಗ ರಾಜ್ಯ ಮಟ್ಟದ ಅಧಿಕಾರಿಗಳೂ ಸಭೆಗೆ ಬರಬೇಕು. ಸಭೆಗೆ ಆಹ್ವಾನ ಹೋದರೂ ಬರದಿದ್ದರೆ ಅಂತಹ ಅಧಿಕಾರಿಗಳ ಮೇಳೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಅಧಿಕಾರಿಗಳು ಪ್ರೋಟೋಕಾಲ್ ಪಾಲಿಸಬೇಕು. ಅಧಿಕಾರಿಗಳೇ ರಾಜಕೀಯ ಮಾಡಬಾರದು. ಚುನಾಯಿತ ಪ್ರತಿನಿಧಿಗಳು ಯಾವುದೇ ಪಕ್ಷದವರಾಗಿದ್ದರೂ ಸರ್ಕಾರದ ಕಾರ್ಯಕ್ರಮಗಳಲ್ಲಿ ಕಡ್ಡಾಯವಾಗಿ ಪ್ರೋಟೋಕಾಲ್ ಪಾಲಿಸಬೇಕು ಎಂದು ಸೂಚಿಸಿದರು.

ತೋಟಗಾರಿಕಾ ಇಲಾಖೆ

• ತೆಂಗು, ರೇಷ್ಮೆ ಮತ್ತಿತರ ಬೆಳೆಗಳು ನಾಶ ಆಗದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು. ಸಂಬಂಧಪಟ್ಟ ವಿಜ್ಞಾನಿಗಳ ಜತೆ ಚರ್ಚಿಸಿ ಪರಿಹಾರ ಕಂಡುಕೊಂಡು ಕಾಯಿಲೆ ವ್ಯಾಪಕವಾಗಿ ಆವರಿಸುವ ಮೊದಲೇ ರಕ್ಷಣಾತ್ಮಕ ಕ್ರಮ ಕೈಗೊಳ್ಳಬೇಕು.

ಆರೋಗ್ಯ ಇಲಾಖೆ

• ಜಿಲ್ಲಾ ಆಸ್ಪತ್ರೆಗಳಲ್ಲಿ ಅಲ್ಟ್ರಾಸೌಂಡ್, ಸಿಟಿ ಸ್ಕ್ಯಾನ್, ಎಂಆರ್‌ಐ, ಎಕ್ಸ್‌ರೇ ಸೇರಿ ಎಲ್ಲಾ ತಪಾಸಣಾ ವ್ಯವಸ್ಥೆ ಇರಬೇಕು. ರಾಷ್ಟ್ರೀಯ ಆರೋಗ್ಯ ಮಿಷನ್ ಯೋಜನೆಯ ಹಣ ಖರ್ಚೇ ಆಗುತ್ತಿಲ್ಲ. ಹಾಗೇ ಉಳಿದಿದೆ. ಮತ್ತೊಂದು ಕಡೆ ಆಸ್ಪತ್ರೆಗಳಲ್ಲಿ ಅಗತ್ಯ ಸಲಕರಣೆಗಳೇ ಇಲ್ಲ ಏಕೆ ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳನ್ನು ಪ್ರಶ್ನಿಸಿದರು.

• ಜಿಲ್ಲಾ ಆರೋಗ್ಯಾಧಿಕಾರಿಗಳು ತಾಲೂಕು ಆಸ್ಪತ್ರೆಗಳಿಗೆ ಖುದ್ದಾಗಿ ಭೇಟಿ ನೀಡಬೇಕು. ಭೇಟಿ ನೀಡಿದ ಬಗ್ಗೆ ಡೈರಿ ಬರೆಯಬೇಕು ಎಂದು ಸೂಚಿಸಿದ ಮುಖ್ಯಮಂತ್ರಿಗಳು, ಗ್ರಾಮೀಣ ಭಾಗದಲ್ಲಿ ವೈದ್ಯರಿಗಾಗಿಯೇ ಕಟ್ಟಿಸಿರುವ ಕ್ವಾರ್ಟರ್ಸ್‌ಗಳಿವೆ. ಅಲ್ಲಿ ಏಕೆ ವೈದ್ಯರು ಉಳಿದುಕೊಳ್ಳುತ್ತಿಲ್ಲ. ನೀವು ಏನು ಮಾಡುತ್ತಿದ್ದೀರಿ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

