Site icon Vistara News

PSI Scam ಮುಖಭಂಗದ ನಂತರ ಇದೀಗ ಶಿಕ್ಷಕ ಪರೀಕ್ಷೆಯಲ್ಲಿ ಸರ್ಕಾರಕ್ಕೆ ಅಗ್ನಿ ಪರೀಕ್ಷೆ

B C NAGESH

ಬೆಂಗಳೂರು: ಸರ್ಕಾರದ ಬುಡವನ್ನೇ ಅಲುಗಾಡಿಸುತ್ತಿರುವ ಪಿಎಸ್‌ಐ ಹಗರಣ (PSI Scam), ಸಹಾಯಕ ಪ್ರಾಧ್ಯಾಪಕ ಹಗರಣಗಳ ನಂತರ ಕೇವಲ 10 ದಿನದಲ್ಲಿ ಶಿಕ್ಷಕರ ನೇಮಕಾತಿ ಪರೀಕ್ಷೆ ಎದುರಾಗಲಿದ್ದು, ಅಭ್ಯರ್ಥಿಗಳಿಗಿಂತಲೂ ಇದು ಸರ್ಕಾರಕ್ಕೆ ದೊಡ್ಡ ಪರೀಕ್ಷೆ ಆಗಿದೆ. ಪಿಎಸ್ಐ ಹಗರಣದಲ್ಲಿ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಮೂಲಕವೇ ನಡೆದ ದೊಡ್ಡ ಹಗರಣ ಸರ್ಕಾರವನ್ನು ಮುಜುಗರಕ್ಕೆ ಈಡು ಮಾಡಿದೆ. ಇದೀಗ 15 ಸಾವಿರ ಶಕ್ಷಕರ ನೇಮಕ ಪರೀಕ್ಷೆಯನ್ನು ಹೇಗೆ ಎದುರಿಸುತ್ತದೆ ಎಂಬ ಕುತೂಃಲ ಮೂಡಿದೆ.

ಇನ್ನೇನು ಚುನಾವಣೆ ಹೊಸ್ತಿಲಲ್ಲಿರುವ ರಾಜ್ಯದಲ್ಲಿ ಒಂದರ ಹಿಂದೊಂದರಂತೆ ವಿವಾದಗಳು, ಹಗರಣಗಳೂ ಹೊರಬರುತ್ತಿವೆ. ಹಿಜಾಬ್‌, ಹಲಾಲ್‌, ಆಜಾನ್‌ನಂತಹ ವಿವಾದ ಒಂದೆಡೆಯಾದರೆ ಸರ್ಕಾರಿ ಗುತ್ತಿಗೆದಾರರಿಂದ 40%ಕಮಿಷನ್‌ ಆರೋಪ ಮತ್ತೊಂದೆಡೆ. ಇದಕ್ಕೆ ಪೂರಕವಾಗಿ ಬಿಜೆಪಿ ಕಾರ್ಯಕರ್ತ ಹಾಗೂ ಗುತ್ತಿಗೆದಾರ ಸಂತೋಷ್‌ ಉಡುಪಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಸ್ಥಾನಕ್ಕೆ ಕೆ.ಎಸ್‌. ಈಶ್ವರಪ್ಪ ರಾಜೀನಾಮೆ ನೀಡಿದ್ದು ಸರ್ಕಾರಕ್ಕೆ ಮುಜುಗರ ಉಂಟುಮಾಡಿತ್ತು.
ಇದರ ಬೆನ್ನಿಗೇ 545 ಪಿಎಸ್‌ಐ ಆಯ್ಕೆ ಪರೀಕ್ಷೆಯ ಒಎಂಆರ್‌ ಶೀಟ್‌ ತಿದ್ದುವ ಮೂಲಕ ನಡೆದ ಹಗರಣ, ಚುನಾವಣಾ ವರ್ಷದಲ್ಲಿ ಸರ್ಕಾರ ತಲೆತಗ್ಗಿಸುವಂತೆ ಮಾಡಿದೆ. ಇದೀಗ ಮೇ 21 ಹಾಗೂ 22ರಂದು ಶಿಕ್ಷಕರ ನೇಮಕಾತಿ ಪರೀಕ್ಷೆ ಜರುಗಲಿದ್ದು, ಸರ್ಕಾರಕ್ಕೆ ಸವಾಲು ಎದುರಾಗಿದೆ.

