ಬೆಂಗಳೂರು: ವಿಧಾನಪರಿಷತ್‌ಗೆ ಶಿಕ್ಷಕರು ಹಾಗೂ ಪದವೀಧರ ಮತದಾರರ ಮೂಲಕ ನಡೆಯುವ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಎರಡು, ಕಾಂಗ್ರೆಸ್ ಎರಡು ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡರೆ ಜೆಡಿಎಸ್ ಈ ಬಾರಿಯೂ ಶೂನ್ಯ ಗಳಿಸಿದೆ. ಚುನಾವಣೆಗೆ ಭರ್ಜರಿ ಪ್ರಚಾರ, ತಯಾರಿ, ಹಣ ಹಂಚಿಕೆ, ಅಡ್ಜಸ್ಟ್‌ಮೆಂಟ್‌ಗಳೆಲ್ಲವೂ ನಡೆದಿದ್ದರೂ ಇದೇ ಸಮಯದಲ್ಲಿ ರಾಜ್ಯಸಭೆ ಚುನಾವಣೆಗಳು ಎದುರಾಗಿದ್ದರಿಂದ ಅಷ್ಟಾಗಿ ಹೊರಜಗತ್ತಿಗೆ ಕಾಣಲಿಲ್ಲ.
ಚುನಾವಣೆಗೂ ಮುನ್ನ ಬಿಜೆಪಿ ಹೊಂದಿದ್ದ ಎರಡು ಸ್ಥಾನಗಳು ಹಾಗೇಯೇ ಉಳಿದಿದ್ದರೆ (2-2), ಕಾಂಗ್ರೆಸ್ ಶೂನ್ಯದಿಂದ ಎರಡು ಸ್ಥಾನ ಗಳಿಸಿರುವುದು (0-2) ಅಚ್ಚರಿ ತಂದಿದೆ. ಆಡಳೀತಾರೂಢ ಬಿಜೆಪಿಗೆ ಇದು ಮುಖಭಂಗವಾಗುವ ವಿಚಾರ. ಜೆಡಿಎಸ್ ತನ್ನ ಬಳಿಯಿದ್ದ ಒಂದು ಸ್ಥಾನವನ್ನು ಕಳೆದುಕೊಂಡಿದೆ(1-0).
ಇದನ್ನೂ ಓದಿ | ವಿಧಾನಸಭೆಯಲ್ಲಿ ಬಿ.ವೈ. ವಿಜಯೇಂದ್ರ ಸ್ಪರ್ಧೆ ಖಚಿತ; ತಂದೆಯ ಕ್ಷೇತ್ರದಿಂದಲೇ ʼಶಿಕಾರಿʼ?
ಹೊರಟ್ಟಿ ಜಯಭೇರಿ
ಬುಧವಾರ ಮತ ಎಣಿಕೆ ಆರಂಭವಾಗಿ ಕೆಲವೇ ಗಂಟೆಗಳಲ್ಲಿ ಮಾಜಿ ಜೆಡಿಎಸ್ ನಾಯಕ ಹಾಗೂ ಕಳೆದ ತಿಂಗಳಿಂದ ಬಿಜೆಪಿ ನಾಯಕರಾಗಿರುವ ಬಸವರಾಜ ಹೊರಟ್ಟಿಯವರು ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಜಯಭೇರಿ ಬಾರಿಸಿದರು. ಗೆಲುವಿಗೆ ಅಗತ್ಯವಿದ್ದ 50% ಮತಗಳನ್ನು ಅಂದರೆ 7181 ಕೋಟಾ ಮತವನ್ನು ಮದ್ಯಾಹ್ನವೇ ಪಡೆದರು. ಅಂತಿಮ ಫಲಿತಾಂಶ ಹೊರಬಂದಾಗ ಹೊರಟ್ಟಿ 9,266 ಮತ ಪಡೆದರೆ ಎರಡನೇ ಸ್ಥಾನದಲ್ಲಿದ್ದ ಕಾಂಗ್ರೆಸ್‌ನ ಬಸವರಾಜ ಗುರಿಕಾರ್ 4,597 ಮತ ಪಡೆದರು.
