ಚಿತ್ರದುರ್ಗ: ಉತ್ತರ ಕನ್ನಡ ಜಿಲ್ಲೆಯ ಮಿರ್ಜಾನ್‌ನಲ್ಲಿ ಇತ್ತೀಚೆಗೆ ಮುಸ್ಲಿಮರ ಈದ್ ಮೆರವಣಿಗೆ (Eid Procession) ವೇಳೆ ರಾಷ್ಟ್ರ ಧ್ವಜಕ್ಕೆ ಅಪಮಾನ (Disrespecting National Flag) ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಅದೇ ರೀತಿಯ ಘಟನೆ ಈಗ ಚಿತ್ರದುರ್ಗ ಜಿಲ್ಲೆಯ (Chitradurga district) ಚಳ್ಳಕೆರೆ ತಾಲೂಕಿನ ಇಮಾಂಪುರ ಬಂಡೆಹಟ್ಟಿ ಗ್ರಾಮದ ಬಳಿ ನಡೆದಿದೆ.
ಗ್ರಾಮದ ಹೆಸರಿರುವ ನಾಮಫಲಕದ ಕಂಬಕ್ಕೆ ಒಂದು ತ್ರಿವರ್ಣ ಧ್ವಜವನ್ನು ಕಟ್ಟಲಾಗಿದ್ದು, ಅದನ್ನು ವಿರೂಪಗೊಳಿಸಲಾಗಿದೆ. ಚಳ್ಳಕೆರೆ ತಾಲೂಕಿನ ಇಮಾಂಪುರ ಬಂಡೆಹಟ್ಟಿ ಗ್ರಾಮದಲ್ಲಿ ಕೇಸರಿ, ಬಿಳಿ, ಹಸಿರು ಬಣ್ಣದ ಬಾವುಟ ಹಾಕಲಾಗಿದೆ.
ಅದರಲ್ಲಿ ಬಿಳಿ ಬಣ್ಣ, ಅಶೋಕ ಚಕ್ರ ಇರುವ ಜಾಗದಲ್ಲಿ ಧಾರ್ಮಿಕ ಸ್ಥಳಗಳ ಚಿತ್ರ ಹಾಕಲಾಗಿದೆ. ಮುಸ್ಲಿಂ ಧಾರ್ಮಿಕ ಸಂಕೇತಗಳನ್ನು ಹಾಕಿ ರಾಷ್ಟ್ರ ಧ್ವಜದಂತೆ ಬಿಂಬಿಸಲಾಗಿದೆ.
ಈ ರೀತಿ ವಿರೂಪ ಮಾಡಿದ ಧ್ವಜದ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡಿ ವಿವಾದದ ಸ್ವರೂಪ ಪಡೆಯುವ ಲಕ್ಷಣಗಳು ಕಂಡುಬಂದವು. ಕೂಡಲೇ ಅಲರ್ಟ್ ಆದ ಪೊಲೀಸರು ಸ್ಥಳಕ್ಕೆ ಧಾವಿಸಿ ಧ್ವಜ ತೆರವು ಮಾಡಿದರು.
ಈ ರೀತಿ ಧ್ವಜವನ್ನು ವಿರೂಪಗೊಳಿಸಿದ ಘಟನೆಯ ಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕಿಡಿಗೇಡಿಗಳನ್ನು ಕೂಡಲೇ ಪತ್ತೆ ಹಚ್ಚುವಂತೆ ಒತ್ತಾಯ ಮಾಡಿದ್ದಾರೆ.
ಮಂಗಳವಾರ ಸಂಜೆ 4 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು,ದೂರು ನೀಡಿದರೆ ಕೇಸ್ ದಾಖಲಿಸಿಕೊಳ್ಳುವುದಾಗಿ ಪೊಲೀಸರ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: National Flag: ತ್ರಿವರ್ಣ ಧ್ವಜದ ಅಶೋಕ ಚಕ್ರ ಜಾಗದಲ್ಲಿ ಮದೀನಾ ಗುಂಬಜ್ ಚಿತ್ರ ಹಾಕಿದವ ಅರೆಸ್ಟ್
ಮಿರ್ಜಾನ್ ಗ್ರಾಮದಲ್ಲಿ ಏನಾಗಿತ್ತು?
