Site icon Vistara News

Teacher threatened : ಕೈ ಶಾಸಕರ ಪುತ್ರನಿಂದ ಧಮ್ಕಿ! ದಯವಿಟ್ಟು ಎಲ್ಲಾದರೂ ಟ್ರಾನ್ಸ್‌ಫರ್‌ ಮಾಡಿ ಎಂದ ಶಿಕ್ಷಕ

Teacher threatened

#image_title

ಕಲಬುರಗಿ: ಶಾಸಕರ ಹೆಸರಿನಲ್ಲಿ ಅವರ ಮಕ್ಕಳು, ಬಂಧುಗಳು ರಾಜಕೀಯ ಮಾಡುವುದು, ಅಧಿಕಾರಿಗಳನ್ನು ಬೆದರಿಸುವುದು ಹೊಸ ಸಂಗತಿಯೇನಲ್ಲ. ಆದರೆ, ಇಲ್ಲೊಬ್ಬ ಶಾಸಕರ ಪುತ್ರ ಪ್ರಾಥಮಿಕ ಶಾಲೆಯ ಶಿಕ್ಷಕರಿಗೆ ಬೆದರಿಕೆ (Teacher threatened) ಒಡ್ಡುವ ಮೂಲಕ ಸಣ್ಣತನ ಪ್ರದರ್ಶಿಸಿದ್ದಾರೆ. ಇದರಿಂದ ಹೆದರಿದ ಶಿಕ್ಷಕರು ಬೇರೆ ತಾಲೂಕಿಗೆ ಟ್ರಾನ್ಸ್‌ಫರ್‌ ಮಾಡಿ ಎಂದು ಗೋಗರೆಯುತ್ತಿದ್ದಾರೆ.

ಈ ಘಟನೆ ನಡೆದಿರುವುದು ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನಲ್ಲಿ. ಅಫಜಲಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಮ್‌ವೈ ಪಾಟೀಲ್ (MLA MY Pateel) ಪುತ್ರನಾಗಿರುವ ಮಾಜಿ ಜಿ ಪಂ ಸದಸ್ಯ ಅರುಣಕುಮಾರ್ ಪಾಟೀಲ್ (Arun Kumar Pateel) ಅವರೇ ಬೆದರಿಕೆ ಹಾಕಿದವರು. ಮಾಶ್ಯಾಳ್ ಗ್ರಾಮದ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಶಿವಕುಮಾರ್ ಬಿರಾದಾರ್‌ ಅವರಿಗೆ ಕಾಲ್ ಮಾಡಿ ಧಮ್ಕಿ ಹಾಕಿದ ಬಗ್ಗೆ ಪೊಲೀಸರಿಗೆ ಮತ್ತು ಉನ್ನತ ಅಧಿಕಾರಿಗಳಿಗೆ ದೂರು ನೀಡಲಾಗಿದೆ.

ಮಾಶ್ಯಾಳ್‌ ಶಾಲೆಯಲ್ಲಿ ಯಾವ ಕಾರಣಕ್ಕೂ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಬಾರದು, ಈಗಾಗಲೇ ಮಾಡಿಕೊಂಡಿದ್ದರೆ ಅದನ್ನು ರದ್ದು ಮಾಡಬೇಕು ಎಂದು ಫೋನ್‌ನಲ್ಲಿ ಬೆದರಿಕೆ ಹಾಖಲಾಗಿದೆ.
ʻʻನೀನು ಈ ಶಾಲೆಯಲ್ಲಿ ಇರಬಾರದು, ತಕ್ಷಣ ಜಾಗ ಖಾಲಿ ಮಾಡಿಕೊಂಡು ಹೋಗಬೇಕುʼʼ ಎಂದು ಆವಾಜ್‌ ಹಾಕಲಾಗಿದೆ. ಶಾಸಕರ ಪುತ್ರನ ಧಮ್ಕಿ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅತಿಥಿ ಶಿಕ್ಷಕರ ನೇಮಕದ ಪರಮಾಧಿಕಾರವನ್ನು ಇಲಾಖೆ ಮುಖ್ಯ ಶಿಕ್ಷಕರಿಗೆ ನೀಡಿದೆ. ಆದರೆ, ಶಾಸಕರ ಪುತ್ರ ತಮಗೆ ಬೇಕಾದವರಿಗೆ ಅವಕಾಶ ನೀಡಲು ಶಿಕ್ಷಕರನ್ನು ಬೆದರಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಮುಖ್ಯ ಶಿಕ್ಷಕ ನೀಡಿದ ದೂರಿನಲ್ಲಿ ಏನಿದೆ?