ಎಂಭತ್ತರ ದಶಕದಲ್ಲಿ ಎಂಎಲ್‌ಸಿ ಆಗಿ ರಾಜಕೀಯ ಪಯಣ ಆರಂಭಿಸಿದ ಹೊರಟ್ಟಿಯವರದ್ದು ಇದು ಸತತವಾಗಿ ಎಂಟನೇ ಜಯ. ಏಳು ಬಾರಿ ಜೆಡಿಎಸ್‌ನಿಂದ ಗೆದ್ದಿದ್ದವರು ಈ ಬಾರಿ ಬಿಜೆಪಿಯಿಂದ ಕಣಕ್ಕಿಳಿದಿದ್ದರು. ಈ ಹಿಂದೆ ನಿರಂತರ ಐದು ಬಾರಿ ವಿಧಾನಪರಿಷತ್ ಸದಸ್ಯರಾದ ದಾಖಲೆ ಬಿಜೆಪಿಯ ರಾಮಚಂದ್ರಗೌಡರಿಗಿತ್ತು. ಆದರೆ ಎರಡು ಅವಧಿಗೆ ಮೊದಲೇ ಆ ದಾಖಲೆಯನ್ನು ಹೊರಟ್ಟಿ ಮುರಿದಿದ್ದರು. ಇದೀಗ ಆಯ್ಕೆಯಾಗಿರುವ ಎಂಟನೇ ಅವಧಿಯನ್ನು ಮಕ್ತಾಯಗೊಳಿಸುವ ವೇಳೆಗೆ ಹೊರಟ್ಟಿ ಅವರು 48 ವರ್ಷಗಳನ್ನು ಮೇಲ್ಮನೆಯಲ್ಲಿ ಕಳೆದಂತಾಗುತ್ತದೆ. ಇನ್ನೂ ಉತ್ತಮ ಆರೋಗ್ಯ ಹೊಂದಿರುವ ಹೊರಟ್ಟಿ ಮತ್ತೊಂದು ಅವಧಿಗೆ ಆಯ್ಕೆಯಾದರೆ ಅರ್ಧ ಶತಮಾನವನ್ನು ವಿಧಾನಪರಿಷತ್ ಸದಸ್ಯರಾಗಿ ಕಳೆದ, ಬಹುಶಃ ಮುಂದೆ ಯಾರೂ ಅಳಿಸಲಾಗದ ದಾಖಲೆ ರಚನೆಯಾಗಲಿದೆ. ಹೊರಟ್ಟಿಯವರ ಮೂಲಕ ಬಿಜೆಪಿಗೆ ಅನಾಯಾಸವಾಗಿ ಒಂದು ಸ್ಥಾನ ಲಭಿಸಿ ಮರ್ಯಾದೆ ಉಳಿಯಿತು ಎನ್ನುವುದೂ ಅಷ್ಟೇ ಸತ್ಯ.
ನಿರಾಣಿಗೆ ನಿರಾಯಾಸ ಜಯ
ವಿಧಾನಪರಿಷತ್ತಿನ ವಾಯವ್ಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಹನುಮಂತ ನಿರಾಣಿ ಭರ್ಜರಿ ಜಯ ಗಳಿಸಿದ್ದಾರೆ. ಸಚಿವ ಮುರುಗೇಶ್ ನಿರಾಣಿ ಸಹೋದರರಾಗಿರುವ ಹಣಮಂತ ನಿರಾಣಿಗೆ 34,693 ಮತಗಳ ಅಮೋಘ ಗೆಲುವು ಲಭಿಸಿದೆ. ನಿರಾಣಿ 44,815 ಮತಗಳು ದೊರೆತಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಸಂಕ್ ಕೇವಲ 10,122 ಮತಗಳನ್ನು ಗಳಿಸಿದ್ದಾರೆ. 9,006 ಮತಗಳು ತಿರಸ್ಕೃತವಾಗಿವೆ. ರಾಜಕೀಯ ಹಿನ್ನೆಲೆ, ಆಡಳಿತಾರೂಢ ಪಕ್ಷದ ಅಭ್ಯರ್ಥಿ ನಿರಾಣಿ ಜಯಗಳಿಸುತ್ತಾರೆ ಎಂಬುದು ಮೊದಲೇ ಊಹಿಸಲಾಗಿದ್ದರೂ, ಕಾಂಗ್ರೆಸ್‌ನಿಂದ ಮತ್ತಷ್ಟು ಪೈಪೋಟಿ ನಿರೀಕ್ಷಿಸಲಾಗಿತ್ತು.