ಇದನ್ನೂ ಓದಿ | ಶಿಕ್ಷಣದಲ್ಲಿ ಭಾರತೀಯತೆ ರೂಪಿಸಲು ಎಲ್ಲರ ಸಹಕಾರ ಬೇಕು: ವಿಶ್ವದರ್ಶನ ಸಂಭ್ರಮದಲ್ಲಿ ಸಚಿವ ಬಿ. ಸಿ. ನಾಗೇಶ್

15 ಸಾವಿರ ಶಿಕ್ಷಕರ ನೇಮಕ

ರಾಜ್ಯದಲ್ಲಿ ಅನೇಕ ವರ್ಷಗಳಿಂದ ಶಿಕ್ಷಕರ ನೇಮಕಾತಿ ನಡೆದಿರಲಿಲ್ಲ. ಹಲವು ಬಾರಿ ಪ್ರತಿಭಟನೆಗಳ ನಂತರ ಇದೀಗ ಬರೊಬ್ಬರಿ 15 ಸಾವಿರ ಶಿಕ್ಷಕರನ್ನು ಸಿಇಟಿ ಪರೀಕ್ಷೆ ಮೂಲಕ ಆಯ್ಕೆ ಮಾಡಲು ಸರ್ಕಾರ ತೀರ್ಮಾನಿಸಿದೆ. ಮೇ 21 ಹಾಗೂ 22ರಂದು ಸಿಇಟಿ ಪರೀಕ್ಷೆ ನಡೆಯಲಿದೆ. ಈಗಾಗಲೆ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಇದರಲ್ಲಿ ಹೈದರಾಬಾದ್‌ ಕರ್ನಾಟಕ ಮೀಸಲಾತಿಗೆ 5 ಸಾವಿರ ಹುದ್ದೆಗಳನ್ನು ಮೀಸಲಿಡಲಾಗಿದೆ.

ಪರೀಕ್ಷೆಯಲ್ಲಿ ಒಟ್ಟು ಮೂರು ಪತ್ರಿಕೆಗಳಿರಲಿವೆ. ಬಹು ಆಯ್ಕೆಯ ಪತ್ರಿಕೆ 1ರಲ್ಲಿ 150 ಅಂಕಗಳಿಗೆ ಉತ್ತರ ನೀಡಬೇಕು. ಇದರಲ್ಲಿ ಕನಿಷ್ಠ ಅಂಕ ಪಡೆಯಬೇಕೆಂಬ ನಿಬಂಧನೆ ಇಲ್ಲವಾದರೂ ರ‍್ಯಾಂಕ್‌ಗೆ ಈ ಅಂಕಗಳು ಪರಿಗಣಿತವಾಗುತ್ತವೆ. ಎರಡನೇ ಪತ್ರಿಕೆಯಲ್ಲಿ ಸಾಮಾನ್ಯ ಜ್ಞಾನ ಪರೀಕ್ಷೆ ನಡೆಯಲಿದ್ದು, 150 ಅಂಕಗಳಿಗೆ ಉತ್ತರಿಸಬೇಕು. 50 ಅಂಕಗಳಿಗೆ ಬಹು ಆಯ್ಕೆ, 100 ಅಂಕಗಳಿಗೆ ವಿವರಣಾತ್ಮಕ ಉತ್ತರ ನೀಡಬೇಕು. ಕನಿಷ್ಠ ಅರ್ಹತೆಗೆ 45 ಅಂಕ ಪಡೆಯಬೇಕು. ಮೂರನೇ ಪತ್ರಿಕೆ ಭಾಷಾ ಸಾಮರ್ಥ್ಯಕ್ಕೆ ಸಂಬಂಧಿಸಿದ್ದಾಗಿದ್ದು, ಗರಿಷ್ಠ 100 ಅಂಕಗಳಿರುತ್ತವೆ, ಇದರಲ್ಲಿ ಕನಿಷ್ಠ 50 ಅಂಕ ಗಳಿಸಬೇಕು.