ಶಿವಕುಮಾರ ಸಂಗಣ್ಣ ಬಿರಾದಾರ ಎಂಬವನಾದ ನಾನು ಅಫಜಲಪುರ ತಾಲೂಕಿನ ಮಾಶ್ಯಾಳ್‌ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಪ್ರಭಾರಿ ಮುಖ್ಯ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದೇನೆ. 2023-24ನೇ ಶೈಕ್ಷಣಿಕ ವರ್ಷ ಆರಂಭವಾಗಿ ಈಗಾಗಲೇ ಸುಮಾರು 10 ದಿನ ಕಳೆದಿದೆ. ಶಾಲೆಯಲ್ಲಿ 800ರಿಂದ 900 ಮಕ್ಕಳು ಓದುತ್ತಿದ್ದು, ಕೇವಲ 12 ಜನ ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದಾರೆ. ಇನ್ನುಳಿದ ಹುದ್ದೆಗಳು ಖಾಲಿವೆ ಇವೆ. ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ನಮ್ಮ ಶಾಲೆಗೆ ಆರು ಜನ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲುಕ್ಷೇತ್ರ ಶಿಕ್ಷಣಾಧಿಕಾರಿಗಳ ಇಲಾಖೆ ಸೂಚನೆ ನೀಡಿದೆ. ಈ ಆಯ್ಕೆಯ ಅಧಿಕಾರವನ್ನು ಶಾಲಾ ಮುಖ್ಯ ಗುರುಗಳಿಗೆ ನೀಡಲಾಗಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.

ಕ್ಷೇತ್ರ ಶಿಕ್ಷಣಾಧಿಕಾರಿಗಳ ಮಾರ್ಗದರ್ಶನದಂತೆ ನಾಳೆ ಆಯ್ಕೆ ಪ್ರಕ್ರಿಯೆ ಪ್ರಾರಂಭಿಸಬೇಕು ಎನ್ನುವುದರ ಒಳಗಾಗಿ ಅಫಜಲಪುರ ಕ್ಷೇತ್ರ ಶಾಸಕರ ಪುತ್ರರಾದ ಶ್ರೀ ಅರುಣ ಕುಮಾರ್‌ ವೈ ಪಾಟೀಲ್‌ ಅವರು ಜೂನ್‌ 8ರ ಸಾಯಂಕಾಲ 5.26ಕ್ಕೆ ನನಗೆ ಕರೆ ಮಾಡಿ ಯಾವ ಕಾರಣಕ್ಕು ಅತಿಥಿ ಶಿಕ್ಷಕರನ್ನು ನೀನು ನೇಮಕ ಮಾಡಬಾರದು, ಒಂದು ವೇಳೆ ನೇಮಕ ಮಾಡಿದರೆ ಅದನ್ನು ರದ್ದು ಮಾಡಬೇಕು ಎಂದು ಏರು ಧ್ವನಿಯಲ್ಲಿ ನನ್ನನ್ನು ಗದರಿದ್ದಾರೆ. ನನ್ನ ಒಂದು ಮಾತೂ ಕೇಳದೆ ನಿನ್ನ ಜೀವ ತೆಗೆಯುತ್ತೇನೆ ಎಂದು ಹೇಳಿದ್ದಾರೆ. ಇವತ್ತಿನಿಂದ ನೀನು ಮಾಶ್ಯಾಳ್ ಶಾಲೆಯಲ್ಲಿ ಇರಬಾರದು. ತಕ್ಷಣದಿಂದ ನೀನು ಜಾಗ ಖಾಲಿ ಮಾಡಬೇಕು ಎಂದು ನನಗೆ ಜೀವ ಬೆದರಿಕೆ ಹಾಕಿದ್ದಾರೆ. ಈ ಎಲ್ಲಾ ಸನ್ನಿವೇಶ ನನ್ನ ಮೊಬೈಲ್‌ನಲ್ಲಿ ದಾಖಲಾಗಿದೆ.

ಅರುಣ್‌ ಕುಮಾರ್‌ ಅವರು ಈ ಹಿಂದೆಯೂ ನನಗೆ ತೊಂದರೆ ಕೊಟ್ಟಿದ್ದಾರೆ. ಆದಕಾರಣ ದಯಾಳುಗಳಾದ ತಾವು ನನ್ನ ಹಾಗೂ ನನ್ನ ಕುಟುಂಬವನ್ನು ಅರುಣಕುಮಾರ ಪಾಟೀಲರಿಂದ ರಕ್ಷಿಸಬೇಕು. ಅಧಿಕಾರ ಹಾಗೂ ಹಣ ಬಲದಿಂದ ನನ್ನ ಜೀವಕ್ಕೆ ಏನಾದರೂ ಮಾಡಿದರೆ ನನ್ನನ್ನೇ ನಂಬಿದ ನನ್ನ ಹೆಂಡತಿ, ತುಕ್ಕಳು ಬೀದಿಗೆ ಬರುತ್ತಾರೆ. ಕಾರಣ ನಾನು ಬೇಸತ್ತು ಹೋಗಿದ್ದು, ತೊಂದರೆ ಹಾಗೂ ಭಯದಲ್ಲಿದ್ದೇನೆ. ಅದ್ದರಿಂದ
ಸದರಿ ಶಾಲೆಯಿಂದ ನನ್ನನ್ನು ಬೇರೆ ತಾಲೂಕಿನ ಶಾಲೆಗೆ ವರ್ಗಾತಣೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ. ಜತೆಗೆ ತನ್ನ ಜೀವಕ್ಕೇನಾದರೂ ಆದರೆ ಅರುಣ್‌ ಕುಮಾರ್‌ ಪಾಟೀಲ್‌ ಅವರೇ ಹೊಣೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Video Viral: ಕಿಕ್‌ ಏರಿಸಿಕೊಂಡ ಯುವಕರ ಹುಚ್ಚಾಟ; ಜತೆಯಲ್ಲಿದ್ದವನ ಬೆತ್ತಲೆಗೊಳಿಸಿ ರೋಡ್‌ ಡ್ಯಾನ್ಸ್‌

Exit mobile version