ಅರುಣ್ ಶಹಾಪುರ ಸೋಲಿಗೂ ಹಣಮಂತ ನಿರಾಣಿ ಗೆಲುವಿಗೂ ಬಿಜೆಪಿ ವಲಯದಲ್ಲೆ ತಾಳೆ ಹಾಕಲಾಗುತ್ತಿದೆ. ಮುಖ್ಯವಾಗಿ ಅರುಣ್ ಶಹಾಪುರ ಅವರು ಎರಡು ಬಾರಿ ಜಯಗಳಿಸಿ ಹ್ಯಾಟ್ರಿಕ್ ಹೊಸ್ತಿಲಲ್ಲಿ ನಿಂತಿದ್ದವರು. ವಿಶೇಷವಾಗಿ ಶಿಕ್ಷಣ ಕ್ಷೇತ್ರದಲ್ಲಿ ಸಾಖಷ್ಟು ಅಧ್ಯಯನವನ್ನೂ ನಡೆಸಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ, ಶಿಕ್ಷಕರ ಸಮಸ್ಯೆ, ಅತಿಥಿ ಉಪನ್ಯಾಸಕರ ಸಮಸ್ಯೆಗಳ ಕುರಿತು ತಿಳಿದಿದ್ದಾರೆ. ಪಠ್ಯಪುಸ್ತಕ ಪರಿಷ್ಕರಣೆ ವಿಚಾರದಲ್ಲಿಯೂ ಸಾಕಷ್ಟು ತಿಳಿದಿದ್ದಾರೆ. ಹೀಗಾಗಿ, ಈ ಬಾರಿ ಮತ್ತೆ ಸದಸ್ಯರಾಗಿ ಆಯ್ಕೆಯಾದರೆ ಸಚಿವ ಸ್ಥಾನ ಖಚಿತ ಎಂಬ ಮಾತಿತ್ತು. ಇದೇ ಕಾರಣಕ್ಕೆ ಸ್ಥಳೀಯ ಬಿಜೆಪಿ ನಾಯಕರು ಶಹಾಪುರ ಸೋಲುವಂತೆ ಎಲ್ಲ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ | 3ನೇ ಬಾರಿ ಅರುಣ್ ಶಹಾಪುರ ಕೈಹಿಡಿಯದ ಮತದಾರ: ವಾಯವ್ಯದಲ್ಲಿ ಹುಕ್ಕೇರಿಗೆ ಜಯ
ಶಹಾಪುರಗೆ ಆಘಾತ
ವಾಯವ್ಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿ ಕಾಂಗ್ರೆಸ್ಸಿ ಅಭ್ಯರ್ಥಿ ಮೀಸೆ ತಿರುವಿದ್ದಾರೆ. ಭಾರೀ ಪೈಪೋಟಿ ಮಧ್ಯೆ ಪ್ರಕಾಶ ಹುಕ್ಕೇರಿ ಗೆಲುವು ದಾಖಲಿಸಿದ್ದಾರೆ. ಎರಡು ಬಾರಿ ಸದಸ್ಯರಾಗಿದ್ದ ಬಿಜೆಪಿ ಅಭ್ಯರ್ಥಿ ಅರುಣ್ ಶಹಾಪುರ ಹಿರಿಯ ರಾಜಕಾರಣಿಗೆ ಶರಣಾಗಿದ್ದಾರೆ. ಇದರೊಂದಿಗೆ ಶಿಕ್ಷಕರ ಕ್ಷೇತ್ರದಲ್ಲಿ ಎರಡು ಅವಧಿಗೆ ಇದ್ದ ಬಿಜೆಪಿಯ ಆಡಳಿತಕ್ಕೆ ಬ್ರೇಕ್ ಬಿದ್ದಿದೆ. ನಿರೀಕ್ಷೆಯಂತೆ ಬೆಳಗಾವಿಯ ಹೊಂದಾಣಿಕೆ ರಾಜಕಾರಣ ಫಲಿತಾಂಶದ ಮೇಲೆ ಪರಿಣಾಮ ಬೀರಿದೆ.
ವಾಯವ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ ಫಲಿತಾಂಶ ಬುಧವಾರ ಸಂಜೆ ವೇಳೆಗೆ ಹೊರಬಿತ್ತು. ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸುವ ಕನಸು ಕಂಡಿದ್ದ ಅರುಣ್ ಶಹಾಪುರಗೆ ನಿರಾಸೆಯಾಗಿದೆ. ಶಿಕ್ಷಕನಲ್ಲದಿದ್ದರೂ ವಾಯವ್ಯ ಶಿಕ್ಷಕರ ಹೃದಯ ಗೆಲ್ಲುವಲ್ಲಿ ಪ್ರಕಾಶ ಹುಕ್ಕೇರಿ ಯಶಸ್ವಿಯಾಗಿದ್ದಾರೆ. ಆ ಮೂಲಕ ಪ್ರಕಾಶ ಹುಕ್ಕೇರಿ ಎರಡನೇ ಬಾರಿಗೆ ವಿಧಾನ ಪರಿಷತ್ ಪ್ರವೇಶಿಸಿದ್ದಾರೆ. 11,452 ಮತ ಪಡೆದಿರುವ ಪ್ರಕಾಶ ಹುಕ್ಕೇರಿ, 5,091 ಮತಗಳ ಅಂತರದ ಭರ್ಜರಿ ಗೆಲುವು ದಾಖಲಿಸಿಕೊಂಡಿದ್ದಾರೆ. ಬಿಜೆಪಿಯ ಅರುಣ ಶಹಾಪುರ 6361 ಮತ ಪಡೆದಿದ್ದಾರೆ.