• ಜಿಲ್ಲಾ ಸರ್ಜನ್, ಜಿಲ್ಲಾ ಆರೋಗ್ಯಾಧಿಕಾರಿ ಮತ್ತು ಮೆಡಿಕಲ್ ಕಾಲೇಜಿನ ಡೀನ್‌ಗಳಿಗೆ ಪ್ರತ್ಯೇಕ ಜವಾಬ್ದಾರಿಗಳಿರುತ್ತವೆ. ನೀವು ನಿಮ್ಮ ಜವಾಬ್ದಾರಿಯನ್ನು ಪರಸ್ಪರ ಹೊಂದಾಣಿಕೆಯಿಂದ ನಿರ್ವಹಿಸದೇ ಹೋದರೆ ಆರೋಗ್ಯ ವ್ಯವಸ್ಥೆ ಏರುಪೇರಾಗುತ್ತದೆ. ಹಾಗೇನಾದರೂ ಆದರೆ ನೀವುಗಳೇ ನೇರ ಹೊಣೆ. ಕ್ರಮ ಎದುರಿಸಲು ಸಿದ್ಧರಿರಿ ಎಂದು ಮೂವರಿಗೂ ಎಚ್ಚರಿಸಿದರು.

• ಕೆ.ಆರ್.ಆಸ್ಪತ್ರೆಗೆ ನೂರು ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಈ ಆಸ್ಪತ್ರೆಯನ್ನು ಉನ್ನತೀಕರಿಸುವುದು ಸೇರಿ ಇನ್ನಿತರೆ ಅಗತ್ಯತತೆಗಳನ್ನು ಪೂರೈಸುವ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ.ಮಹದೇವಪ್ಪ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲು ಸೂಚಿಸಲಾಯಿತು.

ಇದನ್ನೂ ಓದಿ | Karnataka Politics: ಪ್ರಾದೇಶಿಕ ಪಕ್ಷ ಉಳಿಸುವುದೇ ನಮ್ಮ ಗುರಿ: ಎಚ್‌.ಡಿ.ದೇವೇಗೌಡ

ನಗರಾಡಳಿತ

• ಸಿಎ ಸೈಟ್‌ಗಳಿಗೆ ಕಡ್ಡಾಯವಾಗಿ ಭೇಟಿ ನೀಡಿ ಪರಿಶೀಲಿಸಬೇಕು. ಯಾವ ಉದ್ದೇಶಕ್ಕೆ ಸಿಎ ಸೈಟ್‌ಗಳನ್ನು ನೀಡಲಾಗಿದೆಯೋ ಅದೇ ಉದ್ದೇಶಕ್ಕೆ ಅದು ಬಳಕೆ ಆಗುತ್ತಿರಬೇಕು. ಇಲ್ಲದಿದ್ದರೆ ತಕ್ಷಣ ಅಂತಹ ಸೈಟ್‌ಗಳನ್ನು ವಾಪಸ್ ವಶಕ್ಕೆ ಪಡೆಯಬೇಕು ಎಂದು ಮೂಡ ಆಯುಕ್ತರಿಗೆ ಸಿಎಂ ಸೂಚನೆ ನೀಡಿದರು.

