ಮೈಸೂರು: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತಾಲಿಬಾನ್ ಸರ್ಕಾರ ಬರುತ್ತದೆ ಎಂಬ ಹೇಳಿಕೆಯನ್ನು ಮೈಸೂರು ಸಂಸದ ಪ್ರತಾಪ್ ಸಿಂಹ ಸಮರ್ಥಿಸಿಕೊಂಡಿದ್ದಾರೆ.
ʻʻಹೌದು, ನಾನು ಕಾಂಗ್ರೆಸ್ ಕುರಿತು ಹೇಳಿಕೆ ನೀಡಿದ್ದೇನೆ. ಸಿದ್ದರಾಮಯ್ಯ ಕೆಎಫ್‌ಡಿ, ಪಿಎಫ್‌ಐ ಮೇಲಿನ ಕೇಸ್ ವಾಪಸ್ ತೆಗೆದುಕೊಂಡರು. 175 ಮಂದಿ ಇದರಿಂದಾಗಿ ದೋಷಮುಕ್ತರಾದರು. ಇದರ ಪರಿಣಾಮವಾಗಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಕೊಲೆಯಾದವು. ಕಾಂಗ್ರೆಸ್‌ನವರು ಅಧಿಕಾರಕ್ಕೆ ಬಂದರೆ ತಾಲಿಬಾನ್ ಸರ್ಕಾರ ಬರುತ್ತದೆ. ಕಪಾಲಿ ಬೆಟ್ಟವನ್ನು ಯೇಸು ಬೆಟ್ಟ ಮಾಡುತ್ತಾರೆ. ಆ ನಿಟ್ಟಿನಲ್ಲಿ ಹೇಳಿಕೆ ನೀಡಿದ್ದೇನೆʼʼ ಎಂದು ಮೈಸೂರಿನಲ್ಲಿ ಅವರು ಹೇಳಿದರು.
೨೦೨೯ರಲ್ಲಿ ರಾಜಕೀಯ ನಿವೃತ್ತಿ ಎಂದ ಪ್ರತಾಪ್
ʻʻನಾನು 2029ರವರೆಗೆ ಮಾತ್ರ ರಾಜಕೀಯದಲ್ಲಿರುವ ಬಗ್ಗೆ ಯೋಚನೆ ಮಾಡುತ್ತಿದ್ದೇನೆ. 15 ವರ್ಷದಲ್ಲಿ ಒಬ್ಬ ಸಂಸದನಾಗಿ ಎಷ್ಟು ಕೆಲಸ ಮಾಡಬಹುದೋ ಅದನ್ನು ಮಾಡುತ್ತೇನೆ. ನಾನು ಲಾಂಗ್ ಟರ್ಮ್ ಪಾಲಿಟಿಕ್ಸ್ ಬಗ್ಗೆ ಯೋಚನೆ ಮಾಡಿಲ್ಲ. ಮುಂದೆ ರಾಜಕಾರಣದಲ್ಲಿ ಇರಬೇಕಾ ಬೇಡ್ವಾ ಅಂತ ಯೋಚನೆ ಮಾಡುತ್ತೇನೆʼʼ ಎಂದು ಹೇಳಿದರು ಪ್ರತಾಪ್ ಸಿಂಹ.
ʻʻಪ್ರಧಾನಿ ನರೇಂದ್ರ ಮೋದಿಯವರ ಕೈ ಕೆಳಗೆ ಕೆಲಸ ಮಾಡಲು ನನಗೆ ಇಷ್ಟ. ಮೋದಿ ಅವರು ನನ್ನ ಪಾಲಿನ ದೇವರುʼʼ ಎಂದು ಪ್ರತಾಪ್ ಹೆಮ್ಮೆಪಟ್ಟರು.
ಬಿಎಸ್‌ವೈ ಸಿದ್ದರಾಮಯ್ಯ ಅವರ ರಾಜಕೀಯ ಮುಗಿಸುತ್ತಾರೆ
ಯಡಿಯೂರಪ್ಪ ಅವರ ಚುನಾವಣಾ ರಾಜಕೀಯ ನಿವೃತ್ತಿ ಹೇಳಿಕೆ ವಿಚಾರವನ್ನು ಪ್ರಸ್ತಾಪಿಸಿದಾಗ, ʻʻಯಡಿಯೂರಪ್ಪ ಅವರು ಸಕ್ರಿಯ ರಾಜಕಾರಣದಲ್ಲಿ ಇರುತ್ತಾರೆ. ಸಿದ್ದರಾಮಯ್ಯ ಹಾಗೂ ಉಳಿದವರ ರಾಜಕಾರಣವನ್ನೆಲ್ಲ ಮುಗಿಸುತ್ತಾರೆ. ನಂತರ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಿಸುತ್ತಾರೆʼʼ ಎಂದರು.
ಪ್ರತಾಪ್ ಸಿಂಹ ಹೇಳಿದ್ದೇನಾಗಿತ್ತು?
ಮೈಸೂರಿನಲ್ಲಿ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖರ ಸಭೆಯಲ್ಲಿ ಮಾತನಾಡಿದ ಪ್ರತಾಪ್ ಸಿಂಹ ಅವರು, ಬಿಜೆಪಿ ಕಾರ್ಯಕರ್ತರು ಮೈಮರೆತರೆ ಸಿದ್ದರಾಮಯ್ಯ ನೇತೃತ್ವದ ತಾಲಿಬಾನ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತದೆ. ಹೀಗಾಗಿ ಮತ್ತೊಮ್ಮೆ ಬಿಜೆಪಿ ನೇತೃತ್ವದ ರಾಷ್ಟ್ರೀಯವಾದಿ ಸರ್ಕಾರವನ್ನು ತರಲು ಪ್ರಯತ್ನ ಮಾಡಿ ಎಂದು ಕರೆ ನೀಡಿದ್ದರು.
ಇದನ್ನೂ ಓದಿ : Express Way: ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಲೋಕಾರ್ಪಣೆಗೆ ಮುಹೂರ್ತ ಫಿಕ್ಸ್: ಸಂಸದ ಪ್ರತಾಪ್ ಸಿಂಹ ಸುದ್ದಿಗೋಷ್ಠಿ