ವಾಷಿಂಗ್ಟನ್: ಕರ್ನಾಟಕದಲ್ಲಿ ʼಭಾಗ್ಯದ ಲಕ್ಷ್ಮೀ ಬಾರಮ್ಮ…ʼ ಹಾಡನ್ನು ಕೇಳದವರಿರಲಿಕ್ಕಿಲ್ಲ. ಇದೇ ಕನ್ನಡದ ಹಾಡನ್ನು ತಮಿಳುನಾಡಿನ ಯುವಕನೊಬ್ಬ ಅಮೆರಿಕದಲ್ಲಿ ಹಾಡುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದ್ದಾನೆ. ಅಮೆರಿಕದಲ್ಲಿ ಸುಶ್ರುತ ಎಂಬ ಯುವಕನು ಹಾಡಿದ ಹಾಡು ಈಗ ಅಮೆರಿಕದಾದ್ಯಂತ ಮನೆಮಾತಾಗಿದೆ. ಜಾಲತಾಣಗಳಲ್ಲಿ ವೈರಲ್ (Viral Video) ಆಗಿದೆ.
ಸುಶ್ರುತ ಅವರ ತಂದೆ-ತಾಯಿ ತಮಿಳುನಾಡು ಮೂಲದವರಾಗಿದ್ದು, ಇವರು ಬೆಂಗಳೂರಿನಲ್ಲಿ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಾಗಾಗಿ, ಇವರ ಪುತ್ರನಾದ ಸುಶ್ರುತ ಅವರಿಗೆ ಕನ್ನಡದ ಮೇಲೆ ಹೆಚ್ಚಿನ ಅಭಿಮಾನವಿದೆ. ಇವರು ಅಮೆರಿಕದಲ್ಲಿ ತಂಡ ಕಟ್ಟಿಕೊಂಡು ಭಾಗ್ಯದ ಲಕ್ಷ್ಮೀ ಬಾರಮ್ಮ ಹಾಡು ಹಾಡಿದ್ದಾರೆ.
ಇಲ್ಲಿದೆ ಹಾಡಿನ ವಿಡಿಯೊ
ಸುಶ್ರುತ ಹಾಡು ಹಾಡಿದ್ದು, ಮೂವರು ಯುವತಿಯರು ಮನಮೋಹಕವಾಗಿ ನೃತ್ಯ ಮಾಡಿದ್ದಾರೆ. ವಿಭಿನ್ನ ಶೈಲಿಯಲ್ಲಿ ಹಾಡಿದ ಹಾಡು, ಮನ ಸೆಳೆಯುವ ನೃತ್ಯಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದರಲ್ಲೂ, ತಮಿಳು ಮೂಲದ ಯುವಕನೊಬ್ಬ ಕನ್ನಡದಲ್ಲಿ ಹಾಡು ಹಾಡಿದ್ದು ಕನ್ನಡಿಗರ ಗಮನ ಸೆಳೆದಿದೆ.