• ಮೈಸೂರು ಕ್ಲೀನ್ ಸಿಟಿಯಾಗಿ ಇನ್ನಷ್ಟು ಉನ್ನತೀಕರಿಸುವ ನಿಟ್ಟಿನಲ್ಲಿ ಪಾಲಿಕೆ, ಮೂಡ, ಅರಣ್ಯ, ಕುಡಿಯುವ ನೀರು ಸರಬರಾಜು ಇಲಾಖೆ ಸೇರಿ ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಅಧಿಕಾರಿಗಳು ಒಟ್ಟಾಗಿ ಬಸ್‌ನಲ್ಲಿ ನಗರ ಪ್ರದಕ್ಷಿಣೆ ಮಾಡಿ ಪರಸ್ಪರ ಹೊಂದಾಣಿಕೆಯಿಂದ ಕ್ರಮ ಕೈಗೊಳ್ಳಬೇಕು. ಜಿಲ್ಲಾ ಉಸ್ತುವಾರಿ ಸಿಚಿವರ ನೇತೃತ್ವದಲ್ಲೇ ಇದು ನಡೆಯಬೇಕು ಎಂದು ಸೂಚಿಸಿದರು.

• ಹೊಸ ಬಡಾವಣೆಗಳಿಗೆ ಕಣ್ಣುಮುಚ್ಚಿಕೊಂಡು ಅನುಮತಿ ನೀಡಬಾರದು. ಮೈಸೂರಿನಲ್ಲೂ ಬೆಂಗಳೂರಿನಂತೆ ಅಕ್ರಮ ಬಡಾವಣೆಗಳು ಮತ್ತು ಅವೈಜ್ಞಾನಿಕ ಬಡಾವಣೆಗಳು, ಅಗತ್ಯ ಸೌಲತ್ತುಗಳಿಲ್ಲದ ಬಡಾವಣೆಗಳು ನಿರ್ಮಾಣವಾಗದಂತೆ ಕಟ್ಟುನಿಟ್ಟಾಗಿ ತಡೆಯಬೇಕು.

ಶಿಕ್ಷಣ

• ಶಿಕ್ಷಣ ಸೂಚ್ಯಂಕದಲ್ಲಿ ಮೈಸೂರು ಜಿಲ್ಲೆ ಹಿಂದುಳಿದಿರುವುದಕ್ಕೆ ಜಿಲ್ಲಾ ಶಿಕ್ಷಣಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಮುಖ್ಯಮಂತ್ರಿಗಳು, ಬಿಇಒ ಕಚೇರಿಗಳಿಗೆ ಮತ್ತು ಶಾಲೆಗಳಿಗೆ ಭೇಟಿ ನೀಡಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಕ್ರಮ ತೆಗೆದುಕೊಳ್ಳಬೇಕು. ರಾಜ್ಯದ ಮೊದಲ ವಿಶ್ವ ವಿದ್ಯಾಲಯ ಆರಂಭವಾಗಿದ್ದು ಮೈಸೂರಿನಲ್ಲಿ. ಇಂತಹ ಜಿಲ್ಲೆ ಶಿಕ್ಷಣ ಸೂಚ್ಯಂಕದಲ್ಲಿ ಹಿಂದುಳಿಯಬಾರದು ಎಂದು ಸೂಚನೆ ನೀಡಿದರು.

• ಶೂನ್ಯ ದಾಖಲಾತಿ ಶಾಲೆಗಳ ವ್ಯಾಪ್ತಿಯ ಪೋಷಕರ ಸಭೆ ನಡೆಸಬೇಕು. ಪೋಷಕರ ಅಭಿಪ್ರಾಯವನ್ನು ಸಮಗ್ರವಾಗಿ ಸಂಗ್ರಹಿಸಿ ಕ್ರಮ ತೆಗೆದುಕೊಳ್ಳಬೇಕು. ಕೇವಲ ಇಂಗ್ಲಿಷ್ ವ್ಯಾಮೋಹದಿಂದ ಸರ್ಕಾರಿ ಶಾಲೆಗಳಿಗೆ ಸೇರುತ್ತಿಲ್ಲ ಎನ್ನುವ ವಾದ ವೈಜಾನಿಕವಲ್ಲ. ಶಿಕ್ಷಣದ ಗುಣಮಟ್ಟವೂ ಕಾರಣ ಆಗಿರುತ್ತದೆ. ಆದ್ದರಿಂದ ಗುಣಮಟ್ಟದ ಶೀಕ್ಷಣ ಹೆಚ್ಚಿಸಲು ಶಿಕ್ಷಕರಿಗೆ ತರಬೇತಿ ನೀಡುವುದೂ ಸೇರಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿ, ಮುಂದಿನ ವರ್ಷ ಶಿಕ್ಷಣ ಸೂಚ್ಯಂಕದಲ್ಲಿ ಮೊದಲ ಐದು ಸ್ಥಾನಗಳ ಒಳಗೆ ಬರಬೇಕು. ಇಲ್ಲದಿದ್ದರೆ ಕ್ರಮ ತೆಗೆದುಕೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಮುಖ್ಯಮಂತ್ರಿಗಳು ಎಚ್ಚರಿಸಿದರು.

