Site icon Vistara News

Meta: ಮೆಟಾದಿಂದ ಯುವ ಜನರಿಗೆ ಡಿಜಿಟಲ್ ಸುರಕ್ಷಾ ಪಾಠ

Talking Digital Safety for Teens programme by Meta in Bengaluru

ಬೆಂಗಳೂರು: ಯುವಜನರ ಯೋಗಕ್ಷೇಮದ ಕುರಿತು ಮೆಟಾ (Meta) ಸಂಸ್ಥೆಯಿಂದ ಮಂಗಳವಾರ ನಗರದಲ್ಲಿ 1ಎಂ1ಬಿ ಸಹಯೋಗದಲ್ಲಿ ‘ಟಾಕಿಂಗ್ ಡಿಜಿಟಲ್ ಸುರಕ್ಷಾ ಫಾರ್ ಟೀನ್ಸ್’ (ಹದಿಹರೆಯದವರಿಗೆ ಡಿಜಿಟಲ್ ಸುರಕ್ಷಾ) ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಆನ್‌ಲೈನ್ ಸುರಕ್ಷತೆಗಾಗಿ ಮೆಟಾದ ವಿಧಾನಗಳ ಕುರಿತು ಪೋಷಕರಲ್ಲಿ ಜಾಗೃತಿ ಮೂಡಿಸಲು ಮತ್ತು ಆನ್‌ಲೈನ್ ಜಗತ್ತಿನಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಹದಿಹರೆಯದವರ ಯೋಗಕ್ಷೇಮವನ್ನು ಕಾಪಾಡುವಂತಹ ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳಲು ಈ ಪೋಷಕ- ಶಿಕ್ಷಕರ ಜಾಗೃತಿ ಕಾರ್ಯಕ್ರಮ ಜರುಗಿತು. ಮೆಟಾದ ಪ್ಲಾಟ್ ಫಾರ್ಮ್‌ಗಳನ್ನು ಒಳಗೊಂಡಂತೆ ಹದಿಹರೆಯದ ಮಕ್ಕಳ ಸ್ಮಾರ್ಟ್‌ಫೋನ್‌ ಮತ್ತು ಸಾಧನಗಳ ಬಳಕೆಯನ್ನು ಆತ್ಮವಿಶ್ವಾಸದಿಂದ ನಿರ್ವಹಣೆ ಮಾಡಲು ಸಾಧ್ಯವಾಗುವಂತೆ ಪೋಷಕರನ್ನು ಸಜ್ಜುಗೊಳಿಸುವ ಅನೇಕ ವಿಧಾನಗಳನ್ನು ಕಾರ್ಯಕ್ರಮದಲ್ಲಿ ಚರ್ಚಿಸಲಾಯಿತು.

ಇದನ್ನೂ ಓದಿ: Cauvery Dispute: ತಮಿಳುನಾಡಿಗೆ 2.5 ಟಿಎಂಸಿ ಕಾವೇರಿ ನೀರು ಹರಿಸಲು CWMA ಸೂಚನೆ

ಕಾರ್ಯಕ್ರಮದಲ್ಲಿ ಹದಿಹರೆಯದ ಮಕ್ಕಳ ಸಾಮಾಜಿಕ ಮಾಧ್ಯಮಗಳ ಬಳಕೆ ಮತ್ತು ಇತರ ಆನ್‌ಲೈನ್ ಟ್ರೆಂಡ್‌ಗಳ ಬಳಕೆ ಕುರಿತು ಪೋಷಕರು ಮತ್ತು ಶಿಕ್ಷಕರ ಒಳನೋಟಗಳನ್ನು ಈ ವೇಳೆ ಸಂಗ್ರಹಿಸಲಾಯಿತು. ಡಿಜಿಟಲ್ ಸುರಕ್ಷತಾ ಉಪಕ್ರಮಗಳ ಕುರಿತು ಹೆಚ್ಚು ತಿಳಿದುಕೊಳ್ಳಲು ಮತ್ತು ಅವರ ಹದಿಹರೆಯದ ಮಕ್ಕಳ ಸಾಮಾಜಿಕ ಜಾಲತಾಣಗಳ ಪ್ರಯಾಣದ ಅನುಭವಗಳ ಕುರಿತು ಚರ್ಚಿಸಲು ನಗರದ ಆಯ್ದ 10-15 ಶಾಲೆಗಳ ಆಯ್ದ ಶಿಕ್ಷಕರು ಮತ್ತು ಪೋಷಕರು ಪಾಲ್ಗೊಂಡಿದ್ದರು.