ಮಿರ್ಜಾನ್‌ನ ಜಮಾತ್ ಉಲ್ ಮುಸ್ಲಮಿನ್ ಕಮಿಟಿ ನಡೆಸಿದ್ದ ಮೆರವಣಿಗೆ ವೇಳೆ ಯುವಕರು ಅತ್ಯಂತ ಉತ್ಸಾಹದಿಂದ ರಾಷ್ಟ್ರ ಧ್ವಜವನ್ನು ಬೀಸುವ ದೃಶ್ಯಗಳು ವೈರಲ್ ಆಗಿವೆ. ಹೆಚ್ಚಿನವರು ಈದ್‌ನಲ್ಲಿ ಬಳಸುವ ಮುಸ್ಲಿಂ ಧ್ವಜಗಳನ್ನು ಬಳಸಿದ್ದರೆ ನಡುವೆ ದೊಡ್ಡ ಧ್ವಜವನ್ನು ಬಳಸಲಾಗಿದೆ. ಇದು ತ್ರಿವರ್ಣದಲ್ಲಿದೆ. ಕೇಸರಿ, ಬಿಳಿ ಹಸಿರು ಧ್ವಜವನ್ನು ಬಳಸಲಾಗಿದ್ದು, ಅದರಲ್ಲಿ ಬಿಳಿ ಬಣ್ಣದಲ್ಲಿ ಅಶೋಕ ಚಕ್ರ ಇರಬೇಕಾದ ಜಾಗದಲ್ಲಿ ಅರ್ಧ ಚಂದ್ರನ ಚಿತ್ರವನ್ನು ಹಾಕಲಾಗಿದೆ. ಜತೆಗೆ ಕೇಸರಿ ಮತ್ತು ಹಸಿರು ಬಣ್ಣದಲ್ಲಿ ಕೂಡಾ ಇದೇ ರೀತಿಯ ಅರ್ಧ ಚಂದ್ರ ಮತ್ತು ನಕ್ಷತ್ರಗಳ ಚಿತ್ರಗಳನ್ನು ಹಾಕಲಾಗಿದೆ. ಇದರ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಡಿತ್ತು.
ಮಿರ್ಜಾನಾ ಪೊಲೀಸರು ಫೇಸ್‌ಬುಕ್, ಇನ್‌ಸ್ಟಾ ಗ್ರಾಂ ಖಾತೆಗಳನ್ನು ಚೆಕ್ ಮಾಡುತ್ತಿರುವಾಗ, ಕೇಸರಿ ಸಾಮ್ರಾಟ್ ಎಂಬ ಖಾತೆಯಲ್ಲಿ ಈ ವಿಡಿಯೊ ಗಮನಕ್ಕೆ ಬಂದಿತ್ತು. ಅದರಲ್ಲಿ ʻʻಇದು ಕೇರಳ, ಪಶ್ಚಿಮ ಬಂಗಾಳ ಅಲ್ಲ. ನಮ್ಮ ಉತ್ತರ ಕನ್ನಡದ ಕುಮಟಾದ ಮಿರ್ಜಾನ. ಇಲ್ಲಿ ನಮ್ಮ ಬಾವುಟದಲ್ಲಿ ಅಶೋಕ ಚಕ್ರ ಇರುವ ಜಾಗದಲ್ಲಿ ಅರ್ಧ ಚಂದ್ರ ಬಂದು ಕೂತಿದೆ. ಮುಂದಿನ ದಿನದಲ್ಲಿ ಕೇಸರಿ ಬಣ್ಣ ಅಳಿಸಿ ಶಾಶ್ವತ ಹಸಿರು ಬಣ್ಣಕ್ಕೆ ಬದಲಾಯಿಸುತ್ತಾರೆ ಜಾಗೋ ಭಾರತೀಯ_ಜಾಗೋʼ ಎಂಬ ಬರೆದ್ದನ್ನು ಗಮನಿಸಲಾಗಿತ್ತು.