Site icon Vistara News

Tara Anuradha | ವರ್ಷದ ಹಿಂದೆಯೇ ಇನ್ಶೂರೆನ್ಸ್‌ ಲ್ಯಾಪ್ಸ್‌ ಆಗಿದ್ದ ನಟಿ ತಾರಾ ಕಾರು; ಅಪಘಾತ ಮಾಡಿದ್ದ ಚಾಲಕನ ಮೇಲೆ FIR

tara car accident 2

ಬೆಂಗಳೂರು: ಸ್ಯಾಂಡಲ್‌ವುಡ್‌ ನಟಿ, ವಿಧಾನ ಪರಿಷತ್‌ ಮಾಜಿ ಸದಸ್ಯೆ, ಹಾಲಿ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ (KFDC) ಛೇರ್ಮನ್ ತಾರಾ ಅನುರಾಧ (Tara Anuradha) ಅವರ ಕಾರು ಚಾಲಕನ ಮೇಲೆ ಎಫ್‌ಐಆರ್‌ ದಾಖಲಾಗಿದೆ. ಚಾಲಕ ಅಕ್ಷಯ್ ವಿರುದ್ಧ ಅಜಾಗರೂಕ ಚಾಲನೆ ಹಿನ್ನೆಲೆಯಲ್ಲಿ ನೀಡಲಾಗಿದ್ದ ದೂರಿನನ್ವಯ ಕ್ರಮ ವಹಿಸಲಾಗಿದೆ. ಇನ್ನೊಂದು ವಿಷಯವೆಂದರೆ ತಾರಾ ಅವರ ಕಾರಿನ ವಿಮೆ ಅವಧಿ ಮುಗಿದು ಒಂದು ವರ್ಷ ಒಂದು ತಿಂಗಳು ಆಗಿದೆ.

ಜಖಂಗೊಂಡಿರುವ ಗಿರೀಶ್‌ ಕಾರು

ಕತ್ರಿಗುಪ್ಪೆ ಸಿಗ್ನಲ್‌ನಲ್ಲಿ ಅಪಘಾತ
ಮೈಸೂರು ಮೂಲದ ಗಿರೀಶ್ ಎಂಬುವವರು ದೂರು ನೀಡಿದ್ದು, ಪೊಲೀಸರು ಪ್ರಕರಣವನ್ನು ದಾಖಲು ಮಾಡಿಕೊಂಡಿದ್ದಾರೆ. ಅಕ್ಟೋಬರ್ 29ರಂದು ಬೆಳಗ್ಗೆ 7.17ರ ವೇಳೆಗೆ ಬನಶಂಕರಿ 3ನೇ ಹಂತದ ಕತ್ರಿಗುಪ್ಪೆ ಸಿಗ್ನಲ್‌ನಲ್ಲಿ ಮುಂಬದಿ ಇದ್ದ ಕಾರಿಗೆ ತಾರಾ ಅವರ ಕಾರು ಗುದ್ದಿದೆ. ಹೀಗಾಗಿ ಗಿರೀಶ್‌ ಅವರ ಕಾರು ಜಖಂಗೊಂಡಿದೆ. ಈ ವೇಳೆ ನಟಿ ತಾರಾ ಸಹ ಕಾರಿನಲ್ಲಿದ್ದರು ಎನ್ನಲಾಗಿದೆ.

ವಾರವಾದರೂ ಮಾಡಿಸದ ರಿಪೇರಿ
ಅಜಾಗರೂಕ ಚಾಲನೆ ಇದಾಗಿದ್ದರಿಂದ ಗಿರೀಶ್‌ ಈ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಆಗ ಕಾರಿನ ರಿಪೇರಿ ಮಾಡಿಸಿಕೊಡುವುದಾಗಿ ಹೇಳಿ ಅಲ್ಲಿಂದ ಅಕ್ಷಯ್‌ ತೆರಳಿದ್ದಾರೆ ಎನ್ನಲಾಗಿದೆ. ಆದರೆ, ರಿಪೇರಿ ಮಾಡಿಸಿಕೊಡದೆ ಅಲೆದಾಡಿಸಿದ್ದು, ತಮಗೆ ಇದರಿಂದ ಅನ್ಯಾಯವಾಗಿದೆ ಎಂದು ದೂರುದಾರರು ಆಪಾದನೆ ಮಾಡಿದ್ದು, ಐಪಿಸಿ ಸೆಕ್ಷನ್ 279 ಅಡಿ ಅಜಾಗರೂಕ ಚಾಲನೆ ಎಂದು ದೂರು ದಾಖಲಿಸಲಾಗಿದೆ. ಬನಶಂಕರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಕಳೆದ ವರ್ಷವೇ ವಿಮೆ ಲ್ಯಾಪ್ಸ್‌
ಅಪಘಾತ ಮಾಡಿರುವ ತಾರಾ ಅವರು ಕಾರು ಅವರ ಪತಿ ವೇಣುಗೋಪಾಲ್ ಎಚ್‌.ಸಿ. ಅವರ ಹೆಸರಿನಲ್ಲಿದೆ. 2021ರ ಅಕ್ಟೋಬರ್‌ನಲ್ಲಿಯೇ ಆ ಕಾರಿನ ವಿಮೆಯು ಲ್ಯಾಪ್ಸ್ ಆಗಿತ್ತು. ಅಪಘಾತದಂತಹ ಸಂದರ್ಭದಲ್ಲಿ ವಿಮೆ ಬಹಳ ಮಹತ್ವವನ್ನು ಪಡೆದುಕೊಳ್ಳುತ್ತದೆ. ಆದರೆ, ತಾವು ತಪ್ಪು ಮಾಡಿದ್ದರೂ, ವಿಮೆ ಇಲ್ಲವೆಂದು ಗೊತ್ತಿದ್ದರೂ ತಮ್ಮನ್ನು ಒಂದು ವಾರಗಳ ಕಾಲ ಮನೆಗೆ ಅಲೆದಾಡಿಸಿದ್ದಾರೆ. ಅಲ್ಲದೆ, ರಿಪೇರಿ‌ ಮಾಡಿಕೊಡದೆ ಸತಾಯಿಸುತ್ತಾ ವಿನಾಕಾರಣ ಕಾಲಹರಣ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಾನೂನು ರೀತ್ಯಾ ಸೂಕ್ತ ಕ್ರಮ ಜರುಗಿಸುವಂತೆ ಗಿರೀಶ್‌ ನೀಡಿರುವ ದೂರಿನಲ್ಲಿ ಆಗ್ರಹಿಸಿದ್ದಾರೆ.

ಇದನ್ನೂ ಓದಿ | Road Accidents | 2021ರಲ್ಲಿ ಅತಿಹೆಚ್ಚು ರಸ್ತೆ ಅಪಘಾತವಾದ 3ನೇ ರಾಜ್ಯ ಕರ್ನಾಟಕ; ಆ್ಯಕ್ಸಿಡೆಂಟ್ ಆಗಿದ್ದೆಷ್ಟು? ಮೃತರಾದವರು ಎಷ್ಟು?

Exit mobile version