ಇಂಧನ ಇಲಾಖೆ

ಹಾಳಾದ ಟ್ರಾನ್ಸ್‌ಫಾರ್ಮರ್‌ಗಳನ್ನು ನಿಗದಿತ ಅವಧಿಯಲ್ಲಿ ಬದಲಾಯಿಸದೆ ರೈತರಿಗೆ ಸತಾಯಿಸುತ್ತಿರುವ ಬಗ್ಗೆ ವ್ಯಾಪಕ ದೂರುಗಳು ಬಂದ ಹಿನ್ನೆಲೆಯಲ್ಲಿ ಮೆಸ್ಕಾಂ ಎಂಡಿ ಮತ್ತು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಮುಖ್ಯಮಂತ್ರಿಗಳು, ನೀವು ರೈತರ ಮತ್ತು ಜನಪ್ರತಿನಿಧಿಗಳ ದೂರವಾಣಿ ಕರೆಗಳನ್ನೇ ಸ್ವೀಕರಿಸುತ್ತಿಲ್ಲ. ರೈತರು ಬಹಳ ಸಂಕಷ್ಟದಲ್ಲಿ ಇದ್ದಾರೆ. ಅವರಿಗೆ ಸತಾಯಿಸಬೇಡಿ. ಟ್ರಾನ್ಸ್‌ಫಾರ್ಮರ್ ಸುಟ್ಟು ಹೋದರೆ ನಿಗದಿತ ಅವಧಿ 72 ಗಂಟೆಯೊಳಗೆ ರಿಪೇರಿ ಮಾಡಬೇಕು ಎಂದು ಖಡಕ್ ಸೂಚನೆ ನೀಡಿದರು.

ಕುಡಿಯುವ ನೀರು

ಕುಡಿಯುವ ನೀರಿಗೆ ಕೊರತೆ ಆಗದಂತೆ ಅಗತ್ಯ ಎಲ್ಲಾ ಕ್ರಮ ಕೈಗೊಳ್ಳಬೇಕು. ಎಷ್ಟೇ ಹಣ ಖರ್ಚಾದರೂ ಕೊಡಲು ನಾವು ಸಿದ್ಧರಿದ್ದೇವೆ. ಕುಡಿಯುವ ನೀರಿನ ವಿಚಾರದಲ್ಲಿ ಪರ್ಯಾಯ ನೀರಿನ ಮೂಲಗಳನ್ನು ಬಳಸಲು ಯಾವುದೇ ಅಡ್ಡಿ ಆಗಬಾರದು ಎಂದು ಸ್ಪಷ್ಟ ಸೂಚನೆ ನೀಡಿದರು.