ತಂತ್ರಜ್ಞಾನದ ಭಯ

ಸಾಂಪ್ರದಾಯಿಕವಾಗಿ ಪ್ರಶ್ನೆ ಪತ್ರಿಕೆ ಬಹಿರಂಗಪಡಿಸುವ, ಸಂದರ್ಶನದಲ್ಲಿ ಹೆಚ್ಚು ಅಂಕ ನೀಡುವ ಮೂಲಕ ಅಭ್ಯರ್ಥಿಗಳ ಆಯ್ಕೆ ಭ್ರಷ್ಟಾಚಾರ ನಡೆಯುತ್ತಿತ್ತು. ಆದರೆ ಪಿಎಸ್‌ಐ ಪರೀಕ್ಷೆ ಅಕ್ರಮದಲ್ಲಿ ಬ್ಲೂಟೂತ್‌, ಮೊಬೈಲ್‌ ಫೋನ್‌ನಂತಹ ತಂತ್ರಜ್ಞಾನವನ್ನು ಅತ್ಯಂತ ವೃತ್ತಿಪರ ರೀತಿಯಲ್ಲಿ ಬಳಸಿಕೊಂಡು ಅಕ್ರಮ ಎಸಗಿರುವುದು ಕಂಡುಬಂದಿದೆ. ಇದು ಒಟ್ಟಾರೆ ಸರ್ಕಾರದ ಜತೆಗೆ ಪೊಲೀಸ್‌ ಇಲಾಖೆಗೂ ತಲೆನೋವಾಗಿದೆ.

ಶಿಕ್ಷಕರ ನೇಮಕಾತಿ ಪರೀಕ್ಷೆಯಲ್ಲಿ ತಂತ್ರಜ್ಞಾನ ಬಳಸಿ ನಡೆಯಬಹುದಾದ ಅಕ್ರಮಗಳ ಪಟ್ಟಿಯನ್ನು ಪೊಲೀಸ್‌ ಇಲಾಖೆ ಸಿದ್ಧಪಡಿಸುತ್ತಿದೆ. ಈ ಬಗ್ಗೆ ಶಿಕ್ಷಣ ಇಲಾಖೆಯೂ ಮುಂಜಾಗ್ರತೆ ವಹಿಸಿದೆ. ಈ ಸಂಬಂಧ ಪ್ರತಿಕ್ರಿಯೆ ನೀಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌, ಪಿಎಸ್‌ಐ ಪರೀಕ್ಷೆಯಲ್ಲಿ ಆದಂತಹ ತಪ್ಪುಗಳು ಇಲ್ಲಿ ಆಗದಂತೆ ಎಚ್ಚರಿಕೆ ವಹಿಸುತ್ತೇವೆ. ಮುಖ್ಯವಾಗಿ ಆಧುನಿಕ ತಂತ್ರಜ್ಞಾನ ಬಳಸಿ ಅಕ್ರಮ ಎಸಗಲಾಗಿತ್ತು. ಈಗ ಪೊಲೀಸ್‌ ಇಲಾಖೆ ಪರಿಶೀಲನೆ ನಡೆಸುತ್ತಿದೆ. ಮಂಗಳವಾರ ಸಂಜೆ ಪೊಲೀಸ್‌ ಇಲಾಖೆ ಜತೆಗೆ ಇದಕ್ಕಾಗಿಯೇ ಸಭೆ ನಡೆಸುತ್ತಿದ್ದೇವೆ. ಯಾವ ರೀತಿ ಪರೀಕ್ಷೆ ನಡೆಸಬೇಕು, ಯಾವ ಉಪಕರಣಗಳನ್ನು ಬ್ಯಾನ್‌ ಮಾಡಬೇಕು ಎಂಬ ಕುರಿತು ಚರ್ಚಿಸಿ ನಿರ್ಧಾರ ಮಾಡುತ್ತೇವೆ. 100% ಪಾರದರ್ಶಕವಾಗಿ ಪರೀಕ್ಷೆ ನಡೆಯುವಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ನಾಗೇಶ್‌ ತಿಳಿಸಿದ್ದಾರೆ.

ಇದನ್ನೂ ಓದಿ | ಕ್ರಾಂತಿಕಾರಕ ಬದಲಾವಣೆಗಾಗಿಯೇ ನೂತನ ಶಿಕ್ಷಣ ನೀತಿ: ನೃಪತುಂಗ ವಿವಿ ಉದ್ಘಾಟಿಸಿದ ಅಮಿತ್‌ ಷಾ

Exit mobile version