ಇದೇ ವೇಳೆ ಸಂಗಮೇಶ ನಿರಾಣಿ ಹಾಗೂ ಅರುಣ್ ಶಹಾಪುರ ಇಬ್ಬರಲ್ಲಿ ಮತದಾರರಿಗೇ ಪರೋಕ್ಷವಾಗಿ ಆಯ್ಕೆ ನೀಡಲಾಗಿತ್ತು ಎನ್ನಲಾಗಿದೆ. ಒಂದು ಕಡೆ ಕಾಂಗ್ರೆಸ್ ಇನ್ನೊಂದು ಕಡೆ ಬಿಜೆಪಿಯನ್ನು ಗೆಲ್ಲಿಸೋಣ ಎಂಬ ಪಕ್ಷಾತೀತ ಅಡ್ಜಸ್ಟ್‌ಮೆಂಟ್ ರಾಜಕಾರಣದಿಂದಾಗಿಯೂ ಅರುಣ್ ಶಹಾಪುರ ಗೆಲುವಿನ ಓಟಕ್ಕೆ ಬ್ರೇಕ್ ಬಿದ್ದಿದೆ ಎನಲಾಗುತ್ತಿದೆ.
ಇದೆಲ್ಲದರ ಜತೆಗೆ, ಎದುರಾಳಿ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿ ಅವರ ಕುರಿತು ಬಿಜೆಪಿ ಆಡಿತ ಮಾತುಗಳೂ ಶಹಾಪುರ ಗೆಲುವಿಗೆ ಮುಳುವಾದವು ಎನ್ನಲಾಗುತ್ತಿದೆ. ಪ್ರಕಾಶ್ ಹುಕ್ಕೇರಿ ವಯಸ್ಸಿನ ಕುರಿತು ಸಚಿವ ಗೋವಿಂದ ಕಾರಜೋಳ ಆಕ್ಷೇಪಾರ್ಹ ಮಾತನ್ನಾಡಿದರೆ, ಅವರ ಶೈಕ್ಷಣಿಕ ಅರ್ಹತೆ ಬಗ್ಗೆ ಪ್ರಭಾಕರ ಕೋರೆ ಟೀಕಿಸಿದ್ದರು. ಇದೆಲ್ಲ ಅಂಶಗಳನ್ನೇ ಪ್ರಮುಖವಾಗಿಸಿಕೊಂಡು ಹುಕ್ಕೇರಿ ಅನುಕಂಪವನ್ನು ಹೆಚ್ಚಿಸಿಕೊಂಡರು ಎಂಬ ಚರ್ಚೆ ನಡೆಯುತ್ತಿದೆ.
ಮಧು ಮಾದೇಗೌಡಗೆ ಅದೃಷ್ಟ
ರೈತ ಮುಖಂಡರಾಗಿದ್ದ ಮಾದೇಗೌಡರ ಪುತ್ರ ಮಧು ಜಿ. ಮಾದೇಗೌಡಗೆ ಮೊದಲ ಬಾರಿಯಲ್ಲೇ ವಿಧಾನಪರಿಷತ್ ಸದಸ್ಯರಾಗುವ ಅದೃಷ್ಟ ಒಲಿದು ಬಂದಿದೆ. ವಿಧಾನ ಪರಿಷತ್‌ನ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಮಧು ಜಿ. ಮಾದೇಗೌಡ ಭರ್ಜರಿ ಗೆಲುವು ಸಾಧಿಸಿದ್ದಾರೆ. ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಮೈ.ವಿ. ರವಿಶಂಕರ್ ಅವರನ್ನು 12,205 ಮತಗಳಿಂದ ಸೋಲಿಸಿದರು. ಅಂತಿಮವಾಗಿ ಕಾಂಗ್ರೆಸ್‌ನ ಮಧು ಜಿ. ಮಾದೇಗೌಡ ಅವರು 45,275 ಬಿಜೆಪಿಯ ಮೈ.ವಿ. ರವಿಶಂಕರ್ ೩೩,೮೭೮ ಮತ್ತು ಜೆಡಿಎಸ್ ಅಭ್ಯರ್ಥಿ ಎಚ್.ಕೆ. ರಾಮು ಅವರು 19,630 ಮತಗಳನ್ನು ಪಡೆದರು.