ಸಾರಿಗೆ ಇಲಾಖೆ

ಕೊರೊನಾ ಅವಧಿಯಲ್ಲಿ ಬಂದ್ ಆಗಿರುವ ಬಸ್ ಮಾರ್ಗಗಳು ಪುನರ್ ಚಾಲನೆ ಆಗುವುದೂ ಸೇರಿದಂತೆ ಐದು ಜಿಲ್ಲೆಗಳ ಶಾಸಕರ ಸಭೆ ಕರೆದು ಹೊಸ ಬಸ್ ಮಾರ್ಗಗಳ ಅಗತ್ಯ ಎಲ್ಲೆಲ್ಲಿ ಇವೆ ಎನ್ನುವುದರ ಬಗ್ಗೆ ಸಮಗ್ರವಾಗಿ ಮಾಹಿತಿ ಸಂಗ್ರಹಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಇದನ್ನೂ ಓದಿ | Yathindra siddaramaiah : ಪುತ್ರನಿಗೆ ರಾಜಕೀಯ ಆಶ್ರಯ ನೀಡಿದ ಸಿದ್ದರಾಮಯ್ಯ; ಎರಡು ಹುದ್ದೆಗೆ ಯತೀಂದ್ರ ನೇಮಕ

ಕೃಷಿ ಇಲಾಖೆ

ನೀರಾವರಿ ಇಲಾಖೆ

ಇದನ್ನೂ ಓದಿ | CM Siddaramaiah : ಸಿದ್ಧಾಂತ ಒಪ್ಪಿದವರು ಸೇರಬಹುದು ಎಂದ ಸಿಎಂ ಸಿದ್ದರಾಮಯ್ಯ; ಆಪರೇಷನ್‌ ಹಸ್ತಕ್ಕೆ ಗ್ರೀನ್‌ ಸಿಗ್ನಲ್‌?

ಪಶುಪಾಲನಾ ಇಲಾಖೆ

• ಕುರಿ ಮತ್ತು ಹಸು ಹಾಗೂ ಎತ್ತುಗಳು ಮೃತಪಟ್ಟಾಗ ಪರಿಹಾರ ಒದಗಿಸಬೇಕು.

• ರಾಸುಗಳಿಗೆ ಅಗತ್ಯ ಔಷಧಗಳನ್ನು ಸಂಗ್ರಹಿಸಿಟ್ಟುಕೊಳ್ಳಬೇಕು. ಸಂಭಾವ್ಯ ಕಾಯಿಲೆಗಳಿಗೆ ಔಷಧಿ ರೆಡಿ ಇಟ್ಟುಕೊಂಡಿರಬೇಕು.

• ಪಶುಪಾಲಕರಿಗೆ ಅನುಕೂಲ ಆಗಲಿ ಎನ್ನುವ ಕಾರಣದಿಂದ ನಂದಿನಿ ಹಾಲಿನ ದರವನ್ನು 3 ರೂ ಹೆಚ್ಚಿಸಿದೆವು. ಈ 3 ರೂ ಪೂರ್ತಿಯಾಗಿ ನೇರ ರೈತರಿಗೆ ತಲುಪಬೇಕು.

• ರೈತರಿಗೆ 3 ರೂ ಹೆಚ್ಚುವರಿವಾಗಿ ಸಿಕ್ಕ ಮೇಲೆ ನಂದಿನಿಗೆ ಬರುವ ಹಾಲಿನ ಪ್ರಮಾಣ ಹೆಚ್ಚಾಗಿದೆ. ಈಗ ಹಾಲು ಒಕ್ಕೂಟಗಳು ಲಾಭ ಮಾಡಿಕೊಳ್ಳಬೇಕು, ಆ ಲಾಭ ರೈತರಿಗೆ ಸೇರಬೇಕು ಎಂದು ಸೂಚಿಸಿದರು.

• ಹಾಲು ಒಕ್ಕೂಟಗಳಿಗೆ ಮನಸೋ ಇಚ್ಛೆ ನೇಮಕ ಮಾಡಿಕೊಳ್ಳಬಾರದು. ಹೊರ ಗುತ್ತಿಗೆ ಎನ್ನುವುದನ್ನು ದಂಧೆ ಮಾಡಿಕೊಳ್ಳಬಾರದು. ಮೀಸಲಾತಿ ಮಾನದಂಡದಲ್ಲಿ ತೆಗೆದುಕೊಳ್ಳಬೇಕು ಎಂದು ಸೂಚಿಸಿದರು.

Exit mobile version