ಈ ವೇಳೆ ಇನ್‌ಸ್ಟಾಗ್ರಾಮ್‌ನ ಭಾರತದ ಸಾರ್ವಜನಿಕ ನೀತಿಯ ನಿರ್ದೇಶಕಿ ನತಾಶಾ ಜೋಗ್ ಮಾತನಾಡಿ, ನಮ್ಮ ಯುವ ಬಳಕೆದಾರರು ಆನ್‌ಲೈನ್‌ನಲ್ಲಿ ಅರ್ಥಪೂರ್ಣವಾಗಿ ಸಮಯವನ್ನು ಕಳೆಯುವುದರ ಜತೆಗೆ ವಿಶೇಷವಾಗಿ ಅವರು ಇಷ್ಟಪಡುವ ಎಲ್ಲಾ ಕೆಲಸಗಳನ್ನು ಮಾಡುತ್ತಲೇ ಸುರಕ್ಷಿತವಾಗಿರುವ ಅಗತ್ಯವನ್ನು ನಾವು ಗಮನಿಸಿದ್ದೇವೆ.

ಭಾರತದಾದ್ಯಂತ ಈ ಚರ್ಚಾ ಸರಣಿಯ ಮೂಲಕ ನಾವು ಶಿಕ್ಷಕರೊಂದಿಗೆ ಸಂವಹನ ನಡೆಸುತ್ತಲೇ, ಕುಟುಂಬದ ಆನ್‌ಲೈನ್ ಅಭ್ಯಾಸಗಳನ್ನು ನಿರ್ವಹಿಸಲು ಪೋಷಕರನ್ನು ಸಜ್ಜುಗೊಳಿಸುವ ದಾರಿಗಳನ್ನು ಹುಡುಕುತ್ತಿದ್ದೇವೆ. ಆ ಮೂಲಕ ಅವರ ಪಾಲಿಗೆ ಉತ್ತಮ ಎನಿಸುವ ರಕ್ಷಣಾ ವಿಧಾನ ಒದಗಿಸುವ ಉದ್ದೇಶ ಹೊಂದಿದ್ದೇವೆ ಎಂದು ತಿಳಿಸಿದರು.

ಇದನ್ನೂ ಓದಿ: India Skills: ಇಂಡಿಯಾ ಸ್ಕಿಲ್ಸ್ 2024 ಗ್ರ್ಯಾಂಡ್ ಫಿನಾಲೆ; ವರ್ಲ್ಡ್ ಸ್ಕಿಲ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ 58 ವಿಜೇತರು

ಬಳಕೆದಾರರ ಸುರಕ್ಷತಾ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ನಡೆಯುತ್ತಿರುವ ಪ್ರಯತ್ನಗಳ ಭಾಗವಾಗಿ ಮೆಟಾ ಕಳೆದ ವರ್ಷ ‘ಡಿಜಿಟಲ್ ಸುರಕ್ಷಾ ಶೃಂಗಸಭೆ’ ಅನ್ನು ನಡೆಸಿತ್ತು. ಆ ಮೂಲಕ ಯುವಜನತೆ ಮತ್ತು ಮಹಿಳೆಯರಿಗೆ ಸುರಕ್ಷಿತ ಮತ್ತು ಸಮತೋಲಿತ ಆನ್‌ಲೈನ್ ಅನುಭವವನ್ನು ಒದಗಿಸುವ ಪ್ರಯತ್ನ ಮಾಡಲಾಗಿತ್ತು. ಇದರ ಜತೆಗೆ ಮೆಟಾ, ಆನ್‌ಲೈನ್ ಸುರಕ್ಷತೆ ಮತ್ತು ಡಿಜಿಟಲ್ ಪೌರತ್ವ ಕುರಿತು ಮಾಹಿತಿ, ಜ್ಞಾನ ಮತ್ತು ಶಿಕ್ಷಣದ ಬಗ್ಗೆ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಸಬಲೀಕರಣಗೊಳಿಸಲು ಕರ್ನಾಟಕ ಸರ್ಕಾರದ ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ (ಐಟಿಬಿಟಿ) ಇಲಾಖೆಯೊಂದಿಗೆ ಎರಡು ವರ್ಷಗಳ ಪಾಲುದಾರಿಕೆಯನ್ನು ಪ್ರಕಟಿಸಿದೆ.