ಕಾಂಗ್ರೆಸ್ ಅಭ್ಯರ್ಥಿ ಮಧು ಜಿ. ಮಾದೇಗೌಡ, ಜೆಡಿಎಸ್ ಅಭ್ಯರ್ಥಿ ಎಚ್.ಕೆ. ರಾಮು, ಬಿಜೆಪಿ ಅಭ್ಯರ್ಥಿ ಮೈ.ವಿ. ರವಿಶಂಕರ್ ಮತ್ತು ರೈತ ಸಂಘದ ಅಭ್ಯರ್ಥಿ ಪ್ರಸನ್ನ ಎನ್. ಗೌಡ ಗೆಲುವಿಗೆ ಶಕ್ತಿಮೀರಿ ಶ್ರಮ ಹಾಕಿದ್ದರು. ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಆಪ್ತ ಸಹಾಯಕರಾಗಿದ್ದ ಎನ್.ಎಸ್. ವಿನಯ್ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿದ್ದರು., ಉಳಿದಂತೆ ಕನ್ನಡ ಚಳವಳಿ ಪಕ್ಷದ ವಾಟಾಳ್ ನಾಗರಾಜ್, ಎಸ್‌ಡಿಪಿಐ ಅಭ್ಯರ್ಥಿ ರಫತ್ ಉಲ್ಲಾ ಖಾನ್, ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾದ ಎನ್. ವೀರಭದ್ರಸ್ವಾಮಿ, ಡಾ.ಬಿ.ಎಚ್. ಚನ್ನಕೇಶವಮೂರ್ತಿ ಸೇರಿ 19 ಹುರಿಯಾಳುಗಳು ಕಣದಲ್ಲಿದ್ದರು. ಎಚ್.ಕೆ. ರಾಮು 19630 ಮತ ಪಡೆದು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟರು. ವಿನಯ್ 3,864 ಮತ ಪಡೆದರೆ ವಾಟಾಳ್ ನಾಗರಾಜ್ ಕೇವಲ 516 ಮತ ಪಡೆಯಲು ಸಫಲರಾದರು.
ಮೈ.ವಿ.ರವಿಶಂಕರ್ ಕಳೆದ ಚುನಾವಣೆಯಲ್ಲಿ 146 ಮತಗಳ ಅತ್ಯಲ್ಪ ಅಂತರದಿಂದ ಸೋಲು ಅನುಭವಿಸಿದ್ದರಿಂದ ಈ ಬಾರಿ ಅನುಕಂಪದ ಗೆಲುವು ಲಭಿಸಬಹುದು ಎಂಬ ನಿರೀಕ್ಷೆಯಿತ್ತು. ಆದರೆ ʼಅನುಕಂಪʼದ ಕಾರಣಕ್ಕಾಗಿಯೇ ಮತ ಹಾಕುವವರ ಸಂಖ್ಯೆ ವಿರಳ ಎನ್ನುವುದು ಫಲಿತಾಂಶದಿಂದ ತಿಳಿದುಬಂದಿದೆ. ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಚಿವರಾದ ಸಿ.ಎನ್.ಅಶ್ವತ್ಥ ನಾರಾಯಣ, ವಿ.ಸೋಮಣ್ಣ, ಸುನೀಲ್ ಕುಮಾರ್ ಸೇರಿ ಅನೇಕರು ಬಂದು ಪ್ರಚಾರ ನಡೆಸಿದ್ದರು. ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಎಂಎಲ್‌ಸಿ ಟಿಕೆಟ್ ಸಿಗದ ಪರಿಣಾಮ ಪಕ್ಷಕ್ಕೆ ಮತ ಹಾಕುತ್ತಿದ್ದ ವೀರಶೈವ- ಲಿಂಗಾಯತ ಮತದಾರರು ಮುನಿಸಿಕೊಂಡಿರುವ ಸಾಧ್ಯತೆ ಹೆಚ್ಚಿದೆ.
ಇದನ್ನೂ ಓದಿ | ವಾಯವ್ಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಹನುಮಂತ ನಿರಾಣಿ ಜಯ