ಕಳೆದ ಮೂರು ವರ್ಷಗಳಲ್ಲಿ, ಆನ್‌ಲೈನ್ ಸುರಕ್ಷತೆಯನ್ನು ಉತ್ತೇಜಿಸಲು ಮೆಟಾ 50ಕ್ಕೂ ಹೆಚ್ಚು ಸುರಕ್ಷತಾ ಪರಿಕರಗಳು ಮತ್ತು ಫೀಚರ್‌ಗಳನ್ನು ಬಿಡುಗಡೆ ಮಾಡಿದೆ. ಹದಿಹರೆಯದವರ ಸುರಕ್ಷತೆಗಾಗಿ ‘ನೈಟ್ ನಡ್ಜಸ್’ ಎಂಬ ಫೀಚರನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಗಿದ್ದು, ಇದು ತಡರಾತ್ರಿಯಲ್ಲಿ ಇನ್ ಸ್ಟಾಗ್ರಾಮ್ ಆಪ್ ಬಳಸುವಾಗ ಆ ಆಪ್ ಅನ್ನು ಷಟ್‌ಡೌನ್ ಮಾಡಲು ಬಳಕೆದಾರರಿಗೆ ಸೂಚಿಸುತ್ತದೆ. ಜತೆಗೆ ‘ಕ್ವೈಟ್ ಮೋಡ್’ ಫೀಚರ್ ಕೂಡ ಇದ್ದು, ಇದು ಹದಿಹರೆಯದ ಬಳಕೆದಾರರಿಗೆ ತಾವು ಆಪ್‌ನಲ್ಲಿ ಕಳೆಯುವ ಸಮಯದ ಮೇಲೆ ಮತ್ತು ಅವರು ಏನು ನೋಡುತ್ತಾರೆ ಎಂಬುದರ ಮೇಲೆ ಹೆಚ್ಚಿನ ನಿಯಂತ್ರಣವನ್ನು ಹೊಂದಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: Viral Video: ಇಂಗ್ಲೀಷ್‌ನಲ್ಲೂ ಮಾತಾಡುತ್ತೆ…ಮಿಮಿಕ್ರಿನೂ ಮಾಡುತ್ತೆ ಈ ಗಿಣಿ; ವಿಡಿಯೋ ನೋಡಿದ್ರೆ ಫಿದಾ ಆಗೋದು ಗ್ಯಾರಂಟಿ!

ಇದಲ್ಲದೆ, ಇನ್ಸ್ಟಾಗ್ರಾಮ್‌ನ ಪೇರೆಂಟಲ್ ಸೂಪರ್ ವಿಷನ್ ಫೀಚರ್ (ಪೋಷಕರ ಮೇಲ್ವಿಚಾರಣಾ ವೈಶಿಷ್ಟ್ಯ) ಮೂಲಕ ಪೋಷಕರು ತಮ್ಮ ಮಕ್ಕಳು ಫಾಲೋ ಮಾಡುವ ಖಾತೆಗಳು, ಅವರ ಮಕ್ಕಳನ್ನು ಫಾಲೋ ಮಾಡುವ ಖಾತೆಗಳನ್ನು ವೀಕ್ಷಿಸಬಹುದು ಮತ್ತು ಅವರ ಆನ್‌ಲೈನ್ ಬಳಕೆಯಲ್ಲಿ ತಮ್ಮನ್ನೂ ಹೆಚ್ಚು ತೊಡಗಿಸಿಕೊಳ್ಳಬಹುದು. ಮೆಟಾದ ‘ಫ್ಯಾಮಿಲಿ ಸೆಂಟರ್’ ಫೀಚರ್ ಪ್ಲಾಟ್‌ಫಾರ್ಮ್‌ಗಳನ್ನು ಸುರಕ್ಷಿತವಾಗಿ ಬಳಸುವುದು ಹೇಗೆ ಎಂಬ ಮಾಹಿತಿಯನ್ನು ಹುಡುಕಲು ಪೋಷಕರು ಮತ್ತು ಹದಿಹರೆಯದವರಿಗೆ ಸಹ ಮಾಹಿತಿ ಒದಗಿಸುತ್ತದೆ ಎಂದು ಅವರು ತಿಳಿಸಿದ್ದಾರೆ.

Exit mobile version